Film Review: ಪುರುಷೋತ್ತಮ

By Kannadaprabha NewsFirst Published May 7, 2022, 8:58 AM IST
Highlights

ಜಿಮ್ ರವಿ ನಾಯಕನಾಗಿ ಅಭಿನಯಿಸಿರುವ ಪುರುಷೋತ್ತಮ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ರವಿ ಅವರನ್ನು ಡಿಫರೆಂಟ್ ಲುಕ್‌ ನೋಡಿ ವೀಕ್ಷಕರು ಏನ್ ಹೇಳಿದ್ದರು? 

ಪ್ರಿಯಾ ಕೆರ್ವಾಶೆ

‘ಪುರುಷೋತ್ತಮ’ ಇದು ಬರೀ ಫ್ಯಾಮಿಲಿ ಕತೆ ಅಲ್ಲ. ಕ್ರೈಮ್‌, ಸಸ್ಪೆನ್ಸ್‌ ಸೇರಿಕೊಂಡ ಚಿತ್ರವನ್ನು ಹೊಸ ಬಗೆಯಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ ನಿರ್ದೇಶಕ ಅಮರನಾಥ್‌. ಸರಳ ರೇಖೆಯಂತೆ ಸಾಗುವ ಕತೆಯಲ್ಲಿ ತಿರುವು ಇದ್ದರೂ ಏರಿಳಿತ ಕಡಿಮೆ. ಕೊನೆಯಲ್ಲಿ ಸಿಗುವ ಚಮಕ್‌ ಸಿನಿಮಾವನ್ನು ಮಾಮೂಲಿ ಫ್ಯಾಮಿಲಿ ಕ್ರೈಮ್‌ ಥ್ರಿಲ್ಲರ್‌ನಿಂದ ಸೆಪರೇಟ್‌ಆಗಿ ನಿಲ್ಲಿಸುತ್ತದೆ. ಒಬ್ಬ ಕಾಮನ್‌ ಮ್ಯಾನ್‌ ‘ದೃಶ್ಯಂ’ ಚಿತ್ರದ ಜಾಜ್‌ರ್‍ ಕುಟ್ಟಿಯಂತೆ ತನ್ನ ಕುಟುಂಬವನ್ನು ಉಳಿಸಿಕೊಳ್ಳುವ ಕತೆ ಚಿತ್ರದ ಒನ್‌ಲೈನ್‌.

ಪತ್ನಿ ವಾಸುಕಿ, ಪುಟ್ಟಮಗಳು ಪಿಂಕಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ಪುರುಷೋತ್ತಮ ಕೌಟುಂಬಿಕ ಕಾಳಜಿಯ ಲಾಯರ್‌, ಟಿವಿ ನಿರೂಪಕ, ಆರ್ಟಿಸ್ಟ್‌. ಪತ್ನಿ ವಾಸುಕಿ ಸಾಮಾನ್ಯ ಗೃಹಿಣಿ, ಯಕ್ಷಗಾನ ಕಲಾವಿದೆ. ಆರಂಭದಿಂದಲೂ ಈಕೆಯ ನಡವಳಿಕೆಯಲ್ಲಿ ಭಯ, ನೋವು, ಗೊಂದಲ, ಅನುಮಾನ ಎದ್ದು ಕಾಣುತ್ತಿರುತ್ತದೆ. ವಾಸುಕಿಯ ಯಕ್ಷಗಾನ ಕಾರ್ಯಕ್ರಮ ನೋಡಿಯೇ ಈಕೆಗೇನೋ ಅನ್ಯಾಯವಾಗಿದೆ ಎಂಬ ಸೂಕ್ಷ್ಮ ಡಿಸಿಪಿ ರಮ್ಯಾಗೆ ತಿಳಿಯುತ್ತದೆ. ಆಕೆ ವಾಸುಕಿಯನ್ನು ಕೂಲಂಕಷವಾಗಿ ವಿಚಾರಿಸಿದಾಗ ಇಡೀ ಕತೆ ಹೊರಬೀಳುತ್ತದೆ. ವಾಸುಕಿಗಾದ ಅನ್ಯಾಯ ಏನು, ಆಕೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ, ಇವೆಲ್ಲದರ ಹಿಂದಿರುವ ಮಾಸ್ಟರ್‌ ಮೈಂಡ್‌ ಯಾವುದು ಅನ್ನುವುದು ಚಿತ್ರದ ಮುಖ್ಯದ ಅಂಶ. ಸಾಮಾನ್ಯ ಗೃಹಿಣಿ ಆಗಿದ್ದೂ ತನಗಾಗುವ ಅನ್ಯಾಯವನ್ನು ಸುಮ್ಮನೆ ಸಹಿಸುವ ಬದಲು ಹೇಗೆ ಎದುರಿಸಬಹುದು ಅನ್ನುವುದನ್ನೂ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಹೇಳಲಾಗಿದೆ.

Raaji Film Review: ಅಂತಃಕರಣದ ಹೆಣ್ಣೋಟ

ತಾರಾಗಣ: ಜಿಮ್‌ ರವಿ, ಅಪೂರ್ವ, ಬೇಬಿ ಅಂಕಿತಾ, ಕವಿತಾ,

ನಿರ್ದೇಶನ: ಅಮರನಾಥ್‌ ಎಸ್‌ ವಿ

ರೇಟಿಂಗ್‌ : 3

ವಿಮರ್ಶೆಯ ಮಾನದಂಡಗಳಿಲ್ಲದೇ ನೋಡಿದರೆ ಇದೊಂದು ಸರಾಗವಾಗಿ ನೋಡಿಸಿಕೊಂಡು ಹೋಗುವ ಚಿತ್ರ. ವಿಮರ್ಶೆಯ ದೃಷ್ಟಿಯಿಂದ ನೋಡಿದಾಗ ಮಿತಿಗಳ ಅರಿವಾಗುತ್ತದೆ. ಸಣ್ಣ ಅಡೆತಡೆಯೂ ಇಲ್ಲದೇ ವಾಸುಕಿ ಸೇಡು ತೀರಿಸಿಕೊಳ್ಳೋದು ನೋಡಿದರೆ, ಇಷ್ಟುಸುಲಭವಾಗಿ ವ್ಯಕ್ತಿಯ ಬದುಕು ಕೊನೆಯಾಗಿಸಬಹುದಾ ಅನ್ನುವ ಪ್ರಶ್ನೆ ಬರುತ್ತದೆ. ಕೊನೆಯ ಥ್ರಿಲ್ಲಿಂಗ್‌ ಎಲಿಮೆಂಟ್‌ನ ಹಿನ್ನೆಲೆಯಲ್ಲಿ ನೋಡಿದಾಗ ಡಿಸಿಪಿ ರಮ್ಯಾ ಪ್ರೆಸ್‌ಮೀಟ್‌ನಲ್ಲಿ ನೀಡುವ ಸ್ಟೇಟ್‌ಮೆಂಟ್‌ ಸರಿ ಹೊಂದುವುದಿಲ್ಲ. ಪಾದ್ರಿ ಪಾತ್ರ ಅನಗತ್ಯವಾಗಿ ಸುಳಿದಾಡುತ್ತದೆ. ನಿರೂಪಣೆ ಇನ್ನಷ್ಟುಬಿಗಿ ಆಗಿರಬೇಕಿತ್ತು. ಅಷ್ಟೆಲ್ಲ ಅನ್ಯಾಯಕ್ಕೊಳಗಾದ ವಾಸುಕಿಗೆ ಫ್ರೆಶ್‌ ಡ್ರೆಸ್ಸಿಂಗ್‌ ಸ್ಟೈಲ್‌ ಹೊಂದಿಕೆ ಆಗಲ್ಲ.

Shokiwala Film Review: ಶೋಕಿಯಲ್ಲಿ ವೇಗವಿಲ್ಲ, ಕತೆಯಲ್ಲಿ ಪ್ರೇಮವಿಲ್ಲ

ಉಳಿದಂತೆ ಜಿಮ್‌ ರವಿ ಪುರುಷೋತ್ತಮ ಪಾತ್ರದಲ್ಲಿ ಮನರಂಜನೆ ಕೊಡುತ್ತಾರೆ. ಅಪೂರ್ವ ಇಂಥದ್ದೊಂದು ಪ್ರೌಢ ಪಾತ್ರದ ಮೂಲಕ ತಾನೊಬ್ಬ ಪರ್ಫಾಮರ್‌ ಅನ್ನೋದನ್ನು ತೋರಿಸಿದ್ದಾರೆ. ಉಳಿದವರ ನಟನೆಯೂ ಚೆನ್ನಾಗಿದೆ. ಕತೆಯನ್ನು ನಿರೂಪಿಸಿದ ರೀತಿಯಲ್ಲಿ ಹೊಸತನವಿದೆ. ಸಂಭಾಷಣೆಯಲ್ಲಿ ಲವಲವಿಕೆ ಇದೆ. ಸಂಗೀತ ಕತೆಗೆ ಪೂರಕ. ಅಮರನಾಥ್‌ ಈ ಚಿತ್ರದ ಮೂಲಕ ಭರವಸೆ ಮೂಡಿಸುತ್ತಾರೆ. ಮನರಂಜನೆಗೆ ಕೊರತೆಯಿಲ್ಲದ ಚಿತ್ರವಿದು ಎನ್ನಲಡ್ಡಿಯಿಲ್ಲ.

click me!