Film Review: ಬೈಟು ಲವ್

Kannadaprabha News   | Asianet News
Published : Feb 19, 2022, 10:15 AM IST
Film Review: ಬೈಟು ಲವ್

ಸಾರಾಂಶ

ಬೈಟು ಲವ್ ಚಿತ್ರದ ಮೂಲಕ ಯಂಗ್ ಲವರ್ ಆಗಿ ಕಾಣಿಸಿಕೊಂಡಿರುವ ಧನ್ವೀರ್ ಮತ್ತು ಶ್ರೀಲೀಲಾ ಸಿನಿಮಾ ಹೇಗಿದೆ? 

ಪ್ರಿಯಾ ಕೆರ್ವಾಶೆ

‘ಗಂಡ್ಸು ದುಡ್ದು ತಂದ್ ಹಾಕ್ತಾನೆ, ಹೆಂಗ್ಸು ಅದ್ರಲ್ಲಿ ಮನೆ ನೋಡ್ಕೊಳ್ಬೇಕು’, ‘ಗಂಡ ಕುಡಿದು ಬಂದು ಹೆಂಡ್ತಿ ಕೆನ್ನೆಗೆ ಒಂದೇಟು ಹೊಡೀತಾನೆ ಅಂದ್ರೆ ಅವನಿಗೇನೋ ಟೆನ್ಶನ್ ಇರುತ್ತೆ, ಹೆಂಡ್ತಿಯಾದವಳು ಅರ್ಥ ಮಾಡ್ಕೊಳ್ಬೇಕು’, ‘ಮಗುವನ್ನು ಸಂಭಾಳಿಸಲಿಕ್ಕಾಗದವಳು ಒಬ್ಬ ಹೆಣ್ಣಾ.. ’ ಈ ಥರದ ಡೈಲಾಗ್‌ಗಳನ್ನು 80, 90ರ ದಶಕದ ಸಿನಿಮಾಗಳಲ್ಲಿ ನೋಡುತ್ತಿದ್ವಿ. ಅಂಥದ್ದೇ ಮೈ ನವಿರೇಳಿಸುವ ಡೈಲಾಗ್‌ಗಳನ್ನು ಈಗ ಮತ್ತೊಮ್ಮೆ ಕೇಳಬೇಕು ಅಂತಿದ್ರೆ ‘ಬೈಟೂ ಲವ್’ ನಿಮಗೆ ಹೇಳಿ ಮಾಡಿಸಿದ ಸಿನಿಮಾ. 

ತಾರಾಗಣ: ಧನ್ವೀರ್, ಶ್ರೀಲೀಲಾ, ಸಾಧುಕೋಕಿಲ, ಶಿವರಾಜ್ ಕೆ ಆರ್ ಪೇಟೆ, ಪವಿತ್ರಾ ಲೋಕೇಶ್, ರಂಗಾಯಣ ರಘು, ಅಚ್ಯುತ
ನಿರ್ದೇಶಕ: ಹರಿ ಸಂತೋಷ್
ರೇಟಿಂಗ್ : ***

ಹೇಳಿಕೇಳಿ ಇದು ಈ ಕಾಲದ ಹುಡುಗರ ಮೈಂಡ್ ಸೆಟ್‌ನ ಕತೆ ಹೇಳುವ ಚಿತ್ರ. ಆದ್ರೂ ಇಂಥಾ ಡೈಲಾಗ್ಯಾಕೆ, ಈ ಮೂಲಕ ಕಾಲ ಬದಲಾದರೂ ಹುಡುಗರ ಮೈಂಡ್‌ಸೆಟ್ ಬದಲಾಗಿಲ್ಲ ಅನ್ನೋದನ್ನು ಹೇಳೋಕೆ ಹೊರಟಿದ್ದಾರಾ ಅನ್ನೋ ಡೌಟ್ ಬರಬಹುದು. ಆದರೆ ಇಂಥಾ ಸಿಲ್ಲಿ ಯೋಚನೆಗಳಿಗೆಲ್ಲ ಸೊಪ್ಪು ಹಾಕೋ ಕೆಲಸವನ್ನು ನಿರ್ದೇಶಕರು ಮಾಡಿಲ್ಲ. ಅವರ ಒಲವೇನಿದ್ದರೂ ಮಾಸ್ ಕಡೆಗೆ.

ನಾಯಕ ಮೇಲಿಂದ ಮೇಲೆ ಇಂಥಾ ಡೈಲಾಗ್ ಉದುರಿಸುತ್ತಿದ್ದರೆ, ಅತ್ತ ಸಾಧುಕೋಕಿಲ ಚೀಪ್ ಜೋಕ್ ಹೊಡೆಯುತ್ತಿದ್ದರೆ ಸಿಂಗಲ್ ಸ್ಕ್ರೀನ್‌ನಲ್ಲಿ ಕೂತ ಸಾಮಾನ್ಯ ಪ್ರೇಕ್ಷಕ ಬೇರೆ ವಿಧಿಯಿಲ್ಲದೇ ಶಿಳ್ಳೆ ಹೊಡೆಯುತ್ತಾನೆ. ನಿರ್ದೇಶಕರೇ ಹೇಳಿದಂತೆ ತಮ್ಮ ಪೂರ್ವಾಗ್ರಹದಿಂದ ‘ಮದ್ವೆ ಬೇಡ’, ‘ಪ್ರೈವೆಸಿ ಬೇಕು’ ಅಂತ ಹೇಳುವ ಈ ಕಾಲದ ಹುಡುಗ ಹುಡುಗಿಯರ ಕತೆ ಚಿತ್ರದ್ದು. ಯಾವ್ದೋ ಊರಲ್ಲಿ ಹುಟ್ಟಿ ಬೆಳೆದು, ಹೆತ್ತವರ ಜೊತೆಗೆ ಕೋಪಿಸಿಕೊಂಡು ಬೆಂಗಳೂರು ಮಹಾನಗರ ಸೇರುವವರು ಬಾಲು ಮತ್ತು ಲೀಲಾ.  ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಕೆಲಸಕ್ಕೆ ಸೇರುವ ಈ ಇಬ್ಬರೂ ‘ಮದ್ವೆ ಬೇಡ’ ಅನ್ನೋ ಮೈಂಡ್‌ಸೆಟ್ ನಲ್ಲೇ ಹತ್ತಿರವಾಗುತ್ತಾರೆ. ಆ ಯೋಚನೆಯಲ್ಲೇ ಮಹತ್ವದ ನಿರ್ಧಾರವೊಂದನ್ನು ತಗೊಳ್ತಾರೆ. ಹಾಗೆ ತೆಗೆದುಕೊಂಡ ನಿರ್ಧಾರ ಅವರ ಬದುಕನ್ನೇ ಹೇಗೆ ಬದಲಾಯಿಸುತ್ತೆ ಅನ್ನೋದು ಕತೆ. ತಿನ್ನೋ ಅನ್ನಕ್ಕೂ ಗತಿಯಿಲ್ಲದ ಸ್ಥಿತಿ ಬಂದರೂ ಆ ಜೋಡಿ ಆ್ಯಪಲ್ ಲ್ಯಾಪ್‌ಟಾಪನ್ನೇ ಬಳಸ್ತಾರೆ, ಕಾಸ್ಟ್ಲೀ ಬೈಕಲ್ಲಿ ಓಡಾಡ್ತಾರೆ. ದುಬಾರಿ ಫ್ಲಾಟ್‌ನಿಂದ ಆಚೆ ಬರೋದಿಲ್ಲ. ಇಂಥ ಜಸ್ಟಿಫಿಕೇಶನ್ ಸಿಗದ ಸಂಗತಿಗಳು ಚಿತ್ರದಲ್ಲಿ ಸಿಗುತ್ತವೆ. 

Bytwo love film release; ಧನ್ವೀರ್ ಶ್ರೀಲೀಲಾ ಸ್ಟೈಲಿಶ್ ಪ್ರೇಮಕತೆ

ಶ್ರೀಲೀಲಾ ಬಾಯಲ್ಲಿ ಗುಳ್ಳೆ ಆದವರ ರೀತಿ ಮಾತಾಡಿದ್ರೂ ನಟನೆ, ಎಮೋಶನ್‌ಗಳನ್ನು ಕನ್ವೇ ಮಾಡುವಲ್ಲಿ ಗೆದ್ದಿದ್ದಾರೆ. ಧನ್ವೀರ್ ನಟನೆಯೂ ಚೆನ್ನಾಗಿದೆ. ಸಿನಿಮಾದ ಕೊನೆಯ ಭಾಗ ಭಾವನಾತ್ಮಕವಾಗಿ ಕನೆಕ್‌ಟ್ ಆಗುತ್ತೆ. ಅದಕ್ಕೂ ಮೊದಲಿನ ದೃಶ್ಯದಲ್ಲಿ ಕಾಳಿಗಿಂತ ಜಾಳು ಹೆಚ್ಚಿದ್ದಂತೆ ಕೆಲವರಿಗೆ ಕಾಣಬಹುದು. ಸಂದೇಶವನ್ನು ಹೇಳಬೇಕು ಅನ್ನೋ ಉದ್ದೇಶಕ್ಕೋಸ್ಕರವೇ ಚಿತ್ರ ಮಾಡಿದ್ರಾ ಅನ್ನೋ ಅನುಮಾನ ಬರುತ್ತೆ. ಏಕೆಂದರೆ ಬೈ ಟು ಲವ್ ಅನ್ನೋ ಚಿತ್ರದಲ್ಲಿ ಲವ್‌ಗೆ ಹೆಚ್ಚಿನ ಸ್ಪೇಸೇ ಇಲ್ಲ. ಮಗುವಿನ ಮೇಲಿನ ಪ್ರೀತಿಯನ್ನೇ ಲವ್ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳಬೇಕು.

ಇದೆಲ್ಲವನ್ನೂ ಸೈಡಿಗಿಟ್ಟು ನೋಡಿದರೆ ಒಂದು ಸ್ಟ್ರಾಂಗ್ ಮೆಸೇಜ್, ಅದಕ್ಕೆ ತಕ್ಕಂಥಾ ಕತೆ ಚಿತ್ರದಲ್ಲಿದೆ. ಹೆಚ್ಚೇನೂ ಯೋಚಿಸದೇ ಸಿನಿಮಾ ನೋಡಿ ಎನ್‌ಜಾಯ್ ಮಾಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?