ನಟ ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿರುವ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಭಾಗ 2 ನೋಡಲೇ ಬೇಕು ಎಂದಿದ್ದಾರೆ.
ರಾಜೇಶ್ ಶೆಟ್ಟಿ
ಬಾಲ್ಯಕಾಲದಲ್ಲಿ ಕಳೆದುಹೋದ ಮಗನಿಗಾಗಿ ಕಾಯುತ್ತಿರುವ ತಾಯಿಯ ಕಣ್ಣೀರಿನ ಆಧಾರ, ಮಾಟ-ಮಂತ್ರದ ಕಪ್ಪು ಪ್ರಪಂಚದ ಹಿನ್ನೆಲೆ, ಕಣ್ಣಲ್ಲೇ ಮಾತನಾಡುವ ಕಲಾವಿದರ ಪರಿಪೂರ್ಣ ಅಭಿನಯ, ಲವಲವಿಕೆಯ ಮಾತುಗಾರಿಕೆ, ಕ್ಲೈಮ್ಯಾಕ್ಸ್‌ನಲ್ಲೊಂದು ವಿಶಿಷ್ಟತಿರುವು, ಎರಡನೇ ಭಾಗ ನೋಡಲು ಕುತೂಹಲ ಹುಟ್ಟಿಸುವ ಹಲವು ಪ್ರಶ್ನೆಗಳು- ಇವೆಲ್ಲವೂ ಸೇರಿಕೊಂಡ ಒಂದು ಕಮರ್ಷಿಯಲ್ ಎಂಟರ್‌ಟೇನರ್ ಅವತಾರ ಪುರುಷ.
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಭವ್ಯಾ, ಸುಧಾರಾಣಿ, ಬಾಲಾಜಿ ಮನೋಹರ್, ಅಶುತೋಷ್ ರಾಣಾ
ರೇಟಿಂಗ್- 3
ಮಾತು ಮತ್ತು ನಟನೆಯ ಮೂಲಕ ನೋಡುಗರನ್ನು ಕೈಹಿಡಿದು ಜೊತೆಗೆ ಕರೆದೊಯ್ಯುವ ಶರಣ್, ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಥ್ರಿಲ್ ಹೆಚ್ಚಿಸಿರುವ ಅರ್ಜುನ್ ಜನ್ಯಾ, ಕ್ಯಾಮೆರಾದ ಮೂಲಕ ವಿಶಿಷ್ಟಜಗತ್ತನ್ನು ಸೃಷ್ಟಿಸಿರುವ ವಿಲಿಯಂ ಡೇವಿಡ್, ತನ್ನೆಲ್ಲಾ ಲೈವ್ಲಿನೆಸ್ ಅನ್ನು ಸಿನಿಮಾದಲ್ಲಿ ತರಲು ಯತ್ನಿಸಿರುವ ನಿರ್ದೇಶಕ ಸಿಂಪಲ್ ಸುನಿ, ಧ್ವನಿ ಮತ್ತು ತನ್ನ ಇರುವಿಕೆಯ ಮೂಲಕವೇ ಮಂತ್ರಮುಗ್ಧಗೊಳಿಸುವ ಶ್ರೀನಗರ ಕಿಟ್ಟಿ, ಪಾತ್ರವೇ ಆಗಿ ಮನಸ್ಸಲ್ಲಿ ಉಳಿಯುವ ಪ್ರತಿಯೊಬ್ಬ ಕಲಾವಿದರಿಂದ ಈ ಸಿನಿಮಾ ಹೆಚ್ಚು ಆಪ್ತವಾಗಿದೆ. ನೋಡಿಸಿಕೊಂಡು ಹೋಗುತ್ತದೆ.
ಮಾಟ, ಮಂತ್ರದ ಹಿನ್ನೆಲೆ ಇರುವ ಕತೆ ಹೊಸತೇನೂ ಅಲ್ಲ. ಹೊಸತಾಗಿ ಹೇಗೆ ಹೇಳುತ್ತಾರೆ ಅನ್ನುವುದರಲ್ಲಿ ಗೆಲುವು ಅಡಗಿರುತ್ತದೆ. ಸಿಂಪಲ್ ಸುನಿ ಆ ವಿಚಾರದಲ್ಲಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಘನತೆವೆತ್ತ ಮನೆಯ ಮಗನಾಗಿ ಜೂನಿಯರ್ ಆರ್ಟಿಸ್ಟ್ ಬರುವಲ್ಲಿಗೆ ಕತೆ ಶುರುವಾಗುತ್ತದೆ. ಅಲ್ಲಿ ನಡೆಯುವ ತರಲೆ ತಾಪತ್ರಯಗಳು, ಆ ಮನೆಗಿರುವ ಶತ್ರುಗಳು, ಕಾಯಲೊಂದು ಅಷ್ಟದಿಗ್ಬಂಧನ, ಯಾರೋ ಒಬ್ಬ ನಿಗೂಢ ಕಾವಲುಗಾರ ಎಲ್ಲವೂ ಸೇರಿ ಸಿನಿಮಾದ ವೇಗವನ್ನು ಹೆಚ್ಚಿಸಿದೆ.
Raaji Film Review: ಅಂತಃಕರಣದ ಹೆಣ್ಣೋಟ
ಇಲ್ಲಿನ ಅನೇಕ ಪಾತ್ರಗಳಿಗೆ ಭಾವನಾತ್ಮಕ ಬಂಧ ಇದೆ. ಆದರೆ ಆ ಭಾವನಾತ್ಮಕತೆಯನ್ನು ಹಿಂದಿಕ್ಕಿ ರೋಚಕತೆ ಮೇಲುಗೈ ಸಾಧಿಸಿದೆ. ಮುಂದೇನಾಗುತ್ತದೆ ಅನ್ನುವ ಗುಣವೇ ಈ ಸಿನಿಮಾದ ಸೂತ್ರ. ಈ ಸೂತ್ರವನ್ನು ಮುಂದಿನ ಭಾಗಕ್ಕೂ ದಾಟಿಸುವಲ್ಲಿ ಸುನಿ ಗೆದ್ದಿದ್ದಾರೆ. ಬಾಹುಬಲಿಯಲ್ಲಿ ಕಟ್ಟಪ್ಪ ಯಾಕೆ ಕೊಂದ ಅನ್ನುವ ಪ್ರಶ್ನೆಯೊಂದೇ ಉಳಿದಿತ್ತು. ಇಲ್ಲಿ ಮಾತ್ರ ಕಿಟ್ಟಪ್ಪ ಯಾರು ಅನ್ನುವುದರಿಂದ ಹಿಡಿದು ತ್ರಿಶಂಕು ಲೋಕದ ದೊಡ್ಡಪ್ಪ ಯಾರು ಅನ್ನುವವರೆಗೆ ಅನೇಕ ಪ್ರಶ್ನೆಗಳು ಉಳಿದುಕೊಂಡಿವೆ. ಅಷ್ಟರ ಮಟ್ಟಿಗೆ ಸಿಂಪಲ್ ಸುನಿ ಕೊನೆಯ ಬಾಲಲ್ಲಿ 6 ರನ್ ಹೊಡೆಯುವ ಪರಿಸ್ಥಿತಿಯಲ್ಲಿ ಆರ್‌ಸಿಬಿಯ ದಿನೇಶ್ ಕಾರ್ತಿಕ್‌ನನ್ನು ಕ್ರೀಸ್‌ನಲ್ಲಿ ತಂದು ನಿಲ್ಲಿಸಿದ್ದಾರೆ. ಮ್ಯಾಚ್ ಗೆಲುವು ನಿರ್ಧಾರ ಆಗುವುದಕ್ಕೆ ಎರಡನೇ ಭಾಗ ಬರಲು ಕಾಯಬೇಕು.