ವರ್ಷದ ಕೆಲವು ತಿಂಗಳು ಮಾತ್ರ ಕಾಣಿಸಿ ಮರೆಯಾಗುವ ‘ನಾಗ ದೇವತೆಯ ಕಣ್ಣು’; ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ ಅರಣ್ಯ ಇಲಾಖೆ

Published : Aug 21, 2026, 04:06 PM IST
Demon Eye Thailand

ಸಾರಾಂಶ

Demon Eye Thailand: ಪ್ರಕೃತಿಯ ಅದ್ಭುತಗಳಲ್ಲಿ ಇದೊಂದು ಅತ್ಯಂತ ವಿಚಿತ್ರ ಮತ್ತು ಭಯಾನಕ ವಿಸ್ಮಯ! ಥೈಲ್ಯಾಂಡ್‌ನ ಬೆಟ್ಟವೊಂದರಲ್ಲಿ ಬೃಹತ್ ‘ದೈತ್ಯ ಕಣ್ಣು’ ಪ್ರತ್ಯಕ್ಷವಾಗಿದ್ದು, ಇಡೀ ಜಗತ್ತು ಬೆರಗಿನಿಂದ ನೋಡುತ್ತಿದೆ. ಮನುಷ್ಯನ ಕಣ್ಣನ್ನೇ ಹೋಲುವ ಈ ಆಕೃತಿಯ ಹಿಂದಿರುವ ರಹಸ್ಯವೇನು? ಇದು ದೈವಿಕ ಪವಾಡವೇ ಅಥವಾ ವಿಜ್ಞಾನದ ಕೈಚಳಕವೇ? ಇಲ್ಲಿದೆ ಮಾಹಿತಿ.

ಪ್ರಕೃತಿಯ ವಿಸ್ಮಯಗಳ ಪಟ್ಟಿಗೆ ಈಗ ಥೈಲ್ಯಾಂಡ್‌ನ ಈ 'ದೈತ್ಯ ಕಣ್ಣು' ಅಥವಾ ‘ನಾಗ ದೇವತೆಯ ಕಣ್ಣು’ ಹೊಸ ಸೇರ್ಪಡೆಯಾಗಿದೆ. ಮನುಷ್ಯನ ಕಣ್ಣನ್ನೇ ಹೋಲುವ ಈ ವಿಚಿತ್ರ ಆಕೃತಿ ಈಗ ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿದೆ. ಥೈಲ್ಯಾಂಡ್‌ನ ‘ಬುಯೆಂಗ್ ಕಾನ್’ ಗಡಿಯಲ್ಲಿರುವ ಫು ಲಂಗ್ಕಾ ನ್ಯಾಶನಲ್ ಪಾರ್ಕ್‌ನ ವ್ಯಾಪ್ತಿಯಲ್ಲಿರುವ ‘ನಾಕಾ ಕೇವ್’ (ನಾಕಾ ಗುಹೆ) ಎಂಬ ರಹಸ್ಯ ತಾಣದಲ್ಲಿ ಈ ಅದ್ಭುತ ದೃಶ್ಯ ಗೋಚರಿಸಿದೆ.

ಏನಿದು ‘ದೈತ್ಯ ಕಣ್ಣು’ ಅಥವಾ ‘ನಾಗ ದೇವತೆಯ ಕಣ್ಣು’?

ಥೈಲ್ಯಾಂಡ್‌ನ ಈ ಗುಹೆಯ ಪ್ರದೇಶವು ಕೇವಲ ಬೆಟ್ಟಗುಡ್ಡಗಳು ಇರುವ ಜಾಗವಲ್ಲ, ಇದು ಅನೇಕ ಪುರಾಣ ಗಾಥೆಗಳು ಮತ್ತು ರಹಸ್ಯ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಜಾಗ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಇಲ್ಲಿನ ಬೃಹತ್ ಬಂಡೆಯ ಮೇಲೆ ಮನುಷ್ಯನ ಕಣ್ಣನ್ನೇ ಹೋಲುವ ಆಕೃತಿಯೊಂದು ಪ್ರತ್ಯಕ್ಷವಾಗುತ್ತದೆ. ಇದನ್ನು ನೋಡಲು ಭಯಾನಕವಾಗಿದ್ದರೂ, ಪ್ರವಾಸಿಗರಲ್ಲಿ ಮಾತ್ರ ಅತೀವ ಕುತೂಹಲ ಮೂಡಿಸಿದೆ. ಸ್ಥಳೀಯರು ಇದನ್ನು ಭಕ್ತಿಯಿಂದ ‘ನಾಗ ಐ’ ಅಥವಾ ‘ನಾಗ ದೇವತೆಯ ಕಣ್ಣು’ ಎಂದು ಕರೆಯುತ್ತಿದ್ದಾರೆ. ಇದನ್ನು ನೇರವಾಗಿ ನೋಡಿದ ಪ್ರವಾಸಿಗರು "ನಮ್ಮ ಕಣ್ಣುಗಳನ್ನೇ ನಮಗೆ ನಂಬಲಾಗುತ್ತಿಲ್ಲ, ಮೈ ಜುಂ ಎನ್ನುವಂತಹ ಅನುಭವವಾಗುತ್ತಿದೆ" ಎಂದು ವಿವರಿಸಿದ್ದಾರೆ.

ಬೆಳಕು ಮತ್ತು ನೀರಿನ ನಡುವೆ ಅಡಗಿರುವ ರಹಸ್ಯ

ಇದರ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದರೆ, ಶತಮಾನಗಳ ಕಾಲ ನಡೆದ ಕಲ್ಲಿನ ಸವೆತದಿಂದಾಗಿ ಬಂಡೆಯ ಮೇಲೆ ಸುಮಾರು 1.5 ರಿಂದ 2 ಮೀಟರ್ ಆಳದ ನೈಸರ್ಗಿಕ ಗುಂಡಿಯೊಂದು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಗುಂಡಿಯಲ್ಲಿ ನೀರು ತುಂಬಿಕೊಂಡಾಗ ವಿಸ್ಮಯಕಾರಿ ಬದಲಾವಣೆ ಕಾಣಿಸಿಕೊಳ್ಳುತ್ತದೆ.

ಕಣ್ಣಿನ ಆಕಾರ ಮೂಡುವುದು ಹೇಗೆ?

ಪ್ರತಿ ವರ್ಷ ಮೇ ತಿಂಗಳಿನಿಂದ ಅಕ್ಟೋಬರ್ ವರೆಗೆ ಸೂರ್ಯನ ಕಿರಣಗಳು ಒಂದು ನಿರ್ದಿಷ್ಟ ಕೋನದಲ್ಲಿ ಈ ಗುಂಡಿಯಲ್ಲಿರುವ ನೀರಿನ ಮೇಲೆ ಬಿದ್ದಾಗ, ಬೆಳಕಿನ ಪ್ರತಿಫಲನ ಉಂಟಾಗುತ್ತದೆ. ಈ ಬೆಳಕು ಬೃಹತ್ ಪರ್ವತದ ನಡುವೆ ದೊಡ್ಡದಾದ ಕಣ್ಣೊಂದು ತೆರೆದುಕೊಂಡಂತೆ ಭಾಸವಾಗುವಂತೆ ಮಾಡುತ್ತದೆ. ಅಕ್ಟೋಬರ್ ತಿಂಗಳು ಕಳೆದ ನಂತರ ನೀರಿನ ಮಟ್ಟ ಕಡಿಮೆಯಾಗುವುದರಿಂದ ಮತ್ತು ಮರಗಳ ಒಣ ಎಲೆಗಳು ಗುಂಡಿಯಲ್ಲಿ ಬೀಳುವುದರಿಂದ ಈ ಕಣ್ಣಿನ ಆಕೃತಿ ಮೆಲ್ಲಗೆ ಮರೆಯಾಗುತ್ತದೆ.

ವರ್ಷದ ಕೆಲವು ತಿಂಗಳು ಮಾತ್ರ ಕಾಣಿಸಿಕೊಳ್ಳುವ ಈ ಪ್ರಕೃತಿಯ ಮಾಯಾಜಾಲವನ್ನು ನೋಡಲು ಪ್ರವಾಸಿಗರು ‘ನಾಕಾ ಕೇವ್ ಟ್ರಯಲ್’ ಮೂಲಕ ಸಾಲುಗಟ್ಟುತ್ತಿದ್ದಾರೆ. ಈ ಅಪರೂಪದ ನೈಸರ್ಗಿಕ ಆಕೃತಿಯನ್ನು ಯಾರೂ ಮುಟ್ಟಬಾರದು ಮತ್ತು ಯಾವುದೇ ರೀತಿಯ ಹಾನಿ ಮಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ 'ದೈತ್ಯ ಕಣ್ಣಿನ' ವಿಡಿಯೋಗಳು ವೈರಲ್ ಆಗುತ್ತಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ? ENT ವೈದ್ಯರು ಬಿಚ್ಚಿಟ್ರು ಅಸಲಿ ಕಾರಣ
ಗಂಡನಿಗೆ ಬ್ರೈನ್ ಸ್ಟ್ರೋಕ್, ಇಬ್ಬರು ಮಕ್ಕಳೊಂದಿಗೆ ಆಟೋ ಓಡಿಸುವ ಧೀರ ಮಹಿಳೆ: ಬೆಂಗಳೂರಿನ ಚಾಲಕಿ ಪ್ರಿಯಾ ಕಥೆ ವೈರಲ್!