ಕಾಲಕ್ರಮೇಣ ನಕ್ಸಲ್ ವಾದದ ಗತಿ ಬದಲಾದಂತೆಲ್ಲಾ ಈ ಕುಕೃತ್ಯಗಳು ಸಾಫ್ಟ್ ಧೋರಣೆ ತಳೆದವೆಂದೇ ಹೇಳಬಹುದು. ಆ ಬಳಿಕ ಬಂದ ನಕ್ಸಲ್ ಕುರಿತ ಸಾಹಿತ್ಯ, ಬರಹ ಜೊತೆಗೆ ಸಿನಿಮಾಗಳೂ ಕಳನಾಯಕರನ್ನೇ ಹೀರೋಗಳಾಗಿ ಬಿಂಬಿಸಿ ಅವರ ಕುರಿತೇ ಅನುಕಂಪ ಮೂಡಿಸುವಂತೆ ಮಾಡುತ್ತಿದ್ದುದು ಸುಳ್ಳಲ್ಲ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.14): ನಕ್ಸಲಿಸಂ ಕುರಿತು ಭಾರತೀಯರಿಗೆ ಹೊಸದಾಗಿ ಹೇಳಬೇಕಾಗಿಲ್ಲ. ಪಶ್ಚಿಮಬಂಗಾಳದ ನಕ್ಸಲ್ಬರಿಯಲ್ಲಿ ಹುಟ್ಟಿಕೊಂಡ ಚಳುವಳಿ ಇಡೀ ದೇಶದಾದ್ಯಂತ ಮಾವೋವಾದದ ಹೆಸರಲ್ಲಿ, ಕ್ರಾಂತಿಯ ಹೆಸರಲ್ಲಿ ಹರಿಸಿದ ರಕ್ತಸಮುದ್ರ ಪ್ರತೀ ಭಾರತೀಯನ ಎದೆಯಲ್ಲಿ ಈ ಬಗ್ಗೆ ಆಕ್ರೋಶ ಹುಟ್ಟಿಸದೆ ಇರದು. ಆದರೆ ಕಾಲಕ್ರಮೇಣ ನಕ್ಸಲ್ ವಾದದ ಗತಿ ಬದಲಾದಂತೆಲ್ಲಾ ಈ ಕುಕೃತ್ಯಗಳು ಸಾಫ್ಟ್ ಧೋರಣೆ ತಳೆದವೆಂದೇ ಹೇಳಬಹುದು. ಆ ಬಳಿಕ ಬಂದ ನಕ್ಸಲ್ ಕುರಿತ ಸಾಹಿತ್ಯ, ಬರಹ ಜೊತೆಗೆ ಸಿನಿಮಾಗಳೂ ಕಳನಾಯಕರನ್ನೇ ಹೀರೋಗಳಾಗಿ ಬಿಂಬಿಸಿ ಅವರ ಕುರಿತೇ ಅನುಕಂಪ ಮೂಡಿಸುವಂತೆ ಮಾಡುತ್ತಿದ್ದುದು ಸುಳ್ಳಲ್ಲ.
ಇವೆಲ್ಲವನ್ನೂ ಮೀರಿ ಭಾರತದ ಪೂರ್ವ ಭಾಗದಲ್ಲಿ ಆರಂಭಗೊಂಡ ನಕ್ಸಲ್ ಚಟುವಟಿಕೆ ಪಶ್ಚಿಮದ ಕರಾವಳಿ ತೀರದವರೆಗೆ ತಲುಪಿದರೂ ಗಟ್ಟಿಯಾಗಿ ನೆಲೆಯೂರಿದ್ದು ಛತ್ತೀಸ್ ಘಡದಲ್ಲಿ. ಯಾಕೆ? ಏನು? ಅಲ್ಲಿ ನಡೆದ ಮಾರಣಹೋಮಗಳೇನು? ಇವೆಲ್ಲದರ ಕಥೆಯೇ 'ಬಸ್ತರ್'. ದಿ ಕೇರಳ ಸ್ಟೋರಿ ಸಿನಿಮಾದ ನಿರ್ದೇಶಕ ಸುದೀಪ್ತೋ ಸೇನ್ ನಟಿ ಅದಾಶರ್ಮರನ್ನು ನಾಯಕಿಯನ್ನಾಗಿ ಮಾಡಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಇಂದಿರಾ ತಿವಾರಿ, ವಿಜಯ್ ಕೃಷ್ಣ, ಯಶಪಾಲ್ ಶರ್ಮಾ, ರೈಮಾ ಸೇನ್, ಶಿಲ್ಪಾ ಶುಕ್ಲಾ ಸೇರಿದಂತೆ ಹಲವು ಕಲಾವಿದರ ಮನೋಜ್ಞ ಅಭಿನಯ ಸಿನಿಮಾದ ಕಳೆ ಹೆಚ್ಚಿಸಿದೆ.
ಸಿಎಎ ವಿರೋಧಿಸುವ ಕಾಂಗ್ರೆಸ್‌ಗೆ ರಾಷ್ಟ್ರೀಯತೆಯ ಅರಿವಿಲ್ಲ: ಈಶ್ವರಪ್ಪ
ಏನಿದು ಬಸ್ತರ್?: ಬಸ್ತರ್ ಛತ್ತೀಸ್ ಘಡದ ಒಂದು ಹಳ್ಳಿ. ಇದನ್ನೇ ಕೇಂದ್ರವಾಗಿಸಿಕೊಂಡ ಮಾವೋವಾದಿ ನಕ್ಸಲ್ ಗಳು ಭಾರತವನ್ನು ಕಮ್ಯೂನಿಸ್ಟ್ ಸರ್ವಾಧಿಕಾರದ ಅಡಿಯಲ್ಲಿ ತರಬೇಕೆಂದು ಹೊರಟಾಗ ಅದಕ್ಕೆ ದಿಟ್ಟತನದಿಂದ ಉತ್ತರ ಕೊಡುವ ಐಪಿಎಸ್ ಅಧಿಕಾರಿಯ ನೈಜ ಕಥೆಯೇ ಬಸ್ತರ್ ಸಿನಿಮಾದ ಕಥಾ ಹಂದರ. ರಾಜಕೀಯ, ಪತ್ರಿಕೋದ್ಯಮ, ಕಾನೂನು ಇವೆಲ್ಲವೂ ಕ್ರೌರ್ಯದ ಪರ ನಿಂತಾಗ ಅವೆಲ್ಲವನ್ನೂ ಮೆಟ್ಟಿ ನಿಲ್ಲುವ ಮಹಿಳಾ ಅಧಿಕಾರಿಯ ಶೌರ್ಯದ ಕಥೆಯಿದು. ಬಂದೂಕಿನಿಂದ ಗೆಲ್ಲಲಾಗದ್ದನ್ನು ಮಾತೃತ್ವವೆನ್ನುವ ಶಕ್ತಿ ಜಗತ್ತನ್ನು ಗೆಲ್ಲಬಹುದು ಎನ್ನುವಲ್ಲಿಯವರೆಗೆ ಒಟ್ಟಾರೆ ಚಿತ್ರದ ಒಳಹಂದರ. ಸಿನಿಮಾದ ಕೊನೆಯಲ್ಲಿ ಪ್ರತೀ ಮನೆಗೂ ಮಹಿಳೆ ಬೆಳಕಾಗಬಲ್ಲಳು ಎಂಬ ಪರೋಕ್ಷ ಅರ್ಥದಲ್ಲೇ ತೆರೆ ಎಳೆಯಲಾಗಿದೆ.
ನಿರ್ಜಾ ಮಾಧವನ್ ಎಂಬ ಐಪಿಎಸ್ ಅಧಿಕಾರಿಯ ರಿಯಲ್ ಸ್ಟೋರಿ: ಐಪಿಎಸ್ ಅಧಿಕಾರಿ ನೀರ್ಜಾ ಮಾಧವನ್ ಅವರು ನಕ್ಸಲ್ ನಿಗ್ರಹ ದಳದ ವಿಶೇಷ ಅಧಿಕಾರಿಯಾಗು ತೋರಿದ ದಿಟ್ಟ ಹೋರಾಟ, ಪರಾಕ್ರಮದ ನೈಜ ಕಥೆಯನ್ನೇ ಸಿನಿಮಾ ಮಾಡಲಾಗಿದೆ. 2010 ರಲ್ಲಿ ನಕ್ಸಲ್ ಕ್ರೌರ್ಯವನ್ನು ಮಟ್ಟ ಹಾಕಿದ್ದಕ್ಕಾಗಿ ಇವತ್ತಿಗೂ ಅವರು ಕೇಸು ಎದುರಿಸುತ್ತಿದ್ದಾರೆ ಎಂಬುದು ಗೊತ್ತಾದಾಗ ವ್ಯವಸ್ಥೆಯ ಮೇಲೆ ಕೋಪವೂ ಬರುತ್ತದೆ. ಕಾನೂನಿನ ಕೆಲ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ದುಷ್ಟಶಕ್ತಿಗಳ ವಿರುದ್ದ ಸಿನಿಮಾ ಜಾಗೃತಿ ಮೂಡಿಸುತ್ತದೆ. ಬಂದೂಕು ಹಿಡಿದು ಕಾಡಂಚಿನ ಗ್ರಾಮಗಳಲ್ಲಿ ಮಾರಣ ಹೋಮ ನಡೆಸುತ್ತಾ ಒಂದು ವರ್ಗ ಭಯೋತ್ಪಾದಕತೆ ಸೃಷ್ಟಿಸುತ್ತಿದ್ದರೆ ಇದೇ ನಕ್ಸಲಿಸಂಗೆ ಬೆಂಬಲ ಕೊಡುವಂತೆ ಮಾವೋವಾದಿಗಳ ಪರ ಪ್ರೇರಣೆ ತುಂಬುವ ಅರ್ಬನ್ ನಕ್ಸಲಿಸಂ ಕುರಿತೂ ಸಿನಿಮಾ ಬೆಳಕು ಚೆಲ್ಲಬಲ್ಲದು.
ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿ ನಿಲ್ಲಲ್ಲ: ಸಚಿವ ಪರಮೇಶ್ವರ್
ಪ್ರಾಕೃತಿಕ ಸೌಂದರ್ಯದ ಜೊತೆ ಜನಪದ ಸೊಗಡು ತುಂಬುವ ಸಿನಿಮಾ: ಛತ್ತೀಸ್ ಘಡದ ಬಸ್ತರ್ ನ ಪ್ರಾಕೃತಿಕ ಸೌಂದರ್ಯದ ಜೊತೆಗೆ ಅಲ್ಲಿಯ ಬುಡಕಟ್ಟು ಜನಾಂಗಗಳ ಪರಿಚಯವೂ ಸಿನಿಮಾದಲ್ಲಿದೆ. ಆಗಾಗ ಬರುವ ಹಿನ್ನಲೆ ದನಿಯಲ್ಲೂ ಈ ಜನಪದ ಸೊಗಡು ಕಟ್ಟಿಕೊಟ್ಟಿದ್ದು ನೈಜತೆಯ ಅನಾವರಣಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಸುದೀಪ್ತೊ ಸೇನ್ ರ ಕೇರಳ ಸ್ಟೋರಿಗಿಂತಲೂ ಬಸ್ತರ್ ನ ನಕ್ಸಲ್ ಸ್ಟೋರಿ ನೆಕ್ಸ್ಟ್ ಲೆವೆಲ್ ಸಿನಿಮಾವೆಂದೇ ಹೇಳಬಹುದು. ಇನ್ನು ಸಿನಿಮಾ ಬರೀ ಎರಡು ಗಂಟೆ ನಾಲ್ಕು ನಿಮಿಷವಷ್ಟೇ ಇದ್ದು ಸಿನಿಮಾ ಇಷ್ಟು ಬೇಗ ಮುಗಿದು ಹೋಯ್ತಾ ಅಂತ ಅನ್ನಿಸದೆ ಇರದು. ಕ್ಲೈಮ್ಯಾಕ್ಸ್ ಸ್ವಲ್ಪ ಬೇಗ ಮುಗಿಯುತ್ತೆ ಅನ್ನೋದು ಬಿಟ್ಟರೆ ಬೇರಾವ ಋಣಾತ್ಮಕ ಅಂಶಗಳಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಶೋ ಮುಗಿದಿದ್ದು ಸಿನಿಮಾ ವೀಕ್ಷಿಸಿದ ಬಹುತೇಕ ಎಲ್ಲರ ಮೆಚ್ಚುಗೆ ಪಡೆದಿದೆ. ಸಿನಿಮಾ ಮುಗಿಯುವ ವೇಳೆಗೆ ಹಲವರ ಕಣ್ಣಂಚಲ್ಲಿ ನೀರು ಜಿನುಗಿದರೆ, ಅರಿವೇ ಇಲ್ಲದೆ ತುಟಿಗಳಂಚಿನಲ್ಲಿ ರಾಷ್ಟ್ರ ಭಕ್ತಿಯ ಘೋಷಣೆ ಮೊಳಗುತ್ತದೆ. ಇದೇ ಮಾರ್ಚ್ 15ರಂದು ದೇಶಾದ್ಯಂತ ಸಿನಿಮಾ ತೆರೆಗೆ ಬರುತ್ತಿದ್ದು ಥ್ರಿಲ್ಲಿಂಗ್ ಕ್ರೈಂ ಸಿನಿಮಾ ಪ್ರೇಕ್ಷಕರ ಮನ ಗೆಲ್ಲೋದು ನಿಶ್ಚಿತ.