ಭಾರತದಲ್ಲಿ ಇನ್ನೂ ಸಲಿಂಗಕಾಮವನ್ನಾಗಿ, ವಿಧವೆಯ ಮರು ಮದುವೆಯನ್ನು ಸುಲಭವಾಗಿ ಒಪ್ಪಿಕೊಳ್ಳುವಂತ ಚಿತ್ರಗಳು ಬರುವುದು ಕಡಿಮೆ. ಬಂದರೂ ಜನರು ಅಕ್ಸೆಪ್ಟ್ ಮಾಡೋಲ್ಲ ಎನ್ನೋ ಹೊತ್ತಲ್ಲೇ ವಿಭಿನ್ನ ಕಿರಿ ಚಿತ್ರವೊಂದು ಸದ್ದಿಲ್ಲದೇ ಬಿಡುಗಡೆಯಾಗಿದೆ.
- ಡಾ. ಶ್ರೀನಿಧಿ ಅಡಿಗ
ಲೆಸ್ಬಿಯನ್‌ಗಳ ಕುರಿತ ಚಿತ್ರಗಳು ಭಾರತದಲ್ಲಿ ಬಹಳ ವಿರಳ. ಬಂದಿದ್ದರೂ ಸಿನಿಮಾದ ಕಥಾಹಂದರ ಹಾಗು ನಿರೂಪಣೆಗಳಿಗಿಂತ ಹೆಚ್ಚು ಚರ್ಚೆಗೊಳಗಾದದ್ದು ಸಿನಿಮಾದ ವಸ್ತು. ಚಿತ್ರದ ಕುರಿತು ಆರೋಗ್ಯಕರ ಚರ್ಚೆ ನಡೆಯುವ ಮೊದಲೇ ಅದು ನಿಷೇಧಕ್ಕೆ ಒಳಗಾದ್ದದೋ, ಸೆನ್ಸಾರ್ ಬೋರ್ಡ್‌ನಿಂದ ಅನುಮತಿ ಸಿಗದೆ ಕತ್ತರಿ ಪ್ರಯೋಗವಾದದ್ದೋ ಅಥವಾ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಮೂಲೆಗುಂಪಾದದ್ದೇ ಹೆಚ್ಚು. ಮಹಿಳೆಯರ ಕುರಿತಾಗಿ ಪ್ರಗತಿಪರ ವಿಚಾರಧಾರೆಯೆನ್ನು ವಸ್ತುವಾಗಿ ಹೊಂದಿರುವ 'ಬ್ರೇಕಿಂಗ್ ದ ಬ್ಯಾರಿಯರ್ಸ್', 'ಚಾಲೆಜಿಂಗ್ ಸ್ಟೀರಿಯೋಟೈಪ್ಸ್' ರೀತಿಯ ಯಾವುದೇ ಸಿನಿಮಾಕ್ಕೆ ಸಮಾಜದಲ್ಲಿ ಕೌಟುಂಬಿಕ ವಲಯದ ನೋಡುಗರಿಂದ ಸಿಗಬಹುದಾದ ಮನ್ನಣೆ ಅಥವಾ ಸ್ವೀಕಾರಾರ್ಹತೆ ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆಯಾದ್ದರಿಂದ ಈ ರೀತಿಯ ಪ್ರಕ್ರಿಯೆ ನಿರೀಕ್ಷಿತವೇ.
ಇತ್ತೀಚೆಗೆ ಒಂದಷ್ಟು ಯುವ ತಲೆಮಾರಿನ ನಿರ್ದೇಶಕರು ಸಲಿಂಗಿಗಳ ನಡುವಿನ ಸಂಬಂಧಗಳ ಕುರಿತು ಕಥೆಯನ್ನು ಹೆಣೆದು ತೆರೆಗೆ ತಂದಿದ್ದಾರೆ. ಲೆಸ್ಬಿಯನ್ ಸಂಬಂಧ (Lesbian Relationship) ಹಾಗು ವಿವಾಹದ (Wedding) ವಸ್ತುವನ್ನಿಟ್ಟುಕೊಂಡು ನಿರ್ಮಿಸಲಾಗಿರುವ ಜಾಹೀರಾತುಗಳು ದೂರದರ್ಶನದ ತೆರೆಯನ್ನು ಇನ್ನೂ ಹೊಕ್ಕಿಲ್ಲವಾದರೂ, ಆನ್‌ಲೈನ್ ವೇದಿಕೆಯಲ್ಲಿ ಸದ್ದು ಮಾಡಿವೆ. 1996 ರಲ್ಲಿ ದೀಪಾ ಮೆಹ್ತಾ ತೆರೆಗೆ ತಂದಿದ್ದ ನಂದಿತಾ ದಾಸ್ ಹಾಗು ಶಬಾನಾ ಆಜ್ಮಿ ಅಭಿನಯದ ಫಯರ್ (Fire) ಚಿತ್ರಕ್ಕೆ ಚಿತ್ರಮಂದಿರಗಳನ್ನು ಒಡೆಯುವ ಮೂಲಕ ಶಿವಸೇನೆ ವ್ಯಕ್ತಪಡಿಸಿದಷ್ಟು ವಿರೋಧ ಪ್ರಸ್ತುತ ಇಲ್ಲದಿದ್ದರೂ, 'ಪ್ಯಾರಾಡಿಗ್ರಾಮ್ ಶಿಫ್ಟ್' ಅಲ್ಲದಿದ್ದರೂ, ಸಾಂಪ್ರದಾಯಿಕ ಮನಸುಗಳು 'ಬೇಕಾದವರು' 'ಇಷ್ಟ ಇರುವವರು ನೋಡಿಕೊಳ್ಳಲಿ' ಎಂಬ ಹಂತಕ್ಕೆ ಬದಲಾಗುತ್ತಿವೆ.
undefined
ಬಹುಶಃ ಲೆಸ್ಬಿಯನ್ ವಿಷಯಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುವಂತೆ, ಬಹಿರಂಗವಾಗಿ ಲೆಸ್ಬಿಯನ್‌ಗಳು ನಾವು ಲೆಸ್ಬಿಯನ್‌ಗಳು ಎಂದು ಹೇಳಿಕೊಳ್ಳುವಂತೆ, ತಮ್ಮ ಹಕ್ಕುಗಳಿಗೆ ದನಿ ಎತ್ತುವ ಮಟ್ಟಿಗೆ ಅವರನ್ನು ಒಗ್ಗೂಡಿಸಿ ಸಶಕ್ತರನ್ನಾಗಿಸಿದ್ದು ಸಿನಿಮಾ ಮಾಧ್ಯಮ. ಅವರನ್ನು ಹೆಚ್ಚು ಹೆಚ್ಚು ಹೊರಜಗತ್ತಿಗೆ ಪರಿಚಯಿಸಿದ್ದು ಅವರ ಕುರಿತಾದ ಸಿನಿಮಾಗಳು. ಕ್ವೀರ್ ಸಮುದಾಯದ ಕುರಿತ ಚಿತ್ರಗಳು ತೆರೆ ಕಾಣುವ ಮೂಲಕ ಅವರ ಬದುಕಿನ ನೋವು ನಲಿವುಗಳು ಇತರರ ಅರಿವಿಗೆ ಬರುವಂತಾಗಿದೆ. ತಮ್ಮ ಸಿನಿಮಾದಲ್ಲಿ ಲೆಸ್ಬಿಯನ್ ಸಮುದಾಯವನ್ನು ಪ್ರತಿನಿಧಿಸುತ್ತಾ, ಸಿನಿಮಾ ಮೂಲಕ ಲೆಸ್ಬಿಯನ್ ಸಮುದಾಯದ ಹಕ್ಕುಗಳನ್ನೂ ಅಷ್ಟೇ ಪ್ರಬಲವಾಗಿ ಪ್ರತಿಪಾದಿಸುತ್ತ, ಸಮಾಜದಲ್ಲಿ ಲೆಸ್ಬಿಯನ್ ಸಮುದಾಯದ 'ಒಳಗೊಳ್ಳುವಿಕೆ'ಗೆ ಸಿನಿಮಾ ಮಾಧ್ಯಮವನ್ನು ಸಶಕ್ತವಾಗಿ ದುಡಿಸಿಕೊಳ್ಳುತ್ತಿರುವ ನಿರ್ದೇಶಕಿ ಶೈಲಜಾ ಪಡಿಂಡಾಲ.
ಅಬ್ಬಬ್ಬಾ!! ಲೆಸ್ಬಿಯನ್ ಅವತಾರದಲ್ಲಿ ಚೈತ್ರಾ ಆಚಾರ್?
ಪ್ರಸ್ತುತ ಸಮಾಜ ಹಾಗು ಚಿತ್ರರಂಗ ಮಹಿಳೆಯರ ಕುರಿತಾಗಿ ನೀಡಿರುವ 'ನರೇಟೀವ್ಸ್' ಗಳಿಗಿಂತ ವಿಭಿನ್ನವಾದ 'ನರೇಟಿವ್ಸ್' ಗಳನ್ನು ನೀಡುವ ತುಡಿತ ಶೈಲಜಾರದ್ದು. ತಮ್ಮ ಚಿತ್ರ 'ನಾನು ಲೇಡೀಸ್ʼನಲ್ಲಿಯೂ ಶೈಲಜಾ ಇಬ್ಬರು ಲೆಸ್ಬಿಯನ್ ಗೆಳತಿಯರ ನಡುವಿನ ಮಧುರ ಪ್ರೇಮವನ್ನು ಕಟ್ಟಿಕೊಡುತ್ತಾರೆ. ಆ ರೀತಿಯಲ್ಲಿ ಹೊರಬಂದಿರುವುದೇ ಶೈಲಜಾ ಪಡಿಂಡಾಲರವರ ಕಿರುಚಿತ್ರ ಲವ್ ಆಂಡ್ ಲೆಟ್ ಲವ್. ಇದು ತಮಿಳಿನ ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪ್ರಯೋಗಗಳಿಗೆ ಹೆಸರಾದ ನಿರ್ದೇಶಕ ಪ ರಂಜಿತ್ ರ ನೀಲಂ ಸೋಶಿಯಲ್ ಯೂಟ್ಯೂಬ್ ಚಾನೆಲ್‌ನಿಂದ ಬಿಡುಗಡೆಗೊಂಡ ಚಿತ್ರ.
ಕಥಾ ಹಂದರ
ಕೇವಲ ನಾಲ್ಕು ಪಾತ್ರಗಳನ್ನು ಒಳಗೊಂಡಿರುವ 7 ನಿಮಿಷ 30 ಸೆಕೆಂಡುಗಳ ಈ ಕಿರುಚಿತ್ರದಲ್ಲಿ ನಿರ್ದೇಶಕಿ ಎರಡು ತಲೆಮಾರಿನವರು ಕಂಡುಕೊಳ್ಳುವ ಪ್ರೀತಿಯಲ್ಲಿ ಇರುವ 'ಜನರೇಶನ್ ಗ್ಯಾಪ್'ನ ವೈರುಧ್ಯವನ್ನು ತೋರಿಸುತ್ತಲೇ, ಚಿತ್ರದ ಎಲ್ಲ ಪಾತ್ರಗಳು ಆ ಅಂತರವನ್ನು ಮೀರಿ ಮುಕ್ತ ಮನಸ್ಸಿನಿಂದ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವಂತೆ ಮಾಡುವ 'ಮ್ಯಾಜಿಕಲ್ ರಿಯಾಲಿಸಂ' ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಇದು ಕಿರುಚಿತ್ರವಾದರೂ ಇಲ್ಲಿ ಸಿನಿಮಾ ಪ್ರತಿ ಫ್ರೇಮೂ ಕೂಡ ಕಥೆಯನ್ನು ಕಟ್ಟಿಕೊಡುತ್ತಾ ಸಾಗುತ್ತದೆ.
ಈ ನಾಲ್ಕೂ ಪಾತ್ರಗಳು ತಮ್ಮ ಸುತ್ತಲೂ ಪ್ರೀತಿಯ ತರಂಗಗಳನ್ನು ಎಬ್ಬಿಸಿ ನೋಡುಗರೆಲ್ಲರೂ ಈ ಒಪ್ಪಿಗೆಗೆ ಮೆಚ್ಚುಗೆಯನ್ನು ಸೂಸುವಂತೆ ಮಾಡಬಲ್ಲ 'ಪಾಸಿಟೀವ್ ವೈಬ್ಸ್' (Positive Vibes)ಗಳನ್ನು ಸೃಷ್ಟಿಸಿ ಬಿಡುತ್ತದೆ. ಸಮುದಾಯವೊಂದರ ಆಶಯದಂತೆ ಮೂಡಿ ಬಂದಿರುವ ಈ ಚಿತ್ರದಲ್ಲಿ ಯಾವುದೇ ನಕಾರಾತ್ಮಕತೆಯ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ. ಬದುಕಿನ ಎಲ್ಲಾ ಜಂಜಾಟಗಳ ನಡುವೆ 'ಪ್ರತಿ ಪ್ರೇಮಿಗಳ ದಿನವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಕಳೆಯಬೇಕು' ಎಂದು ಭಾವಿಸುವ ಪ್ರೇಮಿಗಳ ನಡುವಿನ ಸುಮಧುರ ಕ್ಷಣಗಳಂತೆ ಈ ಚಿತ್ರ ಸರಿದು ಹೋಗುತ್ತದೆ. ಮಾತಿನ ಹಂಗಿಲ್ಲದೆ ಮೌನವಾಗಿ ಸಾಗುವ ಚಿತ್ರದಲ್ಲಿ ಕಲಾವಿದೆ ಗೀತಾ ಕೈಲಾಸಂ ಅವರ ಕಣ್ಣು ಮತ್ತು ಮುಖಭಾವಗಳೇ ನವರಸವನ್ನೂ ಸ್ಫುರಿಸುತ್ತವೆ. ಹೃದಯದ ಭಾಷೆ ಅರಿತವರಿಗೆ ಸಿನೆಮಾದಲ್ಲಿ ನಡೆಯುವ ಮಾತೆಲ್ಲವೂ ವೇದ್ಯವೇ.
ಹುಡುಗಿಯ ಮದ್ವೆಯಾದ ಹುಡುಗಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸಲಿಂಗಿ ಜೋಡಿ
ಸದಾ ಲವಲವಿಕೆಯಿಂದಿರುವ ಅಮ್ಮನ ಪ್ರೀತಿಯ ಲೆಸ್ಬಿಯನ್ ಮಗಳು ಚೈತ್ರಾ ಆಚಾರ್‌ಮನೆಯಲ್ಲಿನ ಗೋಡೆ ಮೇಲಿನ ಪೇಟಿಂಗ್ಸ್, ಪೋಸ್ಟರ್‌ಗಳು ಮತ್ತು ಆಕೆ ಓದುವ ವೈಚಾರಿಕ ಪುಸ್ತಕಗಳು ಆಕೆಯ ಸದಭಿರುಚಿಯನ್ನು ಸಾರುತ್ತವೆ. ಜೊತೆಗೆ ಕ್ವೀರ್ ಸಮುದಾಯದವರ ಬಗೆಗಿರಬಹುದಾದ ಪೂರ್ವಾಗ್ರಹಗಳನ್ನೂ ತೊಡೆದು ಹಾಕುತ್ತವೆ. ಮಧ್ಯ ವಯಸ್ಸಿನ ಸಿಂಗಲ್ ಪೇರೆಂಟ್ ತಾಯಿ ಕಂಡುಕೊಳ್ಳುವ 'ಕಂಪ್ಯಾನಿಯನ್‌ಶಿಪ್' (Companionship) ನ್ನು ನಿರ್ದೇಶಕಿ ಸಾಕಷ್ಟು ಆದರ್ಶಯುತವಾಗಿ ಎಲ್ಲ ಮಹಿಳೆಯರ ಮನಸ್ಸಿನ ನಿರೀಕ್ಷೆಗಳಿಗೆ ಮತ್ತು ಕನಸುಗಳಿಗೆ ರೂಪುಕೊಟ್ಟಂತೆ ಕಟ್ಟಿಕೊಡುತ್ತಾರೆ. ತಾಯಿ ಪಾತ್ರಧಾರಿ ಗೀತಾ ಕೈಲಾಸಂ ಬರುತ್ತಿದ್ದಂತೆ ಎದ್ದು ನಿಂತು, ಆಕೆಗೆ ಗೌರವ ಸೂಚಿಸುವ ಆಕೆಯ ಗೆಳೆಯನ ನಡವಳಿಕೆ, 'ಮಹಿಳೆಯರು ತಾನು ಪ್ರೀತಿಸುವವರಿಂದ ಪ್ರೀತಿಯ ಜೊತೆಗೆ ಗೌರವವೂ ಬಯಸುತ್ತಾರೆ,' ಎಂಬ ಅಂಶವನ್ನು ಒತ್ತಿ ಹೇಳುತ್ತದೆ. ಇದು ನಿರ್ದೇಶಕಿ ತನ್ನ ಸಿನಿಮಾದಲ್ಲಿ ಮಹಿಳೆಯರ ಬಗೆಗೆ ಕಟ್ಟಿಕೊಡುವ ವಿಶಿಷ್ಟ ಬಗೆಯ 'ನರೇಟೀವ್' ತಾಯಿ ತನ್ನದೇ ವಯಸ್ಸಿನ ಪುರುಷನಲ್ಲಿ ಆತ್ಮೀಯತೆ, ಸಾಮೀಪ್ಯ, ಒಡನಾಟ ಕಂಡುಕೊಂಡರೆ ಹೊಸ ತಲೆಮಾರಿನ ಮಗಳಿಗೆ ತನ್ನದೇ ವಯಸ್ಸಿನ ಹುಡುಗಿಯಲ್ಲಿ ಮೂಡುವ ಹದಿಹರೆಯದ ಪ್ರೇಮ. ಹೀಗೆ ಎರಡು ಹಾದಿಗಳಲ್ಲಿ ಸಾಗುವ ಇಬ್ಬರ ಬದುಕು ಸಂದಿಸುವ ಬಿಂದು ಮತ್ತು ಗಳಿಗೆ ಚಿತ್ರದ ಕೇಂದ್ರ ಬಿಂದು.
ತನ್ನ ಗೆಳೆಯನ ಎದುರಿನಲ್ಲಿ ತಾಯಿಯ ಕಣ್ಣು. ದೇಹಭಾಷೆ ಎಲ್ಲವೂ ಪ್ರೀತಿಯನ್ನೇ ಸೂಸುತ್ತದೆ ಅದೇ ರೀತಿ ಮಗಳ ಪ್ರೇಮಕಾವ್ಯವೂ ಕೊಂಚ ನವಿರಾಗಿ ಮೂಡಿ ಬಂದಿದ್ದರೆ ಉತ್ತಮವಾಗಿತ್ತು ಎನಿಸುತ್ತದೆ. ಮಗಳು ಹಾಗು ಮಗಳ ಸ್ನೇಹಿತೆ ಮೊದಲ ದೃಶ್ಯಕ್ಕಿಂತಲೂ ನಂತರದ ದೃಶ್ಯಗಳಲ್ಲಿ ಹೆಚ್ಚು ʻಮೆಚುರ್ಡ್ʼ ಅನ್ನಿಸುತ್ತಾ ಹೋಗುತ್ತಾರೆ. ತನ್ನ ಹಾಗೆ ತನ್ನ ಗೆಳೆಯನ ಪ್ರೀತಿಯನ್ನು ಅಳುಕುತ್ತಲೇ ಒಪ್ಪಿಕೊಳ್ಳುವ ತಾಯಿಗೆ, ಮಗಳನ್ನು ಕಂಡೊಡನೆ ಆಕೆಯ ಮಾತೃತ್ವ ಜಾಗೃತವಾದರೂ ಸಣ್ಣದಾಗಿಗಳನ್ನು ಕಣ್ಣಲ್ಲೇ ಗದರುತ್ತಾ, ಹತ್ತಿರ ಕರೆಯುತ್ತ ಮಗಳ ಮತ್ತು ಅವಳ ಸ್ನೇಹಿತೆಯ ಸಂಬಂಧಕ್ಕೆ ನಗುವಲ್ಲೇ ಒಪ್ಪಿಗೆಯ ಮುದ್ರೆ ಒತ್ತಿ ಬಿಡುತ್ತಾಳೆ. ನಂತರದ್ದು ಎಲ್ಲವೂ ರಾತ್ರಿಯ ಹೊತ್ತಲ್ಲಿ ಕೇಳುವ ಹೃದಯಕ್ಕೆ ಹತ್ತಿರವಾದ ಹಾಡಿನಂತೆಯೇ ಅನ್ನಿಸಿ ಮನಸ್ಸಿಗೆ ಹಿತವಾಗಿ ಮುಗಿದು ಬಿಡುತ್ತದೆ.
ನಿರ್ದೇಶಕರ ಮಾತು
ತಮ್ಮ ಚಿತ್ರದ ಬಗ್ಗೆ ಮಾತನಾಡುತ್ತಾ ಶೈಲಜಾ ಪಡಿಂಡಾಲ ಇಲ್ಲಿ ಯಾರೊಬ್ಬರೂ ಒಬ್ಬರು ಇನ್ನೊಬ್ಬರನ್ನು ಒಪ್ಪಿಕೊಳ್ಳಲು ಯಾವುದೇ ನಾಟಕೀಯತೆ ಪ್ರದರ್ಶಿದೆ, ಸರಳವಾಗಿ ಮತ್ತು ಸಹಜವಾಗಿ ಎಲ್ಲವುದನ್ನೂ ಒಪ್ಪಿಕೊಳ್ಳುತ್ತಾರೆ. ಒಬ್ಬ ಲೇಖಕಿಯಾಗಿ ನಾನು ಈ ಮಹಿಳೆಯರು, ಕ್ವೀರ್ ಮತ್ತು ಇತರೆ ಯಾವುದೇ ತುಳಿತಕ್ಕೊಳಗಾದ ವರ್ಗಗಳ ಸದಸ್ಯರನ್ನು ಸಮಾಜವು ಇದೇ ರೀತಿಯಾಗಿ ಮುಕ್ತವಾಗಿ ಸ್ವೀಕರಿಸುವುದನ್ನು ಬಯಸುತ್ತೇನೆ. ಈ ಮೂಲಕ ಕ್ಷೀರ್ ಸಮುದಾಯದವರ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ಅವರ ಪ್ರೀತಿಯನ್ನು ಒಪ್ಪಿಕೊಳ್ಳಿ ಎಂದು ವಿನಂತಿಸುತ್ತಿದ್ದೇನೆ ಎನ್ನುತ್ತಾರೆ.
ಮನೆಯವರ ವಿರೋಧದ ಮಧ್ಯೆಯೂ ಒಂದಾದ ಸಲಿಂಗಿ ಜೋಡಿ, ದೇವಸ್ಥಾನದಲ್ಲಿ ಯುವತಿಯರಿಬ್ಬರ ಮದುವೆ!
ಈ ಚಿತ್ರದಲ್ಲಿ ಬರುವ ಕಥಾನಾಯಕಿ ಲೆಸ್ಬಿಯನ್ ಮಗಳ ಪಾತ್ರಕ್ಕೆ ವಿವಿಧ ಆಯಾಮಗಳಿವೆ. ಚಿತ್ರಗಾರ್ತಿ, ಕನಸುಗಾರ್ತಿ, ಬಂಡಾಯಗಾರ್ತಿ, ಆದರ್ಶವಾದಿ ಹೀಗೆ ಆಕೆಯ ವ್ಯಕ್ತಿತ್ವಕ್ಕೆ ವಿವಿಧ ಮಜಲುಗಳಿವೆ. ಆಕೆ ಜಾತಿ (Caste), ಧರ್ಮ (Religion), ರಾಜಕೀಯ (Politics), ವೈಚಾರಿಕತೆ ಕುರಿತಾಗಿ ಮ್ಯಾಕ್ಸಿಮ್ ಗೋರ್ಕಿ, ಆಡ್ರೆ ಲಾರ್ಡ್ , ಡಾ ಬಿ.ಆರ್. ಅಂಬೇಡ್ಕರ್ ಬರೆದಿರುವ ಪುಸ್ತಕಗಳನ್ನು ಓದಿಕೊಂಡಿದ್ದಾಳೆ. ಕ್ರಾಂತಿಕಾರಿ ವರ್ಣಚಿತ್ರಕಾರ್ತಿ ಫ್ರೀಡಾಳನ್ನು ಆಕೆ ಆರಾಧಿಸುತ್ತಾಳೆ. ಈ ಪಾತ್ರದ ಬಗ್ಗೆ ಇಷ್ಟೆಲ್ಲ ಕೇಳಿದ ನಂತರ ಈ ಪಾತ್ರದಲ್ಲಿ ಅಭಿನಯಿಸುವುದಿಲ್ಲ ಎನ್ನುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಈ ಚಿತ್ರದ ಅಭಿನಯ ನನಗೆ ಒಂದು ಸುಂದರ ವಿಭಿನ್ನ ಅನುಭವ, ಎನ್ನುತ್ತಾರೆ ಚಿತ್ರದಲ್ಲಿ ಕಥಾನಾಯಕಿಯಾಗಿ ಅಭಿನಯಿಸಿದ ಚೈತ್ರಾ ಜೆ ಆಚಾರ್.