
ದೀರ್ಘ ಹಾಗೂ ಯಶಸ್ವಿ ದಾಂಪತ್ಯ ಜೀವನದ ರಹಸ್ಯವೇನು ಎಂಬ ಪ್ರಶ್ನೆ ಮೇಲೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಪರಸ್ಪರ ನಂಬಿಕೆ, ಸಹನೆ, ಹೊಂದಾಣಿಕೆ ಮತ್ತು ಮುಖ್ಯವಾಗಿ ಉತ್ತಮ ಸಂವಹನವೇ ಸುಖಕರ ದಾಂಪತ್ಯದ ಮೂಲ ಮಂತ್ರ ಎನ್ನಲಾಗತ್ತದೆ. ಆದರೆ ಈ ಎಲ್ಲ ಸಾಮಾನ್ಯ ಕಲ್ಪನೆಗಳಿಗೆ ವಿರುದ್ಧವಾಗಿ, ಜಪಾನಿನ ಒಂದು ದಂಪತಿ ಪರಸ್ಪರ ಒಂದೇ ಒಂದು ಶಬ್ಧವನ್ನೂ ಆಡದೆ ಸುಮಾರು ಎರಡು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ್ದು, ಮಾತ್ರವಲ್ಲ ಮೂರು ಮಕ್ಕಳನ್ನು ಪಡೆದಿದ್ದಾರೆ. ಇಡೀ ಜಗತ್ತಿನ ಗಮನ ಸೆಳೆದ ಅಪರೂಪದ ಘಟನೆಯಾಗಿದೆ.
ದಕ್ಷಿಣ ಜಪಾನ್‌ನ ನಾರಾ ಪ್ರದೇಶದಲ್ಲಿ ವಾಸಿಸುವ ಒಟೌ ಕಟಯಾಮಾ ಹಾಗೂ ಅವರ ಪತ್ನಿ ಯುಮಿ ಕಟಯಾಮ ಅವರ ದಾಂಪತ್ಯ ಜೀವನದ ಕಥೆ ಅಚ್ಚರಿಯ ಜೊತೆಗೆ ನೋವನಿಂದ ಕೂಡ ಕೂಡಿದೆ. 1997ರಿಂದ 2017ರವರೆಗೆ ಅಂದರೆ ಸುಮಾರು 20 ವರ್ಷಗಳ ಕಾಲ ಒಟೌ ತಮ್ಮ ಪತ್ನಿಯೊಂದಿಗೆ ಮಾತುಕತೆಯನ್ನೇ ನಿಲ್ಲಿಸಿದ್ದರು. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ಪರಸ್ಪರ ಸಂಭಾಷಣೆ ಇಲ್ಲದೆ ಅವರು ದಾಂಪತ್ಯ ಜೀವನ ನಡೆಸಿದರು.
ಯುಮಿ ತಮ್ಮ ಪತಿಯೊಂದಿಗೆ ಮಾತನಾಡಲು ನಿರಂತರ ಪ್ರಯತ್ನಿಸುತ್ತಿದ್ದರು. ಆದರೆ ಪತಿ ಏನೇ ಹೇಳಿದ್ರೂ ತಲೆಯಾಡಿಸುತ್ತಿದ್ದದ್ದೂ ಮಾತ್ರ. ಈ ಗಾಢ ಮೌನದ ನಡುವೆಯೂ ದಂಪತಿಗಳು ಒಟ್ಟಿಗೆ ಬದುಕಿದರು, ಮೂರು ಮಕ್ಕಳನ್ನು ಬೆಳೆಸಿದರು ಮತ್ತು ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿದರು. ಇಬ್ಬರು ಹೆಣ್ಣು ಮಕ್ಕಳು ಮೌನಕ್ಕೆ ಮುಂಚೆಯೇ ಹುಟ್ಟಿದ್ದರು. ಕೊನೆಯ ಮಗ ಮಾತ್ರ ಅವರ ಮೌನ ದಾಂಪತ್ಯದಲ್ಲಿ ಹುಟ್ಟಿದ!
ಈ ಅಸಾಮಾನ್ಯ ದಾಂಪತ್ಯದ ರಹಸ್ಯ ಬಹಿರಂಗವಾಗಿದ್ದು ದಂಪತಿಗಳ ಕಿರಿಯ ಪುತ್ರ ಯೋಶಿಕಿ ಎಂಬಾತನಿಂದ. 18 ವರ್ಷ ವಯಸ್ಸಿನ ಯೋಶಿಕಿಗೆ ತನ್ನ ತಂದೆ-ತಾಯಿ ಪರಸ್ಪರ ಮಾತನಾಡುವುದನ್ನು ನೋಡಿಯೇ ಇರಲಿಲ್ಲ. ಈ ವಿಚಿತ್ರ ಪರಿಸ್ಥಿತಿಯಿಂದ ಬೇಸತ್ತು, ಅವನು ಜಪಾನಿನ ಪ್ರಸಿದ್ಧ ಟಿವಿ ಕಾರ್ಯಕ್ರಮ ‘ಟಿವಿ ಹೊಕ್ಕೈಡೊ’ಗೆ ಪತ್ರ ಬರೆದು ಸಹಾಯ ಕೇಳಿಕೊಂಡನು.
ಕಾರ್ಯಕ್ರಮದ ತಂಡ ಈ ದಂಪತಿಯ ಕಥೆಯನ್ನು ತಿಳಿದುಕೊಂಡು, ಅವರ ನಡುವೆ ಮತ್ತೆ ಮಾತುಕತೆ ಆರಂಭವಾಗಲು ಪುನರಾರಂಭಿಸುವ ಪ್ರಯತ್ನಕ್ಕೆ ಕೈ ಹಾಕಿತು. ಒಟೌ ಮತ್ತು ಯುಮಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಭೇಟಿಯಾದ ಉದ್ಯಾನವನದಲ್ಲೇ ಮತ್ತೆ ಭೇಟಿಯಾಗುವ ವ್ಯವಸ್ಥೆಯನ್ನು ಮಾಡಲಾಯಿತು. ಆ ವಿಶೇಷ ಕ್ಷಣವನ್ನು ಅವರ ಮಕ್ಕಳು ದೂರದಿಂದ ಕಣ್ಣೀರಿನೊಂದಿಗೆ ವೀಕ್ಷಿಸುತ್ತಿದ್ದರು.
ಅನೇಕ ವರ್ಷಗಳ ಮೌನದ ಬಳಿಕ, ಒಟೌ ಕಟಯಾಮ ಕೊನೆಗೂ ತಮ್ಮ ಪತ್ನಿಯೊಂದಿಗೆ ಮಾತನಾಡಿದರು. “ಇಷ್ಟು ವರ್ಷಗಳ ನಂತರ ನಿನ್ನೊಂದಿಗೆ ಮಾತನಾಡುತ್ತಿರುವುದು ವಿಚಿತ್ರವಾಗಿ ಅನಿಸುತ್ತಿದೆ. ನೀನು ಇಷ್ಟು ದಿನ ಸಹಿಸಿಕೊಂಡ ಕಷ್ಟಗಳಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಅವರು ಭಾವೋದ್ರೇಕದಿಂದ ಹೇಳಿದರು. ತಮ್ಮ ಮೌನದಿಂದ ಯುಮಿಗೆ ನೋವುಂಟಾಗಿದೆ ಎಂಬುದನ್ನು ಒಪ್ಪಿಕೊಂಡು, ಕ್ಷಮೆಯಾಚಿಸಿದರು.
ಈ ಮೌನದ ಹಿಂದಿನ ಕಾರಣವೂ ನಂತರ ಬೆಳಕಿಗೆ ಬಂದಿತು. ಯುಮಿ ತಮ್ಮ ಮಕ್ಕಳ ಪಾಲನೆಗೆ ಹೆಚ್ಚಿನ ಗಮನ ನೀಡುತ್ತಿರುವುದರಿಂದ, ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಒಟೌನನ್ನು ಕಾಡತೊಡಗಿತ್ತು. ಆರಂಭದಲ್ಲಿ ಅದು ನೋವಿಗೆ ಕಾರಣವಾದರೂ, ನಂತರ ಅಸೂಯೆಯಾಗಿ ಪರಿವರ್ತನೆಗೊಂಡಿತು. ಆ ಅಸಮಾಧಾನವೇ ಮೌನಕ್ಕೆ ತಿರುಗಿತು. ಅದು 20 ವರ್ಷಗಳ ಕಾಲ ಮುಂದುವರೆಯಿತು.
ಆಶ್ಚರ್ಯಕರ ಸಂಗತಿಯೆಂದರೆ, ಈ ಎಲ್ಲಾ ವರ್ಷಗಳಲ್ಲೂ ಯುಮಿ ವಿಚ್ಛೇದನ ಅಥವಾ ಬೇರ್ಪಡಿಕೆಯ ಬಗ್ಗೆ ಯೋಚಿಸಲಿಲ್ಲ. ಪತಿಯ ಮೌನದ ನಡುವೆಯೂ ಕುಟುಂಬವನ್ನು ಒಟ್ಟಿಗೆ ಉಳಿಸಿಕೊಂಡು, ಮಕ್ಕಳನ್ನು ಬೆಳೆಸಿದರು. ಪತಿ ಮಾತಾಡದಿದ್ದರೂ, ಆತನ ಜೊತೆಯಲ್ಲೇ ಜೀವನ ಸಾಗಿಸಿದರು. 20 ವರ್ಷಗಳ ಮೌನದ ನಂತರ, ಮಕ್ಕಳ ಪ್ರಯತ್ನದಿಂದಾಗಿ ಕೊನೆಗೂ ಈ ದಾಂಪತ್ಯದಲ್ಲಿ ಸಂಭಾಷಣೆಯ ಮತ್ತೆ ಆರಂಭವಾಯಿತು. ಈ ಘಟನೆಯು ದಾಂಪತ್ಯ ಜೀವನದಲ್ಲಿ ಸಂವಹನದ ಮಹತ್ವವನ್ನಷ್ಟೇ ಅಲ್ಲ, ಸಹನೆಯ ಅತಿಯಾದ ಮಿತಿಗಳನ್ನೂ ಪ್ರಶ್ನಿಸುವಂತಾಗಿದೆ. ಜಪಾನ್‌ನ ಈ ವಿಶಿಷ್ಟ ದಾಂಪತ್ಯ ಕಥೆ, ಮನುಷ್ಯನ ಭಾವನೆಗಳು, ಅಸೂಯೆ, ಮೌನ ಮತ್ತು ಸಹನೆ. ಎಲ್ಲಾ ಒಂದೇ ಕುಟುಂಬದೊಳಗೆ ಹೇಗೆ ಬೆರೆತಿದೆ ಎಂಬುದಕ್ಕೆ ಅಪರೂಪದ ಉದಾಹರಣೆಯಾಗಿ ಉಳಿದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.