ಪುರುಷರ ಬಂಜೆತನಕ್ಕೆ ಇದು ಒಂದು ಕಾರಣ

Published : Nov 27, 2016, 06:35 PM ISTUpdated : Apr 11, 2018, 12:42 PM IST
ಪುರುಷರ ಬಂಜೆತನಕ್ಕೆ  ಇದು ಒಂದು ಕಾರಣ

ಸಾರಾಂಶ

 ನಮಗೆ ಇನ್ನೂ ಮಕ್ಕಳಾಗಿಲ್ಲ. ನಾನು ಮತ್ತು ಪತ್ನಿ ಇಬ್ಬರೂ ....

1) ನನಗೆ 32 ವರ್ಷ. ವಿವಾಹಿತ. ಮದ್ವೆಯಾಗಿ ಮೂರು ವರ್ಷವಾಯಿತು. ನಮಗೆ ಇನ್ನೂ ಮಕ್ಕಳಾಗಿಲ್ಲ. ನಾನು ಮತ್ತು ಪತ್ನಿ ಇಬ್ಬರೂ ದಪ್ಪಗಿದ್ದೇವೆ. ದೇಹದಲ್ಲಿ ಬೊಜ್ಜಿದ್ದರೆ ಮಕ್ಕಳಾಗುವುದಿಲ್ಲ ಎಂದು ಕೇಳಿದ್ದೇನೆ. ಇದು ನಿಜವೇ? ಬೊಜ್ಜಿನಿಂದ ಪುರುಷರಲ್ಲೂ ಬಂಜೆತನ ಬರುತ್ತದೆಯೇ?

- ಜೀವನ್ ಪ್ರಭು, ಮುರ್ಡೇಶ್ವರ

ಉ: ದಪ್ಪಗಿದ್ದ ಮಾತ್ರಕ್ಕೆ ಬೊಜ್ಜಿದೆ ಎನ್ನಲಾಗದು. ಆದರೂ, ಬೊಜ್ಜು ಮಾನವನ ಆರೋಗ್ಯದ ಮೇಲೆ ಹಲವು ಪರಿಣಾಮ ಬೀರುತ್ತದೆ. ಮುಖ್ಯವಾಗಿ ಹೃದ್ರೋಗಗಳಿಗೆ ಕಾರಣವಾಗುತ್ತದೆ. ಆದರೆ ಇದು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮವನ್ನು ಹಲವರು ನಿರ್ಲಕ್ಷಿಸುತ್ತಾರೆ. ಮಹಿಳೆಯರಲ್ಲಿ ಬೊಜ್ಜಿನಿಂದ ಹಾರ್ಮೋನಿನ ಸಮತೋಲನವು ತಪ್ಪಿ ಪರೋಕ್ಷವಾಗಿ ಅಂಡಾಣು ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಪಿಸಿಒಎಸ್ ಹಲವು ಸಂದರ್ಭಗಳಲ್ಲಿ ಬಂಜೆತನಕ್ಕೂ ಕಾರಣವಾಗಬಹುದು. ಬಂಜೆತನದ ಕಾರಣದಿಂದ ಐವಿಎಫ್‌ಗೆ ಒಳಗಾಗುವ ಶೇ.೨೫ರಷ್ಟು ಜನರಲ್ಲಿ ಅತಿಯಾದ ತೂಕ ಅಥವಾ ಬೊಜ್ಜು ಕಂಡುಬರುತ್ತದೆ. ಇನ್ನು ಬೊಜ್ಜಿರುವ ಪಾಲಕರಿಗೆ ಜನಿಸಿದ ಮಕ್ಕಳಲ್ಲಿ ಬಾಲ್ಯದ ಬೊಜ್ಜಿನ ಸಮಸ್ಯೆ ಮತ್ತು ನರಗಳ ಬೆಳವಣಿಗೆ ಸಮಸ್ಯೆಗಳು ಕಂಡುಬರಬಹುದು.

ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರ ಬಂಜೆತನಕ್ಕೂ ಬೊಜ್ಜೇ ಕಾರಣವಾಗಬಲ್ಲುದು. ತಜ್ಞರ ಪ್ರಕಾರ ಬಂಜೆತನವಿರುವ ದಂಪತಿಯಲ್ಲಿ ಶೇ.೪೦- ೪೫ ಸಮಸ್ಯೆಯು ಪುರುಷರಲ್ಲಿ ಕಂಡುಬರುತ್ತದೆ. ಪುರುಷರ ಪ್ರಜನನ ಸಾಮರ್ಥ್ಯವನ್ನು ಬೊಜ್ಜು ಹಲವು ರೀತಿಯಲ್ಲಿ ಬಾಧಿಸುತ್ತದೆ. ಇದು ದೈಹಿಕ ವಂಶವಾಹಿ ಸಂಬಂಧಿತ ಅಥವಾ ಹಾರ್ಮೋನು ಸಮಸ್ಯೆಯ ರೂಪದಲ್ಲಿ ಕಾಡಬಹುದು. ದೈಹಿಕವಾಗಿ ಇದು ನಿಮಿರುವಿಕೆ ದೌರ್ಬಲ್ಯ ಸಮಸ್ಯೆ ಅಥವಾ ಸ್ಖಲನ ದೌರ್ಬಲ್ಯ ಸಮಸ್ಯೆಯ ಮೂಲಕ ಬಂಜೆತನಕ್ಕೆ ಕಾರಣವಾಗಬಹುದು. ಬೊಜ್ಜುತನದಿಂದ ಒತ್ತಡಕ್ಕೆ ಒಳಗಾಗುವ ಪುರುಷರಲ್ಲಿ ವೀರ‌್ಯದ ಗುಣಮಟ್ಟವೂ ಕಳಪೆಯಾಗಬಹುದು. ಅಲ್ಲದೆ, ಹಾರ್ಮೋನಿನ ಅಸಮತೋಲನ (ಕಡಿಮೆಯಾದ ಟೆಸ್ಟೊಸ್ಟೆರಾನ್ ಮತ್ತು ಅತಿಯಾದ ಈಸ್ಟ್ರಾಡಿಯೋಲ್) ಉಂಟುಮಾಡಿ ಲೈಂಗಿಕ ಬಯಕೆಯನ್ನು ಕುಂಠಿತಗೊಳಿಸಬಹುದು. ಬೊಜ್ಜಿನಿಂದಾಗಿ ಗಂಡಸರಲ್ಲಿ ಅತಿಯಾದ ರಕ್ತದೊತ್ತಡ, ಮಧುಮೇಹ, ಕೊಲೆಸ್ಟೆರಾಲ್, ಹೃದಯದ ಸಮಸ್ಯೆ ಉಂಟಾಗಿ ಅವೂ ಬಂಜೆತನಕ್ಕೆ ಕಾರಣವಾಗಬಹುದು. ಯಾವುದಕ್ಕೂ ನೀವು ಸಮೀಪದ ಬಂಜೆತನ ನಿವಾರಣಾ ತಜ್ಞರನ್ನು ಸಂಪರ್ಕಿಸುವುದು ಉತ್ತಮ.

(ಡಾ. ಪ್ರವೀಣ್ ಜೋಷಿ, ಪುರುಷ ಬಂಜೆತನ ನಿವಾರಣ ತಜ್ಞ)

ಕೃಪೆ: ಕನ್ನಡ ಪ್ರಭ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಿಮ್ಮ ಹೊಸ ಮನೆಗೆ ಪೇಂಟ್ ಮಾಡುವಾಗ ಈ 7 ತಪ್ಪು ಮಾಡಬೇಡಿ!
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!