
1) ನಾನೊಂದು ಸಂಗತಿಯನ್ನು ಕೇಳಿದ್ದೇನೆ. ಆರ್ಯವೈಶ್ಯ (ಶೆಟ್ಟಿ) ಸಮುದಾಯದವರ ದೇಹದಲ್ಲಿ ‘ಸ್ಯುಡೋಕೊಲಿನೆಸ್ಟರೇಸ್’ ಅಂಶ ಕಡಿಮೆ ಇರುತ್ತದೆಂದು ಕೇಳಿದ್ದೇನೆ. ಹೀಗಾಗಿ ಶಸ್ತ್ರಚಿಕಿತ್ಸೆ ವೇಳೆ ಜ್ಞಾನ ತಪ್ಪಿಸಲು ‘ಸಕ್ಸಿನೈಲ್ ಕೋಲಿನ್’ ಎಂಬ ಔಷಧ ಬಳಸುವುದಿಲ್ಲ. ಇದರಿಂದ ಪ್ರಾಣಾಪಾಯ ಸಂಭವಿಸಬಹುದು ಎಂಬುದನ್ನು ಕೇಳಿದ್ದೇನೆ. ಇದು ನಿಜವೇ? ‘ಸ್ಯುಡೋಕೊಲಿನೆಸ್ಟರೇಸ್’ ಅಂಶವು ಶೆಟ್ಟಿ ಸಮುದಾಯದವರಲ್ಲೇ ಏಕೆ ಕಡಿಮೆ ಇರುತ್ತದೆ?
- ನ. ಸುಧಾಕರ ಶೆಟ್ಟಿ, ಕೋಟೆಬಾಗಿಲು
ಉ: ನೀವು ಕೇಳಿರುವುದು ನಿಜ. ತಮಿಳುನಾಡಿನ ಕೊಯಮತ್ತೂರ್‌ನಲ್ಲಿ ಇದಕ್ಕೆ ಪುಷ್ಟಿ ನೀಡುವಂತೆ ಒಂದು ಸಂಶೋಧನೆಯೇ ನಡೆದಿತ್ತು. ಆರ್ಯವೈಶ್ಯ ಸಮುದಾಯದ 22 ಪುರುಷ, ಒಬ್ಬ ಮಹಿಳೆಯ ಮೇಲೆ ನಡೆದ ಸಂಶೋಧನೆಯಲ್ಲಿ 9 ಮಂದಿಯಲ್ಲಿ ಸ್ಯುಡೋಕೊಲಿನೆಸ್ಟರೇಸ್ ಅಂಶ ಕಡಿಮೆಯಿತ್ತು. ಈ ಸ್ಯುಡೋಕೊಲಿನೆಸ್ಟರೇಸ್ ಎಂಬುದು ನಮ್ಮ ರಕ್ತದಲ್ಲಿರುವ ಒಂದು ಕಿಣ್ವ. ಈ ಕಿಣ್ವಕ್ಕೆ ‘ಸಕ್ಸಿನೈಲ್ ಕೋಲಿನ್’ ಎಂಬ ಅರಿವಳಿಕೆ ಮದ್ದನ್ನು ನಿಷ್ಕ್ರಿಯಗೊಳಿಸುವ ಗುಣವಿದೆ. ಸ್ಯುಡೋಕೊಲಿನೆಸ್ಟರೇಸ್ ಕಿಣ್ವದ ಹುಟ್ಟು ಮತ್ತು ನಿರ್ವಹಣೆ ನಮ್ಮಲ್ಲಿರುವ ಒಂದು ವರ್ಣತಂತುವಿನಿಂದ ಗುರುತಿಸಲ್ಪಡುತ್ತದೆ. ಕೆಲ ಸಮುದಾಯಗಳಲ್ಲಿ (ಶೆಟ್ಟಿ) ಈ ವರ್ಣತಂತುವಿನ ಕ್ಷೀಣತೆ ಇರುತ್ತದೆ. ಪರ್ಷಿಯ ಮೂಲದ ಯಹೂದಿಗಳಲ್ಲೂ ಸ್ಯುಡೋಕೊಲಿನೆಸ್ಟರೇಸ್ ಕಡಿಮೆ ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈ ಕಿಣ್ವದ ಕೊರತೆ ಉಂಟಾಗಿ ಸಕ್ಸಿನೈಲ್ ಕೋಲಿನ್ ಅರಿವಳಿಕೆ ಮದ್ದಿನ ಮೇಲೆ ಪ್ರಭಾವ ಬೀರದೆ, ಅದರ ಕಾರ್ಯವನ್ನು ಹಲವು ಗಂಟೆಗಳವರೆಗೆ ವೃದ್ಧಿಸಲ್ಪಡುತ್ತದೆ. ಇದರ ಪರಿಣಾಮ ಶ್ವಸನ ಕ್ರಿಯೆ ನಿಷ್ಕ್ರಿಯಗೊಳ್ಳಬಹುದು. ಈ ಸಮಯದಲ್ಲಿ ಕೃತಕ ಶ್ವಸನ ಕ್ರಿಯೆ ಅಳವಡಿಕೆಯಿಂದ ಅಪಾಯವನ್ನು ತಪ್ಪಿಸಬಹುದು. ಸಕ್ಸಿನೈಲ್ ಕೋಲಿನ್ ಎಂಬುದು ಸ್ನಾಯುಗಳ ಸಂಕುಚಿತತೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವ ಔಷಧಿ.
(ಡಾ. ರವಿ ಜಮಖಂಡಿ, ಅರಿವಳಿಕೆ ತಜ್ಞ)
ಕೃಪೆ: ಕನ್ನಡ ಪ್ರಭ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.