ಚಿತ್ರದ ಆರಂಭದಿಂದ ಕೊನೆಯವರೆಗೂ ಗಮನ ಸೆಳೆಯುವುದು ಉಪೇಂದ್ರ. ಕೆಲಸಕ್ಕೆ ಹೋಗದೆ ಅಪಾರ್ಚ್‌ಮೆಂಟಿನ ಗೃಹಿಣಿಯರೆಲ್ಲರ ಜೊತೆಗೆ ಕತೆ ಹೊಡೆದುಕೊಂಡು, ಮನೆ ಕೆಲಸ ಮಾಡುತ್ತಾ ಕಾಲಹರಣ ಮಾಡುವ ಉಪೇಂದ್ರ ಅವರ ಮೇಲೆ ಸಣ್ಣಗೆ ಯಾಕಪ್ಪಾ ಹೀಗೆ ಅನ್ನಿಸಿದರೆ ಅಚ್ಚರಿ ಇಲ್ಲ.
ರಾಜೇಶ್ ಶೆಟ್ಟಿ
ಭಾರಿ ಹೊಡೆದಾಟವಿಲ್ಲದ, ಅಬ್ಬರದ ಬಿಲ್ಡಪ್‌ಗಳಿಲ್ಲದ, ರಣ ಭಯಂಕರ ವಿಲನ್‌ಗಳಿಲ್ಲದ, ಲಾರಿ-ಟೆಂಪೋ-ರೈಲು ಮತ್ತಿತ್ಯಾದಿ ವಾಹನಗಳು ಪುಡಿಪುಡಿಯಾಗದ ಆದರೆ ಕೊನೆಗೆ ನೋಡುಗರೆಲ್ಲರೂ ಯೋಚಿಸುವಂತೆ ಮಾಡುವ ಆಹ್ಲಾದಕರ ಕಥಾ ಎಳೆ ಹೊಂದಿರುವ ಕೌಟುಂಬಿಕ ಸಿನಿಮಾ ‘ಹೋಮ್ ಮಿನಿಸ್ಟರ್’ (Home Minister).
ಚಿತ್ರದ ಆರಂಭದಿಂದ ಕೊನೆಯವರೆಗೂ ಗಮನ ಸೆಳೆಯುವುದು ಉಪೇಂದ್ರ (Upendra). ಕೆಲಸಕ್ಕೆ ಹೋಗದೆ ಅಪಾರ್ಚ್‌ಮೆಂಟಿನ ಗೃಹಿಣಿಯರೆಲ್ಲರ ಜೊತೆಗೆ ಕತೆ ಹೊಡೆದುಕೊಂಡು, ಮನೆ ಕೆಲಸ ಮಾಡುತ್ತಾ ಕಾಲಹರಣ ಮಾಡುವ ಉಪೇಂದ್ರ ಅವರ ಮೇಲೆ ಸಣ್ಣಗೆ ಯಾಕಪ್ಪಾ ಹೀಗೆ ಅನ್ನಿಸಿದರೆ ಅಚ್ಚರಿ ಇಲ್ಲ. ಇದರ ಹಿಂದೆ ಏನೋ ಕತೆ ಇದೆ ಎಂದು ಊಹಿಸಿದರೆ ತಪ್ಪೇನಿಲ್ಲ. ಉಪೇಂದ್ರ ಇಲ್ಲಿ ಪಕ್ಕಾ ಎಂಟರ್‌ಟೇನರ್. ಸ್ಟೈಲಿಶ್ ಆಗಿ ಕಾಣುವ, ತಮ್ಮದೇ ಶೈಲಿಯಲ್ಲಿ ನಿರರ್ಗಳವಾಗಿ ಡೈಲಾಗ್‌ಗಳನ್ನು ಹರಿಬಿಡುವ, ಕುಟುಂಬಕ್ಕೆ ಒಳ್ಳೆಯದು ಮಾಡಲು ತ್ಯಾಗರಾಜನಾಗುವ ಉಪೇಂದ್ರ ಮೆಚ್ಚುವಂತೆ ಕಾಣಿಸುತ್ತಾರೆ ಮತ್ತು ಯೋಚಿಸುವಂತೆ ಮಾಡುತ್ತಾರೆ.
ಚಿತ್ರ: ಹೋಮ್ ಮಿನಿಸ್ಟರ್
ತಾರಾಗಣ: ಉಪೇಂದ್ರ, ವೇದಿಕಾ, ಆದ್ಯಾ, ಸಾಧು ಕೋಕಿಲ, ತಾನ್ಯಾ ಹೋಪ್, ವಿಜಯ್ ಚೆಂಡೂರ್
ನಿರ್ದೇಶನ: ಸುಜಯ್ ಕೆ. ಶ್ರೀಹರಿ
ರೇಟಿಂಗ್: 3
ಇದು ಉಪೇಂದ್ರ ಸಿನಿಮಾ. ಹೊಸ ಯೋಚನೆಗಳನ್ನು ಹುಟ್ಟುಹಾಕುವುದು ಅವರ ಕ್ರಮ. ಅದೇ ಥರ ಇಲ್ಲಿ ಕೆಲವು ವಿಚಾರಗಳನ್ನು ಹೇಳದೆಯೇ ಹೇಳುತ್ತಾರೆ. ಮೈಕ್ರೋ ಫ್ಯಾಮಿಲಿಗಳ ಕತೆ ಏನು, ಗಮನ ಹರಿಸಬೇಕಾದ ಅಂಶ ಯಾವುದು, ಚಿಂತಿಸಬೇಕಾದ ಮುಖ್ಯವಾದ ಸಂಗತಿಗಳೇನು ಎನ್ನುವುದನ್ನು ಹೇಳುವುದಕ್ಕೆ ಸ್ವಲ್ಪ ಸುತ್ತಿ ಬಳಸಿ ಸಾಗುತ್ತಾರೆ ಈ ಚಿತ್ರದ ನಿರ್ದೇಶಕ. ದೂರ ದಾರಿಯಾದ್ದರಿಂದ ದಾರಿ ಸಾಗುವುದಕ್ಕೆ ಹಳೇ ಕಾಲದ ಜೋಕುಗಳು, ಒಂದೆರಡು ಹಾಡುಗಳು ಹಾಗೆ ಬಂದು ಹೀಗೆ ಹೋಗುತ್ತವೆ. ಹಾದಿ ದೂರವಾದಾಗ ಆಯಾಸ ಅನ್ನಿಸುತ್ತದೆ.
ಗಂಡ ಮನೆ ಕೆಲಸ ಮಾಡುವುದು, ಹೆಂಡತಿ ಕೆಲಸಕ್ಕೆ ಹೋಗುವ ಕಾನ್ಸೆಪ್ಟ್ ಸಿನಿಮಾಗಳಿಗೆ ಹೊಸದಲ್ಲವಾದರೂ ಈ ಸಿನಿಮಾದಲ್ಲಿ ಸಾರುವ ಸಂದೇಶ ಡಿಫರೆಂಟ್ ಆಗಿರುವ ಕಾರಣಕ್ಕೆ ಹೋಮ್ ಮಿನಿಸ್ಟರ್ ಭಿನ್ನ. ಉಪೇಂದ್ರ ಮತ್ತು ಪುಟಾಣಿ ಆದ್ಯಾ ಜೊತೆಗಿನ ದೃಶ್ಯಗಳು ಖುಷಿ ಕೊಡುತ್ತವೆ. ವೇದಿಕಾ (Vedhika) ಸ್ಕ್ರೀನ್ ಮೇಲೆ ಬಹಳ ಚೆಂದ ಕಾಣಿಸುತ್ತಾರೆ. ತಾನ್ಯಾ ಹೋಪ್ (Tanya Hope) ಪಾತ್ರ ರುಚಿಗೆ ತಕ್ಕಷ್ಟು ಉಪ್ಪಿನಂತಿದೆ. ಸಾಧು ಕೋಕಿಲ (Sadhu Kokila) ಉಪಸ್ಥಿತಿ ಉಲ್ಲಾಸದಾಯಕ.
RRR Film Review: ಅಬ್ಬಬ್ಬಾ... ರಾಜಮೌಳಿಯ ದೃಶ್ಯ ವೈಭವ!
'ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು (Producer) ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ನೂರು ಜನ ತೆಲುಗಿನ ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ 'ಹೋಂ ಮಿನಿಸ್ಟರ್' ಚಿತ್ರವನ್ನು ಯಶಸ್ವಿ ಮಾಡೋಣ ಎಂದು ಉಪೇಂದ್ರ ತಿಳಿಸಿದರು. ಜೊತೆಗೆ ನಾಯಕಿ ವೇದಿಕಾ ಅವರ ಅಭಿನಯವನ್ನು ಉಪೇಂದ್ರ ಮುಕ್ತಕಂಠದಿಂದ ಶ್ಲಾಘಿಸಿದರು.
'ನನಗೆ ಬಹಳ ದಿನಗಳ ನಂತರ ನಿಮ್ಮ ಮುಂದೆ ಮಾತನಾಡಲು ಖುಷಿಯಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದು, ಹೆಚ್ಚಿನ ಖುಷಿ ತಂದಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರ ಮಾಡಿದ್ದೇನೆ' ಎಂದರು ವೇದಿಕ. ಸುಜಯ್ ಕೆ ಶ್ರೀಹರಿ (Sujay K Srihari) ನಿರ್ದೇಶನದ ಈ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದಾರೆ. ಕುಂಟುನಿ ಎಸ್ ಕುಮಾರ್ ಛಾಯಾಗ್ರಹಣ ಹಾಗೂ ಅಂಟೋನಿ ಅವರ ಸಂಕಲನ ಈ ಚಿತ್ರಕ್ಕಿದೆ. ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕ ಅವಿನಾಶ್, ತಿಲಕರು, ಲಾಸ್ಯ, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಚಿತ್ರದ ತಾರಾಬಳಗದಲ್ಲಿದ್ದಾರೆ.