
ಮಕ್ಕಳಿಗೆ ಸುಂದರವಾದ ಹೆಸರನ್ನು ಇಡಬೇಕು ಎಂಬುದು ಎಲ್ಲ ಹೆತ್ತವರ, ಪೋಷಕರ ಅಸೆ. ಆದರೆ ಕೆಲವು ಹೆತ್ತವರು ಮಹಾ ಅಧಿಕ ಪ್ರಸಂಗಿಗಳು. ತಮ್ಮ ಮಕ್ಕಳಿಗೆ ಅಸಂಬದ್ಧ ಹೆಸರುಗಳನ್ನಿಡುತ್ತಾರೆ. ಜಗತ್ತಿನಲ್ಲಿ ತಾವು ಖ್ಯಾತರೋ ಕುಖ್ಯಾತರೋ ಆಗಬೇಕು ಎಂಬುದು ಅವರ ಹಂಬಲ. ಮಕ್ಕಳಿಗೆ ಅವರು ಬಯಸುವ ಯಾವುದೇ ಹೆಸರಿಡುವುದು ಹೆತ್ತವರ ಹಕ್ಕು. ಆದರೆ ಕೆಲವು ದೇಶಗಳಲ್ಲಿ, ಕೆಲವು ಹೆಸರುಗಳನ್ನು ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ. ಉದಾಹರಣೆಗೆ, ರಷ್ಯಾದಲ್ಲಿ ಹುಡುಗಿಗೆ ʼವಯಾಗ್ರʼ ಎಂದು ಕರೆಯುವುದು, ಹುಡುಗನಿಗೆ ʼಫೇಸ್‌ಬುಕ್ʼ ಎಂದು ಹೆಸರಿಡುವುದು ಕಾನೂನುಬಾಹಿರ. ಮಕ್ಕಳಿಗೆ ಸಂಖ್ಯೆಗಳು, ಅಸಭ್ಯ ಪದಗಳು, ಶೀರ್ಷಿಕೆಗಳು ಅಥವಾ ಅಬ್ರಿವೇಶನ್ (ಸಂಕ್ಷೇಪಣ) ಗಳನ್ನು ಹೊಂದಿರುವ ಹೆಸರುಗಳನ್ನು ಆ ದೇಶ ನಿಷೇಧಿಸಿದೆ. ಹಾಗೇ ಇನ್ನೂ ಹಲವು ದೇಶಗಳು ಮಾಡಿವೆ. ಎಲ್ಲಿ ಯಾವ ಹೆಸರುಗಳು ಮಕ್ಕಳಿಗೆ ನಿಷೇಧ ಅಂತ ನೋಡೋಣ. ಈ ಹೆಸರುಗಳನ್ನಿಟ್ಟರೆ ನೀವು ಜೈಲಿಗೆ ಹೋಗಬೇಕಾಗುತ್ತದೆ.
1) ಟಾಮ್ (ಮೋನಾಲಿಸಾ, ಮಡೋನಾ, ಷಾರ್ಲೆಟ್...)- ಪೋರ್ಚುಗಲ್‌ನಲ್ಲಿ ಈ ಅಡ್ಡಹೆಸರುಗಳು ಅಥವಾ ಹೆಸರುಗಳ ಸಂಕ್ಷಿಪ್ತ ರೂಪಗಳನ್ನು ನೋಂದಾಯಿಸುವುದನ್ನು ನಿಷೇಧಿಸಲಾಗಿದೆ. ಈ ಪಟ್ಟಿಗೆ ಮೋನಾ ಲಿಸಾ, ಮಡೋನಾ, ರಿಹಾನ್ನಾ, ಜಿಮ್ಮಿ, ಪ್ಯಾಬ್ಲೊ, ಬ್ರಯಾನ್, ಷಾರ್ಲೆಟ್ ಎಲ್ಲವನ್ನೂ ನಿಷೇಧಿಸಲಾಗಿದೆ. ಬೈಬಲ್‌ಗೆ ಸಂಬಂಧಿಸದ ಯಾವುದನ್ನಾದರೂ ನಿಷೇಧಿಸಬಹುದು. ಇಲ್ಲಿ ನಿಷೇಧಿತ ಹೆಸರುಗಳ 82 ಪುಟಗಳ ಡೈರೆಕ್ಟರಿಯೇ ಇದೆ.
2) Brfxxccxxmnpcccclllmmnprxvclmnckssqlbb11116 - ಹೌದು, ಇದೂ ಒಂದು ಹೆಸರು! ಕಾನೂನು ವಿರೋಧಿಸಿ ಒಬ್ಬರು ಸ್ವೀಡಿಷ್ ದಂಪತಿ ತಮ್ಮ ಮಗುವಿಗೆ ಈ ಹೆಸರಿಟ್ಟಿದ್ದಾರೆ! ಆದರೆ ಇದನ್ನು ಆಲ್ಬಿನ್ ಎಂದು ಉಚ್ಚರಿಸಲಾಗುತ್ತದೆ. ಆದರೆ ಆ ದೇಶದಲ್ಲಿ ಇದನ್ನು ನಿಷೇಧಿಸಲಾಗಿದೆ. ನೀವು ನಿಮ್ಮ ಮಗುವಿಗೆ ಅಲ್ಲಿ ಎಲ್ವಿಸ್, ಮೆಟಾಲಿಕಾ ಎಂದು ಹೆಸರಿಸಲು ಸಾಧ್ಯವಿಲ್ಲ. ಆದರೆ ʼಗೂಗಲ್ʼ ಎಂಬ ಹೆಸರಡಬಹುದಂತೆ!
3) ಸೆಕ್ಸ್ ಫ್ರೂಟ್ - ಹೌದು. ನ್ಯೂಜಿಲ್ಯಾಂಡ್‌ನಲ್ಲಿ ಯಾರೋ ತಮ್ಮ ಮಗುವಿಗೆ ಈ ಹೆಸರಿಡಲು ಪ್ರಯತ್ನಿಸಿದರು! ನ್ಯೂಜಿಲೆಂಡ್ ಸರ್ಕಾರ ಈ ಹೆಸರನ್ನು ನಿಷೇಧಿಸಿತು. ಆ ಮಗುವಿಗೆ ಜೀವಮಾನವಿಡೀ ಅವಮಾನಕ್ಕೆ ತುತ್ತಾಗುವುದು ತಪ್ಪಿತು. ಲೂಸಿಫರ್ - ಇದು ಸೈತಾನನ ಇನ್ನೊಂದು ಹೆಸರು, ಆದ್ದರಿಂದ ನ್ಯೂಜಿಲೆಂಡ್‌ನಲ್ಲಿ ಇದನ್ನು ನಿಷೇಧಿಸಲಾಗಿದೆ. ಮತ್ತು ಮಗುವಿಗೆ ಕ್ರಿಸ್ತನೆಂದು ಕೂಡ ಹೆಸರಿಸಲು ಸಾಧ್ಯವಿಲ್ಲ.
4) ಸುನ್ನತಿ - ಮೆಕ್ಸಿಕೋದಲ್ಲಿ ದಂಪತಿಗಳು ತಮ್ಮ ಮಗುವಿಗೆ ಈ ಹೆಸರಿಡಲು ಬಯಸಿದ್ದರು. ಜನನಾಂಗದ ಮುಂದೊಗಲನ್ನು ಕತ್ತರಿಸುವ ಈ ಸಂಪ್ರದಾಯದ ಹೆಸರನ್ನು ಮಗುವಿಗೆ ಇಡಬಯಸಿದ್ದರು. ಪೋಷಕರ ಮನಸ್ಥಿತಿ ಬಗ್ಗೆ ಆಶ್ಚರ್ಯವಾಗುವುದಿಲ್ಲವೇ? ನಂತರ ಇದನ್ನು ಮೆಕ್ಸಿಕೋದಲ್ಲಿ ನಿಷೇಧಿಸಲಾಗಿದೆ. ಫೇಸ್‌ಬುಕ್ ಎಂಬ ಹೆಸರನ್ನು ಮೆಕ್ಸಿಕೋದಲ್ಲಿ ನಿಷೇಧಿಸಲಾಗಿದೆ.
5) ವೆನೆರ್ಡಿ -- ಸ್ವೀಡನ್ ಅಥವಾ ಪೋರ್ಚುಗಲ್‌ನಂತೆ ಇಟಲಿಯು ಹೆಸರಿಡುವ ಕಾನೂನುಗಳಲ್ಲಿ ಹೆಚ್ಚು ಕಟ್ಟುನಿಟ್ಟಾಗಿಲ್ಲ. ಆದರೆ ಪೋಷಕರು ತಮ್ಮ ಮಗುವಿಗೆ ಶುಕ್ರವಾರ ಎಂಬ ಅರ್ಥದಲ್ಲಿ ವೆನೆರ್ಡಿ ಎಂದು ಹೆಸರಿಸಲು ನಿರ್ಧರಿಸಿದಾಗ, ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಅದನ್ನು ನಿಲ್ಲಿಸಿದವು.
6) ಫ್ರೇಸ್ - ಇದರ ಅರ್ಥ ಫ್ರೆಂಚ್‌ನಲ್ಲಿ ಸ್ಟ್ರಾಬೆರಿ. ಆದರೆ ಆ ದೇಶದಲ್ಲಿ ಆ ಹೆಸರನ್ನು ಮಗುವಿಗೆ ನಿಷೇಧಿಸಲಾಗಿದೆ. ನುಟೆಲ್ಲಾ ಕೂಡ ಹಾಗೆಯೇ. ನಿಮ್ಮ ಮಗುವಿಗೆ ನಿಮ್ಮ ನೆಚ್ಚಿನ ಆಹಾರದ ಹೆಸರನ್ನು ಇಡಬೇಡಿ!
7) ಅಡಾಲ್ಫ್ ಹಿಟ್ಲರ್ - ನಾಜಿ ಸರ್ವಾಧಿಕಾರಿಯ ಈ ಹೆಸರನ್ನು ಜರ್ಮನಿಯಲ್ಲಿ ಮಾತ್ರವಲ್ಲದೆ ಮಲೇಷ್ಯಾ, ಆಸ್ಟ್ರೇಲಿಯಾ, ಮೆಕ್ಸಿಕೊ ಮುಂತಾದ ಹಲವು ದೇಶಗಳಲ್ಲಿಯೂ ನಿಷೇಧಿಸಲಾಗಿದೆ.
8) @ - ಒಬ್ಬರು ಚೀನೀ ದಂಪತಿ ತಮ್ಮ ಮಗುವಿಗೆ ವಾಂಗ್ @ ಎಂದು ಹೆಸರಿಸಲು ಬಯಸಿದ್ದರು. ಚೀನಾದಲ್ಲಿ ಶಿಶುಗಳ ಹೆಸರುಗಳಲ್ಲಿ ಚಿಹ್ನೆಗಳು ಮತ್ತು ಸಂಖ್ಯೆಗಳನ್ನು ಸೇರಿಸಲು ಅವಕಾಶವಿಲ್ಲ. 'at' ಅನ್ನು ಚೀನೀ ಭಾಷೆಯಲ್ಲಿ "ಐ-ಟ" ಎಂದು ಉಚ್ಚರಿಸಲಾಗುತ್ತದೆ, ಇದು "ಅವನನ್ನು ಪ್ರೀತಿಸುತ್ತೇನೆ" ಎಂಬಂತೆ ಧ್ವನಿಸುತ್ತದೆ ಎಂದು ವಾದಿಸಿದರೂ ನ್ಯಾಯಾಲಯವು ಅದನ್ನು ಅನುಮತಿಸಲಿಲ್ಲ.
9) ವೋಟಿ - ಇದು ಮಲೇಷ್ಯಾದಲ್ಲಿ ನಿಷೇಧಿತ ಹೆಸರು. ಇದರ ಅರ್ಥವೇನೆಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅದು ಲೈಂಗಿಕ ಕ್ರಿಯೆ ಅಷ್ಟೇ, ಬೇರೇನಲ್ಲ. ಮಲೇಷಿಯಾದ ಪೋಷಕರಿಗೆ ಚೌ ಟೌ (ನಾರುವ ತಲೆ), ಸೋರ್ ಚಾಯ್ (ಹುಚ್ಚು) ಅಥವಾ ಹೊಕ್ಕಿಯನ್ ಚೈನೀಸ್ ಅಹ್ ಚ್ವಾರ್ (ಹಾವು) ನಂತಹ ವಿಲಕ್ಷಣ ಹೆಸರುಗಳ ಬಗ್ಗೆ ಒಲವು ಇದೆ.
10) ಅಕುಮಾ - ಜಪಾನ್‌ನಲ್ಲಿ "ದೆವ್ವ" ಎಂಬ ಅರ್ಥವನ್ನು ನೀಡುವುದರಿಂದ ಇದನ್ನು ನಿಷೇಧಿಸಲಾಗಿದೆ. ಕೆಲವೊಮ್ಮೆ ಮಕ್ಕಳಲ್ಲಿ ಸಿಕ್ಕಾಪಟ್ಟೆ ತುಂಟತನ ಇದ್ದರೆ ಅವರನ್ನು ಸಣ್ಣ ದೆವ್ವಗಳೆಂದು ಚೇಷ್ಟೆ ಮಾಡುವುದಿದೆ. ಆದರೆ ಮಗುವಿಗೆ ಜೀವನಕ್ಕಾಗಿ ಆ ಹೆಸರಿಡಬೇಕಿಲ್ಲ!
11) ವಯಾಗ್ರ - ದೀರ್ಘಕಾಲದವರೆಗೆ ಮಗುವನ್ನು ಹೊಂದಲು ಪ್ರಯತ್ನಿಸಿದ್ದ ರಷ್ಯಾದ ದಂಪತಿಗಳು ಅಂತಿಮವಾಗಿ ತಮ್ಮ ಮಗುವಿಗೆ ಈ ಪ್ರಸಿದ್ಧ ಔಷಧದ ಹೆಸರಿಡಲು ನಿರ್ಧರಿಸಿದರು. ಆದರೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಅದನ್ನು ನೋಂದಾಯಿಸುವುದನ್ನು ನಿಲ್ಲಿಸಿದರು.
12) . (ಪೂರ್ಣ ವಿರಾಮ) - ಹೌದು, 2013ರಲ್ಲಿ ನ್ಯೂಜಿಲೆಂಡ್ ಇದನ್ನು ನಿಷೇಧಿತ ಹೆಸರುಗಳ ಪಟ್ಟಿಯಲ್ಲಿ ಸೇರಿಸಬೇಕಾಯಿತು. ನಿಮ್ಮ ಮಗುವಿಗೆ ಸುಂದರವಾದ ಹೆಸರನ್ನು ಕಂಡುಹಿಡಿಯುವುದು ಇಷ್ಟೊಂದು ಕಷ್ಟವೇ? ಅಥವಾ ಮಗು ಮಾಡುವುದಕ್ಕೇ ಪೂರ್ಣವಿರಾಮ ನೀಡಲು ಇವರು ಬಯಸಿದ್ದರೋ!
13) Anus (ಗುದದ್ವಾರ) - ಇದು ಡೆನ್ಮಾರ್ಕ್‌ನಲ್ಲಿ ನಿಷೇಧಿಸಲಾದ ಹೆಸರು. ಹೆಸರುಗಳನ್ನು ಆಯ್ಕೆ ಮಾಡಲು ಪೋಷಕರು ಇಲ್ಲಿ ಸರ್ಕಾರದಿಂದ ಅನುಮತಿ ಪಡೆಯಬೇಕು. 7,000ಕ್ಕೂ ಹೆಚ್ಚು ಹೆಸರುಗಳ ಪಟ್ಟಿಯಿಂದ, ದಂಪತಿಗಳು ತಮ್ಮ ನವಜಾತ ಶಿಶುವಿಗೆ ಏನು ಹೆಸರಿಸಬೇಕೆಂದು ನಿರ್ಧರಿಸಬಹುದು. ಮಂಕಿ ಮತ್ತು ಪ್ಲುಟೊ ಕೂಡ ಇಲ್ಲಿ ಸ್ವೀಕಾರಾರ್ಹವಲ್ಲ.
14) ಮಲಿಕಾ ಅಥವಾ ಅಮೀರ್ - ಸೌದಿ ಅರೇಬಿಯಾದಲ್ಲಿ ರಾಣಿ ಮತ್ತು ರಾಜಕುಮಾರ ಎಂಬ ಅರ್ಥವಿರುವ ಎರಡೂ ಹೆಸರುಗಳನ್ನು ಇತರ ಮಕ್ಕಳಿಗೆ ಇಡುವುದನ್ನು ನಿಷೇಧಿಸಲಾಗಿದೆ. ಜೊತೆಗೆ ರಾಜಮನೆತನದ ಅಥವಾ ತುಂಬಾ ಪಾಶ್ಚಿಮಾತ್ಯೀಕರಿಸಿದ ಹಲವಾರು ಹೆಸರುಗಳನ್ನು ನಿಷೇಧಿಸಲಾಗಿದೆ. ಇಸ್ಲಾಂ ಹೊರತುಪಡಿಸಿ ಇತರ ಧರ್ಮಗಳೊಂದಿಗೆ ಸಂಬಂಧಿಸಿದ ಹೆಸರುಗಳನ್ನು ಸಹ ನಿಷೇಧಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.