ಎಲ್ಲಿ ಬೇಕಾದರೂ ಕುಳಿತು ಉದ್ಯೋಗ ನಿರ್ವಹಿಸಬಹುದು ಎಂದಾದ ಮೇಲೆ ಮನೆಯಲ್ಲೇ ಬೋರ್ ಹೊಡೆಸಿಕೊಂಡು ಕೂರುವುದೇಕೆ? ಯಾವುದಾದರೂ ಹಿಲ್ ಸ್ಟೇಶನ್‌ನ ಸೌಂದರ್ಯ ಸವಿಯುತ್ತಲೇ ಕೆಲಸ ಮಾಡಬಹುದಲ್ಲವೇ?
ಕೊರೋನಾ ಹಲವರ ಬದುಕಲ್ಲಿ ಹಲವಷ್ಟು ಬದಲಾವಣೆಗಳನ್ನು ತಂದಿದೆ. ದಿನಾ ಕಚೇರಿಗೆ ಹೋಗಿ ಬರುತ್ತಿದ್ದಾಗ ವಾರದಲ್ಲೊಂದು ದಿನವಾದರೂ ವರ್ಕ್ ಫ್ರಂ ಹೋಂ ಮಾಡಲು ಮನ ಹಾತೊರೆಯುತ್ತಿತ್ತು. ಈಗ ತಿಂಗಳು ಪೂರ್ತಿ ವರ್ಕ್ ಫ್ರಂ ಹೋಂ ಆಗಿರುವಾಗ ಮನೆಯಿಂದಲೂ ಎಲ್ಲಾದರೂ ದೂರ ಹೋಗಿ ಶಾಂತ ಪರಿಸರದಲ್ಲಿ ಕೆಲಸ ಮಾಡೋಣ ಎಂಬ ಕನಸು ಕಾಣುತ್ತಿದ್ದಾರೆ ಉದ್ಯೋಗಿಗಳು. ಅದರ ಫಲವಾಗಿಯೇ ಹುಟ್ಟಿಕೊಂಡ ಟ್ರೆಂಡ್ ವರ್ಕಿಂಗ್ ಹಾಲಿಡೇಸ್.
ಹೌದು, ಮನೆಯಲ್ಲಿ ಒಬ್ಬರಿಗೋ ಇಬ್ಬರಿಗೋ ಉದ್ಯೋಗ ಮಾಡಬೇಕಾಗಿದ್ದರೂ ಮಕ್ಕಳಿಗಂತೂ ರಜೆಯೇ. ಮನೆಯಲ್ಲೇ ಕುಳಿತೂ ಕುಳಿತು ಬೋರ್ ಆಗಿ ಮಕ್ಕಳು ತಂದೆತಾಯಿಯನ್ನು ಗೋಳಾಡಿಸುತ್ತಿದ್ದಾರೆ. ಹಾಗಾಗಿ, ಅವರಿಗೆ ರಜೆಮಜೆಯನ್ನಾದರೂ ಉಣಿಸೋಣ ಎಂದು ಅವರನ್ನು ಕರೆದುಕೊಂಡು ಊರಿನಲ್ಲಿನ ಅಜ್ಜಅಜ್ಜಿಯ ಮನೆಗೋ, ಇಲ್ಲವೇ ದೂರದ ಕನಸಿನ ತಾಣದಂತೆ ಕಾಣುವ ಹಿಲ್‌ಸ್ಟೇಶನ್‌ಗೋ ತೆರಳಿ ಅಲ್ಲಿಂದಲೇ ಕೆಲಸ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಇದೇ ವರ್ಕ್ ಫ್ರಂ ಹಿಲ್ಸ್.
undefined
ನೆಟ್ವರ್ಕ್ ಸಮಸ್ಯೆ ಇಲ್ಲ
ನಗರಗಳಲ್ಲಿರುವವರ ಬಹುತೇಕರ ತವರು ಹಳ್ಳಿಗಳಲ್ಲಿಯೇ ಇದೆ. ಈಗ ಕಚೇರಿಗೆ ಹೋಗಬೇಕಾಗಿಯೂ ಇಲ್ಲ, ಜೊತೆಗೆ ಹಳ್ಳಿಗಳಲ್ಲಿಯೂ ಮುಂಚೆಯಂತೆ ನೆಟ್ವರ್ಕ್ ಸಮಸ್ಯೆ ಇಲ್ಲ. ಎಲ್ಲ ಕಡೆ 4ಜಿ ನೆಟ್ವರ್ಕ್ ಚೆನ್ನಾಗಿ ಸಿಗುತ್ತದೆ. ಹಾಗಾಗಿ, ಕಚೇರಿ ಕೆಲಸ ಮಾಡಲು ನಗರಗಳಲ್ಲೇ ಉಳಿಯಬೇಕಾದ ಅನಿವಾರ್ಯತೆ ಇಲ್ಲ. ಇದರಿಂದ ಬಹುತೇಕರು ತಮ್ಮ ತಮ್ಮ ತವರೂರುಗಳಿಗೆ ಕುಟುಂಬ ಸಮೇತ ಹೋಗಿ ಸೇರಿಕೊಳ್ಳುತ್ತಿದ್ದಾರೆ. ಮಕ್ಕಳಿಗೂ ಹಳ್ಳಿಯ ವಾತಾವರಣದಲ್ಲಿ ನಗರಗಳಷ್ಟು ಕಟ್ಟಿಹಾಕಿದಂತಾಗದೆ ಹಾಯಾಗಿ ಓಡಾಡಿಕೊಂಡಿರಲು ಸಾಧ್ಯವಾಗುತ್ತದೆ. ಉದ್ಯೋಗಿಗಳೂ ಬದಲಾವಣೆಗಾಗಿ ಹಳ್ಳಿಯ ಬೆಟ್ಟದ ಮೇಲೋ, ತಣ್ಣಗಿರುವ ದೇವಸ್ಥಾನದ ಕಟ್ಟೆಯ ಮೇಲೋ ಕುಳಿತು ಕೆಲಸ ಮಾಡಲಾರಂಭಿಸಿದ್ದಾರೆ. ಪ್ರಕೃತಿಯ ಮಧ್ಯೆ ಉದ್ಯೋಗ ನಿರ್ವಹಿಸುವ ಈ ಹೊಸ ವಿಧಾನ ಬಹಳಷ್ಟು ರಿಲ್ಯಾಕ್ಸಿಂಗ್ ಆಗಿದೆ ಎಂಬುದು ಬಹುತೇಕರ ಅಭಿಪ್ರಾಯ.
ವರ್ಕ್ ಫ್ರಂ ಹಿಲ್ಸ್
ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು, ಉತ್ತರ ಕನ್ನಡ ಭಾಗಗಳ ಜನರಿಗೆ ತವರಿನಲ್ಲೇ ವರ್ಕ್ ಫ್ರಂ ಹಿಲ್ಸ್ ಸಾಧ್ಯವಾಗುತ್ತಿದೆ. ಉಳಿದಂತೆ ಉತ್ತಮ ಸಂಬಳ ಹೊಂದಿದ ಕೆಲವರು ಹಿಲ್ ಸ್ಟೇಶನ್‌ಗಳ ಹೋಟೆಲ್, ರೆಸಾರ್ಟ್‌ಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಊಟಿ, ಕೇರಳ, ಚಿಕ್ಕಮಗಳೂರು ಎಂದು ಸುಂದರ ಪ್ರಾಕೃತಿಕ ತಾಣಗಳಲ್ಲಿರುವ ರೆಸಾರ್ಟ್‌ಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಇಂಥಲ್ಲಿ 20ರಿಂದ 30 ದಿನಗಳ ಕಾಲ ಡಿಸ್ಕೌಂಟ್‌ನಲ್ಲಿ ಕೋಣೆಗಳನ್ನು ಬುಕ್ ಮಾಡಿಕೊಳ್ಳುತ್ತಿವೆ ಕುಟುಂಬಗಳು. ಇದರಿಂದ ಲಾಕ್‌ಡೌನ್ ಎಂದು ಜನರಿಲ್ಲದೆ ಕಂಗೆಟ್ಟಿದ್ದ ರೆಸಾರ್ಟ್ ಮಾಲೀಕರಿಗೂ ಖುಷಿಯಾಗಿದೆ.
ಉಳಿತಾಯ
ನಗರಗಳಲ್ಲಿ ಖರ್ಚು ಹೆಚ್ಚು. ಕನಿಷ್ಠ ಪಕ್ಷ ಈ ವರ್ಷವಂತೂ ಬಹುತೇಕ ಕಚೇರಿಗಳಲ್ಲಿ ಸಂಪೂರ್ಣ ವರ್ಕ್ ಫ್ರಂ ಹೋಂ ಆಯ್ಕೆ ನೀಡಲಾಗಿದೆ. ಹೀಗಾಗಿ, ಬಾಡಿಗೆ ಮನೆಗಳಲ್ಲಿದ್ದು ಉದ್ಯೋಗ ನಿರ್ವಹಿಸುತ್ತಿದ್ದ ಬಹಳಷ್ಟು ಮಂದಿ ಮನೆಯನ್ನೇ ಖಾಲಿ ಮಾಡಿಕೊಂಡು ಊರುಗಳತ್ತ ಮುಖ ಮಾಡಿದ್ದಾರೆ. ಇಲ್ಲಿನ ಬಾಡಿಗೆ, ಮತ್ತಿತರೆ ಖರ್ಚುಗಳು ಉಳಿಯುವ ಜೊತೆಗೆ, ಊರಿನಲ್ಲಿ ಕಾಯಿಲೆ ಕಡಿಮೆ ಎಂಬ ಸಮಾಧಾನವೂ ಅವರದು. ಹೀಗೆ ಉಳಿತಾಯ ವಾಗುತ್ತಿದೆ ಎಂದಾಗ ಅದೇ ಹಣವನ್ನು ಒಂದು ತಿಂಗಳು ಹಿಲ್ ಸ್ಟೇಶನ್‌ನಲ್ಲಿ ಕಳೆಯಲು ಹಾಕುವುದರಲ್ಲಿ ದೊಡ್ಡ ಉದ್ಯೋಗಿಗಳಿಗೆ ಸಮಸ್ಯೆ ಕಾಣಿಸುತ್ತಿಲ್ಲ. ಇಂಥ ರೆಸಾರ್ಟ್‌ಗಳಲ್ಲಿ ಉಳಿಯಲು ಮುಖ್ಯವಾಗಿ ಕೋವಿಡ್ -19 ನೆಗೆಟಿವ್ ಎಂಬ ರಿಪೋರ್ಟ್ ಇರಬೇಕು ಅಷ್ಟೇ.
ಉತ್ತರಾಖಂಡ, ಹಿಮಾಚಲ ಪ್ರದೇಶಗಳ ರೆಸಾರ್ಟ್‌ಗಳಂತೂ ಈಗಾಗಲೇ ಈ ಬದಲಾವಣೆಯ ಲಾಭ ಪಡೆಯಲು ಸರ್ವಸನ್ನದ್ಧವಾಗಿದ್ದು ವರ್ಕ್‌ಸ್ಟೇಶನ್, ವೈಫೈ ಮುಂತಾದ ಉದ್ಯೋಗಿಗಳ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಇಲ್ಲಿನ ಹಲವು ರೆಸಾರ್ಟ್‌ಗಳಿಗೆ ದೊಡ್ಡ ಕಂಪನಿಗಳಿಂದಲೇ ಕರೆ ಬರುತ್ತಿದ್ದು, ತಮ್ಮ ಹತ್ತಿಪ್ಪತ್ತು ಉದ್ಯೋಗಿಗಳಿಗೆ ಕುಟುಂಬ ಸಮೇತ ಒಂದೆರಡು ತಿಂಗಳ ಕಾಲ ಉಳಿಯಲು ವ್ಯವಸ್ಥೆ ಮಾಡುತ್ತಲೂ ಇವೆಯಂತೆ.