
ಇದನ್ನು ನೋಡಿ ನೀವು ಹುಬ್ಬೇರಿಸಬಹುದು. ಏನೆಂದರೆ, ಜಪಾನ್‌ನಲ್ಲಿ ಹೊಸದೊಂದು ಟ್ರೆಂಡ್ ಅಥವಾ ರೂಢಿ ಶುರುವಾಗಿದೆ. ಟೋಕಿಯೋದಲ್ಲಿ ರೆಸ್ಟೋರೆಂಟ್‌ಗೆ ಹೋಗುವ ಮೊದಲು ಈಗ ಮೆನು ಮಾತ್ರ ನೋಡಿದರೆ ಸಾಲದು. ನಿಮ್ಮ ವಯಸ್ಸನ್ನೂ ಚೆಕ್ ಮಾಡ್ಕೊಳ್ಳಬೇಕು! ಜಪಾನ್‌ನ ರಾಜಧಾನಿಯಲ್ಲಿ ಕೆಲವು ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ವಯೋಮಿತಿ ವಿಧಿಸುವ ಹೊಸ ಟ್ರೆಂಡ್ ಶುರು ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಶಿಬುಯಾದ ಒಂದು ಜನಪ್ರಿಯ ಇಜಾಕಯಾ (ಪಬ್) ತನ್ನ ಪ್ರವೇಶದ್ವಾರದಲ್ಲೇ ದೊಡ್ಡ ಬೋರ್ಡ್ ಹಾಕಿದೆ: “20 ರಿಂದ 39 ವರ್ಷದವರಿಗಷ್ಟೇ ಪ್ರವೇಶ. ಇದು ಯುವ ಪೀಳಿಗೆಯಿಗಾಗಿ ಇರುವ ಪಬ್!” ಹೌದು, ಇಲ್ಲಿ 40 ವರ್ಷ ಮೀರಿದರೆ ಒಳಗೆ ಕಾಲಿಡಲು ಆಗುವುದಿಲ್ಲ. ಕನಿಷ್ಠ ಬೋರ್ಡ್ ನೋಡಿದರೆ ಅಂಥ ಭಾವನೆ ಬರುತ್ತದೆ. ಈ ಪಬ್ ಜೋರಾದ ಸಂಗೀತ, ಗದ್ದಲ, ನಗು-ಚರ್ಚೆ, ಮದ್ಯಪಾನ… ಅಂದ್ರೆ ಪ್ಯೂರ್ ಯೂತ್ ವೈಬ್‌ಗೆ ಮೀಸಲು. ಇಲ್ಲಿ ಬರುವವರಲ್ಲಿ ಸುಮಾರು 90% ಜನ 20ರ ವಯಸ್ಸಿನವರೇ.
ಯಾಕೆ ಈ ನಿರ್ಧಾರ?
ಪಬ್ ಮಾಲೀಕರು ನೀಡಿದ ಹೇಳಿಕೆ ಇದಕ್ಕೆ ಸ್ಪಷ್ಟನೆ ಕೊಡುತ್ತದೆ: “ಹಿರಿಯ ಗ್ರಾಹಕರಿಂದ ‘ಇಲ್ಲಿ ತುಂಬಾ ಶಬ್ದ ಇದೆ’ ಅನ್ನೋ ದೂರುಗಳು ಬರ್ತಿದ್ವು. ಎಲ್ಲರೂ ಆರಾಮವಾಗಿ ಎಂಜಾಯ್ ಮಾಡಲಿ ಅನ್ನೋ ಕಾರಣಕ್ಕೆ ಗ್ರಾಹಕರ ವಯೋವರ್ಗವನ್ನು ಸೀಮಿತ ಮಾಡಿದ್ದೇವೆ.”
ಆದ್ರೆ ಇಲ್ಲೇ ಒಂದು ಟ್ವಿಸ್ಟ್ ಇದೆ. ಇದು 40 ವರ್ಷ ಮೇಲ್ಪಟ್ಟವರಿಗೆ ಸಂಪೂರ್ಣ ಬ್ಯಾನ್ ಇಲ್ಲ. “ಶಬ್ದಮಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಿದ್ಧರಿದ್ದರೆ, ಮತ್ತು 20ರ ಮನಸ್ಥಿತಿ ಇದ್ದರೆ—ನಾವು ಅವರನ್ನು ಸ್ವಾಗತಿಸುತ್ತೇವೆ!” ಎನ್ನುತ್ತಾರೆ ಪಬ್ ಮಾಲೀಕರು.
ಇನ್ನೊಂದು ಕಡೆ, ಟೋಕಿಯೋದಲ್ಲೇ ಹೊಸದಾಗಿ ಆರಂಭವಾದ ಗ್ರಿಲ್ ರೆಸ್ಟೋರೆಂಟ್ 25 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಕೊಡುತ್ತಿದೆ. ಈ ರೆಸ್ಟೋರೆಂಟ್ ಮ್ಯಾನೇಜರ್ ಮಸಾಯುಕಿ ಸೆಗಾವಾ ಹೇಳುವಂತೆ: “ಶಾಂತ ವಾತಾವರಣದಲ್ಲಿ ವಯಸ್ಕರು ಊಟ ಆನಂದಿಸಬೇಕು ಅನ್ನೋದೇ ನಮ್ಮ ಉದ್ದೇಶ.”
ಇಲ್ಲಿ ಬುಕ್ಕಿಂಗ್ ಮಾಡುವಾಗಲೇ ವಯಸ್ಸು ಪರಿಶೀಲನೆ ಮಾಡ್ತಾರೆ. ವಯಸ್ಸು 25ಕ್ಕಿಂತ ಕಡಿಮೆ ಇದ್ದರೆ? ʼಪಕ್ಕದ ಪಾರ್ಟ್ನರ್ ರೆಸ್ಟೋರೆಂಟ್‌ಗೆ ಪ್ಲೀಸ್ ಹೋಗಿ’ ಅನ್ನೋ ಸೌಮ್ಯ ಸೂಚನೆ! ಗ್ರಾಹಕರು ಏನು ಹೇಳ್ತಾರೆ? ಅನೇಕ ಗ್ರಾಹಕರು ಈ ನೀತಿಗೆ ಫುಲ್ ಸಪೋರ್ಟ್ ಕೊಡ್ತಿದ್ದಾರೆ. “ಇಲ್ಲಿ ಶಬ್ದ ಕಡಿಮೆ, ಆರಾಮ ಇದೆ” “ಮಕ್ಕಳಿಲ್ಲ ಅನ್ನೋದೇ ದೊಡ್ಡ ರಿಲೀಫ್ “ನಮ್ಮಂತ ವಯಸ್ಕರಿಗೆ ಇದು ಸೂಕ್ತ ಜಾಗ” ಅಂತ ಕೆಲವರ ಅಭಿಪ್ರಾಯ.
ಆದ್ರೆ ಈ ಟ್ರೆಂಡ್ ಎಲ್ಲರಿಗೂ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ‘ಇದೇನಿದು ವಯೋಭೇದ?’ ಅನ್ನೋ ಪ್ರಶ್ನೆ ಜೋರಾಗಿದೆ. ಒಬ್ಬ ಜಪಾನೀಸ್ ಬಳಕೆದಾರ ಬರೆಯುತ್ತಾರೆ: “ನಾವು ಪಬ್‌ನಲ್ಲಿ ಕುಳಿತಿದ್ದಾಗ ಕೆಲವು ಹಿರಿಯರು ಅಸಹಜವಾಗಿ ವರ್ತಿಸಿದರು. ಅವರಿಗೆ ಸೂಟಾಗುವ ಪಬ್‌ಗಳು ಬೇರೆ ಇರೋದು ಒಳ್ಳೇದು.” ಅಂತ.
ಚೀನಾದ ಸೋಶಿಯಲ್ ಮೀಡಿಯಾದಲ್ಲೂ ಈ ವಿಷಯಕ್ಕೆ ಬೆಂಬಲ ವ್ಯಕ್ತವಾಗಿದೆ. “ನಾನು ಬ್ಯೂಟಿ ಸ್ಟುಡಿಯೋ ನಡೆಸುತ್ತೇನೆ. ಮಕ್ಕಳಿಗೂ ಪೆಟ್‌ಗಳಿಗೂ ಅನುಮತಿ ಇಲ್ಲ. ಇಷ್ಟವಿಲ್ಲ ಅಂದ್ರೆ ಬೇರೆಡೆ ಹೋಗಬಹುದು—ಅದು ತಾರತಮ್ಯವಲ್ಲ.” ಮತ್ತೊಬ್ಬರು “ಹಾಸ್ಟೆಲ್‌ಗಳಲ್ಲಿ ವರ್ಷಗಳಿಂದ ವಯೋಮಿತಿ ಇದೆ. ಅದನ್ನೆಲ್ಲ ಯಾಕೆ ಯಾರೂ ಪ್ರಶ್ನಿಸಲ್ಲ?” ಎಂದು ಕೇಳ್ತಾರೆ.
ಟೋಕಿಯೋದಲ್ಲಿ ಶುರುವಾದ ಈ ವಯೋಮಿತಿ ಪ್ರಯೋಗ ಪ್ರತ್ಯೇಕ ಘಟನೆಯೇ, ಅಥವಾ ಮೌನವಾಗಿ ಎಲ್ಲೆಡೆ ಶುರುವಾಗಿರುವ ವಯೋಭೇದವೇ? ಒಂದು ಮಾತ್ರ ಸ್ಪಷ್ಟ— ಇದು ಈಗ ಜಪಾನ್‌ನಲ್ಲಿ ಮಾತ್ರವಲ್ಲ, ಜಾಗತಿಕ ಚರ್ಚೆಯ ವಿಷಯವಾಗುತ್ತಿದೆ. ಜೆನ್ ಝಿಗೆ ಎಲ್ಲ ಡೆ ಆದ್ಯತೆ, ನಮಗ್ಯಾಕಿಲ್ಲ ಎಂಬ ಸಿಟ್ಟು ವಯಸ್ಕರಿಗೆ ಬಂದರೆ ಸಹಜವೇ. ಇದು ಈ ಹಿಂದೆ ಕೆಲವು ವಿದೇಶಿ ಹೋಟೆಲ್‌ಗಳ ಮುಂದೆ ಕಾಣಸಿಗುತ್ತಿದ್ದʼನಾಯಿಗಳಿಗೂ ಭಾರತೀಯರಿಗೂ ಪ್ರವೇಶವಿಲ್ಲʼ ಎಂದು ಬೋರ್ಡನ್ನು ನೆನಪಿಸಿತೇ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.