
ಬರ್ಲಿನ್ (ನ.27) ಹಲವು ಬಾರಿ ಟೈಮ್ ಸರಿ ಇಲ್ಲ ಮಾತು ನಾವು ಕೇಳಿರುತ್ತೇವೆ. ಏನೂ ಮಾಡಿದರೂ ಎಡವಟ್ಟು, ಎಷ್ಟೇ ಜಾಗರೂಕತೆ ವಹಿಸಿದರೂ ತಪ್ಪು. ಏನು ಮಾಡೋದು ಟೈಮ್ ಕೆಟ್ಟಿಗೆ ಎಂದು ನಮ್ಮನ್ನು ನಾವು ಸಮಾಧಾನ ಪಡಿಸುತ್ತೇವೆ. ಇಲ್ಲೊಬ್ಬ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಇತ್ತ ತನ್ನ ಓದು ಮುಂದುವರಿಸಬೇಕಾದ ಅನಿವಾರ್ಯ,ಆಪ್ತರಿಂದ ದೂರವಿದ್ದು ಓದಬೇಕಾದ ಅನಿವಾರ್ಯತೆ, ತಾನು ಅಂದುಕೊಂಡಂತೆ ಯಾವುದು ಕೈಗೂಡುತ್ತಿಲ್ಲ ಅನ್ನೋ ಬೇಸರದಲ್ಲಿದ್ದಳು. ಪರಿಸ್ಥಿತಿ ನೆನೆದು ಮನಸ್ಸು ಭಾರವಾಗಿತ್ತು. ಹೀಗಾಗಿ 31ರ ಹರೆಯದ ಮಹಿಳೆ ಕೆಲ ಹೊತ್ತು ಒಂಟಿಯಾಗಿರಲು ಬಯಸಿದ್ದಾಳೆ. ನಡೆಯುತ್ತಾ ಸಾಗಿದ್ದಾಳೆ. ಹೀಗೆ ಸಾಗುವಾಗ ಎದುರಾದ ಮಕ್ಕಳ ಆಟದ ಮೈದಾನದಲ್ಲಿ ಬೆಂಚ್ ಕಾಲಿಯಿತ್ತು. ದೂರದಲ್ಲಿ ಇಬ್ಬರು ಮಕ್ಕಳು ಆಡುತ್ತಿದ್ದರು. ಹೀಗಾಗಿ ಆಟದ ಮೈದಾನದ ಬೆಂಚ್ನಲ್ಲಿ ಕುಳಿತು ಕಣ್ಣೀರಿಟ್ಟಿದ್ದಾಳೆ. ಒಂಟಿಯಾಗಿ ಕುಳಿತ ಕೆಲ ಹೊತ್ತಿನಲ್ಲಿ ಅಧಿಕಾರಿಗಳು ಬಂದು 2500 ರೂಪಾಯಿ ದಂಡ ವಿಧಿಸಿದ ಘಟನೆ ಜರ್ಮನಿಯ ಗೆಲ್ಸೆನ್ಕಿರ್ಚೆನ್ನಲ್ಲಿ ನಡೆದಿದೆ.
31 ವರ್ಷದ ಹನಾ ಅನ್ನೋ ಮಹಿಳೆ ಹಲವು ಹಿನ್ನಡೆಗಳಿಂದ ನೊಂದುಕೊಂಡಿದ್ದಳು. ನಗರದಲ್ಲಿ ಶಿಕ್ಷಣ ಮುಂದುವರಿಸಿದ್ದ ಈಕೆಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಕುಟುಂಬಸ್ಥರು ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದರು. ಆದರೆ ತನ್ನ ಖರ್ಚು ವೆಚ್ಚ, ಓದಿನ ಶುಲ್ಕಗಳಿಗೆ ಸಾಕಾಗುತ್ತಿರಲಿಲ್ಲ. ಇತ್ತ ಇತರ ಕೆಲ ಸಮಸ್ಯೆಗಳು ಎಲ್ಲವೂ ಸೇರಿ ತೀವ್ರವಾಗಿ ನೊಂದಿದ್ದಳು. ಹೀಗಾಗಿ ಒಂಟಿಯಾಗಿ ನಡೆಯುತ್ತಾ ಸಾಗಿ ಮಕ್ಕಳ ಆಟದ ಮೈದಾನದ ಬೆಂಚ್ನಲ್ಲಿ ಕುಳಿತಿದ್ದಳು. ಬಳಿಕ ಚಿಕ್ಕಮ್ಮನಿಗೆ ಕರೆ ಮಾಡಿ ತನ್ನ ನೋವು ಹೇಳಿಕೊಂಡು ಅತ್ತಿದ್ದಳು. ಆದರೆ ನಿಯಮ ಉಲ್ಲಂಘಿಸಲಾಗಿದೆ ಎಂದು ಅಧಿಕಾರಿಗಳು 2500 ರೂಪಾಯಿ ದಂಡ ವಿಧಿಸಿದ್ದಾರೆ.
ದಂಡದ ಘಟನೆ ಜರ್ಮನಿಯಲ್ಲಿ ಭಾರಿ ಸುದ್ದಿಯಾಗಿದೆ. ಸ್ಥಳೀಯ ಮಾಧ್ಯಮಗಳು ಈಕೆಯ ಪ್ರತಿಕ್ರಿಯೆ ಕೇಳಿದ್ದಾರೆ. ಈ ವೇಳೆ ಘಟನೆ ವಿವರಿಸಿದ್ದಾಳೆ. ನಾನು ಒಂಟಿಯಾಗಿಲು ಬಯಸಿದ್ದೆ. ನಾನು ಅಳುವುದನ್ನು ಯಾರು ನೋಡಬಾರದು ಎಂದು ಬಯಸಿದ್ದೆ. ಹೀಗಾಗಿ ಕೆಲ ದೂರ ನಡೆದುಕೊಂಡು ಸಾಗಿದ್ದೆ. ಈ ವೇಳೆ ಆಟದ ಮೈದಾನದಲ್ಲಿ ಯಾರೂ ಇರಲಿಲ್ಲ. ಇಬ್ಬರು ಮಕ್ಕಳು ಹೊರತುಪಡಿಸಿದರೆ ಎಲ್ಲವೂ ಶಾಂತವಾಗಿತ್ತು. ಇದು ಸೂಕ್ತ ಸ್ಥಳ ಎಂದುಕೊಂಡು ಬೆಂಚ್ನಲ್ಲಿ ಒಂಟಿಯಾಗಿ ಕುಳಿತು ಅತ್ತಿದ್ದೆ. ಕೆಲ ಹೊತ್ತಲ್ಲೇ ಅಧಿಕಾರಿಗಳು ನನ್ನ ಬಳಿ ಆಗಮಿಸಿದ್ದರು. ಆಟದ ಮೈದಾನದಲ್ಲಿ ಆಡುತ್ತಿರುವ ಇಬ್ಬರು ಮಕ್ಕಳು ನಿಮ್ಮದಾ ಎಂದು ಕೇಳಿದ್ದಾರೆ. ನಾನು ಕಣ್ಣೀರು ಒರೆಸಿಕೊಂಡು ಇಲ್ಲಾ ಎಂದು ಉತ್ತರಿಸಿದ್ದೆ.
ನನ್ನ ಉತ್ತರ ಕೇಳಿದ ಬೆನ್ನಲ್ಲೇ 2500 ರೂಪಾಯಿ ದಂಡ ವಿಧಿಸಿ ಚಲನ್ ನೀಡಿದ್ದಾರೆ. ದಂಡ ಪಾವತಿ ಮಾಡಬೇಕು ಎಂದಾಗ ನನಗೆ ದಿಕ್ಕೇ ತೋಚಲಿಲ್ಲ. ಮೊದಲೇ ಆರ್ಥಿಕ ಸಮಸ್ಯೆಯಿಂದ ನಾನು ಬಳಲಿ ಬೆಂಡಾಗಿದ್ದೆ. ಕೇವಲ ಕುಳಿತುಕೊಂಡು ಅತ್ತಿದ್ದಕ್ಕೆ 2500 ರೂಪಾಯಿ ದಂಡ ಪಾವತಿಸಬೇಕಲ್ಲ ಅನ್ನೋ ಚಿಂತೆ ಶುರುವಾಗಿತ್ತು. ಕೊನೆಗ ಅಳುತ್ತಲೇ ಯಾಕೆ ಎಂದು ಕೇಳಿದೆ. ಇದು ಮಕ್ಕಳ ಪಾರ್ಕ್, ಇಲ್ಲಿ ಮಕ್ಕಳು ಇಲ್ಲದೆ ಆಟದ ಮೈದಾನದ ಬೆಂಚ್ನಲ್ಲಿ ಕುಳಿತುಕೊಳ್ಳುವಂತಿಲ್ಲ. ಈ ಆಟದ ಮೈದಾನದ ನಿಯಮದ ಪ್ರಕಾರ,ಈ ಮೈದಾನ 14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮೀಸಲಿಟ್ಟ ಮೈದಾನ. ಹೀಗಾಗಿ ಇಲ್ಲಿಗೆ ಬರವು ಮಕ್ಕಳು ತಮ್ಮ ಪೋಷಕರ ಜೊತೆಗೆ ಬರಬೇಕು. ಬಳಿಕ ಪೋಷಕರು ಇಲ್ಲಿ ನಿಗದಪಿಡಿಸಿರುವ ಬೆಂಚ್ ಮೇಲೆ ಕುಳಿತರು ಮಕ್ಕಳು ಮೈದಾನದಲ್ಲಿ ಆಟವಾಡುತ್ತಾರೆ. ಆದರೆ ಮಕ್ಕಳು ಇಲ್ಲದೆ , ಪೋಷರು ಅಥವಾ ಆಪ್ತರು ಇಲ್ಲಿ ಕುಳಿತುಕೊಳ್ಳುವಂತಿಲ್ಲ. ಹೀಗಾಗಿ ದಂಡ ಪಾವತಿಸಲೂ ಸೂಚಿಸಿದ್ದಾರೆ ಎಂದು ಮಹಿಳೆ ಘಟನೆ ವಿವರಿಸಿದ್ದಾರೆ.
ನಾನು ಅಳುತ್ತಿದ್ದೆ. ನನ್ನ ಬಳಿ ಬಂದ ಅಧಿಕಾರಿಗಳು ಕನಿಷ್ಠ ಇಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಎಚ್ಚರಿಸಬಹುದಿತ್ತು. ಆದರೆ ಹಾಗೇ ಮಾಡಲಿಲ್ಲ. ನಾನು ಅಳುತ್ತಿದ್ದೆ, ಕಾರಣ ಏನು, ನೆರವು ಬೇಕಾ ಎಂದು ಕೇಳಲಿಲ್ಲ. ನೇರವಾಗಿ ದಂಡ ವಿಧಿಸಿ ನನ್ನನ್ನ ಹೊರಗಟ್ಟಿ ತೆರಳಿದರು ಎಂದು ಮಹಿಳೆ ನೋವು ತೋಡಿಕೊಂಡಿದ್ದಾಳೆ. ಇತ್ತ ಸೋಶಿಯಲ್ ಮೀಡಿಯಾದಲ್ಲೂ ಮಹಿಳೆಗೆ ಬೆಂಬಲ ಸೂಚಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.