
ರಾಜೇಶ್ ಶೆಟ್ಟಿ
ಈ ಕಾಲಕ್ಕೆ ತಕ್ಕಂತೆ ಈ ಸಿನಿಮಾ ಶುರುವಾಗುವುದೇ ಒಂದು ಕೊಲೆಯಿಂದ. ಆ ಕೊಲೆ ಯಾಕಾಗಿ ನಡೆಯಿತು ಎಂಬ ಅಂಶದಿಂದಲೇ ಕತೆ ಶುರುವಾಗುತ್ತದೆ. ಅಲ್ಲಿಂದ ಮುಂದೆ ರೋಚಕತೆಗೆ ರೌಡಿಸಮ್ಮು, ಖುಷಿಗೆ ಪ್ರೇಮಕತೆ, ಕಣ್ಣೀರಾಗಲು ತಾಯಿ ಸೆಂಟಿಮೆಂಟು, ರೌದ್ರತೆಗೆ ವಿಲನ್‌ಗಳು, ಖುಷಿ ಕೊಡಲು ಸ್ನೇಹ, ಕಾಲು ಕುಣಿಸಲು ಹಾಡು, ಥ್ರಿಲ್ ಕೊಡಲು ಫೈಟಿಂಗ್ ಹೀಗೆ ಎಲ್ಲಾ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅಷ್ಟರ ಮಟ್ಟಿಗೆ ಇದೊಂದು ಪಕ್ಕಾ ಮಾಸ್ ಸಿನಿಮಾ. ಮಾಸ್ ಸಿನಿಮಾದಲ್ಲಿ ಏನೇನಿರಬೇಕೋ ಅದೆಲ್ಲಾ ಇವೆ.
ಹೀರೋ ಸ್ನೇಹಿತನ ತಂಗಿಯನ್ನು ಕಾಪಾಡುವ, ಸ್ನೇಹಿತನನ್ನು ಸರಿ ದಾರಿಗೆ ತರಲು ಯತ್ನಿಸುವ ಸದ್ಗುಣ ಸಂಜಾತ. ಅದೇ ರೌಡಿಸಂಗೆ ಇಳಿದರೆ ಕತೆಯೇ ಬೇರೆ. ಯಾರಿಗಾದರೂ ಒಂದು ಕೊಟ್ಟರೆ ಅಷ್ಟೆತ್ತರ ಎಗರಬೇಕು, ಅಂಥಾ ಶಕ್ತಿಶಾಲಿ. ಕೊಂಚ ಒರಟ. ಆತ ಯಾಕೆ ಹೀಗಾದ ಎಂಬುದೇ ಒಟ್ಟಾರೆ ಕಥೆಯ ಹೂರಣ. ರೌಡಿಸಂ ಎಂದಾಗ ಹಳೆಯ ಛಾಯೆ ಕಣ್ಣೆದುರು ಮೂಡಿಬರುತ್ತದೆ. ಆದರೆ ಇಲ್ಲಿ ನಿರ್ದೇಶಕರು ಚಿತ್ರಕತೆಯನ್ನು ಸ್ವಲ್ಪ ವಿಭಿನ್ನ ಮಾಡಿದ್ದಾರೆ. ಕತೆಯನ್ನು ಇಷ್ಟಿಷ್ಟೇ ಬಿಟ್ಟು ಕೊಡುತ್ತಾ ಕೊನೆಯವರೆಗೂ ಪೂರ್ತಿ ಹೇಳದೆ ಕುತೂಹಲವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ.
ವಾಮನ
ನಿರ್ದೇಶನ: ಶಂಕರ್ ರಾಮನ್
ತಾರಾಗಣ: ಧನ್‌ವೀರ್, ರೀಷ್ಮಾ ನಾಣಯ್ಯ, ತಾರಾ, ಸಂಪತ್, ಆದಿತ್ಯ ಮೆನನ್, ಕಾಕ್ರೋಚ್ ಸುಧಿ
ರೇಟಿಂಗ್: 3
ಮೊದಲಾರ್ಧದಲ್ಲಿ ಹೀರೋ ಆಟಾಟೋಪ ಇದ್ದರೆ, ದ್ವಿತೀಯಾರ್ಧದಲ್ಲಿ ಹೀರೋನ ನಿಜವಾದ ಮನಸ್ಸು ತಿಳಿದು ಮನಸ್ಸು ಒದ್ದೆ ಒದ್ದೆಯಾಗುತ್ತದೆ. ಆರಡಿ ಕಟೌಟ್ ಧನ್‌ವೀರ್ ಫೈಟ್‌ನಲ್ಲಿ ಮಿಂಚುತ್ತಾರೆ. ನಿಲುವಿನಲ್ಲಿ ಅಚ್ಚರಿಗೊಳಿಸುತ್ತಾರೆ. ತಾರಾಗಣ ಉತ್ತಮವಾಗಿದೆ ಮತ್ತು ಆಯಾಯ ಪಾತ್ರಕ್ಕೆ ಎಲ್ಲರೂ ನ್ಯಾಯ ಸಲ್ಲಿಸಿದ್ದಾರೆ. ಇದೊಂದು ಹಾಡಿ ಕುಣಿದು ಕುಪ್ಪಳಿಸಿ ಬೊಬ್ಬೆ ಹೊಡೆದು, ಅದ್ಯಾವುದೋ ಒಂದು ಗಳಿಗೆಯಲ್ಲಿ ತಾಯಿ ಹೃದಯಕ್ಕೆ ಮಿಡಿದು ಬರಬಹುದಾದ ಸಿನಿಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.