ಕೊಳ್ಳಿದೆವ್ವದ ಬೆಳಕಲ್ಲಿ ಕೊಲೆಗಾರನ ಅನಾವರಣ: ರಾಜ್‌ ಬಿ ಶೆಟ್ಟಿ Rakkasapuradhol Movie Review

Published : Feb 07, 2026, 04:36 PM IST
rakkasapuradhol movie

ಸಾರಾಂಶ

Rakkasapuradhol Kannada Movie Review: ರಾಜ್‌ ಬಿ ಶೆಟ್ಟಿ, ಸ್ವಾತಿಷ್ಠ ಕೃಷ್ಣ, ಅರ್ಚನಾ ಕೊಟ್ಟಿಗೆ, ಅನಿರುದ್ಧ ಭಟ್‌ ನಟನೆಯ ರಕ್ಕದಪುರದೋಳ್‌ ಸಿನಿಮಾ ರಿಲೀಸ್‌ ಆಗಿದೆ. ಹಾಗಾದರೆ ಈ ಸಿನಿಮಾ ಹೇಗಿದೆ?

ರಕ್ಕದಪುರದೋಳ್‌ ಸಿನಿಮಾ ವಿಮರ್ಶೆ

-ಜೋಗಿ

ತನಗೆ ಸ್ಕಿಜೋಫ್ರೇನಿಯಾ ಇದೆ ಅಂತ ಹೇಳಿಕೊಂಡು ರಕ್ಕಸಪುರ ಎಂಬ ಊರಿಗೆ ವರ್ಗವಾಗಿ ಬರುವ ಪೊಲೀಸ್ ಅಧಿಕಾರಿ, ಅವನು ಬಂದ ನಂತರ ನಡೆಯುವ ಕೊಲೆಗಳು, ಗುಮಾನಿ ಪಡುವುದಕ್ಕೆ ನಾಲ್ಕೈದು ಪಾತ್ರಗಳು, ದಾರಿತಪ್ಪಿಸುವುದಕ್ಕೆ ಕೊಳ್ಳಿದೆವ್ವ- ಇಷ್ಟನ್ನು ಇಟ್ಟುಕೊಂಡು ಒಂದು ಪರ್ಫೆಕ್ಟ್‌ ಕ್ರೈಮ್ ಥ್ರಿಲ್ಲರ್ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರವಿ ಸಾರಂಗ. ಇದು ಅವರ ಮೊದಲ ಚಿತ್ರವಾಗಿದ್ದರೂ ಬರೆವಣಿಗೆ ಬಿಗಿಯಾಗಿದೆ, ಕತೆ ಗಟ್ಟಿಯಾಗಿದೆ, ಚಿತ್ರಕತೆ ಚುರುಕಾಗಿದೆ.ರಾಜ್‌ ಬಿ ಶೆಟ್ಟಿ ಯೂನಿಫಾರ್ಮ್ ಇಲ್ಲದ ಎಲ್ಲೂ ದನಿಯೇರಿಸಿದ ಮಾತಾಡದ ಪೊಲೀಸ್ ಅಧಿಕಾರಿ ಶಿವನ ಪಾತ್ರವನ್ನು ಹೊಕ್ಕಿದ್ದಾರೆ. ಆ ಪಾತ್ರಕ್ಕಿರುವ ಸೀಳುವ್ಯಕ್ತಿತ್ವದ ಕಾಯಿಲೆಯನ್ನು ನಿರ್ದೇಶಕ ಬಹಳ ಸೊಗಸಾಗಿ ಬಳಸಿಕೊಂಡಿದ್ದಾರೆ. ಸಿದ್ಧಯ್ಯನಾಗಿ ಬಿ ಸುರೇಶ, ಹೆಡ್ಮಾಸ್ಟರ್ ಗೋಪಾಲ ದೇಶಪಾಂಡೆ, ಸಿದ್ದಯ್ಯನ ಶಿಷ್ಯನಾಗಿ ಜಹಾಂಗೀರ್ ಜತೆಗೆ ಸ್ವಾತಿಷ್ಟ ಮತ್ತು ಅರ್ಚನಾ ಕೊಟ್ಟಿಗೆ ಸೇರಿಕೊಂಡು ತಮ್ಮ ತಮ್ಮ ಪಾತ್ರವನ್ನು ಕತೆಯಿಂದಾಚೆ ಸರಿಯದಂತೆ ಅಚ್ಚುಕಟ್ಟಾಗಿ ನೋಡಿಕೊಂಡಿದ್ದಾರೆ.

ಇವರೆಲ್ಲರ ನಡುವೆ ಥಟ್ಟನೆ ಗಮನ ಸೆಳೆಯುವುದು ಅನಿರುದ್ಧ ಭಟ್. ತನ್ನ ಪಾಲಿಗೆ ಬಂದಿರುವ ಪಾತ್ರವನ್ನು ಅವರು ನಿಭಾಯಿಸಿರುವ ರೀತಿ ಅಚ್ಚರಿಗೊಳಿಸುತ್ತದೆ. ಆ ಪಾತ್ರಕ್ಕೆ ಇರಬೇಕಾದ ಉನ್ಮಾದ, ಕ್ರೋಧ ಮತ್ತು ವಿಕ್ಷಿಪ್ತತೆಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ಅವರನ್ನು ಸಮರ್ಥವಾಗಿ ಬಳಸಿಕೊಂಡರೆ ಮತ್ತೊಬ್ಬ ಅತ್ಯುತ್ತಮ ನಟ ಚಿತ್ರರಂಗಕ್ಕೆ ದಕ್ಕುತ್ತಾನೆ.

ವಿಲಿಯಂ ಡೇವಿಡ್ ಛಾಯಾಗ್ರಹಣದಲ್ಲಿ ಹಳ್ಳಿ ನಿಗೂಢವಾಗುತ್ತಾ ಹೋಗುತ್ತದೆ. ಕೆ ಎಂ ಪ್ರಕಾಶ್ ಘಟನೆಗಳ ತೀವ್ರತೆ ಹೆಚ್ಚುವಂತೆ ಚಿತ್ರವನ್ನು ಹೊಲಿದಿದ್ದಾರೆ. ಕಲಾ ನಿರ್ದೇಶನ ಕೂಡ ಈ ಚಿತ್ರದ ಪರಿಣಾಮ ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಆ ವಿಭಾಗವನ್ನು ಮೋಹನ್ ಬಿ ಕೆರೆ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ.

ನಿರ್ದೇಶಕ ರವಿ ಸಾರಂಗ, ಹಾರರ್ ಮತ್ತು ಮನೋವೈಜ್ಞಾನಿಕ ಕತೆಯನ್ನು ಬೆಸೆದಿರುವ ರೀತಿ ಕೂಡ ಸೊಗಸಾಗಿದೆ. ಈ ಶೈಲಿಯ ಅನೇಕ ಸಿನಿಮಾಗಳು ಬಂದಿವೆಯಾದರೂ, ಈ ಚಿತ್ರ ನಮ್ಮನ್ನು ನೋಡುವಷ್ಟು ಹೊತ್ತೂ ಆವರಿಸಿಕೊಳ್ಳುತ್ತದೆ. ಆ ತನ್ಮಯತೆಯಲ್ಲಿ ರಾಜ್ ಬಿ ಶೆಟ್ಟಿ ನವಿರು ಮತ್ತು ಮಾರ್ಮಿಕ ಶೈಲಿಯ ಕೊಡುಗೆಯೂ ಸಾಕಷ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

JC Movie Review: ಗಾಢ ಸಂದೇಶ ಕೊಟ್ಟು, ರೌಡಿಸಂ ಕತೆಯ ಕೊನೆಯಲ್ಲಿ ಸಣ್ಣ ನಿಟ್ಟುಸಿರು!
Single Salma Movie Review: ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ 'ಸಿಂಗಲ್ ಸಲ್ಮಾ'.. ಓಪನ್ ರಿಲೇಷನ್ ಶಿಪ್ ಸರಿಯೇ? ಈ ಸ್ಟೋರಿ ನೋಡಿ..