Film Review: ಮದಗಜ

Kannadaprabha News   | Asianet News
Published : Dec 04, 2021, 09:33 AM IST
Film Review: ಮದಗಜ

ಸಾರಾಂಶ

ನಿರ್ಮಾಪಕರು ಸ್ಟಾರುಗಳನ್ನು ನಂಬುತ್ತಾರೆ. ನೀವು ಸ್ಟಾರುಗಳನ್ನು ನಂಬುತ್ತೀರೋ ಇಲ್ಲವೋ. ಸ್ಟಾರ್‌ಗಳನ್ನೇ ಆರಾಧಿಸುವ ಅಭಿಮಾನಿ ಬಂಧುಗಳು ಜಗತ್ತಿನ ತುಂಬಾ ಇದ್ದಾರೆ. ಶ್ರೀಮುರಳಿ ಸೂಪರ್‌ಸ್ಟಾರ್‌ ಆಗಿ ಕಾಣಿಸುವುದಕ್ಕೆ ಬೇಕಾಗುವ ಪ್ರತಿಯೊಂದು ಅಂಶಗಳೂ ಮದಗಜ ಚಿತ್ರದಲ್ಲಿವೆ. ಅಷ್ಟರ ಮಟ್ಟಿಗೆ ಸ್ಟಾರ್‌ ಅನ್ನು ನಂಬಬಹುದಾದ ಪಕ್ಕಾ ಕಮರ್ಷಿಯಲ್‌ ಎಂಟರ್‌ಟೇನರ್‌.

ಎರಡು ಹಳ್ಳಿಗಳ ಮಧ್ಯದ ದ್ವೇಷದ ಬೆಂಕಿ ಇದೆ. ಊರನ್ನಾಳುವ ದೊರೆ ಇದ್ದಾನೆ. ದೊರೆಯನ್ನು ಕಾಯೋ ಸೂರ್ಯ ಇದ್ದಾನೆ. ಸೂರ್ಯನನ್ನು ತಡೆಯೋ ಹೆಂಗರುಳಿದೆ. ಗ್ಲಾಮರ್‌ಗೆ ಆಶಿಕಾ ರಂಗನಾಥ್‌ ಇದ್ದಾರೆ. ಕಾಮಿಡಿಗೆ ಚಿಕ್ಕಣ್ಣ. ಬೆಂಕಿ ಉಗುಳುವುದಕ್ಕೆ ತಕ್ಕಷ್ಟುಖಳರಿದ್ದಾರೆ. ನೂರಾರು ಮಂದಿ ಗಾಳಿಯಲ್ಲಿ ಹಾರುತ್ತಾರೆ. ನಾಯಕ ಕಾರಿನ ಮೇಲೆ ಬಿದ್ದಾಗ ಟೈರುಗಳು ಎಗರುತ್ತವೆ. ಎಮೋಷನಲ್‌ ಸೀನಲ್ಲಿ ಕಣ್ಣಂಚಲ್ಲಿ ನೀರು ಜಿನುಗುತ್ತದೆ. ಅಪ್ಪ-ಮಗ, ಅಮ್ಮ- ಮಗ, ಊರು- ದೊರೆ ಸೆಂಟಿಮೆಂಟ್‌ ಹೊಟ್ಟೆಯೊಳಗೆ ಚಿಟ್ಟೆಓಡಾಡಿಸುತ್ತದೆ. ಜನರಿದ್ದಾರೆ. ಜಾತ್ರೆ ಇದೆ. ಇವೆಲ್ಲವೂ ಸೇರಿ ಮದಗಜ ಸಿನಿಮಾ ಒಂದು ಚೆಂದದ ಪ್ಯಾಕೇಜ್‌ ಆಗಿದೆ.

ಇಲ್ಲಿ ಎಲ್ಲವೂ ಚೆಂದಾಚೆಂದ. ಹೆಣ ಸುಡುವ ಮಸಣವನ್ನೂ ಅತಿ ಸುಂದರವಾಗಿ ತೋರಿಸಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಚೆನ್ನಾಗಿಲ್ಲ ಅನ್ನುವುದೇ ಇಲ್ಲ. ಹಣೆಯಿಂದ ತೊಟ್ಟಿಕ್ಕುವ ರಕ್ತವೂ ಕೂಡ ಕಲರ್‌ಫುಲ್‌. ಶ್ರೀಮುರಳಿ ತಾನೊಬ್ಬ ಸೂಪರ್‌ಸ್ಟಾರ್‌ ಅನ್ನುವುದನ್ನು ಇಲ್ಲಿ ನಿರೂಪಿಸಿದ್ದಾರೆ. ಅವರನ್ನು ಸ್ಕ್ರೀನ್‌ ಮೇಲೆ ನೋಡುವುದೇ ಅಭಿಮಾನಿಗಳಿಗೆ ಹಬ್ಬ. ಎಂಟೆದೆ ಭಂಟನಾಗಿ ಆಕ್ರೋಶವನ್ನು, ತ್ಯಾಗಮಯಿ ಪ್ರೇಮಿಯಾಗಿ ವಿಷಾದವನ್ನು, ಮಾತು ತಪ್ಪದ ಮಗನಾಗಿ ವಿಶ್ವಾಸವನ್ನು ಅವರ ಕಣ್ಣಲ್ಲಿ ಹುಡುಕಲು ಯಾವುದೇ ಅಡ್ಡಿಯಿಲ್ಲ.

ನಿರ್ದೇಶನ: ಮಹೇಶ್‌ ಕುಮಾರ್‌

ತಾರಾಗಣ: ಶ್ರೀಮುರಳಿ, ಜಗಪತಿ ಬಾಬು, ಆಶಿಕಾ ರಂಗನಾಥ್‌, ದೇವಯಾನಿ, ಗರುಡರಾಮ್‌, ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್‌ ಕೆಆರ್‌ಪೇಟೆ

ರೇಟಿಂಗ್‌- 4

ಜಗಪತಿ ಬಾಬು, ದೇವಯಾನಿ ಜೋಡಿಯ ನಟನೆ ಈ ಚಿತ್ರದ ತಾಕತ್ತು. ಮದಗಜ ಚಿತ್ರವನ್ನು ತಮ್ಮ ಶಕ್ತಿಯಿಂದಲೇ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿರುವುದು ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಛಾಯಾಗ್ರಾಹಕ ನವೀನ್‌ ಕುಮಾರ್‌ ಜೋಡಿ. ಅಬ್ಬರದಲ್ಲೂ ವಿಷಾದ ಹೊಮ್ಮಿಸುವ ಶಕ್ತಿ ಬಸ್ರೂರಿಗಿದೆ. ಅದೇ ಥರ ಬೆಂಕಿ ಕಿಡಿಯಲ್ಲೂ ಚಿತ್ತಾರ ತೋರಿಸುವ ಕಲಾತ್ಮಕತೆ ನವೀನ್‌ಗಿದೆ. ಅವರಿಬ್ಬರೂ ಮೆಚ್ಚುಗೆಗೆ ಅರ್ಹರು.

Madhagaja Release: ಚಿತ್ರದ ಟೈಟಲ್‌ ಮಾಸ್‌ ಕತೆ ಕ್ಲಾಸ್‌, ಶ್ರೀಮುರಳಿ ಸಂದರ್ಶನ

ಕತೆ, ಚಿತ್ರಕತೆ ಹೊರತಾಗಿ ಇಂಥದ್ದೊಂದು ಅದ್ದೂರಿ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಬೇರೆಯದೇ ಶಕ್ತಿ ಬೇಕು. ನೂರಾರು ಜನರಿರುವ ದೃಶ್ಯಗಳು, ವಾರಣಾಸಿಯಂತಹ ಕಿಕ್ಕಿರಿದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವ ಸವಾಲನ್ನು ಮಹೇಶ್‌ಕುಮಾರ್‌ ಗೆದ್ದಿದ್ದಾರೆ. ಅವರ ನಿರ್ದೇಶನಾ ಶಕ್ತಿಗೆ ಚಪ್ಪಾಳೆ. ಈ ಚಿತ್ರದ ಮತ್ತೊಂದು ಪ್ರಮುಖ ಅಂಶ ಡೈಲಾಗ್‌. ಸಪ್ಪಗಿದ್ದವನನ್ನೂ ಎತ್ತಿ ಕೂರಿಸುವ, ಕಿವಿಯಲ್ಲಿ ಗುಂಯ್‌ಗುಡುವಂತೆ ಮಾಡುವ, ಕಣ್ಣೀರು ಹರಿಸುವ, ಪ್ರಣಯ ಉಕ್ಕಿಸುವ ವಿಧವಿಧದ ಡೈಲಾಗುಗಳೆಲ್ಲಾ ಇಲ್ಲಿವೆ. ಈ ಮಧ್ಯೆ ಮಂಚ ಮುರಿಯೋ ಥರ ಸಂಸಾರ ಮಾಡುತ್ತೇನೆ ಎಂಬೊಂದು ಸಾಲು ಬಂದು ಹೋಗುತ್ತದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟವಾದರೂ ಅಲ್ಲಲ್ಲಿ ಬಿಟ್ಟುಹೋಗುವುದೇ ಸೂಕ್ತವಾದುದು.

Film Review: ಸಖತ್‌

ಈ ಚಿತ್ರವನ್ನು ನರೇಟ್‌ ಮಾಡಿರುವುದು ವಸಿಷ್ಠ ಸಿಂಹ. ಅವರ ಧ್ವನಿಯಲ್ಲಿ ಕತೆ ಕೇಳುವುದು ಖುಷಿ ಕೊಡುತ್ತವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಧಾರಾಳಿ ನಿರ್ಮಾಪಕ ಉಮಾಪತಿಯವರ ಸಿನಿಮಾ ಪ್ರೀತಿ ಮತ್ತು ಲೆಕ್ಕಾಚಾರ ಎದ್ದು ಕಾಣುತ್ತದೆ. ಇಲ್ಲಿ ಯಾವುದು ಹೆಚ್ಚು, ಯಾವುದು ಕಡಿಮೆ ಅನ್ನುವುದನ್ನು ಅವರವರು ಕಂಡುಕೊಳ್ಳುವುದೇ ಸರಿಯಾದ ನಿರ್ಧಾರ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ