ಶೈಕ್ಷಣಿವಾಗಿ, ಸಾಮಾಜಿಕವಾಗಿ ಭಾರತೀಯರು ಎಷ್ಟೇ ಮುಂದುವರಿದರೂ, ಲೈಂಗಿಕತೆಯಂಥ ವಿಷಯಕ್ಕೆ ಬಂದರೆ ಬಹಳ ಹಿಂದೆಯೇ ಉಳಿದಿರುತ್ತಾರೆ. ಈ ವಿಷಯದಲ್ಲಿ ಅರಿವಿನ ಕೊರತೆ ಭಾರತೀಯರನ್ನು ಕಾಡುತ್ತದೆ. ಈ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದೇ ಅಪರಾಧ ಎಂಬ ಭಾವ ಭಾರತೀಯರಲ್ಲಿದೆ.
ಮಗುವನ್ನು ಹೆೊರುವ, ಹೆರುವ ಸೌಭಾಗ್ಯವುಳ್ಳ ಹೆಣ್ಣಿಗೆ ಯೋನಿ ಹಾಗೂ ಅದರ ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ. ಮಡಿವಂತಿಕೆ ಹೆಚ್ಚಾಗಿರೋ ನಮ್ಮ ದೇಶದಲ್ಲಿಯಂತೂ ಇದನ್ನು ಸ್ವಚ್ಛ ಮಾಡಿಕೊಳ್ಳುವುದೂ ತಪ್ಪೆಂಬ ಭಾವವಿದೆ. ಇದನ್ನು ಬಿಟ್ಹಾಕಿ. ಯೋನಿ ಸ್ವಚ್ಛತೆ ಕೆಡೆ ಗಮನವಹಿಸೋದು ಹೇಗೆ? ಇಲ್ಲಿದೆ ಟಿಪ್ಸ್
ಅದರಲ್ಲಿಯೂ ಹೆಣ್ಣು ಮಕ್ಕಳಂತೂ ತಮ್ಮ ಗುಪ್ತಾಂಗಗಳ ಬಗ್ಗೆ ಮಾತನಾಡುವುದೇ ಇಲ್ಲ. ಇದರ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಯಾವುದೇ ಗಮನ ಹರಿಸುವುದಿಲ್ಲ. ಅದೇ ಕಾರಣಕ್ಕೆ ಹಲವು ರೋಗಗಳನ್ನೂ ತಂದು ಕೊಳ್ಳುತ್ತಾರೆ. ಫೇಷಿಯಲ್, ಬ್ಯುಟಿ ಪಾರ್ಲರ್ ಎಂದು ಕೈ, ಕಾಲಿನ ಮೇಲಿರುವ ಕೇಶವನ್ನು ತೆಗಿಸಿಕೊಳ್ಳುತ್ತಾರೆ. ಮುಖ, ಉಗುರು ಹಾಗೂ ಪಾದದ ಸೌಂದರ್ಯಕ್ಕೆ ಗಮನ ಹರಿಸುತ್ತಾರೆ. ಅವೆಲ್ಲವುಕ್ಕಿಂತ ಯೋನಿ ಆರೋಗ್ಯ, ಸ್ವಚ್ಛತೆಯೂ ಮುಖ್ಯವೆಂಬುವುದು ಗೊತ್ತೇ ಇರೋಲ್ಲ.
ಋತುಮತಿಯಾದ ಹೆಣ್ಣಿಗೆ ಲೈಂಗಿಕ ಆರೋಗ್ಯ, ಗರ್ಭಾವಸ್ಥೆ ಎಲ್ಲವೂ ಬಹು ಮುಖ್ಯ ಘಟ್ಟಗಳು. ಮೊದಲಿನಿಂದಲೇ ಈ ಕಡೆಗೆ ಗಮನ ಹರಿಸಿದರೆ ಭವಿಷ್ಯದ ಸ್ವಾಸ್ಥ್ಯದೆಡೆಗೂ ಗಮನ ಹರಿಸಿದಂತಾಗುತ್ತದೆ. ಅಷ್ಟಕ್ಕೂ ಯೋನಿ ನೈರ್ಮಲ್ಯಕ್ಕೆ ಯಾವ ರೀತಿ ಗಮನ ಹರಿಸಬೇಕು?
- ಮುಂಬದಿಯಿಂದ ಹಿಂದಕ್ಕೆ ಸ್ವಚ್ಛ ಮಾಡಿಕೊಳ್ಳಿ
ಗುಪ್ತಾಂಗಗಳನ್ನು ಮುಂದಿನಿಂದ, ಹಿಂದೆ ಸ್ವಚ್ಛ ಮಾಡಿಕೊಳ್ಳಬೇಕು. ಆಗ ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಯೋನಿಯ ಸುತ್ತಮುತ್ತಲಿನ ಪ್ರದೇಶವನ್ನು ತೇವಾಂಶ ಕಡಿಮೆ ಇರುವಂತೆ ನೋಡಿಕೊಳ್ಳಬಹುದು.
- ಕಾಟನ್ ಪ್ಯಾಂಟಿಯನ್ನೇ ಬಳಸಿ. ಇದರಿಂದ ಯೋನಿ ಇರುವ ಜಾಗಕ್ಕೆ ಸೂಕ್ತ ಗಾಳಿ ಸಂಚಾರವಾಗುತ್ತದೆ. ಒಳ ಉಡುಪನ್ನು ಚೆನ್ನಾಗಿ ಒಗೆದು, ಬಿಸಿಲಿನಲ್ಲಿಯೇ ಒಣ ಹಾಕಿ. ಸಂದು ಮೂಲೆಯಲ್ಲಿ ಸೂರ್ಯನ ಕಿರಣಗಳ ಬೀಳದಿದ್ದರೆ, ಸೋಂಕು ಹೆಚ್ಚಿಸುವ ಸಾಧ್ಯತೆ ಇರುತ್ತದೆ.
- ಯೋನಿ ಸುತ್ತಮುತ್ತ ಕೂದಲನ್ನು ಆಗಾಗ ಟ್ರಿಮ್ ಮಾಡಿಕೊಳ್ಳುತ್ತಿರಬೇಕು. ಹೆಚ್ಚು ಹೆಚ್ಚು ಕೂದಲಿದ್ದರೆ, ಆ ಪ್ರದೇಶದಲ್ಲಿ ತೇವಾಂಶ ಹೆಚ್ಚಾಗಿ, ಸೋಂಕಾಗುವ ಸಾಧ್ಯತೆ ಇರುತ್ತದೆ. ಅನಗತ್ಯ ಕೇಶ ತೆಗೆದುಕೊಳ್ಳುವಾಗ ಹುಷಾರಾಗಿರಿ. ಬ್ಲೇಡ್, ವ್ಯಾಕ್ಸಿಂಗ್ ಕ್ರೀಂ ಬಳಸುವಾಗ ಎಚ್ಚರಿಕೆ ಇರಲಿ. ಯಾವುದೇ ಗಾಯ, ಅಲರ್ಜಿ ಆಗದಂತೆ ನೋಡಿಕೊಳ್ಳಿ. ಹೇಗಾಯಿತೋ, ಹಾಗೆ ಕೂದಲು ತೆಗೆದುಕೊಳ್ಳಲು ಹೋದರೆ ಇಲ್ಲ ಸಲ್ಲದ ಅವಾಂತರವಾಗುತ್ತದೆ. ಈ ಬಗ್ಗೆ ಎಚ್ಚರವಿರಲಿ.
- ಲೈಂಗಿಕ ಚಟುವಟಿಕೆ ಆರಂಭವಾದಾಗ ಯೋನಿ ಗಾತ್ರ ಹೆಚ್ಚುತ್ತದೆ. ಆಗ ಗುದದ್ವಾರ ಹಾಗೂ ಯೋನಿ ನಡುವಿನ ಅಂತರವೇ ಕಡಿಮೆಯಾದಂತಾಗುತ್ತದೆ. ಆದ್ದರಿಂದ ಎಷ್ಟು ಕೇರ್‌ಫುಲ್ ಆಗಿದ್ದರೂ ಸಾಲದು. ಲೈಂಗಿಕ ಕ್ರಿಯೆ ಮುಗಿದ ನಂತರ ಗುಪ್ತಾಂಗವನ್ನು ತೊಳೆದುಕೊಳ್ಳುವುದೊಳಿತು.
- ಮಗುವಾದ ನಂತರವೂ ಯೋನಿ ಕಾಳಜಿ ಮತ್ತಷ್ಟು ಹೆಚ್ಚಾಗಬೇಕು. ಪ್ರಸವದ ನಂತರ ಆಗುವ ಗಾಯ ಒಣಗಲು ಅಗತ್ಯ ಕ್ರಮ ಕೈಗೊಳ್ಳಬೇಕು. ವೈದ್ಯರು ಹೇಳಿದ್ದನ್ನು ತಪ್ಪದೇ ಪಾಲಿಸಬೇಕು.
- ಸ್ವಚ್ಛವಾಗಿಟ್ಟುಕೊಂಡರೂ, ಈ ಜಾಗದಲ್ಲಿ ಅಕಸ್ಮಾತ್ ತುರಿಕೆ, ಕಜ್ಜಿಯಂಥ ಸಮಸ್ಯೆಗಳು ಕಾಡುತ್ತಿವೆ ಎಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಮಾಮೂಲಿ ಬಳಸುವ ಸೋಪಿಗಿಂತ ಈ ಪ್ರದೇಶಕ್ಕೆ ಸರಿ ಹೊಂದುವ ಪಿಎಚ್ ಲೆವೆಲ್ ಇರುವ ಸೋಪನ್ನೇ ಬಳಸಿದರೆ ಒಳಿತು.
- ವಾಸನೆಯುಕ್ತ ಡಿಸ್ಚಾರ್ಜ್ ಅಥವಾ ಬಿಡದೆ ಕಾಡುವ ನವೆ ಮುಂತಾದ ಸಮಸ್ಯೆಗಳನ್ನು ಅಪ್ಪಿ ತಪ್ಪಿಯೂ ಇಗ್ನೋರ್ ಮಾಡದಿರಿ. ಸಂಬಂಧಿಸಿದ ತಜ್ಞರನ್ನು ಭೇಟಿಯಾಗಿ, ಅಗತ್ಯ ಸಲಹೆ ಪಡೆದು, ಚಿಕಿತ್ಸೆ ಪಡೆದುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.