ಫೋಟೋ ರಂಜಿಸುವುದಿಲ್ಲ, ಕಾಡುತ್ತದೆ: ಉತ್ಸವ್ ಗೊನವಾರ

By Kannadaprabha NewsFirst Published Mar 15, 2024, 9:38 AM IST
Highlights

ಚಿತ್ರೋತ್ಸಚಗಳಲ್ಲಿ ಮೆಚ್ಚುಗೆ ಗಳಿಸಿದ್ದ 'ಫೋಟೋ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಪ್ರಕಾಶ್ ರೈ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಉತ್ಸವ್ ಗೊನವಾರ್ ಸಂದರ್ಶನ.

ಆರ್‌. ಕೇಶವಮೂರ್ತಿ

ನಿಮ್ಮ ಹಿನ್ನೆಲೆ ಏನು?

ರಾಯಚೂರು ಜಿಲ್ಲೆಯ, ಮಸ್ಕಿ ತಾಲೂಕು, ಗೊನವಾರ ಎಂಬ ಹಳ್ಳಿಯ ಕೃಷಿ ಕುಟುಂಬ ನಮ್ಮದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲ. ಪಿಯುಸಿ ಓದುವಾಗಲೇ ಸಿನಿಮಾಗಳ ಮೇಲೆ ಆಸಕ್ತಿ ಹುಟ್ಟಿಸಿಕೊಂಡು ಪಿಯುಸಿಯನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ಬಂದೆ

ಚಿತ್ರರಂಗಕ್ಕೆ ಬಂದ ಉದ್ದೇಶ?

2016ರಲ್ಲಿ ನಾನು ಚಿತ್ರರಂಗಕ್ಕೆ ಬಂದಿದ್ದು. ಚಿತ್ರರಂಗದಲ್ಲಿ ನಾನು ಏನಾಗಬೇಕು ಅಂತ ನನಗೇ ಆಗ ಐಡಿಯಾ ಇರಲಿಲ್ಲ. ನಮ್ ಭಾಷೆಯಲ್ಲೇ ಹೇಳುವುದಾದರೆ ಶೋಕಿ ಅಂದುಕೊಂಡು ಬಂದೆ. \B\B

ಸುಮ್ಮನೆ ಬಂದವರು ಫೋಟೋದಂತಹ ಚಿತ್ರ ಮಾಡಿದ್ದೀರಲ್ಲ?

ಚಿತ್ರರಂಗಕ್ಕೆ ಬಂದ ಮೇಲೆ ಸಿನಿಮಾಗಳನ್ನು ಹೆಚ್ಚು ಹೆಚ್ಚು ನೋಡುತ್ತಾ ನನ್ನ ಸಿನಿಮಾ ಅಭಿರುಚಿ ಬೆಳೆಸಿಕೊಂಡೆ. ಸಿನಿಮಾಗಳ ಬಗ್ಗೆ ಓದೋಕೆ ಶುರು ಮಾಡಿದೆ. ನಿರ್ದೇಶನದ ಮೇಲೆ ಆಸಕ್ತಿ ಹುಟ್ಟಿಕೊಂಡಿತು.

ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು? 

ನಾನು ಬೆಂಗಳೂರಿಗೆ ಬಂದ ಮೇಲೆ ಜೀವನಕ್ಕಾಗಿ ಜೊಮ್ಯಾಟೊ ಹಾಗೂ ಸ್ವಿಗ್ಗಿಯಲ್ಲಿ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದೆ.

ಚಿತ್ರರಂಗಕ್ಕೆ ಬಂದ ಮೇಲೆ ಯಾರ ಜತೆಗೆ ಕೆಲಸ ಮಾಡಿದ್ರಿ?

‘ರುಪಾಯಿ’ ಹಾಗೂ ‘ಡಿಎನ್‌ಎ’ ಚಿತ್ರಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ನಾನು ನೋಡಿದ ಸಿನಿಮಾಗಳ ಪೈಕಿ ಮರಾಠಿಯ ‘ಫ್ಯಾಂಡ್ರಿ’ ಹಾಗೂ ಇಟಲಿಯ ‘ಬೈಸಿಕಲ್ ಥೀವ್ಸ್’ ನನ್ನ ಸ್ಫೂರ್ತಿಗೊಳಿಸಿದ ಚಿತ್ರಗಳು.

ಪೋಟೋ ಕತೆ ನಿಮ್ಮೊಳಗೆ ಹುಟ್ಟಿಕೊಂಡಿದ್ದು ಹೇಗೆ?

ಲಾಕ್‌ಡೌನ್‌ ಸಮಯದಲ್ಲಿ ಬೆಂಗಳೂರಿನಿಂದ ತನ್ನೂರಿಗೆ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿಯಾಗಿದ್ದ ಗಂಗಮ್ಮ ಅರ್ಧ ದಾರಿಯಲ್ಲೇ ತೀರಿಕೊಂಡ ಘಟನೆ ನನ್ನ ತೀವ್ರವಾಗಿ ಕಾಡಿತು. ಕೊರೋನಾ ಓಡಿಸಲು ಒಂದು ವರ್ಗ ಮನೆಯಲ್ಲಿ ಕೂತು ದೀಪ ಹಚ್ಚುತ್ತಿದ್ದರೆ, ಮತ್ತೊಂದು ವರ್ಗ ರಸ್ತೆಯಲ್ಲಿ ನಡೆಯುತ್ತಿತ್ತು. ದೀಪ ಹಚ್ಚಿದ ದಿನವೇ ಗಂಗಮ್ಮ ಸತ್ತಿದ್ದು. ಇದನ್ನು ದಾಖಲಿಸಬೇಕು ಎಂದಾಗ ಹುಟ್ಟಿಕೊಂಡಿದ್ದೇ ಫೋಟೋ ಸಿನಿಮಾ.

ಈ ಚಿತ್ರದ ಕಟ್ಟುವಿಕೆಯಲ್ಲಿ ನಿಮಗೆ ದಕ್ಕಿದ ಅನುಭವ ಏನು?

ಈ ಸಿನಿಮಾ ಕತೆ, ನನ್ನ ಬದುಕು ಬೇರೆ ಬೇರೆ ಅಲ್ಲ. ನನ್ನೂರಿನ ಗೊನವಾರದಿಂದ ಜನ ಬೆಂಗಳೂರಿಗೆ ಯಾಕೆ ಬರುತ್ತಾರೆ, ಹೆತ್ತವರ ಜತೆಗೆ ಬೆಂಗಳೂರಿಗೆ ಬರುವ ದುರ್ಗ್ಯಾನಂತಹ ಬಾಲಕರ ಕನಸು ಏನಂತ ಗೊತ್ತು. ಈ ಸಿನಿಮಾ ನನಗೆ ಕಲಿಕೆ ಅಲ್ಲ, ನನ್ನ ಬದುಕೇ ಈ ಸಿನಿಮಾ. ಹೀಗಾಗಿ ಸಿನಿಮಾ ನೋಡಿದವರು ‘ಸಿನಿಮಾ ತುಂಬಾ ಚೆನ್ನಾಗಿದೆ’ ಅಂದರೆ ನನಗೆ ಖುಷಿ ಆಗಲ್ಲ. ಯಾಕೆಂದರೆ ಇದು ಕಾಡುವ ಕತೆ. ರಂಜಿಸುವ ಚಿತ್ರವಲ್ಲ.

ಸಿನಿಮಾ ಬಿಡುಗಡೆ ಉದ್ದೇಶ ಇಟ್ಟುಕೊಂಡೇ ಚಿತ್ರವನ್ನು ಪ್ರಕಾಶ್‌ ರೈ ಅವರಿಗೆ ತೋರಿಸಿದ್ದಾ?

ಖಂಡಿತಾ ಇಲ್ಲ. ಚಿತ್ರರಂಗದಲ್ಲಿರುವ ಒಳ್ಳೆಯ ವ್ಯಕ್ತಿಗಳಿಗೆ ಈ ಚಿತ್ರ ತೋರಿಸಬೇಕು ಅನಿಸಿ ಪ್ರಕಾಶ್‌ ರೈ ಅವರ ಬ‍ಳಿ ಹೋಗಿದ್ದು. ಅವರು ಚಿತ್ರ ನೋಡಿ ನಾಲ್ಕು ಮಾತು ಹೇಳಿದರೆ ಸಾಕು ಅಂದುಕೊಂಡಿದ್ದೆ. ಈಗ ಅವರೇ ಬಿಡುಗಡೆಗೆ ಮುಂದೆ ನಿಂತಿದ್ದಾರೆ. ಇದು ಹೆಚ್ಚು ಜನಕ್ಕೆ ತಲುಪಬೇಕು. ಅದೇ ಈ ಚಿತ್ರಕ್ಕೆ ಸಲ್ಲುವ ಗೌರವ.

click me!