ಕೊರೋನಾ ಲಸಿಕೆ ಜನರ ತೋಳಿಗೇ ಏಕೆ ಕೊಡ್ತಾರೆ?!

By Kannadaprabha News  |  First Published May 23, 2021, 8:35 AM IST

* ವಿಶ್ವಾದ್ಯಂತ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ

* ಲಸಿಕೆಗಳು ಬೇರೆ ಬೇರೆಯಾದರೂ ಅವನ್ನು ಕೊಡುವ ಜಾಗ ಮಾತ್ರ ಒಂದೇ

* ಬಹುತೇಕ ಲಸಿಕೆಗಳನ್ನು ಮಾಂಸಖಂಡಗಳಿಗೆ ನೀಡಬೇಕು


ಇಂಡಿಯಾನಾಪೊಲಿಸ್‌(ಮೇ.23): ವಿಶ್ವಾದ್ಯಂತ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಲಸಿಕೆಗಳು ಬೇರೆ ಬೇರೆಯಾದರೂ ಅವನ್ನು ಕೊಡುವ ಜಾಗ ಮಾತ್ರ ಒಂದೇ. ಅದು- ಜನರ ತೋಳು. ಬೇರೆ ಸಂದರ್ಭದಲ್ಲಿ ಕುಂಡಿಗೆ ಇಂಜೆಕ್ಷನ್‌ ನೀಡುವ ವೈದ್ಯರು ಲಸಿಕೆಯನ್ನೇಕೆ ತೋಳಿಗೆ ಕೊಡುತ್ತಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿದೆಯೇ? ಅಮೆರಿಕದ ಪಡ್ರ್ಯೂ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಲಿಬ್ಬಿ ರಿಚರ್ಡ್ಸ್ ಇದಕ್ಕೆ ಕಾರಣಗಳನ್ನು ನೀಡಿದ್ದಾರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

Tap to resize

Latest Videos

undefined

ಬಹುತೇಕ ಲಸಿಕೆಗಳನ್ನು ಮಾಂಸಖಂಡಗಳಿಗೆ ನೀಡಬೇಕು. ಏಕೆಂದರೆ ಮಾಂಸಖಂಡಗಳ ಅಂಗಾಂಶದಲ್ಲಿ ಮಹತ್ವದ ರೋಗನಿರೋಧಕ ಜೀವಕೋಶಗಳು ಇರುತ್ತವೆ. ಈ ಕೋಶಗಳು ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಲು ನೀಡುವ ಲಸಿಕೆಯಲ್ಲಿನ ಪ್ರತಿಜನಕ (ಆ್ಯಂಟಿಜೆನ್‌)ಗಳನ್ನು ಗುರುತಿಸುತ್ತವೆ. ಕೊರೋನಾ ಲಸಿಕೆಯ ಮೂಲಕ ಆ್ಯಂಟಿಜೆನ್‌ಗಳನ್ನು ನೀಡುವುದಿಲ್ಲ. ಬದಲಿಗೆ ಅದನ್ನು ದೇಹದಲ್ಲೇ ಉತ್ಪಾದಿಸಲು ನೀಲನಕ್ಷೆಯನ್ನು ರವಾನಿಸಲಾಗುತ್ತದೆ. ಮಾಂಸಖಂಡದಲ್ಲಿನ ರೋಗ ನಿರೋಧಕ ಕೋಶಗಳು ಆ್ಯಂಟಿಜೆನ್‌ ಅಥವಾ ಸಂದೇಶ ಸ್ವೀಕರಿಸಿ ದುಗ್ಧರಸ ಗ್ರಂಥಿಗಳಿಗೆ ರವಾನಿಸುತ್ತವೆ. ಆನಂತರ ಹಲವು ಪ್ರಕ್ರಿಯೆ ನಡೆದು ದೇಹದಲ್ಲಿ ಪ್ರತಿಕಾಯ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಆರಂಭವಾಗುತ್ತದೆ.

ತೋಳಿಗೇ ಲಸಿಕೆ ನೀಡುವುದು ಏಕೆಂದರೆ ದುಗ್ಧರಸ ಗ್ರಂಥಿ (ಲಿಂಫ್‌ ನೋಡ್‌)ಯ ಗುಚ್ಛ ತೋಳಿನ ಬಳಿ ಇರುತ್ತವೆ. ಅದೇ ತೊಡೆಗೆ ಲಸಿಕೆ ನೀಡಿದರೆ, ಇಂಥ ಗುಚ್ಛಕ್ಕಾಗಿ ಸ್ವಲ್ಪ ದೂರ (ತೊಡೆ ಸಂದು) ಕ್ರಮಿಸಬೇಕಾಗುತ್ತದೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ತೋಳಿಗೆ ಲಸಿಕೆ ನೀಡುವುದರಿಂದ ಆ ಭಾಗದಲ್ಲಿ ಮಾತ್ರ ಊತ ಕಾಣಿಸಿಕೊಳ್ಳಬಹುದು. ಅದೇ ಕೊಬ್ಬಿನಂಶ ಇರುವ ಅಂಗಾಂಶಗಳಿಗೆ ನೀಡಿದರೆ ಊತ, ಕಿರಿಕಿರಿಯಾಗಬಹುದು. ಏಕೆಂದರೆ, ಅಲ್ಲಿಗೆ ರಕ್ತ ಸಂಚಾರ ಕಡಿಮೆ ಇರುತ್ತದೆ. ಲಸಿಕೆಯ ಅಂಶ ಸೇರುವ ಸಾಧ್ಯತೆ ಕಡಿಮೆ ಇರುತ್ತದೆ.

ಮತ್ತೊಂದು ಮಹತ್ವದ ಕಾರಣ ಎಂದರೆ, ಲಸಿಕೆ ಅಭಿಯಾನವನ್ನು ಸಾಮೂಹಿಕವಾಗಿ ನಡೆಸಲಾಗುತ್ತದೆ. ಪ್ಯಾಂಟ್‌ ಕಳಚಿಸಿ ಲಸಿಕೆ ನೀಡುವುದಕ್ಕಿಂತ ಶರ್ಟ್‌ ತೋಳು ಮೇಲೆತ್ತಿ ಲಸಿಕೆ ಪಡೆಯುವುದು ಸುಲಭ. ಹೆಚ್ಚು ಜನರಿಗೆ ಲಸಿಕೆ ಕೊಡಬೇಕಿರುವ ಈ ಹಿನ್ನೆಲೆಯಲ್ಲಿ ಇದು ಸಮಯ ಉಳಿತಾಯ ದೃಷ್ಟಿಯಿಂದಲೂ ಸಹಕಾರಿ.

ಕೊರೋನಾ ಲಸಿಕೆ ಜನರತೋಳಿಗೇ ಏಕೆ ಕೊಡ್ತಾರೆ?!

- 1. ದುಗ್ಧರಸ ಗ್ರಂಥಿ ಗುಚ್ಛ ತೋಳಲ್ಲಿದೆ

- 2. ತೋಳಿಗೆ ನೀಡುವುದರಿಂದ ಅಪಾಯವಿಲ್ಲ

- 3. ಪ್ಯಾಂಟ್‌ ಕಳಚುವ ಸಮಯ ಉಳಿತಾಯ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!