ಇದು ಮಾತಿನ ಮಲ್ಲಿ ಅನುಶ್ರೀ ಆ್ಯಂಕರಿಂಗ್ ಪಾಠ

By Suvarna Web DeskFirst Published Mar 26, 2018, 7:11 PM IST
Highlights

ನಾನ್‌ಸ್ಟಾಪ್ ಮಾತಾಡುವ, ಯಾವಾಗಲೂ ನಗುತ್ತಲೇ ಇರುವ, ಭಯಂಕರ ಎನರ್ಜಿ ಇರುವ ಅನುಶ್ರೀ ಈಗ ಕಿರುತೆರೆಯ ಸೂಪರ್‌ಹಿಟ್ ನಿರೂಪಕಿ. ಲಕ್ಷಾಂತರ ಮಂದಿಯ ಹಾಟ್ ಫೇವರಿಟ್ ಆಗಿರುವ ಅನುಶ್ರೀ ಯಶಸ್ವೀ ಕಾರ್ಯಕ್ರಮ ನಿರೂಪಕಿಯಾಗಲು ಟಿಪ್ಸ್ ಕೊಟ್ಟಿದ್ದಾರೆ. ಓದಿ. 

ನಾನ್‌ಸ್ಟಾಪ್ ಮಾತಾಡುವ, ಯಾವಾಗಲೂ ನಗುತ್ತಲೇ ಇರುವ, ಭಯಂಕರ ಎನರ್ಜಿ ಇರುವ ಅನುಶ್ರೀ ಈಗ ಕಿರುತೆರೆಯ ಸೂಪರ್‌ಹಿಟ್ ನಿರೂಪಕಿ. ಲಕ್ಷಾಂತರ ಮಂದಿಯ ಹಾಟ್ ಫೇವರಿಟ್ ಆಗಿರುವ ಅನುಶ್ರೀ ಯಶಸ್ವೀ ಕಾರ್ಯಕ್ರಮ ನಿರೂಪಕಿಯಾಗಲು ಟಿಪ್ಸ್ ಕೊಟ್ಟಿದ್ದಾರೆ. ಓದಿ. 

- ಪ್ರಿಯಾ ಕೆರ್ವಾಶೆ


ಚೆಂದದ ಹುಡುಗಿಯೊಬ್ಬಳು ಕಣ್ಣೆದುರು ನಿಂತು ಮಾತಾಡ್ತಿದ್ರೆ ಅವಳನ್ನು ನೋಡೋದಾ, ಅವಳ ಮಾತು ಕೇಳೋದಾ ಅನ್ನೋ ಕನ್‌ಫ್ಯೂಶನ್ ಎದುರಿರುವ ಹುಡುಗರಿಗೆ. ನೂರಾರು, ಸಾವಿರಾರು ಆ್ಯಂಕರಿಂಗ್ ಮಾಡಿರೋ ಅನುಶ್ರೀಗೆ ಇದೆಲ್ಲ ಕಾಮನ್. ಛೇಡಿಸೋ ಹುಡುಗರಿಗೆ ಮಾತಿನೇಟು ಕೊಡ್ತಾ, ನಗುವಲ್ಲೇ ಎಲ್ಲವನ್ನೂ ರಿವೀಲ್ ಮಾಡೋ ಈ ಮಾತಿನ ಮಲ್ಲಿ ಹತ್ರ ಆ್ಯಂಕರಿಂಗ್ ಪಾಠ ಹೇಳಿಸ್ಕೊಳ್ಳೋ ಸಮಯ. 

ನಾನು ಯಶಸ್ವಿ ಆ್ಯಂಕರ್ ಅಂದ್ರೆ ಅದೇ ನನ್ ಕೊನೆ! 'ನಾನು ಖಂಡಿತಾ ಯಶಸ್ವಿ ಆ್ಯಂಕರ್ ಅಲ್ಲ, ಕಲಿಯೋದು ಇನ್ನೂ ತುಂಬಾ ಇದೆ. ಹೀಗಿರುವಾಗ ಯಶಸ್ವಿ ಆ್ಯಂಕರ್ ಆಗೋದು ಹೇಗೆ ಅಂತ ನಾ ಹೇಗೆ ಹೇಳಲಿ?' ಎಂದು ಪ್ರಶ್ನೆಗೆ ಪ್ರಶ್ನೆಯಿಂದಲೇ ಉತ್ತರಿಸಿದರು ಅನುಶ್ರೀ. 'ಆ್ಯಂಕರಿಂಗ್‌ನಲ್ಲಿ ಚಾಲೆಂಜಸ್ ಬಹಳ, ಕಲಿಯೋ ಅವಕಾಶವೂ ಹೆಚ್ಚು. ಇವತ್ತು ಟಾಕ್ ಶೋ ಮಾಡಿದ್ರೆ, ನಾಳೆ ಡಾನ್ಸ್ ಪ್ರೋಗ್ರಾಂ, ನಾಡಿದ್ದು ಇನ್ನೇನೋ. ಆ್ಯಂಕರಿಂಗ್ ಮಾಡೋ ಪ್ರತಿಯೊಂದು ವಿಷಯದ ಬಗ್ಗೆಯೂ ನಿರೂಪಕಿಗೆ ತಿಳಿದಿರಬೇಕು. ಹಾಗೆ ಪ್ರತಿಯೊಂದು ಶೋದಲ್ಲೂ ಏನಾದರೂ ಹೊಸ ವಿಷಯ ಕಲಿಯುವುದಕ್ಕೆ ಇರುತ್ತೆ. ಎಲ್ಲಾ  ವಿಚಾರಗಳಿಗೂ ಮನಸ್ಸನ್ನು ಓಪನ್ ಆಗಿಟ್ಟುಕೊಂಡು ಸಾಧ್ಯವಾದಷ್ಟು ಕಲೀತಾ, ತಿಳ್ಕೊಳ್ತಾ ಹೋದ್ರೆ ಬೇಗ ಮುಂದೆ ಹೋಗಬಹುದು. ಸ್ವಲ್ಪ ಜನಪ್ರಿಯತೆಗೇ 'ನಾನು ಯಶಸ್ವಿ ಆ್ಯಂಕರ್' ಅಂದುಕೊಂಡರೆ ಅದೇ ನಿರೂಪಕ/ಕಿಯ ಕೊನೆ. ಆಮೇಲೆ ಮೇಲೇರಲಿಕ್ಕಾಗಲ್ಲ'.

ಆ್ಯಂಕರಿಂಗ್‌ನಲ್ಲಿ ಅನುಶ್ರೀಗಾದ ಮುಜುಗರ 'ಒಮ್ಮೆ ಪಾಂಡವರಪುರದಲ್ಲಿ ಈವೆಂಟ್ ಇತ್ತು. ಅದು ಮಂಡ್ಯದೊಳಗೇ ಇರುವ ಕಾರಣ ಮತ್ತು ನನಗೆ ಹಾಗೇ ಹೇಳ್ಬೇಕು ಅಂತ ಸೂಚನೆಯೂ ಬಂದ ಕಾರಣ, ಆಗಾಗ 'ಮಂಡ್ಯದ ಮಹಾಜನತೆ' ಎನ್ನುತ್ತಿದ್ದೆ. ಜೊತೆಗೆ ಪಾಂಡವಪುರದ ಹೆಸರನ್ನೂ ಸಾಕಷ್ಟು ಬಾರಿ ಹೇಳುತ್ತಿದ್ದೆ. ಆಗ ಒಬ್ಬ ಪ್ರೇಕ್ಷಕ ನೇರವಾಗಿ ಸ್ಟೇಜ್ ಹತ್ರ ಬಂದು, 'ಇದು ಪಾಂಡವಪುರ ಮೇಡಂ, ಮಂಡ್ಯ ಅಲ್ಲ' ಅಂದರು. ಆತ  ಹೇಳಿದ್ದರಲ್ಲಿ ತಪ್ಪಿರಲಿಲ್ಲ. ಆದರೆ ಎಲ್ಲರೆದುರು ಆತ ಹಾಗಂದಾಗ ಸ್ವಲ್ಪ ಮುಜುಗರವಾದದ್ದೂ ಹೌದು. ಇನ್ನೊಮ್ಮೆ ಆ್ಯಂಕರಿಂಗ್ ಕೆರಿಯರ್‌ನ ಆರಂಭದಲ್ಲಿ, 'ಕುದುರೆ ಸವಾರಿ, ಕತ್ತಿ ವರಸೆ' ಎಂದು ಹೇಳ್ಬೇಕಾಗಿತ್ತು, ನಾನು 'ಕುದುರೆ ಸವಾರಿ, ಕತ್ತೆ ಸವಾರಿ' ಅಂದುಬಿಟ್ಟಿದ್ದೆ. ಅದೂ ನಾಗಾಭರಣರಂಥ ಹಿರಿಯ ಕಲಾವಿದರ ಮುಂದೆ. ಅದು ಸಿಕ್ಕಾಪಟ್ಟೆ  ಮುಜುಗರಕ್ಕೊಳಗಾದ ಸನ್ನಿವೇಶ' ಅಂದರು ಅನುಶ್ರೀ.

ಹೊಸ ಆ್ಯಂಕರ್‌ಗಳಿಗೆ ಅನುಶ್ರೀ ಕೊಡೋ ಐದು ಟಿಪ್ಸ್


- ಚಿಕ್ಕ ಈವೆಂಟ್‌ಗಳಿಂದಲೇ ಆ್ಯಂಕರಿಂಗ್ ಕೆರಿಯರ್ ಶುರುವಾಗಲಿ. 'ಬರ್ತ್‌ಡೇ ಪಾರ್ಟಿ, ಚಿಕ್ಕ ಪುಟ್ಟ ಕಾರ್ಯಕ್ರಮಗಳಿಂದಲೇ ನಿಮ್ಮ ಕೆರಿಯರ್‌ನ ಶುರುಮಾಡಿ. ಅಲ್ಲಿ ಕಲಿಯೋದು ಬಹಳ ಇರುತ್ತೆ. ನಂತರ ವಿಸ್ತರಿಸುತ್ತ ಹೋಗಿ. ಏಕ್‌ದಂ ದೊಡ್ಡ ಸ್ಟೇಜ್ ಮೇಲೆ ಕಾಣಿಸಿಕೊಳ್ಳಬೇಕು ಅಂದುಕೊಂಡ್ರೆ ಕಷ್ಟ. 
- ಕನ್ನಡದಲ್ಲಿ ಆ್ಯಂಕರಿಂಗ್‌ಗೆ ಒಳ್ಳೆಯ ಭವಿಷ್ಯ ಇದೆ. ಕಷ್ಟಪಟ್ಟು ಇಷ್ಟಪಟ್ಟು ನಿರೂಪಣೆ ಮಾಡಿದರೆ ಯಶಸ್ವಿಯಾಗೋದು ಕಷ್ಟ ಅಲ್ಲ. ಭಾಷೆ ಶುದ್ಧವಾಗಿರಲಿ, ವಿಷಯದ ಮೇಲೆ ಹಿಡಿತವಿರಲಿ ಕೆಲವರಿಗೆ 'ಶ' 'ಸ', 'ಅ', 'ಹ' ಉಚ್ಛಾರಣೆ ಸಮಸ್ಯೆ ಇರುತ್ತೆ. ಅದನ್ನು ಸರಿಪಡಿಸಿಕೊಳ್ಳಿ. ನೀವು ಯಾವ ಭಾಷೆಯಲ್ಲಿ ಕಾಂಪೆರಿಂಗ್ ಮಾಡುತ್ತೀರೋ ಆ ಭಾಷೆಯ ಮೇಲೆ ಹಿಡಿತವಿರಲಿ. ನೀವು ಮಾತಾಡೋ ವಿಷ್ಯ ಬಗ್ಗೆ ಒಂದಿಷ್ಟು ತಿಳ್ಕೊಳ್ಳಿ. ಇಲ್ಲಾಂದ್ರೆ ಆಭಾಸವಾಗುತ್ತೆ.
- ಡ್ರೆಸ್ ಕಂಫರ್ಟ್ ಆಗಿರಲಿ ಹಾಕಿಕೊಂಡಿರುವ ಡ್ರೆಸ್ ನಿಮಗೆ ಕಂಫರ್ಟ್ ಇಲ್ಲಾಂದ್ರೆ ನಿಮ್ಮ ಗಮನವೆಲ್ಲ ಡ್ರೆಸ್ ಮೇಲೆ ಇರುತ್ತೆ, ಮಾತಿನ ಮೇಲೆ ಇರಲ್ಲ.
- ಯೋಚಿಸಿ ಮಾತನಾಡಿ ನಿಮ್ಮ ಮಾತನ್ನು ಬಹಳ ಮಂದಿ ಕೇಳುತ್ತಿರುತ್ತಾರೆ ಅನ್ನೋದು ತಿಳಿದಿರಲಿ. ಇನ್ನೊಬ್ಬರನ್ನು ನೋಯಿಸುವಂಥ, ಸ್ವಪ್ರತಿಷ್ಠೆಯ ಮಾತು ಬೇಡ, ಗೌರವದ ಮಾತುಗಳನ್ನಾಡಿ. 
- ಬೋರ್ ಹೊಡೆಸಬೇಡಿ, ಹೊಸತನವಿರಲಿ ನಿರೂಪಣೆಯಲ್ಲಿ ಮಾತು ಎಷ್ಟು ಬೇಕೋ ಅಷ್ಟೇ ಇರಬೇಕು, ಹೆಚ್ಚಾದ್ರೆ ಬೋರ್ ಹೊಡೆಸುತ್ತೆ, ನಾನಂತೂ ಜನಕ್ಕೆ ನನ್ ಮಾತು ಬೋರ್ ಆಗ್ತಿದೆ ಅಂತ ಗೊತ್ತಾದ್ ಕೂಡ್ಲೇ ಮಾತು ನಿಲ್ಲಿಸಿಬಿಡ್ತೀನಿ. ಬೇರೆ ಭಾಷೆಗಳ ನಿರೂಪಣೆಯನ್ನೂ ಗಮನಿಸುತ್ತಿರಿ, ಹೊಸತನ ನಿಮ್ಮ ನಿರೂಪಣೆಯಲ್ಲಿರಲಿ. ಆಗ ಜನಕ್ಕೂ ಇಷ್ಟವಾಗುತ್ತೆ. 

click me!