
ಬೆಂಗಳೂರು (ಜ.08): ಹಕ್ಕಿಜ್ವರ ಸೋಂಕು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ. ರಾಜ್ಯಾದ್ಯಂತ ಹರಡುವ ಅಪಾಯವಿದೆ. ಹಕ್ಕಿಜ್ವರದ ಬಗ್ಗೆ ಪೋರ್ಟಿಸ್ ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ.ಅಂಬಣ್ಣ ಗೌಡ ಸಂಪೂರ್ಣ ವಿವರ ನೀಡಿದ್ದಾರೆ.
ಹಕ್ಕಿ ಜ್ವರ ಹೇಗೆ ಬರುತ್ತೆ?
ಹಕ್ಕಿಯ ತ್ಯಾಜ್ಯ ನಮ್ಮ ಸಂಪರ್ಕಕ್ಕೆ ಬಂದರೆ ಅದರಿಂದ ವೈರಾಣು ನಮ್ಮ ದೇಹಕ್ಕೆ ಬರುವ ಸಾಧ್ಯತೆ ಇದೆ. ಸೋಂಕು ಪೀಡಿತ ಹಕ್ಕಿಯ ಮೂಗಿನ ಸ್ರಾವ, ಬಾಯಿ ಅಥವಾ ಕಣ್ಣಿಂದ ಸ್ರವಿಸುವ ದ್ರವದ ಮೂಲಕ ಬರಬಹುದು. ಇವು ಹೆಚ್ಚಾಗಿ ಹಕ್ಕಿಯಿಂದ ಹಕ್ಕಿಗೆ ಹರಡುತ್ತವೆ. ಹಕ್ಕಿಯಿಂದ ಮನುಷ್ಯನಿಗೆ ಬರೋದು ಅಪರೂಪ. ಆದರೆ ಕೋಳಿ ಫಾರಂನಲ್ಲಿ ಕೆಲಸ ಮಾಡೋರಿಗೆ, ಕೊಳಚೆ ಪ್ರದೇಶದಲ್ಲಿ ವಾಸಿಸುವವರಿಗೆ, ಹಕ್ಕಿತ್ಯಾಜ್ಯ ಸೇರಿದ ಅಥವಾ ಹಕ್ಕಿಗಳು ಈಜಾಡುವ ಕೆರೆ, ನದಿ, ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜಾಡೋದ್ರಿಂದ, ಬೇರೆ ಪ್ರದೇಶಗಳಿಗೆ ಹೋಗಿ ಬಂದಾಗ, ಪ್ರಯಾಣಿಸುವಾಗ ಹಕ್ಕಿಜ್ವರದ
ರೋಗಿ ಸಂಪರ್ಕಕ್ಕೆ ಬಂದರೆ ಹಕ್ಕಿಜ್ವರ ಬರುವ ಸಾಧ್ಯತೆಗಳಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸಮಸ್ಯೆ ಹೆಚ್ಚು.
ಕೋಳಿ ತಿಂದ್ರೆ ಹಕ್ಕಿ ಜ್ವರ ಬರುತ್ತಾ?
ಇಲ್ಲ. ಇದು ನಮ್ಮ ಜನರ ತಪ್ಪುಕಲ್ಪನೆ. ಕೋಳಿಯನ್ನು ಬೇಯಿಸುವಾಗ ಆ ತಾಪಮಾನದಲ್ಲಿ ರೋಗಾಣು ಬದುಕಿರಲು ಸಾಧ್ಯವಿಲ್ಲ. ಬೇಯಿಸಿದ ಮೊಟ್ಟೆ ತಿಂದರೂ ಬರಲ್ಲ. ಹವಾಮಾನಕ್ಕನುಗುಣವಾಗಿ ಹಕ್ಕಿ ದೇಹದಲ್ಲಿ ಈ ರೋಗಾಣು ಬದುಕಿರುತ್ತೆ. 26 ಡಿಗ್ರಿವರೆಗಿನ ತಾಪಮಾನವಿದ್ರೆ ನಾಲ್ಕು ಗಂಟೆಗಳ ಕಾಲ ವೈರಾಣು ಬದುಕಿರಬಹುದು, 0 ಡಿಗ್ರಿಯಷ್ಟಿದ್ದಾಗ 3 ತಿಂಗಳವರೆಗೂ ಹಕ್ಕಿ ದೇಹದಲ್ಲಿ ಈ ವೈರಾಣು ಬದುಕಿರುತ್ತೆ. ಆಗ ಹಕ್ಕಿ ಸಂಪರ್ಕಕ್ಕೆ ಬರುವ ಇತರ ಹಕ್ಕಿಗಳಲ್ಲಿ, ಅತ್ಯಲ್ಪ ಪ್ರಮಾಣದಲ್ಲಿ ಮನುಷ್ಯನಿಗೂ ಈ ರೋಗ ಹರಡಬಹುದು. ಹಕ್ಕಿ ತ್ಯಾಜ್ಯದಿಂದ ಬರುವ ಸಾಧ್ಯತೆ ಹೆಚ್ಚು.
ಲಕ್ಷಣ ಏನು?
ಹೆಚ್ಚು ಜ್ವರ,ಕೆಮ್ಮು,ತಲೆನೋವು,ಗಂಟಲು ಬೇನೆ,ಬೇಧಿ, ಉಸಿರಾಟದ ತೊಂದರೆ,ಬೆನ್ನು ನೋವು ಇತ್ಯಾದಿ ಲಕ್ಷಣಗಳಿವೆ. ಫ್ಲೂ ಜ್ವರದ ಲಕ್ಷಣಗಳು. ಎರಡು ಮೂರು ದಿನದಲ್ಲಿ ಜ್ವರ, ನೋವುಗಳು ಏರುತ್ತ ಹೋಗುತ್ತವೆ. ನಂತರ ಇದು ನ್ಯೂಮೋನಿಯಾಗೆ ತಿರುಗಿ ವೆಂಟಿಲೇಟರ್'ನಲ್ಲಿಡಬೇಕಾದಷ್ಟು ತೀವ್ರವಾಗುತ್ತೆ. ಕೆಲವೊಮ್ಮೆ ಇಂಥ ಸಮಯದಲ್ಲಿ ಸಾವು ಸಂಭವಿಸುವುದೂ ಇದೆ.
ಚಿಕಿತ್ಸೆ ಹೇಗೆ?
ಹಕ್ಕಿಜ್ವರದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಬಳಿ ಹೋಗಬೇಕು. ಇದಲ್ಲದೇ ಜ್ವರದ ಬಂದು ಅದು ಮೂರು ದಿನವಾದ್ರೂ ಕಡಿಮೆಯಾಗಿಲ್ಲ ಅಂದರೂ ಅದು ಹಕ್ಕಿಜ್ವರದ ಲಕ್ಷಣ ಇರಬಹುದು. ವೈದ್ಯರು ಪ್ರತಿರೋಧ ಶಕ್ತಿ ಹೆಚ್ಚಲು ಔಷಧಿ ನೀಡುತ್ತಾರೆ. ಹಾಗೆ ರೋಗ ಪತ್ತೆಗೆ ಸ್ವಾಬ್ ಮಾದರಿ ನೀಡಬೇಕು. ಇದರಲ್ಲಿ ಎಚ್‌೫ಎನ್‌೧ ಪಾಸಿಟಿವ್ ಬಂದರೆ ಹಕ್ಕಿ ಜ್ವರ ಎಂದು ಗುರುತಿಸಿ ಟ್ರೀಟ್‌ಮೆಂಟ್ ಶುರುಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.