
ಗಂಡ, ಹೆಂಡತಿ ನಡುವೆ ಪ್ರೀತಿ ಮತ್ತು ಅನುಮಾನ ಎರಡೂ ಇದ್ದರೆ ಏನಾಗುತ್ತದೆ, ಪ್ರೀತಿ ಇದ್ದ ಕಡೆ ಅನುಮಾನವೂ ಇರಲು ಸಾಧ್ಯವೇ, ಹಾಗೊಂದು ವೇಳೆ ಇದ್ದರೆ ಏನಾಗುತ್ತದೆ ಎಂಬುದನ್ನು ತಿಳಿಹಾಸ್ಯ, ಒಂಚೂರು ಗಂಬೀರ, ಅಲ್ಲಲ್ಲಿ ಕುತೂಹಲಕಾರಿಯನ್ನು ಬೆರೆಸಿ ‘ಹೆಗ್ಗಣ ಮುದ್ದು’ ಚಿತ್ರವನ್ನು ರೂಪಿಸಿದ್ದಾರೆ ನಿರ್ದೇಶಕ ಅವಿನಾಶ್ ಬಲೆಕ್ಕಳ. ಸಹಜತೆಯೇ ಚಿತ್ರದ ಜೀವಾಳ ಎನ್ನುವುದಕ್ಕೆ ಚಿತ್ರದ ನಾಯಕಿ ಅದಿತಿ ಸಾಗರ್ ಅವರ ಪಾತ್ರ ಪೋಷಣೆಯೇ ಬಹು ದೊಡ್ಡ ಕಾರಣ. ಮಾತೇ ಬಂಡವಾಳ ಮಾಡಿಕೊಂಡು ನೆಟ್ವರ್ಕಿಂಗ್ ಕಂಪನಿಯಲ್ಲಿ ಕೆಲಸ ಮಾಡುವ ನಾಯಕ, ಹಳ್ಳಿಯಲ್ಲಿ ಬೆಳೆದಿರುವ ನಾಯಕಿ. ಇಬ್ಬರು ಮದುವೆ ಆಗುತ್ತಾರೆ.
ನಾಯಕನಿಗೆ ತನ್ನ ಪತ್ನಿ ಅಂದರೆ ಬಲು ಪ್ರೀತಿ. ಆ ಪ್ರೀತಿಯ ಜೊತೆಗೆ ಅನುಮಾನದ ಎರೆಹುಳವೂ ಸೇರಿಕೊಳ್ಳುತ್ತದೆ. ಇನ್ನೂ ನಾಯಕಿ ಅಂತರ್ಮುಖಿ. ಹೆಚ್ಚು ಮಾತಿಲ್ಲ. ಮಾತನಾಡಿದರೂ ನೇರಾ ಮತ್ತು ದಿಟ್ಟ. ಈಕೆಯ ಜೀವನದಲ್ಲೊಂದು ಫ್ಲ್ಯಾಷ್ ಬ್ಯಾಕ್ ಹಿಂದೆ. ಅದು ದಾಂಪತ್ಯದೊಳಗಿನ ವಿರಸಕ್ಕೆ ಕಾರಣವಾಗುತ್ತದೆ. ವಿರಸಗಳ ನಡುವೆ ಸಾಗುವ ‘ಹೆಗ್ಗಣ ಮುದ್ದು’ ಸಂಸಾರ ಕೊನೆಗೆ ತಲುಪೋದು ಎಲ್ಲಿಗೆ ಎನ್ನುವುದೇ ಚಿತ್ರದ ಕತೆ.
ಚಿತ್ರ: ಹೆಗ್ಗಣ ಮುದ್ದು
ತಾರಾಗಣ: ಪೂರ್ಣಚಂದ್ರ ಮೈಸೂರು, ಅದಿತಿ ಸಾಗರ್, ರೇಖಾ ಕೂಡ್ಲಿಗಿ, ಭರತ್ ನಾಯಕ್, ವಿಜಯ್ ಶೋಭರಾಜ್
ನಿರ್ದೇಶನ: ಅವಿನಾಶ್ ಬಲೆಕ್ಕಳ
ರೇಟಿಂಗ್: 3
ಹಳೆಯದನ್ನು ಕೆದಕಬಾರದು, ಹೊಸದನ್ನು ಸ್ವೀಕರಿಸಬೇಕು ಎನ್ನುವ ಚಿತ್ರದ ಕತೆಗೆ ವೇಗ ಪಡೆದುಕೊಳ್ಳುವುದು ನಾಯಕಿಯ ಹಳೆಯ ಪ್ರೇಮ ಕತೆಯ ಗುಟ್ಟು ರಟ್ಟಾಗುವ ಮೂಲಕ. ಪ್ರೇರಣ ಪಾತ್ರದಲ್ಲಿ ಅದಿತಿ ಸಾಗರ್ ನಟನೆಗೆ ನೂರಕ್ಕೆ ನೂರು ಅಂಕ, ಪೂರ್ಣಚಂದ್ರ ಮೈಸೂರು ಅವರು ಅಜಿತ್ ಕುಮಾರ್ ಪಾತ್ರವು ಸೈಲೆಂಟಾಗಿದ್ದುಕೊಂಡೇ ವಿರಾಮದ ನಂತರ ಮತ್ತಷ್ಟು ಆವರಿಸಿಕೊಳ್ಳುತ್ತದೆ. ಕಡಿಮೆ ಪಾತ್ರಗಳು, ಸರಳವಾದ ಕತೆಯನ್ನು ಹೇಳಿರುವ ‘ಹೆಗ್ಗಣ ಮುದ್ದು’ ಚಿತ್ರಕ್ಕೆ ಸಂಕಲನ ಕೆಲಸ ಮತ್ತಷ್ಟು ಚುರುಕಾಗಬೇಕಿತ್ತು. ಕೀ ಪ್ಯಾಡ್ ಮೊಬೈಲ್ ಕಾಲದ ಈ ಚಿತ್ರದ ನಿಧಾನಗತಿ ಚಿತ್ರಕಥೆ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.