ರಾಜಮೌಳಿ ವಿಷನ್ ಬಗ್ಗೆ ಎರಡು ಮಾತಿಲ್ಲ. ಪ್ರತಿ ದೃಶ್ಯವನ್ನೂ ಅವರು ಅತ್ಯಂತ ವೈಭವದಿಂದಲೇ ರೂಪಿಸಿದ್ದಾರೆ. ಪ್ರತಿ ಸಣ್ಣ ಪಾತ್ರವೂ ತೆರೆ ಮೇಲೆ ದೊಡ್ಡದಾಗಿಯೇ ಕಾಣಿಸಿಕೊಳ್ಳುತ್ತದೆ.
ಆರ್ ಕೇಶವಮೂರ್ತಿ
ದಕ್ಷಿಣ ಭಾರತೀಯ ಚಿತ್ರರಂಗದ ಇಬ್ಬರು ಜನಪ್ರಿಯ ನಟರು, ದೇಶದ ಗಡಿ ಆಚೆಗೂ ಹೆಸರು ಮಾಡಿರುವ ನಿರ್ದೇಶಕ, ನುರಿತ ತಾಂತ್ರಿಕ ತಂಡ, ನಟನೆಗೆ ಹೆಸರಾಗಿರುವ ಪೋಷಕ ಕಲಾವಿದರು, ಕೋಟಿ ಕೋಟಿ ಬಂಡವಾಳ ಹೂಡಿರುವ ನಿರ್ಮಾಪಕರ ಧಾರಾಳತನ. ಇವಿಷ್ಟುಇದ್ದರೆ ಯಾವ ಮಟ್ಟಿಗೆ ಒಂದು ಚಿತ್ರವನ್ನು ಗ್ರ್ಯಾಂಡಾಗಿ ರೂಪಿಸಬಹುದು ಎಂಬುದಕ್ಕೆ ‘ಆರ್‌ಆರ್‌ಆರ್’ (RRR) ಸಿನಿಮಾ ಅತ್ಯುತ್ತಮ ಉದಾಹರಣೆ. ರಾಜಮೌಳಿ (SS Rajamouli) ವಿಷನ್ ಬಗ್ಗೆ ಎರಡು ಮಾತಿಲ್ಲ. ಪ್ರತಿ ದೃಶ್ಯವನ್ನೂ ಅವರು ಅತ್ಯಂತ ವೈಭವದಿಂದಲೇ ರೂಪಿಸಿದ್ದಾರೆ. ಪ್ರತಿ ಸಣ್ಣ ಪಾತ್ರವೂ ತೆರೆ ಮೇಲೆ ದೊಡ್ಡದಾಗಿಯೇ ಕಾಣಿಸಿಕೊಳ್ಳುತ್ತದೆ.
ಚಿತ್ರದ ಪ್ರತಿ ದೃಶ್ಯವೂ ಅದ್ದೂರಿಯಾಗಿಯೇ ಮೂಡಬೇಕು ಎಂದು ಮೊದಲೇ ನಿರ್ಧರಿಸಿದವರಂತೆ ಇಡೀ ಚಿತ್ರವನ್ನು ತಮ್ಮ ವಿಷನ್‌ನಲ್ಲಿ ಸೆರೆಹಿಡಿದಿದ್ದಾರೆ ನಿರ್ದೇಶಕರು. ಹೀಗಾಗಿ ನೀರಲ್ಲಿ ಮುಳುಗುವ ಅಪಾಯದಲ್ಲಿರುವ ಬಾಲಕನನ್ನು ರಕ್ಷಿಸುವುಕ್ಕೂ ಒಂದು ಗೂಡ್ಸ್ ರೈಲು, ಒಂದು ಬ್ರಿಡ್ಜ್ ಅನ್ನೇ ಪುಡಿಪುಡಿ ಮಾಡಿಸುತ್ತಾರೆ. ಹುಲಿ ಮುಂದೆ ನಿಂತು ಗರ್ಜಿಸುವಾಗ, ಕಾಡಿನಲ್ಲಿ ಓಡುವಾಗ ಭೀಮನ ಪಾತ್ರ ಹಾಗೂ ಆಕ್ರೋಶಿತ ಜನರ ಮಧ್ಯೆ ನುಗ್ಗಿ ಫೈಟ್ ಮಾಡುವಾಗ, ಅಲ್ಲೂರಿ ಸೀತಾರಾಮರಾಜು ಗೆಟಪ್‌ನಲ್ಲಿ ಬಾಣ ಬಿಡುವಾಗ, ಬಂದೂಕು ಹಿಡಿದು ಶತ್ರುಗಳ ಎದೆಗೆ ಗುಂಡು ಹಾರಿಸುವಾಗ ರಾಮನ ಪಾತ್ರ ರೋಚಕತೆ ಉಂಟು ಮಾಡುತ್ತದೆ.
RRR Review ರಾಜಮೌಳಿ ಚಿತ್ರಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಕನ್ನಡಿಗರು?
ಹೀಗೆ ರಾಮ ಮತ್ತು ಭೀಮ ಈ ಇಬ್ಬರನ್ನು ಜತೆ ಮಾಡಿಕೊಂಡು ರಾಜಮೌಳಿ ತಮ್ಮ ಅದ್ದೂರಿ ಕನಸಿನ ವಿಷನ್ ಅನ್ನು ತೆರೆ ಮೇಲೆ ತೆರೆದಿಡುತ್ತ ಸಾಗುತ್ತಾರೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಡೆಯುವ ಈ ಕತೆಯ ಹೀರೋಗಳ ಪಾತ್ರಗಳ ಹುಟ್ಟಿಗೆ ಇಬ್ಬರು ಸ್ವಾತಂತ್ರ್ಯ ವೀರರ ನೈಜ ಜೀವನ ಕತೆಯೇ ಪ್ರೇರಣೆ ಮತ್ತು ನೆರಳು. ಅವರೇ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮರಂ ಭೀಮ್. ಆಗಿನ ಅಲ್ಲೂರಿ ಸೀತಾರಾಮರಾಜು ಈಗ ಪೊಲೀಸ್ ಆಗಿದ್ದರೆ, ಆಗಿನ ಕೋಮರಂ ಭೀಮ್ ಈಗ ಆದಿವಾಸಿಗಳ ಕಾವಲುಗಾರ. ಈ ಇಬ್ಬರು ಮೊದಲು ಶತ್ರುಗಳಾಗಿ, ನಂತರ ಸ್ನೇಹಿತರಾಗಿ ಮುಖಾಮುಖಿ ಆದರೆ ಏನಾಗಬಹುದು ಎನ್ನುವ ಒಂದು ಕಾಲ್ಪನಿಕಾ ಕತೆಯನ್ನು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಹೇಳಲಾಗಿದೆ.
ಚಿತ್ರ: ಆರ್‌ಆರ್‌ಆರ್
ತಾರಾಗಣ: ಜೂ. ಎನ್‌ಟಿಆರ್, ರಾಮ್‌ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಶರಣ್, ಸಮುದ್ರ ಖಣಿ
ನಿರ್ದೇಶನ: ಎಸ್‌ಎಸ್ ರಾಜಮೌಳಿ
ರೇಟಿಂಗ್: 4
‘ಅಣ್ಣ ನಾನು ಮಲ್ಲಿಗಾಗಿ ಬಂದೆ. ನೀನು ಮಣ್ಣಿಗಾಗಿ ಬಂದೆ’ ಎನ್ನುವ ಡೈಲಾಗ್ ಮೂಲಕ ಒಬ್ಬನದ್ದು ಬಿಡುಗಡೆಗಾಗಿ ಹೋರಾಟ, ಮತ್ತೊಬ್ಬನದು ಬದುಕಿಗಾಗಿ ಕಾದಾಟ ಎನ್ನುವ ಸತ್ಯ ಗೊತ್ತಾಗುತ್ತದೆ. ಇಬ್ಬರ ಉದ್ದೇಶವೂ ಒಂದೇ. ಇಬ್ಬರ ಶತ್ರುವೂ ಒಬ್ಬನೇ. ಆದರೆ, ದಾರಿಗಳು ಮಾತ್ರ ಬೇರೆ ಬೇರೆ. ಒಬ್ಬ ಬೆಂಕಿ, ಮತ್ತೊಬ್ಬ ನೀರು. ಈ ಬೆಂಕಿ ಮತ್ತು ನೀರು ಜತೆಯಾಗಿರಲು ಸಾಧ್ಯವೇ ಎನ್ನುವ ಕುತೂಹಲದಲ್ಲೇ ರಾಮ ಮತ್ತು ಭೀಮನ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ. ಈ ಎರಡೂ ಪಾತ್ರಧಾರಿಗಳು ಒಮ್ಮೆ ಅಲ್ಲೂರಿ ಸೀತಾರಾಮರಾಜು ಹಾಗೂ ಕೋಮರಂ ಭೀಮ್‌ನಂತೆ ಕಂಡರೆ, ಮತ್ತೊಮ್ಮೆ ರಾಮ ಮತ್ತು ಆಂಜನೇಯನಂತೆ ಕಾಣುತ್ತದೆ. ರಾಮನನ್ನು ಹುಡುಕುತ್ತ ಹೊರಟ ಸೀತೆ, ಆಕೆಗೆ ನೆರವಾಗುವ ಭೀಮನ ಎಪಿಸೋಡ್ ನೋಡುವಾಗ ಸ್ವಾತಂತ್ರ್ಯ ಪೂರ್ವದ ಕತೆಗೆ ಮೈಥಾಲಾಜಿಕಲ್ ಸ್ಪರ್ಶ ಕೂಡ ಕೊಟ್ಟಂತೆ ಕಾಣುತ್ತಾರೆ ಕತೆಗಾರ ವಿಜಯೇಂದ್ರ ಪ್ರಸಾದ್.
James vs RRR ಸಿನಿಮಾಗಳ ವಿವಾದ ಸುಖಾಂತ್ಯ: ಕಿಶೋರ್ ಪತ್ತಿಕೊಂಡ
ರಾಮರಾಜು ಪಾತ್ರದಲ್ಲಿ ರಾಮ್‌ಚರಣ್ ತೇಜ, ಭೀಮನ ಪಾತ್ರದಲ್ಲಿ ಜೂ.ಎನ್‌ಟಿಆರ್ ಒಬ್ಬರಿಗೊಬ್ಬರು ಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಇವರಿಬ್ಬರನ್ನು ನಿಭಾಯಿವುದು ಛಾಯಾಗ್ರಾಹ ಸೆಂದಿಲ್, ನಿರ್ದೇಶಕನ ಚಿತ್ರಕತೆ. ರೀವೆಂಜ್‌ಗೂ ಎಮೋಷನ್ ನಂಟು ಇರುತ್ತದೆ ಎನ್ನುವ ರಾಜಮೌಳಿಯ ಅದೇ ನಂಬಿಕೆಯಲ್ಲಿ ಮೂಡಿರುವ ಈ ಚಿತ್ರದಲ್ಲಿ ದ್ವೇಷ ದೊಡ್ಡದಾಗಿ ಎಮೋಷನ್ ಪಾಯಿಂಟ್ ಚಿಕ್ಕದಾಗಿ ಕಾಣುತ್ತದೆ. ಹೀಗಾಗಿ ತೀರಾ ಚಿಕ್ಕ ಕತೆಗೆ ಅದ್ದೂರಿ ಅಲಂಕಾರ ಮಾಡಿದ್ದಾರೆ. ಟ್ವೆಂಟಿ ಥರ್ಟಿ ಅಳತೆಯ ಸೈಟ್‌ನಲ್ಲಿ 10/10 ಸೈಜಿನ ಮನೆ ಕಟ್ಟಿದರೆ ಹೇಗಿರುತ್ತದೆ ಹಾಗೆ ಇದೆ ‘ಆರ್‌ಆರ್‌ಆರ್’. ಇಲ್ಲಿ 20/30 ಸೈಜು ಆದಿವಾಸಿ ಬಾಲಕಿಯ ಅಕ್ರಮ ಬಂಧನ ಎಮೋಷನ್ ಆದರೆ, 100/100 ಅದ್ದೂರಿ ಮೇಕಿಂಗ್. ಉಳಿದಂತೆ ಗ್ರಾಫಿಕ್ಸ್, ಆ ದಿನಗಳ ವೈಭವ, ಎಂ ಎಂ ಕೀರವಾಣಿ ಸಂಗೀತ, ಸಾಹಸ ದೃಶ್ಯಗಳು ಎಲ್ಲವೂ ಸೂಪರ್.