
- ರಾಜ್
ಒಬ್ಬ ಹೊಸ ನಿರ್ದೇಶಕ ಬಂದಾಗ ಆತ ಹೊಸತನವನ್ನೂ ತರುತ್ತಾನೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿ. ಇಲ್ಲಿ ಕತೆಯಲ್ಲಿ ಹೊಸತನವಿದೆ. ಹೀರೋಗಳನ್ನು ತೋರಿಸಿರುವುದರಲ್ಲಿ ಹೊಸತನವಿದೆ. ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಆ ಮಟ್ಟಿಗೆ ಇದೊಂದು ಹೊಸ ನಿರ್ದೇಶಕನೊಬ್ಬನ ವಿಭಿನ್ನ ಪ್ರಯತ್ನ. ಮೊದಲ ದೃಶ್ಯದಲ್ಲಿಯೇ ವಿನಯ್ (ರಾಜ್ ಬಿ. ಶೆಟ್ಟಿ) ಪಾತ್ರಕ್ಕೆ ಅಪಘಾತ ಆಗುತ್ತದೆ. ಅಯ್ಯೋ ಅಂದುಕೊಳ್ಳುವಷ್ಟರಲ್ಲಿ ಆ ಪಾತ್ರ ನಿದ್ದೆಯಿಂದ ಎದ್ದೇಳುತ್ತದೆ. ಅಲ್ಲಿಂದ ಕತೆ ಶುರು.
ಯಾವಾಗ ಉಪೇಂದ್ರ ಸ್ಟೈಲಿಶ್ ಆಗಿ ಎಂಟ್ರಿ ಕೊಡುತ್ತಾರೋ ಅಲ್ಲಿಂದ ಕತೆ ಟೇಕಾಫ್ ಆಗುತ್ತದೆ. ಅದ್ದೂರಿಯಾದ ಶಿವಣ್ಣನ ಪಾತ್ರ ಪ್ರವೇಶದಿಂದ ರಂಗಸ್ಥಳ ಕಳೆಗಟ್ಟುತ್ತದೆ. ಅಲ್ಲಿಂದ ಅವರು ಕತೆಯನ್ನು ಹೆಗಲ ಮೇಲಿಟ್ಟುಕೊಂಡು ಕ್ಲೈಮ್ಯಾಕ್ಸ್‌ವರೆಗೆ ಸಾಗುತ್ತಾರೆ. ಅಷ್ಟರಮಟ್ಟಿಗೆ ಅರ್ಜುನ್ ಜನ್ಯ ಶ್ರದ್ಧೆಯಿಂದ ನೀಟಾಗಿ ಬರವಣಿಗೆ ಕಲೆ ಪ್ರದರ್ಶನ ಮಾಡಿದ್ದಾರೆ. ತುಂಬಾ ಇಷ್ಟವಾಗುವುದು ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್. ಬಹಳ ಸೊಗಸಾಗಿ ಕಾಣಿಸಿಕೊಂಡಿರುವ ಅವರು ಅಭಿಮಾನಿಗಳಿಗೆ ನಿಜಕ್ಕೂ ಸಂತೋಷ ಒದಗಿಸುತ್ತಾರೆ.
ಚಿತ್ರದುದ್ದಕ್ಕೂ ತುಟಿ ಮೇಲೆ ಸಣ್ಣ ನಗು ಉಳಿಸಿಕೊಂಡ ಅವರ ಪಾತ್ರ ಪೋಷಣೆ, ರಾಜ್ ಬಿ. ಶೆಟ್ಟಿ ಮತ್ತು ಉಪೇಂದ್ರ ಪಾತ್ರದೊಂದಿಗಿನ ಮುಖಾಮುಖಿ ಎಲ್ಲವೂ ಮನಮೋಹಕ. ಅದಕ್ಕೆ ತಕ್ಕಂತೆ ಉಪೇಂದ್ರ ವಿಶಿಷ್ಟ ಗೆಟಪ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ರಾಜ್ ಜನ ಸಾಮಾನ್ಯನ ಬದುಕನ್ನು ದಾಟಿಸಿದ್ದಾರೆ. ಈ ಮೂವರಿಗೂ ಸಾಕಷ್ಟು ಜಾಗ ಮತ್ತು ಮೂವರ ಹಳೆಯ ಸಿನಿಮಾಗಳ ರೆಫರೆನ್ಸು ಒಂದೊಳ್ಳೆ ಥಿಯೇಟರ್ ಅನುಭವ ನೀಡುತ್ತದೆ. ಅರ್ಜುನ್ ಜನ್ಯ ಇಲ್ಲಿ ದೈವಿಕವನ್ನು ಐಹಿಕಕ್ಕೆ ಅಥವಾ ಕಲ್ಪನೆಯನ್ನು ವಾಸ್ತವಕ್ಕೆ ಕನೆಕ್ಟ್ ಮಾಡುವ ಬಹಳ ದೊಡ್ಡ ಧೈರ್ಯವನ್ನು ತೆಗೆದುಕೊಂಡಿದ್ದಾರೆ.
ನಿರ್ದೇಶನ: ಅರ್ಜುನ್ ಜನ್ಯ
ತಾರಾಗಣ: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಮಾನಸಿ ಸುಧೀರ್, ಕೌಸ್ತುಭಮಣಿ, ಪ್ರಮೋದ್ ಶೆಟ್ಟಿ
ರೇಟಿಂಗ್: 3
ಆ ಜಗತ್ತಿನಿಂದ ಈ ಜಗತ್ತಿಗೆ ಕತೆಯನ್ನು ಕನೆಕ್ಟ್ ಮಾಡುವುದು ಬಹಳ ಸವಾಲಿನ ಕೆಲಸ. ಆ ಸವಾಲಿಗೆ ಮುಖಾಮುಖಿಯಾಗಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಅಲ್ಲಿಂದ ಈ ಸಿನಿಮಾ ಹೊಸ ದಾರಿಗೆ ಹೊರಳುತ್ತದೆ. ಎಲ್ಲವನ್ನೂ ನಿರ್ದೇಶಕರು ಸ್ಪಷ್ಟಗೊಳಿಸುತ್ತಾರೆ. ದಾರಿ ಮುಗಿಯುತ್ತದೆ. ಕತೆ ಮುಕ್ತಾಯವಾಗುತ್ತದೆ. ಪಾಪ ಪುಣ್ಯ, ಕರ್ಮ ಧರ್ಮ, ಗರುಡ ಪುರಾಣ, ಸಾವಿನ ಬಳಿಕದ ಬದುಕು, ವಾಸ್ತವದಲ್ಲಿ ಬದುಕುವ ಕಲೆ ಎಲ್ಲದರ ಕುರಿತು ನಿರ್ದೇಶಕರು ಇಲ್ಲಿ ಚರ್ಚಿಸುತ್ತಾರೆ. ಮೂವರು ಸ್ಟಾರ್‌ಗಳು ಉತ್ತಮವಾಗಿ ಅಭಿನಯಿಸಿದ್ದಾರೆ. ಆ ಕಾರಣದಿಂದ ಈ ಚಿತ್ರ ವಿಶಿಷ್ಟವಾಗಿ ಮೂಡಿಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.