
ಭಾಗ್ಯಶಂಕರ್, ಸಿಡ್ನಿ, ಆಸ್ಟ್ರೇಲಿಯ
ನಮ್ಮ ಪಕ್ಕದ ಮನೆಯ ಹಿತ್ತಲಿನಲ್ಲಿ ಒಂದು ಮಾವಿನ ಮರವಿದೆ. ಇದಕ್ಕೆ ಸುಮಾರು ಹತ್ತು ವರ್ಷಗಳಾಗಿರಬಹುದು.
ಇದು ನಮ್ಮ ಪಕ್ಕದ ಮನೆಯ ಹಿಂದಿನ ಆವರಣದೊಳಗಿದ್ದು ನಮ್ಮ ಮನೆಗೆ ಆತುಕೊಂಡು ನಮ್ಮಿಬ್ಬರ ಮನೆಗಳ ನಡುವೆ ಒಂದು ಸಣ್ಣ ಗೋಡೆಯಿದೆ. ಮಾವಿನ ಮರಕ್ಕೇನು ಗೋಡೆಯ ಗೊಡವೆ, ಅದು ಸೊಂಪಾಗಿ ನಮ್ಮ ಮನೆಯ ಕಡೆಗೂ ಹರಡಿದೆ. ಹಾಗಾಗಿ ಪೂಜೆಗೆ, ತೋರಣಕ್ಕೆ ಬೇಕಾದಾಗ ನಾನು ಮಾವಿನ ಎಲೆಗಳನ್ನು ಕಿತ್ತುಕೊಳ್ಳಲು ನಮ್ಮ ಪಕ್ಕದ ಮನೆಯವರ ಸಮ್ಮತಿಯಿದೆ.
ನಮ್ಮ ಪಕ್ಕದ ಮನೆಯವರು ಸ್ನೇಹಪರರು ಮತ್ತು ಬಹಳ ವಿಶ್ವಾಸ ಉಳ್ಳವರು. ಅವರ ಮನೆಯ ಮುಂಭಾಗ ಮತ್ತು ಹಿತ್ತಲಿನಲ್ಲಿ ಬೆಳೆಯುವ ಮೆಣಸಿನಕಾಯಿ, ಗುಲಾಬಿ, ಸೀಬೆಕಾಯಿ, ಸೀತಾಫಲ ಮತ್ತು ತರಕಾರಿ ಇವುಗಳನ್ನು ನಮಗೆ ಆಗಾಗ್ಗೆ ಕೊಡುತ್ತಾರೆ. ನೀವೆ ಯಾವಾಗಬೇಕೋ ಆಗ ಬಂದು ಕಿತ್ತುಕೊಳ್ಳಿ ಸಂಕೋಚ ಬೇಡ ಎನ್ನುತ್ತಾರೆ. ಅವರ ಅನುಮತಿ ಇರುವುದರಿಂದ ನಾನೇ ಹೋಗಿ ಬಿಳಿ ಸೀಬೆಕಾಯಿ, ಹಬ್ಬದ ಸಮಯದಲ್ಲಿ ತೋರಣಕ್ಕೆ ಮಾವಿನ ಎಲೆ ಮತ್ತು ಪೂಜೆಗೆ ಗುಲಾಬಿ ಹೂವುಗಳನ್ನು ಕಿತ್ತು ತರುತ್ತೇನೆ.
ನಾವಿರುವ ಆಸ್ಟ್ರೇಲಿಯಾದಲ್ಲಿ ಈ ರೀತಿ ಒಬ್ಬರ ಮನೆಗೆ ಸೇರಿದ ಹೂವು ಹಣ್ಣುಗಳನ್ನು ಇಷ್ಟು ಸಲೀಸಾಗಿ ಅಕ್ಕಪಕ್ಕದ ಮನೆಯವರು ಹೋಗಿ ಕಿತ್ತು ತಂದು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ಒಂದು ರೀತಿ ಮುಜುಗರವಿರುತ್ತದೆ ಮತ್ತು ಅನುಮತಿಯಿಲ್ಲದೆ ಬೇರೆಯವರ ಪರಿಧಿಯಲ್ಲಿ ಕಾಲಿಡುವುದು ನಿಷಿದ್ಧ. ಆದರೆ,ನಮ್ಮ ಮತ್ತು ನಮ್ಮ ಪಕ್ಕದ ಮನೆಯ ಹಿರಿಯ ದಂಪತಿಗಳ ಸಂಬಂಧ ಆತ್ಮೀಯವಾದದ್ದು. ಆಸ್ಟ್ರೇಲಿಯ ದೇಶದ ಕೆಲವು ನಿಯಮಾವಳಿಗಳು ಹೊರದೇಶದಲ್ಲಿರುವವರಿಗೆ ಸೋಜಿಗವೆನಿಸಬಹುದು.
ಅದೇನೆಂದರೆ, ಒಂದು ಗಿಡ ಅಥವಾ ಮರ ಪಕ್ಕದ ಮನೆಯ ಆವರಣದಲ್ಲಿದ್ದರೂ, ನಮ್ಮ ಮನೆ ಕಡೆಗೆ ಚಾಚಿಕೊಂಡಿರುವ ಆ ಗಿಡಮರಗಳಲ್ಲಿ ಬೆಳೆಯುವ ಫಲವನ್ನು ನಾವು ಪಡೆದುಕೊಳ್ಳಬಹುದು. ಈ ಸ್ವಾತಂತ್ರ್ಯವನ್ನು ಸ್ಥಳೀಯ ಕಾನೂನು ನಮಗೆ ಒದಗಿಸಿದೆ. ಬಹುಶಃ ಮರವು ಮಾತನಾಡುವಂತಿದ್ದರೆ ಅದೂ ಈ ವಿಚಾರವನ್ನು ಅನುಮೋದಿಸುತ್ತಿತ್ತೋ ಏನೋ. ಇದು ತಾಯಿಯ ಅನನ್ಯ ಅಮಿತ ಪ್ರೀತಿಯಂತೆ!
ನನಗೂ ಮತ್ತು ಈ ಮಾವಿನಗಿಡಕ್ಕೂ ಒಂದು ರೀತಿ ಆಪ್ತ ಗೆಳೆತನವಿದೆ. ನನ್ನ ಸ್ಟಡಿ ಕೋಣೆಯಿಂದ ಕಾಣುವ ಈ ಮಾವಿನ ಮರ ನನ್ನ ಗಮನವನ್ನು ಸೆಳೆಯುತ್ತಲೇ ಇರುತ್ತದೆ. ಗಾಳಿಗೆ ತೂಗಾಡುವ ಕೊಂಬೆಗಳು ನನ್ನನ್ನು ಕೈಬೀಸಿ ಕರೆದ ಹಾಗೆ ಕಾಣುತ್ತದೆ. ಮಾವಿನ ಮರದ ಬೆಳವಣಿಗೆಯನ್ನು ನಾನು ಈ ಹತ್ತಾರು ವರ್ಷಗಳಲ್ಲಿ ಹತ್ತಿರದಿಂದ ಕಂಡಿದ್ದೇನೆ. ವಸಂತದಲ್ಲಿ ಅದು ಹೂವು, ಹಣ್ಣು ತೊಟ್ಟು ಮೆರೆದಿದ್ದನ್ನು, ಶರದ್ ಋತುವಿನಲ್ಲಿ ಆಲಸ್ಯದಿಂದ ಮುದುರಿ ಮಲಗಿಕೊಂಡಿದ್ದನ್ನು ಹೀಗೆ ಅದರ ಹತ್ತಾರು ಭಾವನೆಗಳನ್ನು ಗಮನಿಸಿದ್ದೇನೆ.
ನಾನು ಕಳೆದ ಬಾರಿ ನನ್ನ ತಾಯ್ನಾಡಿಗೆ ಹೊರಟು ನಿಂತಾಗ ಈ ಮಾವಿನಮರದ ತುಂಬೆಲ್ಲ ಹಣ್ಣುಗಳಿದ್ದವು, ಆದರೆ ನಾನು ವಾಪಸ್ಸು ಬರುವ ವೇಳೆಗೆ ಅವು ಖಾಲಿಯಾದಂತೆ ಕಂಡಿತು. ನನಗೆ ಸ್ವಲ್ಪ ನಿರಾಸೆಯಾಯಿತು. ಮಾವಿನ ಮರ ಹ್ಯಾಪುಮೋರೆ ಹಾಕಿಕೊಂಡು ಕ್ಷಮಾಪಣೆ ಕೇಳಿದಂತೆ ನನಗೆ ಭಾಸವಾಯಿತು. ಒಮ್ಮೆ ಹತ್ತಿರ ಹೋಗಿ ನೋಡಿದಾಗ ನನ್ನ ಕಣ್ಣಿಗೆ ಬಿದ್ದದ್ದು ಕೆಂಪು ಮತ್ತು ಹಳದಿ ಮಿಶ್ರಿತವಾದ ಮಾಗಿರುವ ಒಂದು ಮಾವಿನ ಹಣ್ಣು. ಅದು ಗಿಡದ ತುದಿಯಲ್ಲಿ ದಟ್ಟವಾಗಿರುವ ಹಸಿರು ಎಲೆಗಳ ಮಧ್ಯದಲ್ಲಿ ಸುಂದರವಾಗಿ ನೇತಾಡುತ್ತಿತ್ತು. ನಾನು ಯಾರಿಗೂ ಕಾಣಿಸುತ್ತಿಲ್ಲ, ಅಷ್ಟು ಸುಲಭವಾಗಿ ನಾನು ಯಾರಿಗೂ ಸಿಗುವುದಿಲ್ಲ ಅನ್ನುವ ಭಾವನೆ ತೋರಿಸುವಂತಿತ್ತು.
ನಮ್ಮ ಪಕ್ಕದ ಮನೆಯ ಹಿರಿಯರಿಗೆ ತಮ್ಮ ತೋಟದ ಬಗ್ಗೆ ಬಹಳ ಆಸಕ್ತಿ. ಅವರು ಎಲ್ಲ ಗಿಡ ಮರಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಇವರಿಂದ ಮತ್ತು ಈ ಮರಕ್ಕೆ ಲಗ್ಗೆ ಇಡುವ ಅದರಲ್ಲೂ ಬಕಪಕ್ಷಿಗಳಂತೆ ಎಲ್ಲ ಹಣ್ಣುಗಳಿಗೆ ದಾಳಿ ಮಾಡುವ ಲಾರಿಕೀಟ್ಸ್, ಮ್ಯಾಗ್ ಪೈ, ಕಾಕಟೂ ಎಂಬ ಹಕ್ಕಿಗಳಿಂದ ಈ ಹಣ್ಣು ಹೇಗೆ ತಪ್ಪಿಸಿಕೊಂಡಿತು ಎಂದು ಆಶ್ಚರ್ಯವಾಯಿತು. ನಾನು ಮುಂದಿನ ಕೆಲವು ದಿನಗಳಲ್ಲಿ ಪ್ರತಿನಿತ್ಯ ಮರದ ಬುಡದಲ್ಲಿ ನಿಂತು ಅದನ್ನು ಆಸೆಯಿಂದ ನೋಡಿ ಕೊಂಚ ತಾಳ್ಮೆಯಿಂದ ಇನ್ನೂ ಹಣ್ಣಾಗಲಿ ಎಂದು ಕಾಯುತ್ತಿದ್ದೆ. ಅದನ್ನು ಕೀಳುವ ಮನಸ್ಸಾದರೂ ಅದು ಪಕ್ಕದ ಮನೆಯ ಗಿಡವಲ್ಲವೇ ಎಂಬ ನೈತಿಕ ಪ್ರಜ್ಞೆ ನನ್ನನ್ನು ಎಚ್ಚರಿಸುತ್ತಿತ್ತು. ಕೆಲವೊಮ್ಮೆ ಕೈಗೆ ಸಿಗದಿರುವುದನ್ನು ನನಗೆ ಬೇಕೇ ಬೇಕೆಂದು ಆಸೆಯಿಂದ ನೋಡುವ ಮಕ್ಕಳಂತ್ತಿತ್ತು ನನ್ನ ವರ್ತನೆ. ಇದನ್ನೆಲ್ಲಾ ನೋಡುತ್ತಿದ್ದ ನನ್ನ ಮಗಳು ‘ಅಮ್ಮ ನಿನಗೆ ಮಾವಿನ ಹಣ್ಣಿನ ಮೇಲೆ ಇಷ್ಟೊಂದು ಆಸೆ ಇದೆಯಲ್ಲ, ನೀನ್ಯಾಕೆ ಅದನ್ನ ಕಿತ್ತುಕೊಳ್ಳಬಾರದು’ ಎಂದಳು. ‘ಅದು ನಮ್ಮ ಗಿಡವಲ್ಲ, ಇರುವುದೇ ಸ್ವಲ್ಪ, ಮರದ ಮಾಲಿಕರೇ ಅದನ್ನು ಪಡೆಯಬೇಕು, ನಾನು ಹಾಗೆ ಮಾಡುವುದು ತಪ್ಪು’ ಎಂದೆ ನಾನು.
ಅಂದು ಸಂಜೆ ಮಳೆ ಬರುವ ಸೂಚನೆ ಇತ್ತು. ಕಪ್ಪಾಗಿ ಕವಿದಿದ್ದ ಮೋಡದ ಜೊತೆಗೆ ಗಾಳಿ ಜೋರಾಗಿ ಬೀಸುತ್ತಿತ್ತು. ಒಂದು ಮುಕ್ಕಾಲು ಗಂಟೆ ಮಳೆ ಗಾಳಿ ಎರಡೂ ಜೋರಾಗಿಯೇ ಇತ್ತು. ರಸ್ತೆಯಲ್ಲಿ, ಮನೆಯ ಹಿಂಭಾಗದಲ್ಲಿ ಹರಿಯುತ್ತಿದ್ದ ಮಳೆ ನೀರೆಲ್ಲ ಚರಂಡಿಯನ್ನು ಸೇರಿ ವಾತಾವರಣ ತಂಪಾಗಿತ್ತು. ಮರಗಿಡಗಳೆಲ್ಲ ಹೆಣ್ಣೊಬ್ಬಳು ಆಗತಾನೆ ತೊಳೆದ ತನ್ನ ನೀಳಕೇಶರಾಶಿಗೆ ಮಲ್ಲಿಗೆ ಹೂವನ್ನು ಮುಡಿದಂತೆ ಖುಷಿಯಿಂದ ತನ್ನ ಚೆಲುವನ್ನು ತೋರಿಸುವಂತಿತ್ತು.
ವಾಕ್ ಹೋಗಲೆಂದು ಹೊರಬಂದ ನನಗೆ ಎದುರಾಗಿದ್ದು ಪಕ್ಕದ ಮನೆಯಾತ. ಕೈಯ್ಯಲ್ಲಿ ಒಂದೆರಡು ಮಾವಿನ ಹಣ್ಣನ್ನು, ಕಾಯನ್ನು ಹಿಡಿದು ನಮ್ಮ ಮನೆ ಕಡೆ ಬರುತ್ತಿದುದ್ದನ್ನು ನೋಡಿ ಹಲೋ ಎಂದು ನಿಂತೆ. ‘ನಿಮಗೆ ನಮ್ಮ ಗಿಡದ ಹಣ್ಣು ಕೊಡಲೇ ಇಲ್ಲವಲ್ಲ ಅದಕ್ಕೆ ಬಂದೆ’ ಎಂದರಾತ. ‘ನಿಮ್ಮ ಮನೆ ಕಡೆಯಲ್ಲಿದ್ದ ಹಣ್ಣನ್ನು ನೀವು ಕಿತ್ತುಕೊಳ್ಳದೆ ಇರುವುದನ್ನು ನೋಡಿ ಇವತ್ತು ಅದನ್ನು ಕಿತ್ತು ಅದರ ಜೊತೆಗೆ ಇವತ್ತಿನ ಗಾಳಿಗೆ ಬಿದ್ದ ಈ ಕಾಯನ್ನು ತಂದೆ’ ಎಂದರು. ಅವರಿಗೆ ಧನ್ಯವಾದಗಳನ್ನು ತಿಳಿಸಿ ಘಮ ಘಮಿಸುವ ಹಣ್ಣುಗಳನ್ನು ಸ್ವೀಕರಿಸಿದೆ. ಅದನ್ನು ತಿನ್ನುವ ಆಸೆಯಾದರೂ ಅದರ ಘಮಲು, ಆಕಾರ, ಬಣ್ಣ ಇವುಗಳಿಗೆ ಮನಸೋತು ಅದನ್ನು ನೋಡುವುದರಲ್ಲೇ ಸ್ವಲ್ಪ ಹೊತ್ತು ಖುಷಿಪಟ್ಟೆ. ಅದನ್ನು ಕತ್ತರಿಸುವ ಮನಸ್ಸಿಲ್ಲದೆ ಹಣ್ಣೇನಾದರೂ ಕೆಟ್ಟಹೋದರೆ ಎನ್ನುವ ಭಯದಿಂದ ಕೊನೆಗೂ ಅದಕ್ಕೆ ಚಾಕು ಹಾಕಲೇ ಬೇಕಾಯಿತು. ಸಿಹಿ ಹಾಗೂ ರುಚಿಯಾಗಿದ್ದ ಹಣ್ಣುಗಳನ್ನು ಸಾವಧಾನದಲ್ಲಿ ನಾನು, ನನ್ನ ಮಗಳು ಸವಿದೆವು.
ಕಣ್ಣುಮುಚ್ಚಿ ಮಾವಿನ ಹಣ್ಣನ್ನು ಸವಿಯುತ್ತಿರುವಾಗ ನನ್ನ ಬಾಲ್ಯದ ನೆನಪುಗಳು ಥಟ್ಟನೆ ಆವರಿಸತೊಡಗಿದವು. ನಮ್ಮಮನೆ, ಹಚ್ಚಹಸುರಿನ ತೋಟ, ತೆಂಗಿನ, ಮಾವಿನ ಮರಗಳು, ಮರಕ್ಕೆ ಹತ್ತಿ ನನ್ನಣ್ಣ ತಮ್ಮಂದಿರು ಕಿತ್ತು ತಂದು ಕೊಡುತ್ತಿದ್ದ ಮರದಲ್ಲಿಯೇ ಹಣ್ಣಾಗಿದ್ದ ಹಣ್ಣುಗಳು ನನ್ನ ಸ್ಮೃತಿಯಲ್ಲಿ ಮೂಡಿದವು. ನನ್ನ ನೆನಪಿನ ಜೋಳಿಗೆ ನಿಧಾನವಾಗಿ ತೆರೆದುಕೊಂಡಿತು.
ನಮ್ಮ ಮಾವಿನ ತೋಪಿನಿಂದ ಉತ್ಪನ್ನಗೊಳ್ಳುತ್ತಿದ್ದ ತರಾವರಿ ಮಾವಿನಕಾಯಿಗಳನ್ನು ನಮ್ಮ ಪಕ್ಕದೂರಿನ ‘ಸೈಕಲ್ ಸಾಬ್ರು’ ಎಂದು ನಮ್ಮೂರಿನವರೆಲ್ಲ ಕರೆಯುತ್ತಿದ್ದ ತೆಂಗಿನಕಾಯಿ/ ಮಾವಿನ ಕಾಯಿ ವ್ಯಾಪಾರಿಯೊಬ್ಬ ರುಕ್ರಯ ಒಪ್ಪಂದದ ಮೇಲೆ ಖರೀದಿಸಿದ ಎಲ್ಲ ಮರದಿಂದ ನೂರು ಇನ್ನೂರು ಮಾವಿನ ಕಾಯಿಗಳನ್ನು ನಮಗೆ ಕೊಡುತ್ತಿದ್ದರು. ಹಾಗೆ ಬಂದ ಕಾಯಿಗಳನ್ನು ನಮ್ಮನೆಯ ಅಟ್ಟದ ಮೇಲೆ ಹುಲ್ಲಿನೊಳಗಡೆ ಮುಚ್ಚಿ ಹರಡಿ ಹಣ್ಣು ಮಾಡುವುದುಂಟು. ನಾನು, ನನ್ನಣ್ಣ ತಮ್ಮಂದಿರು ಒಂದು ಪಾತ್ರೆಯಲ್ಲಿ ನೀರು ಹಾಗೂ ಒಂದು ತಟ್ಟೆಯೊಂದಿಗೆ ಅಟ್ಟದಲ್ಲಿ ಹೋಗಿ ಹುಲ್ಲಿನಲ್ಲಿ ಚೆನ್ನಾಗಿ ಹಣ್ಣಾಗಿದ್ದ ಹಣ್ಣನ್ನು ಹುಡುಕಿ, ತೊಳೆದು ಅಲ್ಲಿಯೇ ಕೂತು ಬರೀ ಹಣ್ಣಿನಲ್ಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು.
ಹಣ್ಣುಗಳು ಇಷ್ಟವಾಗದಿದ್ದರೆ ಹಾಗೆಯೇ ಬಿಸಾಡುವವಷ್ಟು ಸೊಕ್ಕು ನಮಗಿತ್ತು. ಒಂದು ಹಿನ್ನೋಟದಲ್ಲಿ ನೋಡಿದಾಗ ಕಿರಿಯರಾದ ನಮಗೆ ಆಗ ಅದರ ಬೆಲೆ ಗೊತ್ತಾಗುತ್ತಿರಲಿಲ್ಲ. ಇಂದು ವಿದೇಶದ ಈ ಮನೆಯಲ್ಲಿ, ನನ್ನ ಈ ಪ್ರೌಢ ಮನಸ್ಥಿತಿಯಲ್ಲಿ ನಾನು ಸವಿದ ಈ ಹಣ್ಣು ಒಂದು ಸಾಮಾನ್ಯ ಹಣ್ಣು, ಆದರೆ ಅದಕ್ಕೆ ನಾನು ಕೊಟ್ಟ ಬೆಲೆ, ಅದನ್ನು ಸವಿದ ರೀತಿ ಬೇರೆಯಾಗಿತ್ತು.
ನಾವು ಕೆಲವು ವಸ್ತುಗಳ ಅಥವಾ ವ್ಯಕ್ತಿಗಳ ಬೆಲೆಯನ್ನು ಇದ್ದಾಗ ಪರಿಗಣಿಸುವುದಿಲ್ಲ, ಆದರೆ ಅದು ಇಲ್ಲದಿರುವಾಗ ಅದಕ್ಕಾಗಿ ಚಡಪಡಿಸಿ, ಹಂಬಲಿಸಿ ವಿಷಾದಿಸುತ್ತೇವೆ. ಈ ಒಂದು ಘಳಿಗೆಯಲ್ಲಿ ನನ್ನೊಂದಿಗೆ ಇನ್ನಿಲ್ಲದ ನನ್ನ ಅಣ್ಣನ ನೆನಪಾಗಿ ಕಣ್ಣಲ್ಲಿ ಕಂಬನಿ ತುಂಬಿಕೊಂಡಿತು. ಇಂತಹ ಒಂದು ಘಳಿಗೆಯಲ್ಲಿ ನಾನು ಹೊರಗೆ ಇಣುಕಿ ಮಾವಿನ ಮರವನ್ನು ದೃಷ್ಟಿಸಿ ನೋಡುವುದು, ಅದು ನನಗೆ ಸಾಂತ್ವನ ನೀಡುವುದು ನಡೆಯುತ್ತಲೇ ಇರುತ್ತದೆ.
ನನ್ನ ಮಗಳು ‘ಅಮ್ಮ ನೀನು ಈ ಮರದಲ್ಲಿನ ಮಾವಿನ ಹಣ್ಣನ್ನುಆಗಾಗ್ಗೆ ಆಸೆಯಿಂದ ನೋಡುತಿದ್ದೆಯಲ್ಲ, ಅದು ಪಕ್ಕದ ಮನೆಯವರಿಗೆ ಗೊತ್ತಾಗಿರಬೇಕು, ಅದಕ್ಕೇ ಆ ಹಣ್ಣುಗಳನ್ನು ನಿನಗೆ ತಂದು ಕೊಟ್ಟಿರಬೇಕು’ ಎಂದು ಟೀಕೆ ಮಾಡಿ ನಗುತ್ತಿದ್ದಳು. ಈ ಮರೆಯಲ್ಲಿದ್ದ ಹಣ್ಣನ್ನು ಯಾರು ಗಮನಿಸಿಯೇ ಇಲ್ಲವೇನೋ ಎನ್ನುವ ನನ್ನ ಅನಿಸಿಕೆ ತಪ್ಪಾಗಿತ್ತು. ಅದು ಮರೆಯಲ್ಲಿದ್ದರೂ ಯಾರಿಗೆ ಕಾಣಿಸಬೇಕೊ ಅವರಿಗೆ ಅದು ಕಾಣಿಸಿದೆ. ಎಲೆ ಮರೆ ಕಾಯಿಯಂತೆ ಪರರಿಗೆ ಒಳ್ಳೆಯದನ್ನು ಮಾಡುವವರು, ಏನನ್ನೂ ಬಯಸದೆ ಸಮಾಜಕ್ಕೆ ಸೇವೆ ಸಲ್ಲಿಸುವರನ್ನು ಒಂದಲ್ಲ ಒಂದು ದಿನ ಅವರನ್ನು, ಅವರ ಕೆಲಸವನ್ನು ಗುರುತಿಸಿ ಗೌರವಿಸುವಂತೆ ಈ ಹಣ್ಣು ಅದರ ಮಾಲೀಕನ ಕೈ ಸೇರಿತ್ತು. ಅವರ ಮುಖಾಂತರ ಅದನ್ನೇ ದಿನವೂ ಅಸೆಯಿಂದ ನೋಡುತ್ತಿದ್ದ ನನ್ನ ಕೈ ಸೇರಿದ್ದು ನನಗೆ ತುಂಬ ತೃಪ್ತಿಯನ್ನು ನೀಡಿತು.
ಅನಾದಿ ಕಾಲದಿಂದಲೂ ಮನುಷ್ಯನಿಗೂ ಮರಗಳಿಗೂ ನಂಟು ಇದೆ. ಅರಳಿ ಮರದ ಕೆಳಗೆ ಕೂತ ಗೌತಮ ಬುದ್ಧನಾದ. ನನ್ನ ಮಟ್ಟಿಗೆ ಹೇಳುವುದಾದರೆ ಈ ಮಾವಿನ ಮರ ನನ್ನ ಬದುಕಿನ ಆಗು ಹೋಗುಗಳಿಗೆ ಹೊಸ ಹೊಳಹನ್ನು, ಒಳನೋಟವನ್ನು ಒದಗಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.