ನೀರಜ್ ಪಾಂಡೆ ನಿರ್ದೇಶನದ 'ಔರೋಂಮೆ ಕಹಾ ದಮ್ ಥಾ' ಚಿತ್ರವು 2000 ರಿಂದ 2023 ರವರೆಗಿನ ಕಾಲಮಾನದಲ್ಲಿ ನಡೆಯುವ ಕೃಷ್ಣ ಮತ್ತು ವಸುಧಾ ಎಂಬ ಪ್ರೇಮಿಗಳ ಕಥೆ.
-ವೀಣಾ ರಾವ್, ಕನ್ನಡಪ್ರಭ
ಬೇಬಿ. ವಿಕ್ರಂ ವೇದ, ಐಯ್ಯಾರೆ, ಟಾಯ್ಲೆಟ್, ನಾಮ್ ಶಬಾನಾ, ರುಸ್ತುಂ, ಎಂ.ಎಸ್ ಧೋನಿ ಮುಂತಾದ ಹಿಟ್ ಚಿತ್ರಗಳನ್ನು ಕೊಟ್ಟ ನೀರಜ್ ಪಾಂಡೆ ನಿದೇರ್ಶನದ ಮತ್ತೊಂದು ಚಿತ್ರ ಔರೋಂಮೆ ಕಹಾ ದಮ್ ಥಾ. ಒಂದು ಪ್ರೇಮ ಕಥಾವಸ್ತುವಿನ ಭಾವನಾತ್ಮಕ ಚಿತ್ರ. ಅಜಯ್ ದೇವಗನ್, ಟಬು ಜಿಮ್ಮಿ ಶ್ರೆಗಿಲ್ ಮುಖ್ಯ ಪಾತ್ರಗಳಲ್ಲಿ ಇರುವ ಈ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಓಡುತ್ತಿದೆ.
undefined
2000 ದಿಂದ 2023 ರವರೆಗಿನ ಕಾಲ ಮಾನದ ಈ ಚಿತ್ರ ಒಂದು ಪ್ರೇಮಕಥೆಯನ್ನು ಹೇಳುತ್ತದೆ. ಕೃಷ್ಣ ಮತ್ತು ವಸುಧಾ ಎಂಬ ಈ ಪ್ರೇಮಿಗಳ ನವಿರಾದ ಪ್ರೇಮ ನಂತರ ಬರುವ ಸಂಘರ್ಷಗಳು, ಹೋರಾಟಗಳ ನಡುವೆಯೂ ಸಾಯದ ಆ ಪ್ರೇಮ ಒಂದು ದೈವಿಕ ಭಾವನೆಯನ್ನು ಮೂಡಿಸುತ್ತದೆ. ತೀವ್ರ ಭಾವನಾತ್ಮಕವಾದ ಈ ಪ್ರೇಮಕಥೆಗೆ ಅಜಯ್ ದೇವಗನ್ ಹಾಗೂ ಟಬು ತಮ್ಮ ಪ್ರೌಢ ಅಭಿನಯದಿಂದ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. ಯಾವುದೇ ಕರಾರು ನಿಬಂಧನೆಗಳಿಲ್ಲದ ಪ್ರೇಮ ಬರೀ ಪ್ರೇಮವನ್ನು ಮಾತ್ರ ಬೇಡುತ್ತದೆ, ತನ್ನ ಪ್ರೇಮ ಸುಸ್ಥಿತಿಯಲ್ಲಿ ಇರುವುದನ್ನು ಮಾತ್ರ ನೋಡಲು ಬಯಸುತ್ತದೆ. ಇದೇ ಈ ಚಿತ್ರದ ಅಂತರಾಳ. ಪ್ರೇಮಕ್ಕೆ ಅಥವಾ ತನ್ನ ಪ್ರೇಮಿಕೆಗೆ ಎಲ್ಲಿಯವರೆಗೂ ತ್ಯಾಗ ಮಾಡಬಹುದು, ತನ್ನ ಪ್ರೇಮಿಯ ಒಳಿತಿಗಾಗಿ ಯಾವ ಗಡಿ ರೇಖೆಯನ್ನೂ ದಾಟಬಹುದು ಎಂದು ಹೇಳುವ ಈ ಚಿತ್ರ ಪ್ರೇಕ್ಷಕನನ್ನು ಕೊನೆ ಕೊನೆಗೆ ಮೂಕನನ್ನಾಗಿಸುತ್ತದೆ.
ಪೈಥಾಣಿ: ಒಂದು ತಾಯಿ ಮಗಳ ಭಾವನಾತ್ಮಕ ಕಥೆ
ಕೃಷ್ಣ ಮತ್ತು ವಸುಧಾ ತಮ್ಮ ಕಾಲೇಜಿನ ದಿನಗಳಿಂದಲೂ ಪ್ರೇಮಿಗಳು. ಕೃಷ್ಣ ಒಬ್ಬ ಅನಾಥ. ವಸುಧಾಗೆ ತಂದೆ, ತಮ್ಮ, ತಂಗಿ ಇರುತ್ತಾರೆ. ಹಿರಿಯ ಮಗಳಾದ ಅವಳಿಗೆ ತಮ್ಮ ತಂಗಿಯರ ಜವಾಬ್ದಾರಿ ಇದೆ. ಅವಳು ತುಂಬಾ ಓದಬೇಕು, ಒಳ್ಳೆಯ ಕೆಲಸಕ್ಕೆ ಸೇರಿ, ತನ್ನ ಸಂಸಾರಕ್ಕೆ ನೆರವಾಗಬೇಕೆಂಬ ಬಲವಾದ ತುಡಿತ ಉಳ್ಳವಳು. ಅದನ್ನು ಕೃಷ್ಣನಿಗೆ ಹೇಳಿಯೂ ಇರುತ್ತಾಳೆ. 'ನಿನ್ನನ್ನು ಈಗಲೇ ಮದುವೆಯಾಗೆಂದು ಯಾರು ಕೇಳಿದರು' ಎನ್ನುವ ಕೃಷ್ಣ ನಕ್ಕು ಬಿಡುತ್ತಾನೆ. 'ನೀನು ನಿನ್ನ ಎಲ್ಲ ಜವಾಬ್ದಾರಿ ಮುಗಿಸು, ನಂತರ ನನ್ನವಳಾಗಿ ಬಾ ಅಥವಾ ನೀನು ನನ್ನವಳಾದರೂ ನಿನ್ನ ಜವಾಬ್ದಾರಿಗಳಿಗೆ ನಾನೂ ಹೆಗಲು ಕೊಡುತ್ತೇನೆ,' ಎಂಬುದು ಅವನ ನಿಲುವು. ಹೀಗೆಯೇ ಅವರಿಬ್ಬರ ಪ್ರೇಮಕಥೆ ಮುಂದೆ ಸಾಗುತ್ತಿರುತ್ತದೆ.
ಕೃಷ್ಣ ಶ್ರಮಜೀವಿ. ತನ್ನ ಜವಾಬ್ದಾರಿ ಅರಿತವನು. ಕಷ್ಟಪಟ್ಟು ಕೆಲಸ ಮಾಡುತ್ತಾನೆ. ದುಡಿದು ಪ್ರವರ್ಧಮಾನಕ್ಕೆ ಬರಬೇಕೆಂಬುದು ಅವನ ಹಂಬಲ. ಅದಕ್ಕೆ ತಕ್ಕಂತೆ ಒಂದು ದೊಡ್ಡ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆ ಮಾಲೀಕನಿಗೆ ಕೃಷ್ಣ ಅಚ್ಚುಮೆಚ್ಚು. ಒಮ್ಮೆ ಅಲ್ಲಿನ ಕೆಲಸ ಮುಗಿಸಿ ವಾಪಸಾಗುವಾಗ ಕನ್ನಡಕ ಮರೆತು ಬಂದೆನೆಂದು ಪುನಃ ಆ ಅಂಗಡಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಆಘಾತವಾಗುವ ದೃಶ್ಯ ಕಂಡುಬರುತ್ತದೆ. ಮೂರು ಜನ ಮುಸುಕುಧಾರಿಗಳು ಮಾಲೀಕನ ಹಿಡಿದು ಕಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ಹಣ ಕೇಳುತ್ತಿರುತ್ತಾರೆ. ಕೃಷ್ಣ ಹೋರಾಡಿ, ಅವರೆಲ್ಲರನ್ನೂ ಓಡಿಸುತ್ತಾನೆ. ಆಗ ಅವನಿಗೆ ಆ ರೌಡಿಗಳಲ್ಲಿ ಒಬ್ಬ ತನಗೆ ಗೊತ್ತಿರುವವನೇ ಎನಿಸುತ್ತದೆ. ಇದಾದ ನಂತರ ತಾನು ವಾಸಿಸುತ್ತಿರುವ ಚಾಳ್‌ಗೆ ಬಂದಾಗ ಅವನಿಗೆ ಆ ರೌಡಿಯ ಪರಿಚಯ ನೆನಪಿಗೆ ಬರುತ್ತದೆ. ಅವನು ಸಹ ಅದೇ ಚಾಳ್‌ನಲ್ಲೇ ಇರುವವನಾಗಿರುತ್ತಾನೆ. ಕೃಷ್ಣ ಆ ರೌಡಿ ಪಕ್ಯಾನಿಗೆ ಎಚ್ಚರಿಸುತ್ತಾನೆ. ಪಕ್ಯಾ ಕೃಷ್ಣನ ಮೇಲೆ ಜಿದ್ದು ಇಡುತ್ತಾನೆ. ಸೇಡು ತೀರಿಸಿಕೊಳ್ಳುವ ಸಂದರ್ಭಕ್ಕೆ ಕಾಯುತ್ತಾನೆ.
ಕೃಷ್ಣನಿಗೆ ಒಂದು ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ನೌಕರಿ ಸಿಗುತ್ತದೆ. ಹಾಗೂ ಅವನು ಕೆಲ ದಿನಗಳಲ್ಲೇ ವಿದೇಶಕ್ಕೂ ಹೋಗಬೇಕಾಗುತ್ತದೆ. ಒಳ್ಳೆಯ ಸಂಬಳ, ಹುದ್ದೆ ಕೃಷ್ಣ ಖುಷಿಯಾಗುತ್ತಾನೆ. ಇದನ್ನು ತಿಳಿಸಲು ವಸುಧಾಳನ್ನು ಕರೆಯುತ್ತಾನೆ. ವಸುಧಾ ಕೃಷ್ಣನನ್ನು ನೋಡಲು ಬರುತ್ತಾಳೆ. ಈ ಸಿಹಿ ಸುದ್ದಿ ತಿಳಿದು ಅವಳೂ ಖುಷಿಯಾಗುತ್ತಾಳೆ. ಇಬ್ಬರೂ ತಮ್ಮ ಮುಂದಿನ ಭವಿಷ್ಯದ ಬಗೆ ಕನಸು ಕಾಣುತ್ತಾರೆ. ಸುಂದರ ರೂಪುರೇಷೆಗಳನ್ನು ನೇಯುತ್ತಾರೆ. ತಮ್ಮದೇ ಲೋಕದಲ್ಲಿ ಮೈಮರೆತಿದ್ದ ಅವರಿಗೆ ಸಮಯ ಎಷ್ಟಾಗಿದೆಯೆಂದೂ ತಿಳಿಯುವುದಿಲ್ಲ. ಕೊನೆಗೆ ಎಚ್ಚೆತ್ತು ಮನೆಗೆ ಹೊರಡುತ್ತಾರೆ. ಮನೆಯ ಬಳಿ ಕೊಂಚ ದೂರದಲ್ಲಿ ಬಿಡುವ ಕೃಷ್ಣನಿಗೆ ವಸುಧಾ ಐ ಲವ್ ಯು ಹೇಳಿ ನಿನಗಾಗಿ ಕಾಯುತ್ತೇನೆ ಎನ್ನುತ್ತಾಳೆ. ಅವಳು ಮನೆಯ ತಿರುವಿನಲ್ಲಿ ಮರೆಯಾಗುವವರೆಗೂ ಕೃಷ್ಣ ಅಲ್ಲೇ ನಿಂತಿರುತ್ತಾನೆ. ಭವಿಷ್ಯದ ಕನಸುಗಳಿಂದ ಪ್ರೇರಿತಳಾಗಿ ಮುದದಿಂದ ಹಿಗ್ಗಿನಿಂದ ನವಿಲಿನ ಹೆಜ್ಜೆಯಲ್ಲಿ ನಡೆದು ಬರುವ ವಸುಧಾಳನ್ನು ಅಲ್ಲಿಯೇ ಚಿರತೆಯಂತೆ ಹೊಂಚು ಹಾಕುತ್ತಿದ್ದ ಪಕ್ಯಾ ಗಬಕ್ಕೆನೆ ಹಿಡಿದು ಅವಳ ಬಾಯಿಮುಚ್ಚಿ ಅಲ್ಲೇ ಇದ್ದ ಒಂದು ಗೋಡೌನಿನೊಳಗೆ ಎಳೆದೊಯ್ಯುತ್ತಾನೆ. ಅಲ್ಲಿ ಇನ್ನೂ ನಾಲ್ಕಾರು ಜನ ಅವನ ಸಂಗಡಿಗರು ಇರುತ್ತಾರೆ. ಅವರಿಂದ ಬಿಡಿಸಿಕೊಂಡು ಜೋರಾಗಿ ಕೃಷ್ಣಾ ಎಂದು ಕೂಗುವ ವಸುಧಾಳ ದನಿ ಕೇಳಿ ಕೃಷ್ಣ ಓಡಿ ಬರುತ್ತಾನೆ. ದನಿ ಕೇಳಿಸಿದ ಗೋಡೌನಿನೊಳಗೆ ನುಗ್ಗುತ್ತಾನೆ. ಆ ರೌಡಿಗಳು ವಸುಧಾಳ ಮೇಲೆ ರಾಕ್ಷಸರಂತೆ ದಾಳಿ ಮಾಡುತ್ತಿರುತ್ತಾರೆ. ಅಲ್ಲೇ ಸಿಕ್ಕಿದ ಒಂದು ಆಯುಧವನ್ನು ಹಿಡಿದ ಕೃಷ್ಣ ಮೈಮೇಲೆ ಖಬರಿಲ್ಲದವನಂತೆ ರೋಷಾಯುಕ್ತನಾಗಿ ಅವರೆಲ್ಲರನ್ನೂ ಕೊಚ್ಚಿ ಹಾಕುತ್ತಾನೆ. ಆದರೆ ಪಕ್ಯಾ ತಪ್ಪಿಸಿಕೊಳ್ಳುತ್ತಾನೆ.
ರೈಲಿನಲ್ಲಿ ರಕ್ತಸಿಕ್ತ ಹೋರಾಟ: 'ಕಿಲ್' ಚಿತ್ರ ವಿಮರ್ಶೆ
ಈಗ ವಸುಧಾ ಮತ್ತು ಕೃಷ್ಣನಿಗೆ ವಾಸ್ತವದ ಅರಿವಾಗುತ್ತದೆ. ನಾಳೆ ಬೆಳಗ್ಗೆ ಕಂಪೆನಿಯಿಂದ ವಿದೇಶಕ್ಕೆ ಹೋಗಬೇಕಾಗಿದ್ದ ತಾನು ಇದೇನು ಮಾಡಿಬಿಟ್ಟೆ ಎಂದು ಆಘಾತಗೊಳ್ಳುವ ಕೃಷ್ಣ, ಅವನ ಭವಿಷ್ಯ ತನ್ನಿಂದ ಹಾಳಾಯಿತೇ ಎಂದು ಅಳುವ ವಸುಧಾ ಪ್ರೇಕ್ಷಕ ಮಾತೇ ಇಲ್ಲದೆ ಮೂಕನಾಗುವಂತೆ ಮಾಡುತ್ತದೆ. ಕೃಷ್ಣ ವಸುಧಾಳನ್ನು ಸಮಾಧಾನಿಸಿ ಮನೆಗೆ ಕಳಿಸುತ್ತಾನೆ. ಅಪ್ಪಿತಪ್ಪಿಯೂ ಈ ವಿಷಯ ಯಾರಿಗೂ ಹೇಳಬಾರದೆಂದು ಆಣೆ ಪ್ರಮಾಣ ಮಾಡಿ ಕೊಳ್ಳುತ್ತಾನೆ. 'ನೀನು ಈ ಹಳವಂಡದಲ್ಲಿ ಸಿಕ್ಕಬೇಡ ನಿನಗೆ ತಮ್ಮ-ತಂಗಿಯರ ಜವಾಬ್ದಾರಿ ಇದೆ, ಅವೆಲ್ಲವನ್ನೂ ಮುಗಿಸು ನಾನು ಬರುತ್ತೇನೆ,' ಎಂದು ಹೇಳಿ ಅವಳನ್ನು ಮನೆಗೆ ಕಳಿಸಿ ತಾನು ಪೊಲೀಸರಿಗೆ ಶರಣಾಗುತ್ತಾನೆ.
ಕೃಷ್ಣನಿಗೆ 25 ವರ್ಷ ಶಿಕ್ಷೆಯಾಗುತ್ತದೆ. ಪದೇ ಪದೇ ಜೈಲಿಗೆ ನೋಡಲು ಬರುವ ವಸುಧಾಳನ್ನು ಕೃಷ್ಣ ಬರಬೇಡವೆಂದು ಹೇಳಿ ತಡೆಯುತ್ತಾನೆ. ನಿನ್ನ ಭವಿಷ್ಯ ಹಾಳಾಗದೆ ಇರಲಿ, ನೀನು ನಿನ್ನ ಜವಾಬ್ದಾರಿ ಮುಗಿಸಿ ನನ್ನನ್ನು ಮರೆತು ಬೇರೆ ಮದುವೆಯಾಗು. ನಿನ್ನ ಜೀವನ ಸೆಟಲ್ ಆಗಬೇಕು. ನನ್ನ ಜೀವನವಂತೂ ಹಾಳಾಯಿತು ಜೈಲಿನ ಕಂಬಿ ಹಿಂದೆ ನನ್ನ ಬದುಕು ಬರೆದಿದೆ. ನೀನು ಇದರಿಂದ ದೂರ ಹೋಗು, ಎಂದು ಅವಳಿಗೆ ಬುದ್ದಿ ಹೇಳಿ ಅವಳಿಂದ ಭಾಷೆ ತೆಗೆದು ಕೊಳ್ಳುತ್ತಾನೆ. ಒಂದು ಹನಿ ಕಣ್ಣೀರು ಹಾಕದೇ, ವಿಷಾದ ಮುಖ ಹೊತ್ತ ಕೃಷ್ಣ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಾನೆ. ಬಿಕ್ಕಿಬಿಕ್ಕಿ ಅಳುತ್ತಲೇ ವಸುಧಾ ಅಲ್ಲಿಂದ ಹೊರಟು ಬಿಡುತ್ತಾಳೆ. ಇಲ್ಲಿ ಯಾವ ಸ್ವಾರ್ಥವೂ ಇಲ್ಲ. ಅವಳ ಜೀವನ ಹಸನಾಗಿರಲಿ ಎಂಬ ಕಾಳಜಿ ಅವನಿಗೆ. ತನ್ನಿಂದ ಅವನ ಜೀವನ ಹಾಳಾಯಿತಲ್ಲ. ತಮ್ಮ ಭವ್ಯ ಭವಿಷ್ಯದ ಕನಸು ನುಚ್ಚು ನೂರಾಯಿತಲ್ಲ ಎಂಬ ಸಂಕಟ ವಸುಧಾಳದ್ದು. ವಿಧಿಯಾಟ ಎಂದರೆ ಇದೇ ಅಲ್ಲವೇ? ತಾನೊಂದು ಬಗೆದರೆ, ಬೇರೊಂದು ಬಗೆವುದು ದೈವ ಎಂದು ಸುಮ್ಮನೆ ಹೇಳಿದ್ದಾರೆಯೇ?
ಅವಧಿಗಿಂತ ಮೊದಲೇ ಬಿಡುಗಡೆ ಭಾಗ್ಯ:
ಕೃಷ್ಣ ಜೈಲಿನಲ್ಲಿ ನಿಧಾನವಾಗಿ ಹೊಂದಿಕೊಳ್ಳುತ್ತಾನೆ. ಸ್ವಭಾವತಃ ರೌಡಿಯಲ್ಲದ, ಕೊಲೆಗಾರನಲ್ಲದ ಕೃಷ್ಣ ಬಹು ಸಂಯಮದಿಂದ ಜೈಲಿನಲ್ಲಿ ಜೀವನ ನಡೆಸುತ್ತಾನೆ. ಜೈಲಿನಲ್ಲಿಯೂ ಅವನಿಗೆ ಬೇರೆ ಕೈದಿಗಳಿಂದ ಕಿರುಕುಳ ತಪ್ಪುವುದಿಲ್ಲ. ಆದರೆ ಕೃಷ್ಣ ಅದಕ್ಕೆಲ್ಲ ಎದೆಗುಂದುವುದಿಲ್ಲ. ಇನ್ನಷ್ಟು ಮನೋದಾರ್ಡ್ಯವನ್ನು ಬೆಳೆಸಿಕೊಳ್ಳುತ್ತಾನೆ. ಬಂಡೆಯಾಗುತ್ತಾನೆ. ವಜ್ರದಂತೆ ಕಠಿಣನಾಗುತ್ತಾನೆ. ಅವನಿಗಿರುವ ಜೀವನ ಪ್ರೀತಿ ಎಂದರೆ ವಸುಧಾಳೊಂದಿಗೆ ಕಳೆದ ಬದುಕು ಅಷ್ಟೇ. ತನ್ನ ಸನ್ನಡತೆಯಿಂದ ಅಲ್ಲಿನ ಅಧಿಕಾರಿಗಳ ಮನಗೆಲ್ಲುವ ಕೃಷ್ಣ ಅವಧಿಗಿಂತ ಮೊದಲೇ ಬಿಡುಗಡೆಯಾಗುತ್ತಾನೆ.
ಉಲಝ್: ರಾಜತಾಂತ್ರಿಕ ಜಾಲದಲ್ಲಿ ಭಾರತೀಯ ರಾಯಭಾರಿ
ಕೃಷ್ಣ ಜೈಲಿನಲ್ಲಿದ್ದಾಗ ಒಬ್ಬ ಗ್ಯಾಗ್‌ಸ್ಟರ್ ಜೈಲಿಗೆ ಬಂದಿರುತ್ತಾನೆ. ಅವನನ್ನು ಸಾಯಿಸಲು ಅವನ ಶತ್ರುಗಳು ಕೆಲವರು ಪೆಟ್ಟಿ ಕೇಸಿನಲ್ಲಿ ಸಿಕ್ಕಿಕೊಂಡು ಜೈಲಿಗೆ ಬಂದಿರುತ್ತಾರೆ. ಅವರಲ್ಲಿ ಆ ದಿನ ತಪ್ಪಿಸಿಕೊಂಡಿದ್ದ ಪಕ್ಯಾ ಕೂಡ ಇರುತ್ತಾನೆ. ಈ ಪಕ್ಯಾ ಇದ್ದಷ್ಟು ದಿನವೂ ವಸುಧಾಳಿಗೆ ಅಪಾಯ ತಪ್ಪಿದ್ದಲ್ಲ ಎಂದು ಕೃಷ್ಣ ಪಕ್ಯಾನನ್ನು ರಹಸ್ಯವಾಗಿ ಕೊಂದು ಹಾಕುತ್ತಾನೆ. ಆ ಕೊಲೆ ನಿಗೂಢವಾಗಿಯೇ ಉಳಿದು ಬಿಡುತ್ತದೆ. ತನ್ನ ಶತ್ರುವನ್ನು ಕೊಂದದ್ದಕ್ಕಾಗಿ ಆ ಗ್ಯಾಂಗ್ ಸ್ಟರ್ ಕೃಷ್ಣನಿಗೆ ಯಾವ ಸಹಾಯ ಬೇಕಾದರೂ ಕೇಳು ಎಂದು ಹೇಳಿ ಜೈಲಿನಿಂದ ಪರಾರಿಯಾಗಿ ದುಬೈಗೆ ಹೋಗಿ ಬಿಡುತ್ತಾನೆ.
ಈಗ ಅವಧಿಗಿಂತ ಮೊದಲೇ ಬಿಡುಗಡೆಯಾಗುವ ಕೃಷ್ಣನಿಗೆ ಅದೇ ಊರಿನಲ್ಲಿರಲು ಇಷ್ಟವಿಲ್ಲ. ಅವನು ಆ ಗ್ಯಾಗ್‌ಸ್ಟರ್‌ನನ್ನು ದೂರವಾಣಿಯಲ್ಲಿ ಸಂಪರ್ಕಿಸಿ ತಾನೂ ದುಬೈಯಲ್ಲಿ ಸೆಟಲ್ ಆಗುತ್ತೇನೆ, ತನಗೆ ಸಹಾಯ ಮಾಡಬೇಕೆಂದು ಕೇಳುತ್ತಾರೆ. ಇದಕ್ಕೆ ಒಪ್ಪುವ ಆ ಗ್ಯಾಗ್‌ಸ್ಟರ್ ಕೃಷ್ಣನಿಗೆ ದುಬೈಗೆ ಬರಲು ಎಲ್ಲ ವ್ಯವಸ್ಥೆ ಮಾಡಿ ಟಿಕೆಟ್ ತೆಗೆದಿರಿಸುತ್ತಾನೆ. ಕೃಷ್ಣನನ್ನು ಜೈಲಿನಿಂದ ಕರೆ ತರಲು ತನ್ನ ಕಡೆಯವನೊಬ್ಬನನ್ನು ಕಳಿಸಿರುತ್ತಾನೆ.
23 ವರ್ಷ ಜೈಲಿನಲ್ಲಿ ಕಳೆದು ಜೈಲಿನ ಜೀವನಕ್ಕೇ ಹೊಂದಿಕೊಂಡು ಬಿಟ್ಟಿರುವ, ತನ್ನವರು ಎಂಬುವರು ಯಾರೂ ಇಲ್ಲದ ಹೊರಜಗತ್ತಿಗೆ ಬರಲು ಕೃಷ್ಣನಿಗೆ ಇಷ್ಟವೇ ಇರುವುದಿಲ್ಲ. ಆದರೆ ಸನ್ನಢತೆ ಆಧಾರದ ಮೇಲೆ ನಿನ್ನನ್ನು ಬಿಡುಗಡೆ ಮಾಡುತ್ತಿದ್ದೇವೆ. ಇಂಥ ಅವಕಾಶ ಕಳೆದುಕೊಳ್ಳಬೇಡ ಎಂದು ಹೇಳಿದ ಜೈಲಿನ ಅಧಿಕಾರಿಗಳ ಮಾತಿಗೆ ಮನ್ನಣೆ ಕೊಟ್ಟು ಒಪ್ಪಿಕೊಳ್ಳುತ್ತಾನೆ. ಕೃಷ್ಣ ಈಗ ಸ್ಥಿತಪ್ರಜ್ಞ. ಯಾವುದಕ್ಕೂ ಏರಿಳಿಯದ ಸ್ವಭಾವ, ಜೈಲಿನಲ್ಲಿ 23 ವರ್ಷ ಕಳೆದ ಅವನಿಗೆ ಅಲ್ಲಿನ ಕರ್ಮಕಾಂಡಗಳ ಪರಿಚಯ ಆಗಿರುತ್ತದೆ. ಕೃಷ್ಣನ ಎದೆಯಲ್ಲಿ ದಾವಾಗ್ನಿಯೇ ಇದ್ದರೂ ಹೊರಗೆ ಶಾಂತ ಮುಖಭಾವ. ಕಣ್ಣುಗಳಲ್ಲಿ ಮಡುಗಟ್ಟಿದ ನೋವು ಕಳೆದು ಕೊಂಡು ಬಂಗಾರದ ಬದುಕನ್ನು ನೆನಪು ಮಾಡುತ್ತದೆ. ಧೀರ ಗಂಭೀರ ನಡೆನುಡಿ ಮುಖಭಾದ ಧ್ವನಿಯ ಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದ ಅಜಯ್ ದೇವಗನ್ ತಮಗೆ ಸರಿಸಾಟಿಯಿಲ್ಲದಂತೆ ನಟಿಸಿದ್ದಾರೆ. ಎಷ್ಟೋ ಬಾರಿ ದೀವಾರ್ ಚಿತ್ರದ ಅಮಿತಾಬ್ ಹಾಗೂ ಮೌಸಮ್ ಚಿತ್ರದ ಸಂಜೀವ್ ಕುಮಾರ್ ನೆನಪಾಗುತ್ತಾರೆ.
ವಯಸ್ಸಾದ ಜೀವಕ್ಕೆ ಬೆಲೆ ಇಲ್ಲವೇ?: ಸಿಗ್ನೇಚರ್ ಹೇಳೋ ಕಥೆ ಇದು!
ಕೃಷ್ಣ ಹೊರಗೆ ಬರುತ್ತಾನೆ. ಗ್ಯಾಗ್‌ಸ್ಟರ್‌ನ ಆಪ್ತ ಜಿಗ್ನೇಶ್ ಎಂಬ ಕೃಷ್ಣನ ದೋಸ್ತ ಅವನಿಗಾಗಿ ಹೊರಗೆ ಕಾದಿರುತ್ತಾನೆ. ದುಬೈಗೆ ಒಂದೇ ದಿನದ ಸಮಯ ಇರುವ ಕೃಷ್ಣನಿಗೆ ತನ್ನ ಛಾಳ್‌ಗೆ ಹೋಗುವ ಮನಸ್ಸಾಗುತ್ತದೆ. ವಸುಧಾ ಜಿಗ್ನೇಶನನ್ನು ಸಂಪರ್ಕಿಸಿ ಕೃಷ್ಣನ ಬಗ್ಗೆ ತಿಳಿದು ಕೊಳ್ಳುತ್ತಾಳೆ. ಅವಳೀಗ ಮದುವೆಯಾದ ಹೆಣ್ಣು. ಮಾಗಿದ ಮನೋಭಾವ ಪ್ರೌಢ ವಯಸ್ಸಿನ ವನಿತೆ. ಕೃಷ್ಣನನ್ನು ಕಳೆದುಕೊಂಡ ನೋವು ಹತಾಶೆ ಅವಳನ್ನು ಹಣ್ಣು ಮಾಡಿರುತ್ತದೆ. ತನ್ನ ಗಂಡನಿಗೆ ಎಲ್ಲವನ್ನೂ ಹೇಳಿರುತ್ತಾಳೆ ಕೂಡ. ಅವಳೂ ಕೃಷ್ಣನನ್ನು ನೋಡಲು ಕಾತುರಳಾಗಿರುತ್ತಾಳೆ. ಅವನು ಛಾಳ್‌ಗೆ ಬರುವುದನ್ನು ತಿಳಿದುಕೊಂಡು ಅಲ್ಲಿಗೆ ಅವನನ್ನು ಭೇಟಿಯಾಗಲು ಬರುತ್ತಾಳೆ. ವಸುಧಾಳ ಗಂಡ (ಜಿಮ್ಮಿ ಶ್ರೆಗಿಲ್) ತನ್ನ ಹೆಂಡತಿಗೆ ಕೃಷ್ಣನನ್ನು ಮನೆಗೆ ಕರೆ ತರಲು ಹೇಳಿರುತ್ತಾನೆ. ಕೃಷ್ಣ ಛಾಳ್‌ನಲ್ಲಿ 23 ವರ್ಷಗಳ ನಂತರ ವಸುಧಾಳನ್ನು ನೋಡುವಾಗಿನ ದೃಶ್ಯ ಅಬ್ಬ! ವಿವರಿಸಲು ಸಾಧ್ಯವಿಲ್ಲ. ಅದು ಅನುಭವಿಸಬೇಕು ಅಷ್ಟೆ. ಅವರಿಬ್ಬರಲ್ಲಿ ಅಂದಿನ ಪ್ರೀತಿ ಇನ್ನು ಹಸಿರಾಗಿಯೇ ಇರುತ್ತದೆ. ಆದರೆ ಅಂದಿನ ಜಲಪಾತದಂಥ ಭೊರ್ಗರೆಯುವ ಪ್ರೀತಿಯಲ್ಲ, ಇದು ಮಾಗಿದ ಪ್ರೀತಿ. ಅಂತರ್ಗಾಮಿನಿಯಾಗಿ ಪರಸ್ಪರ ಕಾಳಜಿಯಿಂದ ಶಾಂತವಾಗಿ ಹರಿಯುವ ನೀರಿನಂತೆ ಶುಭ್ರವಾಗಿರುತ್ತದೆ.
ವಸುಧಾ ಈಗ ದೊಡ್ಡ ಫ್ಯಾಷನ್ ಡಿಸೈನ್ ಉದ್ಯಮಿಯಾಗಿರುತ್ತಾಳೆ. ಬಹುದೊಡ್ಡ ಸಂಸ್ಥೆಯ ಮಾಲಕಿಯಾಗಿರುತ್ತಾಳೆ. ಕೃಷ್ಣ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಬೆಳೆದಿರುತ್ತಾಳೆ. ತಮ್ಮ ತಂಗಿಯರನ್ನು ದಡ ಮುಟ್ಟಿಸಿರುತ್ತಾಳೆ. ಗಂಡ ಸಹ ಉದ್ಯಮಿ. ಅವರ ಮನೆ ಅರಮನೆ. ವಸುಧಾ ಕೃಷ್ಣನನ್ನು ಮನೆಗೆ ಕರೆತಂದು ಗಂಡನಿಗೆ ಪರಿಚಯ ಮಾಡಿಸುತ್ತಾಳೆ. ತನಗೆ ಎಮರ್ಜೆನ್ಸಿ ಇದೆಯೆಂದು ತನ್ನ ಕಂಪೆನಿಗೆ ಹೋಗುತ್ತಾಳೆ. 'ಅರ್ಧಗಂಟೆಯಲ್ಲಿ ಇರ್ತೀನಿ. ನಾನೂ ಸ್ವಲ್ಪ ಕೃಷ್ಣನನ್ನು ಮಾತಾನಾಡಿಸಬೇಕು,' ಎಂದು ಗಂಡನಿಗೆ ಹೇಳುತ್ತಾಳೆ. ಇಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ ನೀವೇ ನೋಡಿ.
ಕೃಷ್ಣನ ಜೊತೆ ವಸುಧಾಳ ಗಂಡ ಮಾತನಾಡುತ್ತಾನೆ, ಆ ದಿನ ಏನು ನಡೆಯಿತು ಎಂದು ಕೇಳುತ್ತಾನೆ. ಕೃಷ್ಣ ನಡೆದು ಹೋದ ಘಟನೆಯನ್ನು ವಿವರಿಸುತ್ತಾನೆ. 'ವಸುಧಾ ಹೇಳಿದ್ದೇ ನೀವೂ ಹೇಳಿದಿರಿ. ಅಷ್ಟೇಯೇ? ಬೇರೇನೂ ಇಲ್ಲವೇ?' ಎಂದು ಕೇಳುತ್ತಾನೆ. 'ನಡೆದದ್ದು ಅಷ್ಟು ಅದೇ ಹೇಳಿದ್ದೇನೆ' ಎನ್ನುತ್ತಾನೆ ಕೃಷ್ಣ. ವಸುಧಾ ಬರುತ್ತಾಳೆ. ಜಿಗ್ನೇಶ್ 'ಕಾರು ತಂದು ಕಾಯುತ್ತಿದ್ದೇನೆ ಬೇಗ ಇಳಿದು ಬಾ ಫ್ಲೈಟ್ ಗೆ ಸಮಯವಾಯ್ತು' ಎಂದು ಕೃಷ್ಣನಿಗೆ ಹೇಳುತ್ತಾನೆ.
ವಸುಧಾ ಕೃಷ್ಣನೊಂದಿಗೆ ಹೊರಗೆ ಬರುತ್ತಾಳೆ. ಗಂಡ ಕೃಷ್ಣನಿಗೆ ಒಂದು ಆತ್ಮೀಯ ಅಪ್ಪುಗೆ ಕೊಟ್ಟು, ಏನೇ ಸಹಾಯ ಬೇಕಾದರೂ ಕೇಳು ಯಾವುದೇ ಸಂಕೋಚ ಬೇಡ. ನಾವೆಲ್ಲ ನಿನ್ನವರೇ ಎಂದು ಹೇಳುತ್ತಾನೆ. ತಿಳಿಯಾಗಿ ನಗುವ ಕೃಷ್ಣ ತಲೆಯಾಡಿಸುತ್ತಾನೆ. ಯಾವುದೇ ಆಸೆ ನಿರೀಕ್ಷೆ ಸ್ವಾರ್ಥ ಇಲ್ಲದ ಕೃಷ್ಣ ನಮ್ಮ ಕಣ್ಣಿಗೆ ಮಹಾನ್ ಆಗಿ ಕಾಣುತ್ತಾನೆ.
ಕಣ್ಣೀರಾಗಿಸುವ ‘ಮೇಯಗಳನ್’ ನೋಡಿದ್ರೆ ಊರಿಗೆ ಮರಳುವಂತಾಗುತ್ತೆ!
ಕೃಷ್ಣನೊಂದಿಗೆ ಹೊರ ಬರುವ ವಸುಧಾ ಅವನೊಂದಿಗೆ ಕಾರಿನವರೆಗೂ ಬರುತ್ತಾಳೆ. ಅವನ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲು ಹೇಳುತ್ತಾಳೆ. 'ಬೇರೆಯವರ ಬಗ್ಗೆಯೇ ಯೋಚಿಸುವ ನೀನು, ನಿನ್ನ ಬಗ್ಗೆ ಯೋಚಿಸುವುದೇ ಇಲ್ಲವೇ ಕೃಷ್ಣಾ' ಎನ್ನುತ್ತಾಳೆ. 'ನೀನಿದ್ದೀಯಲ್ಲ' ಎನ್ನುತ್ತಾನೆ. ಚಿತ್ರದ ಕಡೆಗಳಿಗೆಯ ಇವರಿಬ್ಬರ ಸಂಭಾಷಣೆ ನಮಗರಿವಿಲ್ಲದೆ ಕಣ್ಣಲ್ಲಿ ನೀರಿಳಿಸುತ್ತದೆ. ಇಬ್ಬರದೂ ಪರಸ್ಪರ ಅನುಪಮವಾದ ಒಲವು, ಪ್ರೀತಿ. ಗಂಡ-ಹೆಂಡಿರಾಗಲು ವಿಧಿ ಹಣೆಯಲ್ಲಿ ಬರೆದಿಲ್ಲ. ಅದು ಕೊನೆಯ ವಿದಾಯ. ಕೃಷ್ಣನನ್ನು ಇನ್ನೆಂದೂ ನೋಡುವುದಿಲ್ಲ ಎಂಬ ಕಹಿ ಸತ್ಯ ವಸುಧಾಳನ್ನು ಹಿಂಡಿಹಿಪ್ಪೆ ಮಾಡುತ್ತದೆ. ಕೃಷ್ಣ ನಿನ್ನಿಂದ ನನ್ನ ಜೀವನ ವ್ಯರ್ಥವಾಯಿತು. ನನಗಾಗಿ ಎಷ್ಟು ದೊಡ್ಡ ತ್ಯಾಗ ಮಾಡಿದ್ದೀಯ ಎನ್ನುತ್ತಾಳೆ. ಅವಳ ಕಣ್ಣಲ್ಲಿ ನೀರ ಧಾರೆ ಅದು ಹರಿಯಲು ಬಿಡದಂತೆ ಅಲ್ಲಲ್ಲೆ ಒರೆಸಿಕೊಳ್ಳುತಾಳೆ. ಕೊನೆಯದಾಗಿ ಕೃಷ್ಣನನ್ನು ಅಪ್ಪಿಕೊಳ್ಳುತ್ತಾಳೆ. ಅಲ್ಲಿ ಒಂದು ಮಮತೆಯ ಅಂತಃಕರಣದ ಸ್ಪರ್ಶ ಇರುತ್ತದೆಯೇ ವಿನಾ ಮತ್ತೇನೂ ಇಲ್ಲ. ಅವಳ ತಲೆ ಸವರುವ ಕೃಷ್ಣ ಅಪ್ನ ಖಯಾಲ್ ರಖನಾ ಎನ್ನುತ್ತ ಕಾರು ಹತ್ತುತ್ತಾನೆ. ಇವೆಲ್ಲವನ್ನೂ ಬಾಲ್ಕನಿಯಲ್ಲಿ ನಿಂತು ವಸುಧಾಳ ಗಂಡ ನೋಡುತ್ತಿರುತ್ತಾನೆ.
ಕೃಷ್ಣನನ್ನು ಕಳಿಸಿ ಬರುವ ವಸುಧಾ ಗಂಡನೊಂದಿಗೆ ಬಾಲ್ಕನಿಯಲ್ಲಿ ಕೂರುತ್ತಾಳೆ. ಒಂದೆರಡು ಕ್ಷಣಗಳ ನಂತರ ಗಂಡ 'ಕೃಷ್ಣ ನೀನು ಹೇಳಿದ್ದನ್ನೇ ಹೇಳಿದ, ಆದರೆ ನನಗೆ ಏನೋ ಮಿಸ್ಸಿಂಗ್ ಎನಿಸುತ್ತಿದೆ, ನೀನಾದರೂ ಸರಿಯಾದ ವಿಷಯ ಹೇಳು' ಎನ್ನುತ್ತಾನೆ. ವಸುಧಾ ಆ ದಿನ ನಡೆದದ್ದು ಏನು ಎಂಬುದನ್ನು ಹೇಳ ತೊಡಗುತ್ತಾಳೆ.
ನಿಜವಾಗಿ ಆ ದಿನ ನಡೆದದ್ದು ಏನು? ಕೊಲೆ ಯಾರು ಮಾಡಿದ್ದು ಏನು ನಡೆಯಿತು? ನೀವೇ ಚಿತ್ರ ನೋಡಿ. ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಸ್ಕ್ರೀಂ ಆಗುತ್ತಿದೆ. ಒಂದು ಮಾಗಿದ ಅಕಳಂಕ ಪ್ರೇಮ ಕಥೆ. ಒಬ್ಬ ಪ್ರೇಮಿ ತನ್ನ ಪ್ರೇಮಿಕೆಗಾಗಿ ತ್ಯಾಗ ಎಷ್ಟು ಮಾಡಬಹುದು? ತ್ಯಾಗದ ಎತ್ತರವನ್ನು ಈ ಚಿತ್ರ ನೋಡಿಯೇ ತಿಳಿಯಬೇಕು.