ಪಾಸ್‌ಪೋರ್ಟ್, ವೀಸಾ... ಅಬ್ಬಬ್ಬಾ ಅದೆಷ್ಟು ವಿಧ!

By Web DeskFirst Published Aug 3, 2019, 3:51 PM IST
Highlights

ಪಾಸ್‌ಪೋರ್ಟ್‌ಗಳೂ ಬಿಳಿ, ಕೆಂಪು, ನೀಲಿ ಎಂದು  ವಿವಿಧ ಬಣ್ಣಗಳಲ್ಲಿ ಬರುತ್ತವೆ. ಹಾಗಂತ ನಿಮಗಿಷ್ಟದ ಬಣ್ಣದ  ಪಾಸ್‌ಪೋರ್ಟ್‌ಗಳನ್ನು ಪಡೆಯಲಾಗುವುದಿಲ್ಲ. ಏಕೆಂದರೆ ಒಂದೊಂದು ಬಣ್ಣದ ಪಾಸ್‌ಪೋರ್ಟ್‌ಗೂ ಅದರದೇ ಆದ ಪ್ರಾಮುಖ್ಯತೆಯಿದೆ.

ಪಾಸ್‌ಪೋರ್ಟ್ ಎಂಬುದು ಭಾರತೀಯರು ವಿದೇಶಕ್ಕೆ ಹೋಗುವಾಗ ಅಗತ್ಯವಾಗಿ ಬೇಕಾಗುವ ಟ್ರಾವೆಲ್ ಡಾಕ್ಯುಮೆಂಟ್. ಅದರಲ್ಲಿ ವ್ಯಕ್ತಿಯ ಐಡೆಂಟಿಟಿ ಅಡಕವಾಗಿರುತ್ತದೆ. 
ಕಳೆದ ವರ್ಷ ಕೇಂದ್ರವು ಆರೆಂಜ್ ಪಾಸ್‌ಪೋರ್ಟ್ ಹೊರತರುವುದಾಗಿ ಹೇಳಿ ವಿವಾದಕ್ಕೆ ಕಾರಣವಾದ ಮೇಲೆ, ಅರೆ! ಪಾಸ್‌ಪೋರ್ಟ್ ಎಂದರೆ ಪಾಸ್‌ಪೋರ್ಟ್. ಬಣ್ಣದಲ್ಲೇನಿದೆ? ಎಂದು ಕೆಲವರಿಗನಿಸಿರಬಹುದು.

ಭಾರತದಲ್ಲಿ ಕಡುನೀಲಿ, ಕೆಂಪು, ಬಿಳಿ ಬಣ್ಣದ  ಪಾಸ್‌ಪೋರ್ಟ್‌ಗಳನ್ನು ಕಾಣಬಹುದು. ಕೆಲ ಬಣ್ಣದ ಪಾಸ್‌ಪೋರ್ಟ್‌ಗಳು ಉಳಿದವಕ್ಕಿಂತ  ಹೆಚ್ಚು ಪ್ರಾಮುಖ್ಯತೆ ಪಡೆದವು. ಕೆಲವು ಪಾಸ್‌ಪೋರ್ಟ್ ಇದ್ದರೆ  ವೀಸಾ ಇಲ್ಲದೆ ಸಂಚರಿಸಬಹುದು, ಮತ್ತೆ ಕೆಲವಿದ್ದರೆ ಇಮ್ಮಿಗ್ರೇಶನ್ ಕ್ಲಿಯರೆನ್ಸ್ ಬೇಗನೆ ಆಗುತ್ತದೆ ಹೀಗೆ... ಭಾರತದ  ವಿವಿಧ  ಪಾಸ್‌ಪೋರ್ಟ್‌ಗಳ ಕುರಿತ  ಮಾಹಿತಿ  ಇಲ್ಲಿದೆ. ಅಂದ ಹಾಗೆ, ನಿಮ್ಮ ಪಾಸ್‌ಪೋರ್ಟ್ ಯಾವ ಬಣ್ಣದ್ದು?

ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...

1. ನೀಲಿ ಪಾಸ್‌ಪೋರ್ಟ್

ಭಾರತದ ಸಾಮಾನ್ಯ ಜನರಿಗೆ ನೀಲಿ ಬಣ್ಣದ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದರಿಂದ ವಿದೇಶದ ಕಸ್ಟಮ್, ಇಮ್ಮಿಗ್ರೇಶನ್ ಹಾಗೂ ಇತರೆ ಅಧಿಕಾರಿಗಳಿಗೆ ನೀವು ಸಾಮಾನ್ಯರೋ ಅಥವಾ ಭಾರತದ ಸರಕಾರಿ ಹುದ್ದೆಯಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವವರೋ ಎಂಬುದು ತಿಳಿಯುತ್ತದೆ. ಪ್ರತಿ 10 ವರ್ಷಗಳಿಗೊಮ್ಮೆ ಇದನ್ನು ರಿನ್ಯೂ ಮಾಡಿಸಿಕೊಳ್ಳಬೇಕು. 

2. ಬಿಳಿ ಪಾಸ್‌ಪೋರ್ಟ್

ವಿವಿಧ ಪಾಸ್‌ಪೋರ್ಟ್‌ಗಳಲ್ಲಿ ಬಿಳಿಯ ಪಾಸ್‌ಪೋರ್ಟ್ ಎಲ್ಲಕ್ಕಿಂತ ಹೆಚ್ಚು ಪವರ್‌ಪುಲ್. ಅತ್ಯುನ್ನತ ಸ್ಥಾನದಲ್ಲಿರುವ ಸರಕಾರಿ ಅಧಿಕಾರಿಗಳಿಗೆ ಇದನ್ನು ನೀಡಲಾಗುತ್ತದೆ. ವಿದೇಶಗಳಿಗೆ ಸರಕಾರಿ ಕೆಲಸಗಳಿಗಾಗಿ ಹೋಗುವವರ ಬಳಿ ಮಾತ್ರ ಬಿಳಿಯ ಪಾಸ್‌ಪೋರ್ಟ್ ಇರುತ್ತದೆ. ಇದನ್ನು ನೋಡಿದ ಕೂಡಲೇ ಎಲ್ಲ ಏರ್‌ಪೋರ್ಟ್‌ಗಳ ಕಸ್ಟಮ್ಸ್, ಇಮ್ಮಿಗ್ರೇಶನ್ ಹಾಗೂ ಇತರೆ ಅಧಿಕಾರಿಗಳಿಗೆ ಇವರ ಸ್ಥಾನ ಎಂಥದ್ದು ಎಂಬುದು ಅರಿವಾಗಿ ಅದಕ್ಕೆ ಸರಿಯಾಗಿ ನಡೆಸಿಕೊಳ್ಳುತ್ತಾರೆ. 

3. ಕೆಂಪು ಪಾಸ್‌ಪೋರ್ಟ್

ಕೆಂಪು ಪಾಸ್‌ಪೋರ್ಟ್‌ಗಳನ್ನು ಭಾರತೀಯ ಅಧಿಕಾರಿಗಳು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅತ್ಯುತ್ತಮ ಗುಣಮಟ್ಟದ ಪಾಸ್‌ಪೋರ್ಟ್‌ಗಳಿಗಾಗಿ ಪ್ರತ್ಯೇಕ ಅರ್ಜಿಸಲ್ಲಿಸಬೇಕಾಗುತ್ತದೆ. ಇಂಥ ಪಾಸ್‌ಪೋರ್ಟ್ ಹೊಂದಿರುವವರಿಗೆ ವಿದೇಶ ಪ್ರವಾಸ ಸಂದರ್ಭದಲ್ಲಿ ಹಲವಾರು ಲಾಭಗಳಿವೆ. ಜೊತೆಗೆ, ವಿದೇಶಗಳಿಗೆ ಹೋಗಲು ಅವರಿಗೆ ವೀಸಾ ಬೇಕಾಗಿರುವುದಿಲ್ಲ. ಕೆಂಪು ಪಾಸ್‌ಪೋರ್ಟ್ ಇದ್ದವರು ಸಾಮಾನ್ಯ ಜನರಂತೆ ಕ್ಯೂನಲ್ಲಿ ನಿಲ್ಲದೆ ಇಮ್ಮಿಗ್ರೇಶನ್ ಫಾರ್ಮಾಲಿಟಿಗಳನ್ನು ಕೂಡಾ ಬಹುಬೇಗ ಕ್ಲಿಯರ್ ಮಾಡಿಕೊಂಡು ಹೋಗಬಹುದು. 

4. ಆರೆಂಜ್ ಪಾಸ್‌ಪೋರ್ಟ್

ಭಾರತ ಸರ್ಕಾರವು  ಆರೆಂಜ್ ಪಾಸ್‌ಪೋರ್ಟ್ ತರುವ ನಿರ್ಧಾರವನ್ನು ಪ್ರಕಟಿಸಿತ್ತು. ಇದನ್ನು 10ನೇ ತರಗತಿಗಿಂತ ಹೆಚ್ಚು ಓದದವರಿಗೆ ನೀಡಬಯಸಿತ್ತು. ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆ ಆರೆಂಜ್ ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರು, ಶಾಶ್ವತ ವಿಳಾಸ ಹಾಗೂ ಇತರೆ ವಿವರಗಳನ್ನು ಹೊಂದಿದ ಕಡೆಯ ಪುಟ ಇರುವುದಿಲ್ಲ. ಹೀಗೆ ಹೆಚ್ಚು ಶಿಕ್ಷಣ ಪಡೆಯದವರು ಇಸಿಆರ್ ಕೆಟಗರಿಗೆ ಸೇರುತ್ತಾರೆ. ಅಂದರೆ, ಪ್ರತಿ ಬಾರಿ ಅವರು ವಿದೇಶಕ್ಕೆ ಹಾರಬೇಕೆಂದರೂ ಇಮ್ಮಿಗ್ರೇಶನ್ ಅಧಿಕಾರಿಗಳು ಹೇಳುವ ಎಲ್ಲ ಕ್ರೈಟೀರಿಯಾಗಳನ್ನೂ ಪೂರೈಸಬೇಕಾಗುತ್ತದೆ ಎಂಬ‌ ನಿಯಮಾವಳಿಗಳಿಗೆ ದೇಶಾದ್ಯಂತ ಜನರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆರೆಂಜ್ ಪಾಸ್‌ಪೋರ್ಟ್ ತರುವ ನಿರ್ಧಾರ ಕೈ ಬಿಡಲಾಯಿತು. 

ಈ ದೇಶಗಳಿಗೆ ವೀಸಾ ಇಲ್ಲದೇನೆ ಟ್ರಾವೆಲ್ ಮಾಡಬಹುದು...

ಅಂದ ಹಾಗೆ ವೀಸಾಕ್ಕೂ ಪಾಸ್‌ಪೋರ್ಟ್‌ಗೂ ಏನು ವ್ಯತ್ಯಾಸ ಗೊತ್ತಾ?

ಪಾಸ್‌ಪೋರ್ಟ್ ನಮ್ಮ ದೇಶ ನಮಗೆ ನೀಡುವ ಗುರುತಾದರೆ, ವೀಸಾ ಮತ್ತೊಂದು ದೇಶ ನಮಗೆ ಅಲ್ಲಿಗೆ ಬರಲು ನೀಡುವ ಅನುಮತಿ. ವೀಸಾದಲ್ಲಿ ಕೂಡಾ ಕೆಲ ವಿಧಗಳಿವೆ. 

1. ಟೂರಿಸ್ಟ್ ವೀಸಾ

ಪ್ರವಾಸಕ್ಕಾಗಿ ವಿದೇಶಕ್ಕೆ ಹೊರಟವರಿಗೆ ಆ ದೇಶವು ಟೂರಿಸ್ಟ್ ವೀಸಾ ನೀಡುತ್ತದೆ. ಅಲ್ಲಿ ಪ್ರವಾಸದ ಹೊರತಾಗಿ ಬೇರೇನೂ ಮಾಡುವಂತಿಲ್ಲ.

2. ಟ್ರಾನ್ಸಿಟ್ ವೀಸಾ

ಕೆಲ ದೇಶಗಳಿಗೆ ಹೋಗುವಾಗ ಮತ್ತೊಂದು  ದೇಶದಲ್ಲಿಳಿದು, ಅಲ್ಲಿಂದ ಮತ್ತೆ ವಿಮಾನವೇರಬೇಕಾಗುತ್ತದೆ. ಈ ಮಧ್ಯದ ದೇಶಕ್ಕೆ ಹೋಗುವ ಯಾವ ಉದ್ದೇಶವೂ ವ್ಯಕ್ತಿಗಿರುವುದಿಲ್ಲ. ಆದರೆ, ಹೀಗೆ ಮಧ್ಯೆ ನಿಲ್ದಾಣವಾದ ದೇಶದಲ್ಲಿ ಕೆಲವೊಮ್ಮೆ ತಮ್ಮ ಉದ್ದೇಶಿತ ದೇಶಕ್ಕೆ ಹೋಗುವ ವಿಮಾನ ಬರುವವರೆಗೆ ಒಂದೆರಡು ದಿನ ನಿಲ್ಲಬೇಕಾಗಬಹುದು. ಇಂಥ ಸಂದರ್ಭಗಳಲ್ಲಿ ಈ ನಿಲ್ದಾಣ ದೇಶದಿಂದ ಟ್ರಾನ್ಸಿಟ್ ವೀಸಾ ಪಡೆಯಬೇಕು. 

3. ಬಿಸ್ನೆಸ್ ವೀಸಾ

ಉದ್ಯಮದ ಕಾರಣಕ್ಕೆ ಮತ್ತೊಂದು ದೇಶಕ್ಕೆ ಹೋಗುವ ಉದ್ಯಮಿಗಳು ಬಿಸ್ನೆಸ್ ವೀಸಾ ಪಡೆಯಬೇಕಾಗುತ್ತದೆ.

4. ಟೆಂಪರರಿ ವರ್ಕರ್ ವೀಸಾ

ವಿದೇಶದಲ್ಲಿ ತಾತ್ಕಾಲಿಕ ಸಮಯಕ್ಕೆ ಉದ್ಯೋಗಕ್ಕಾಗಿ ತೆರಳುವವರು ಟೆಂಪರರಿ ವರ್ಕರ್ ವೀಸಾಗೆ ಅರ್ಜಿ ಸಲ್ಲಿಸಬೇಕು.

5. ಸ್ಟೂಡೆಂಟ್ ವೀಸಾ

ಹೆಸರೇ ಹೇಳುವಂತೆ ವಿದೇಶದಲ್ಲಿ ಉನ್ನತ ವಿದ್ಯಾಭಾಸ ಗಳಿಸುವ ಉದ್ದೇಶದಿಂದ ಹೋಗುವವರಿಗೆ ಸ್ಟೂಡೆಂಟ್ ವೀಸಾ ನೀಡಲಾಗುತ್ತದೆ. 

click me!