ಹೃದಯ, ಜೀವಂತಿಕೆಯ ಕೇಂದ್ರಬಿಂದು. ಅದರ ಮಿಡಿತದಲ್ಲಿ ಕೊಂಚ ಏರುಪೇರಾದರೂ ತಕ್ಷಣವೇ ಇಹಲೋಕ ತ್ಯಜಿಸುವ ದೌರ್ಭಾಗ್ಯ ಎದುರಾಗುತ್ತದೆ. ಅಂಥ ಪರಿಸ್ಥಿತಿ ತಲೆದೋರಬಾರದೆಂದರೆ ನಿಮ್ಮ ಹೃದಯದ ಆರೈಕೆಯನ್ನು ಸಮರ್ಪಕವಾಗಿ ಮಾಡಲೇಬೇಕು. ನಿಮ್ಮ ಆರೋಗ್ಯಯುತ ಬದುಕು ನಿಮ್ಮ ಕೈಯಲ್ಲೇ ಇದೆ. ಯೋಚಿಸಿ...
ವಿಶ್ವ ಹೃದಯ ದಿನದ ತಿಳಿಸಾರ
ವಿಶ್ವ ಹೃದಯ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುತ್ತದೆ.
ಹೃದಯ ಕಾಯಿಲೆಗಳನ್ನು ತಡೆಯಲು ಮೀಸಲಿರುವ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಮೂಲದ ಸರಕಾರೇತರ ಸಂಘಟನೆಯಾದ ವಿಶ್ವ ಹೃದಯ ಸಂಸ್ಥೆ ( ವರ್ಲ್ಡ್ ಹಾರ್ಟ್ ಫೆಡರೇಷನ್) 1999ರಿಂದ ಸೆಪ್ಟೆಂಬರ್ ಕೊನೆಯ
ಭಾನುವಾರ ವಿಶ್ವ ಹೃದಯ ದಿನವನ್ನು ವಿಶ್ವ ಹೃದಯ ಸಂಸ್ಥೆ ಆಚರಿಸುತ್ತಿತ್ತು. ಬಳಿಕ 2011ರಿಂದ ವಿಶ್ವ ಹೃದಯ ದಿನವನ್ನು ಸೆ.29 ರಂದು ಆಚರಿಸಲಾಗುತ್ತಿದೆ.
2025ರ ವೇಳೆಗೆ ಹೃದಯ ಸಂಬಂಧಿ ರೋಗಗಳಿಂದ ಸಂಭವಿಸುವ ಮರಣದ ದರವನ್ನು ಶೇ.25 ರಷ್ಟು ಕಡಿಮೆಗೊಳಿಸಬೇಕೆಂದು ನಿರ್ಧರಿಸಿದ ವರ್ಲ್ಡ್ ಹಾರ್ಟ್ ಫೆಡರೇಶನ್ ಕಾರ್ಯೋನ್ಮುಖಗೊಂಡಿತು.
ಪ್ರತಿ ವರ್ಷ ಹೃದ್ರೋಗ ಸಮಸ್ಯೆಗಳಿಂದ 17.5 ಮಿಲಿಯನ್ ಮಂದಿ ಸಾವಿಗೀಡಾಗುತ್ತಿದ್ದರು. ಇದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ಮುಂದಾದಾಗ ತಂಬಾಕು, ಮದ್ಯಪಾನ, ಧೂಮಪಾನ ಸೇವನೆ, ಅನಾರೋಗ್ಯಕರ ಜೀವನಶೈಲಿ, ಅಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ ರಹಿತ ದಿನಚರಿ ಸೇರಿದಂತೆ ಅನೇಕ ಕಾರಣಗಳು ಗೋಚರಿಸಿದವು. ಇದರಿಂದ ರಕ್ತದ ಒತ್ತಡ ಹೆಚ್ಚಾಗಿ, ಹೃದಯಾಘಾತಕ್ಕೊಳಗಾಗಿ ಮೃತಪಡುತ್ತಾರೆ. ಈ ಸಮಸ್ಯೆಯ ನಿವಾರಣೆಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಸರಿಯಾದ ಕ್ರಮ ಎಂದೆನಿಸಿ ವಿಶ್ವ ಹೃದಯ ದಿನಕ್ಕೆ ಚಾಲನೆ ನೀಡಲಾಯಿತು.
ಈ ದಿನದಂದು ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಸಾಲಿನಲ್ಲಿ ನಮ್ಮ ಹೃದಯ ಹಾಗೂ ನಮ್ಮ ಪ್ರೀತಿಪಾತ್ರರ ಹೃದಯವನ್ನು
ಆರೋಗ್ಯಕರವಾಗಿ ಕಾಪಿಟ್ಟುಕೊಳ್ಳಲು ‘ಮೈ ಹಾರ್ಟ್ ಯುವರ್ ಹಾರ್ಟ್’ ಎಂಬ ಘೋಷವಾಕ್ಯದೊಂದಿಗೆ ಜಾಗತಿಕ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ಅನೇಕ ಸಂಘ ಸಂಸ್ಥೆಗಳು ಕೂಡಾ ಈ ದಿನದಂದು ಹೃದಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ, ಯೋಗಾಸನ, ವ್ಯಾಯಾಮದ ಬಗ್ಗೆ ಅರಿವು ಮೂಡಿಸಲು. ಜಾಗೃತಿ ಅಭಿಯಾನಗಳನ್ನು ಕೈಗೊಂಡಿವೆ.
ನಿಮ್ಮ ಹೃದಯದ ಆರೈಕೆಗೆ ಸಲಹೆಗಳು
ಮಧ್ಯ ವಯಸ್ಕರು ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಸೇವಿಸಿ ಸುಮ್ಮನಾಗುತ್ತಾರೆ. ಆದರೆ, ಹಾಗೇ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದ ಉಪಾಹಾರ ಸೇವಿಸದಿದ್ದರೆ ಹೃದಯ ಸಂಬಂಧಿ ರೋಗಗಳು ಬರುತ್ತವೆ. ಇದರ ನಿವಾರಣೆಗೆ ಸಮತೋಲನ ಆಹಾರ ಸೇವನೆ, ತೂಕದಲ್ಲಿ ಇಳಿಕೆ, ವ್ಯಾಯಾಮ, ಕಡಿಮೆ ಉಪ್ಪು, ಸಕ್ಕರೆ ಮತ್ತು ಕೊಬ್ಬಿನಾಂಶವಿರುವ ಆಹಾರ ಪದಾರ್ಥಗಳ ಮಿತಬಳಕೆ ಮಾಡಬೇಕು.
ಧ್ಯಾನ ಮಾಡುವುದರಿಂದ ದೇಹದ ಆಯಾಸ,ಕೋಪ, ಹತಾಶೆಯನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ವೃದ್ಧಿಸುತ್ತಿರುತ್ತದೆ. ಜತೆಗೆ ಕಡಿಮೆ ನಿದ್ದೆ ಮಾಡುವುದು ಕೂಡಾ ಹೃದಯಕ್ಕೆ ಹಾನಿಕಾರಕ. ಜೊತೆಗೆ ನಿತ್ಯ 30 ನಿಮಿಷಗಳ ವ್ಯಾಯಾಮ ಮಾಡಬೇಕು.
ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯಿಂದ ದೂರವಿರುವುದು ಕೂಡಾ ಹೃದಯ ಆರೈಕೆಗೆ ಒಳ್ಳೆಯ ಮಾರ್ಗ.
ಸದಾ ಚಟುವಟಿಕೆಯಿಂದ ಇರಿ, ಸಣ್ಣಪುಟ್ಟ ವಿಷಯಗಳನ್ನು ಗಂಭೀರವಾಗಿ ಪರಿಗಣಿಸದಿರಿ, ಆಗಾಗ್ಗೆ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.