
ತಾಯಿ ಮಗುವಿನ ಬಾಂಧವ್ಯಕ್ಕೆ ಮುಂಚಿನಿಂದಲೂ ಮಹತ್ವವಿದೆ. ಆದರೆ, ಬಹುತೇಕ ಕಡೆ ತಂದೆಯ ಬಾಂಧವ್ಯ ಮಗುವಿನ ಖರ್ಚುವೆಚ್ಚಗಳಿಗೆ ಸೀಮಿತವಾಗಿರುವುದೇ ಹೆಚ್ಚು. ಆದರೆ ಈಗಿನ ತಂದೆಯು ಮಗುವಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಲು ಬಯಸತೊಡಗಿದ್ದಾನೆ. ಮಗುವಿನ ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಇದು ಅಗತ್ಯ ಕೂಡಾ. ಇದಕ್ಕಾಗಿ ತಂದೆಯು ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾನೆ. ಹೀಗೆ ರಜಾ ದಿನಗಳಲ್ಲಿ ಮಗುವಿನೊಂದಿಗೆ ಸಮಯ ಕಳೆಯುವ ತಂದೆಯು ತನ್ನ ಮಕ್ಕಳೊಂದಿಗೆ ಹೆಚ್ಚಿನ ಗಟ್ಟಿಯಾದ ಸಂಬಂಧ ಹೊಂದಿರುತ್ತಾನೆ ಎಂದು ಹೊಸ ಅಧ್ಯಯನವೊಂದು ಸಾಬೀತುಪಡಿಸಿದೆ.
ಮಗುವು ಪೇರೆಂಟ್- ಚೈಲ್ಡ್ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದೇ ಈ ಅಟ್ಯಾಚ್‌ಮೆಂಟ್ ರಿಲೇಶನ್‌ಶಿಪ್‌ನಿಂದ. ಮಗುವಿನ ಕಾಳಜಿಯಲ್ಲಿ, ಅದನ್ನು ಆಟವಾಡಿಸುವುದರಲ್ಲಿ ಸಮಯ ಕಳೆಯುವ ಅಪ್ಪಂದಿರನ್ನು ಮಕ್ಕಳು ಹೆಚ್ಚು ಹಚ್ಚಿಕೊಳ್ಳುತ್ತಾರೆ. ಇದಕ್ಕಾಗಿ ತಂದೆಯು ಕೆಲಸ ಬಿಟ್ಟು ಕೂರಬೇಕಾಗಿಲ್ಲ. ರಜಾ ದಿನಗಳಲ್ಲಿ ಗುಣಮಟ್ಟದ ಸಮಯ ಕಳೆದರೂ ಸಾಕು ಎಂದು ಸಂಶೋಧಕರು ತಿಳಿಸಿದ್ದಾರೆ.
ಮಗು ಬೆಳೆಸೋ ವಿಷ್ಯದಲ್ಲಿ ಅತ್ತೆಯನ್ನು ಹೀಗ್ ಹ್ಯಾಂಡಲ್ ಮಾಡಿ
ಫ್ಯಾಮಿಲಿ ಸೈಕಾಲಜಿ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯಾಗಿದ್ದು, ಕೇರ್‌ಗಿವಿಂಗ್ ಜೊತೆಗೆ ಆಟವಾಡುವಂಥ ಅಪ್ಪಂದಿರು ತಂದೆ-ಮಕ್ಕಳ ಸಂಬಂಧ ಬೆಸೆಯುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಾರೆ ಎನ್ನಲಾಗಿದೆ.
'ಉದ್ಯೋಗಕ್ಕೆ ರಜಾ ಇರುವ ದಿನಗಳಲ್ಲಿ ಮಕ್ಕಳ ಮೆಚ್ಚಿನ ಆಟಗಳಲ್ಲಿ ತೊಡಗುವ, ಮಗುವನ್ನು ನಗಿಸುವ ಅಪ್ಪನೊಂದಿಗೆ ವಯಸ್ಸಾದ ಮೇಲೂ ಮಕ್ಕಳು ಉತ್ತಮ ಸಂಬಂಧ ಕಾಯ್ದುಕೊಳ್ಳಬಯಸುತ್ತಾರೆ,' ಎನ್ನುತ್ತಾರೆ ಜಾರ್ಜಿಯಾ ಯೂನಿವರ್ಸಿಟಿಯ ಪ್ರೊಫೆಸರ್ ಜಿಯೋಫ್ರೇ ಬ್ರೌನ್.
ಈ ಅಧ್ಯಯನಕ್ಕಾಗಿ ಸಂಶೋಧಕರು 80 ತಂದೆ ಮಕ್ಕಳ ಜೋಡಿಯನ್ನು ಆರಿಸಿಕೊಂಡಿದ್ದು, ಅವರೆಲ್ಲರ ಮಕ್ಕಳು ಸುಮಾರು 3 ವರ್ಷದವರಾಗಿದ್ದರು. ಇವರ ನಡುವೆ ಇಂಟರ್‌ವ್ಯೂ ಮಾಡಿ, ಮನೆಯಲ್ಲಿ ತಂದೆ-ಮಗುವಿನ ಒಡನಾಟ, ಈ ಕುರಿತ ವಿಡಿಯೋ ಶೂಟಿಂಗ್ ನಡೆಸಿ, ಅವುಗಳನ್ನು ಅಭ್ಯಾಸ ಮಾಡಲಾಗಿತ್ತು.
ಮಕ್ಕಳೊಂದಿಗೆ ಸಮಯ ಕಳೆದರೆ ಸಂಬಂಧ ಗಟ್ಟಿಯಾಗುವುದಾಗಿಯೂ, ಮಗುವಿನ ಎಲ್ಲ ಕೆಲಸಗಳನ್ನು ಮಾಡುತ್ತಾ, ಅದರೊಂದಿಗೆ ಆಡಿದರೆ ಅಂಥವರು ಅತ್ಯುತ್ತಮ ತಂದೆ-ಮಗ/ಳು ಸಂಬಂಧವನ್ನೂ ಹೊಂದುವುದಾಗಿಯೂ ಸಂಶೋಧಕರು ಕಂಡುಕೊಂಡಿದ್ದಾರೆ.
ಮಕ್ಕಳು ತಮ್ಮ ಕಾಳಜಿ ವಹಿಸುವವರೊಡನೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಇದು ಅವರಲ್ಲಿ ರಕ್ಷಣೆಯ ಭಾವ ನೀಡಿ ಹೆಚ್ಚು ಕಂಫರ್ಟ್ ಆಗಿರಿಸುತ್ತದೆ.
ತಂದೆ-ಮಗುವಿನ ಬಾಂಧವ್ಯ ಬೆಸೆಯೋ ಸಂಗತಿಗಳಿವು;
- ತಾಯಿಯು ಎದೆಹಾಲು ಕುಡಿಸುವಾಗ ಮಗುವಿಗೆ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಅವಕಾಶ ಸಿಗುತ್ತದೆ. ಈ ಅವಕಾಶ ಸಿಗಬೇಕೆಂದರೆ ಬಾಟಲ್ ಫೀಡ್ ಮಾಡುವಾಗ ತಂದೆಯು ಅದೇ ಪೊಸಿಶನ್‌ನಲ್ಲಿ ಮಗುವನ್ನಿಟ್ಟುಕೊಂಡು ಕೂರಿಸಿಕೊಳ್ಳಬೇಕು.
- ಮಗು ಅತ್ತಾಗ ಅದನ್ನು ಕಂಫರ್ಟ್ ಮಾಡಲು ಟ್ರೈ ಮಾಡಿ. ಮಗುವಿಗಾಗಿ ಹಾಡಿ, ಕಪಿಚೇಷ್ಟೆ ಮಾಡಿ, ಒಂದಿಷ್ಟು ಓಡಾಡಿಸಿ. ಇದರಿಂದ ಮಗುವಿಗೆ ತನಗೆ ಕಂಫರ್ಟ್ ನೀಡವು ತಾಯಿ ಮಾತ್ರವಲ್ಲ, ತಂದೆಯೂ ಇರುವುದಾಗಿ ತಿಳಿಯುತ್ತದೆ.
- ಮಗುವಿಗೆ ಫನ್ನಿ ಫೇಸಸ್ ಮಾಡಿ. ಮಗುವನ್ನು ನಗಿಸಲು ಸಾಧ್ಯವಾಗುವ ಎಲ್ಲ ಕಸರತ್ತುಗಳನ್ನೂ ಮಾಡಿ. ಸ್ವಲ್ಪ ದೊಡ್ಡದಾದ ಮೇಲೆ ಕೂಕ್ ಆಟವಾಡಿ. ತಮ್ಮನ್ನು ನಗಿಸುವವರನ್ನು ಯಾರು ತಾನೇ ಇಷ್ಟ ಪಡದೇ ಹೋದಾರು?
- ಮಕ್ಕಳಿಗೆ ಹೊರಗಿನ ಗಾಳಿ ಇಷ್ಟ. ಅವು ಸಣ್ಣವೆಂದು ಮನೆಯೊಳಗೇ ಮಲಗಿಸಿ ಮಲಗಿಸಿ, ಸಾಕಾಗಿ ಹೋಗಿರುತ್ತದೆ. ಹೀಗಾಗಿ, ಮಗುವನ್ನು ವಾಕ್ ಕರೆದುಕೊಂಡು ಹೋಗಿ, ಪಾರ್ಕ್‌ಗೆ ಹೋಗಿಬನ್ನಿ. ಇದರಿಂದ ತಂದೆಯ ಬರುವಿಕೆಗಾಗಿಯೇ ಮಗು ಕಾಯತೊಡಗುತ್ತದೆ.
- ಮಕ್ಕಳು ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತಾರೆ. ಇದನ್ನು ಮಾಡುವ ಸರಳ ವಿಧಾನವೆಂದರೆ ಎಣ್ಣೆ ಮಸಾಜ್ ಮಾಡಿ. ಇದರಿಂದ ಮಕ್ಕಳು ಗಟ್ಟಿಯಾಗುತ್ತವೆ ಜೊತೆಗೆ ನಿಮ್ಮೊಂದಿಗಿನ ಸಂಬಂಧವೂ ಗಟ್ಟಿಯಾಗುತ್ತದೆ.
- ಪ್ರತಿದಿನ ಮಗುವಿನೊಂದಿಗೆ ಆಡಲು ಒಂದು ಸಮಯ ನಿಗದಿ ಮಾಡಿಕೊಳ್ಳಿ. ಸ್ವಲ್ಪ ದಿನಗಳಲ್ಲೇ ಮಗು ಆ ಸಮಯಕ್ಕಾಗಿ ಕಾಯಲಾರಂಭಿಸುತ್ತದೆ.
- ಮಗುವಿಗೆ ಎರಡು ವರ್ಷವಾಗುವ ವೇಳೆಗೆ ಪ್ರತಿದಿನ ಕತೆ ಹೇಳುವುದನ್ನು ಅಭ್ಯಾಸ ಮಾಡಿಸಿ. ಆ ಕತೆಗಳಲ್ಲಿ ನೀವೂ ನಿಮ್ಮ ಮಗುವೂ ಪಾತ್ರವಾಗಿರುವಂತೆ ನೋಡಿಕೊಳ್ಳಿ. ಕತೆ ಹೇಳುವಾಗ ಸ್ವಲ್ಪ ಹೆಚ್ಚಿನ ಮುಖಭಾವ, ನಟನೆ ಇದ್ದಷ್ಟೂ ಮಕ್ಕಳದನ್ನು ಎಂಜಾಯ್ ಮಾಡುತ್ತವೆ. ಹೇಳುವವರನ್ನೂ ಹೆಚ್ಚು ಹಚ್ಚಿಕೊಳ್ಳುತ್ತವೆ.
- ಮಗುವಿನ ಡೈಪರ್ ಚೇಂಜ್ ಮಾಡುವುದು, ಬಟ್ಟೆ ಬದಲಿಸುವುದು, ಊಟ ಮಾಡಿಸುವುದು ಇಂಥ ಕೆಲಸಗಳಲ್ಲಿ ಆಗಾಗ ಭಾಗಿಯಾಗಿ. ಇದು ಮಕ್ಕಳಲ್ಲಿ ತಂದೆಯ ಮೇಲೆ ವಿಶೇಷ ಪ್ರೀತಿ ಬೆಳೆಯಲು ಕಾರಣವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.