
ಇಂದಿನ ಕಾಲದಲ್ಲಿ ದುಬಾರಿ ಬಟ್ಟೆ, ಬ್ರ್ಯಾಂಡೆಡ್ ಬ್ಯಾಗ್, ಶೂಗಳು ಮತ್ತು ಆಭರಣಗಳನ್ನು ಖರೀದಿಸುವುದು ಹಲವರ ಆಸೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ಐಷಾರಾಮಿ ಜೀವನಶೈಲಿ ನೋಡಿ ಹೊಸ ವಸ್ತುಗಳನ್ನು ಖರೀದಿಸಲು ಕೆಲವರು ಮುಂದಾಗುತ್ತಾರೆ. ಆದರೆ ನಿಜವಾಗಿಯೂ ನಮಗೆ ಅಷ್ಟೊಂದು ವಸ್ತುಗಳ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಹಾಗೂ ಲೇಖಕಿ ಸುಧಾ ಮೂರ್ತಿ ಕೇಳಿದ್ದಾರೆ.
ಅವರು ಹಂಚಿಕೊಂಡಿರುವ ಒಂದು ಸರಳ ಉದಾಹರಣೆ ಈಗ ಗಮನ ಸೆಳೆಯುತ್ತಿದೆ. 7 ಸಾವಿರ ರೂಪಾಯಿ ಬೆಲೆಯ ಸೀರೆ ಖರೀದಿಸಿದರೆ ಅದನ್ನು 7 ಸಾವಿರ ಬಾರಿ ಉಡಲು ಸಾಧ್ಯವೇ? ಖಂಡಿತಾ ಇಲ್ಲ. ಅದೇ 2 ಸಾವಿರ ರೂಪಾಯಿ ಬೆಲೆಯ ಸೀರೆಯನ್ನು ಕನಿಷ್ಠ 20, 30 ಅಥವಾ 50 ಬಾರಿ ಬಳಸಬಹುದು. ಕಡಿಮೆ ಬೆಲೆಯ ವಸ್ತುಗಳನ್ನು ಹೆಚ್ಚು ಬಾರಿ ಬಳಸುವ ಸಾಧ್ಯತೆ ಇರುತ್ತದೆ ಎಂಬುದು ಅವರ ಅಭಿಪ್ರಾಯ.
ಅನಗತ್ಯ ಖರೀದಿಯ ಬಗ್ಗೆ ಸುಧಾ ಮೂರ್ತಿ ಮತ್ತೊಂದು ಆಸಕ್ತಿದಾಯಕ ಉದಾಹರಣೆ ನೀಡಿದ್ದಾರೆ. ಕೆಲವರ ಬಳಿ 20 ಜೊತೆ ಚಪ್ಪಲಿಗಳಿರಬಹುದು. ಆದರೆ ಒಂದೇ ಸಮಯದಲ್ಲಿ ಬಳಸುವುದು ಒಂದು ಜೊತೆ ಮಾತ್ರ. ಹಾಗಿರುವಾಗ ಇಷ್ಟೊಂದು ಚಪ್ಪಲಿಗಳನ್ನು ಖರೀದಿಸುವ ಅಗತ್ಯವೇನು ಎಂದು ನಾವು ಯೋಚಿಸಬೇಕು.
ವಸ್ತುಗಳನ್ನು ಹೊಂದಿರುವುದಕ್ಕಿಂತ ಅವುಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸುತ್ತೇವೆ ಎಂಬುದು ಮುಖ್ಯ. ಕೇವಲ ಇತರರಿಗೆ ತೋರಿಸಲು ಅಥವಾ ಫ್ಯಾಷನ್ ಹೆಸರಿನಲ್ಲಿ ವಸ್ತುಗಳನ್ನು ಖರೀದಿಸುವುದರಿಂದ ಹಣ ವ್ಯರ್ಥವಾಗಬಹುದು.
ಸುಧಾ ಮೂರ್ತಿ ಅವರ ಸರಳ ಜೀವನಶೈಲಿಗೆ ಮತ್ತೊಂದು ಉದಾಹರಣೆಯೂ ಇದೆ. ಕಾಶಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮಗೆ ಇಷ್ಟವಾದ ಶಾಪಿಂಗ್ ಅಭ್ಯಾಸವನ್ನು ತ್ಯಜಿಸುವ ಸಂಕಲ್ಪ ಮಾಡಿದ್ದರು. ಅದರಂತೆ ಸುಮಾರು 30 ವರ್ಷಗಳಿಂದ ಅವರು ಸ್ವತಃ ಸೀರೆಗಳನ್ನು ಖರೀದಿಸಿಲ್ಲ. ಕುಟುಂಬದವರು ಮತ್ತು ಸ್ನೇಹಿತರು ಉಡುಗೊರೆಯಾಗಿ ನೀಡಿದ ಸೀರೆಗಳನ್ನು ಬಳಸುತ್ತಿದ್ದಾರೆ.
ಇಂದಿನ ಆನ್ಲೈನ್ ಶಾಪಿಂಗ್ ಮತ್ತು ಜಾಹೀರಾತುಗಳ ಕಾಲದಲ್ಲಿ ಅನಗತ್ಯ ಖರೀದಿ ಸುಲಭವಾಗಿದೆ. ಆದರೆ ಯಾವುದೇ ವಸ್ತು ಖರೀದಿಸುವ ಮುನ್ನ ಅದರ ನಿಜವಾದ ಅಗತ್ಯ ಏನು, ಎಷ್ಟು ಬಾರಿ ಬಳಸುತ್ತೇವೆ ಎಂಬುದನ್ನು ಯೋಚಿಸಬೇಕು.
ಹಣ ಉಳಿಸುವುದಷ್ಟೇ ಅಲ್ಲದೆ, ಅನಗತ್ಯ ವಸ್ತುಗಳ ಸಂಗ್ರಹವನ್ನು ಕಡಿಮೆ ಮಾಡಿಕೊಂಡು ಸರಳವಾಗಿ ಬದುಕುವುದೂ ಸಂತೋಷದ ಜೀವನಕ್ಕೆ ಸಹಕಾರಿ ಎಂಬ ಸಂದೇಶವನ್ನು ಸುಧಾ ಮೂರ್ತಿ ಅವರ ಮಾತುಗಳು ನೀಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.