
- ಆರ್ಕೆಬಿ
ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಒಂದು ದಿನ ಸಾಹಸಕ್ರೀಡೆ, ಜಲಕ್ರೀಡೆ ಮೋಜು, ಆರಾಮ... ಹೀಗೆ ಎಲ್ಲವನ್ನೂ ಒಂದೇ ಕಡೆ ಅನುಭವಿಸುವಂತೆ ಕಳೆಯಬೇಕಾದರೆ ಹೇಳಿ ಮಾಡಿಸಿದ ತಾಣ ವಂಡರ್‌ಲಾ. ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ಈ ತಾಣ ದೇಶದಲ್ಲೇ ಅತಿದೊಡ್ಡ ಮನರಂಜನಾ ಉದ್ಯಾನವೆಂಬ ಹೆಗ್ಗಳಿಕೆ ಹೊಂದಿದೆ. 2005ರಲ್ಲಿ ಆರಂಭವಾದ ವಂಡರ್ ಲಾ, ಕಳೆದ 18 ವರ್ಷಗಳಲ್ಲಿ 75 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸಿದೆ. 82 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾಗಿರುವ ಈ ಪಾರ್ಕ್‌ನಲ್ಲಿ 60ಕ್ಕೂ ಹೆಚ್ಚು ಆಟವಾಡಲು ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ನಿಂದಾಗಿ 2 ವರ್ಷ ಸಂಕಷ್ಟದ ದಿನಗಳನ್ನು ಎದುರಿಸಿದ ವಂಡರ್‌ಲಾ, ಇದೀಗ ಜನದಟ್ಟಣೆಯ ತಾಣ. ವಾರದ ದಿನಗಳಲ್ಲಿ ನಿತ್ಯ ಸರಾಸರಿ 4000, ವಾರಾಂತ್ಯದಲ್ಲಿ ದಿನವೊಂದಕ್ಕೆ 7000 ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಬೇಸಿಗೆ ಹಾಗೂ ರಜೆ ಎರಡೂ ಇರುವ ಹಿನ್ನೆಲೆಯಲ್ಲಿ ‘ಸಮ್ಮರ್‌ಲಾ ಫಿಯೆಸ್ಟಾ’ ಆರಂಭವಾಗಿದ್ದು, ಇದು ಮೇ 31ರವರೆಗೆ ಇರಲಿದೆ. ಪ್ರವೇಶ ದರದಲ್ಲಿ ರಿಯಾಯ್ತಿ, 1 ತಾಸು ಹೆಚ್ಚು ಆಡುವ ಅವಕಾಶ, ಸಂಜೆ ವೇಳೆ ಸಂಗೀತ-ನೃತ್ಯ-ಸಾಹಸ ಪ್ರದರ್ಶನಗಳು ಸೇರಿದಂತೆ ಅನೇಕ ಚಟುವಟಿಕೆಗಳು ಈ ಅವಧಿಯಲ್ಲಿ ಇರಲಿವೆ.
11 ಸಾಹಸಕ್ರೀಡೆಗಳು
ಸಾಹಸಿ ಮನೋಭಾವದವರಿಗಾಗಿ 11 ಸಾಹಸ ಕ್ರೀಡೆಗಳನ್ನು ಒದಗಿಸಲಾಗಿದೆ. ಎತ್ತರಕ್ಕೊಯ್ದು ತಲೆಕೆಳಗಾಗಿಸಿ ಆಡಿಸುವ ರಿಕಾಯಿಲ್, ಇನ್ಸೇನಿಟಿ, ವೈಸ್ಕ್ರೀಮ್, ಹರಿಕೇನ್, ಮೇವರಿಕ್, ಟರಂಟುಲಾ ಆಟಗಳಿದ್ದರೆ, ಎತ್ತರದಿಂದ ಕೆಳಕ್ಕೆ ಬಿಡುವ ಫ್ಲಾಷ್‌ಟವರ್, ಡ್ರಾಪ್‌ಝೋನ್‌ನಂತಹ ಮೈ ಜುಮ್ಮೆನಿಸುವ ಕ್ರೀಡೆಗಳು ಇಲ್ಲಿವೆ. ಅಲ್ಲದೆ, ಉಯ್ಯಾಲೆಯಂತೆ ಆಡಿಸಿ ರೋಮಾಂಚಕ ಅನುಭವ ನೀಡುವ ಈಕ್ವಿನಾಕ್ಸ್, ಟೆಕ್ನೋಜಂಪ್, ವಂಡರ್‌ಲಾ ಬಂಬಾದಂತಹ ಸಾಹಸಕ್ರೀಡೆಗಳೂ ಇವೆ.
ಚಿಕ್ಕಮಗಳೂರಿನ ಕಾಡಿನ ಮಧ್ಯೆ ಹೊಳೆಯುವ ಡೈಮಂಡ್ ಫಾಲ್ಸ್
15 ವೈವಿಧ್ಯಗಳು
ಸಾಹಸ ಅಂದರೆ ಭಯಬೀಳುವವರಿಗೆ 15 ಮನರಂಜನಾ ವೈವಿಧ್ಯಗಳಿವೆ. ಆರಾಮವಾಗಿ ಕೂತು ವೀಕ್ಷಿಸುವ 3ಡಿ ಶೋ, ಸಂಗೀತ ಕಾರಂಜಿ-ಲೇಸರ್ ಪ್ರದರ್ಶನ, ಸಿನಿ ಮ್ಯಾಜಿಕ್ ಇದ್ದರೆ, ಮನಸ್ಸಿಗೆ ಮುದ ನೀಡುವ ಆಟಗಳಾದ ಟೂನ್ ಟ್ಯಾಂಗೋ, ಟರ್ಮೈಟ್ ಕೋಸ್ಟರ್, ಟರ್ಮೈಟ್ ಟ್ರೇನ್, ಡಂಜನ್ ರೈಡ್, ಕ್ರೇಜಿ ಕಾರ್ಸ್, ಕ್ರೇಜಿ ವ್ಯಾಗನ್, ರಾಕಿನ್ ಟಗ್, ವೇವ್ ರೈಡರ್, ಸ್ಕೈಟಿಲ್ಟ್, ವಂಡರ್ ಸ್ಪಾ$್ಲ್ಯಷ್, ನೆಟ್ ವಾಕ್, ಸ್ಕೈವ್ಹೀಲ್ ಇಲ್ಲಿ ಲಭ್ಯ.
14 ಜಲಕ್ರೀಡೆಗಳು
ನೀರಿನಾಟ ಬಯಸುವವರಿಗೆ 14 ರೀತಿಯ ಜಲಕ್ರೀಡೆಗಳ ಸೌಲಭ್ಯ ಇಲ್ಲಿದೆ. ವೇವ್ ಪೂಲ್, ಪ್ಲೇ ಪೂಲ್, ಲೇಸಿ ರಿವರ್, ಜಂಗಲ್ ಲಗೂನ್, ರೇನ್ ಡಿಸ್ಕೋದಂತಹ ಮೋಜಿನಾಟಗಳ ಜೊತೆಗೆ, ಟ್ಯೂಬ್ ಬಳಸಿ ಆಡುವ ಸಾಹಸಮಯ ಬೂಮರಾಂಗ್, ಹರಾಕಿರಿ, ಬ್ಯಾಂಡೆಡ್ ಕ್ರೈಟ್ಸ್, ಕೋರ್ನೆಟೋ ಹಾಗೂ ಬರಿಮೈಯಲ್ಲಿ ಜಾರುವ ವೇವಿ ಫಾಲ್, ವರ್ಟಿಕಲ್ ಫಾಲ್, ಟ್ವಿಸ್ಟರ್ಸ್, ಡ್ರಾಪ್ ಲೂಪ್‌ನಂತಹ ಆಟಗಳಿವೆ. ರಬ್ಬರ್ ಹಾಸು ಬಳಸಿ ಜಾರುವ ಫನ್ ರೇಸರ್ಸ್, ಅಪ್‌ಹಿಲ್ ರೇಸರ್ಸ್ ಕೂಡ ಇಲ್ಲಿವೆ.
ಮಕ್ಕಳಿಗೆ 12 ಆಟಗಳು
ಪುಟಾಣಿಗಳಿಗಾಗಿಯೇ 12 ವಿಶೇಷ ಆಟಗಳ ಸೌಲಭ್ಯವೂ ಇಲ್ಲಿದೆ. ಮ್ಯಾಜಿಕ್ ಮಶ್ರೂಮ್, ಮಿನಿ ವೆನೀಸ್, ಮಿನಿ ಪೈರೇಟ್ ಶಿಪ್, ಮೆರ್ರಿ ಘೋಸ್ಟ್, ಕಿಡ್ಡೀಸ್ ವ್ಹೀಲ್, ಮಿನಿ ಎಕ್ಸ್‌ಪ್ರೆಸ್, ಜಂಪಿಂಗ್ ಫ್ರಾಗ್, ಫ್ಲೈಯಿಂಗ್ ಜಂಬೋ, ಫಂಕಿ ಮಂಕಿ, ಕ್ಯಾರೌಸಲ್, ಕಾನ್ವಾಯ್, ಮಿನಿ ಕೋಕೋ ಕಪ್‌ನಂತಹ ಆಟಗಳು ಮಕ್ಕಳಿಗಾಗಿಯೇ ಮೀಸಲಿವೆ.
Parenting Tips : ಮಕ್ಕಳ ಬೇಸಿಗೆ ರಜೆ ಹೀಗಿರಲಿ
ಹೆಚ್ಚು ಆಡಬೇಕಾ? ಫಾಸ್ಟ್ ಟ್ರ್ಯಾಕ್ ಹೋಗಿ
ವಂಡರ್‌ಲಾ ಪಾರ್ಕ್ ಪ್ರವೇಶಕ್ಕೆ ಸಾಮಾನ್ಯ ಟಿಕೆಟ್‌ಗೆ ಕನಿಷ್ಠ 1650 ರು. ದರವಿದ್ದು, ವಾರಾಂತ್ಯದ ದಿನಗಳಲ್ಲಿ 100 ರು. ಹೆಚ್ಚುವರಿ ಶುಲ್ಕವಿದೆ. ಆದರೆ, ಸಾಮಾನ್ಯ ಟಿಕೆಟ್‌ನಲ್ಲಿ ಪ್ರವೇಶಿಸಿದರೆ ಪ್ರತಿ ಆಟಕ್ಕೂ 30ರಿಂದ 45 ನಿಮಿಷಗಳವರೆಗೆ ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ಹೆಚ್ಚೆಂದರೆ 15-20 ಆಟ ಆಡಬಹುದಾಗಿದೆ. ಒಂದೇ ಭೇಟಿಯಲ್ಲಿ ಬಹುತೇಕ ಆಟಗಳನ್ನು ಆಡಬೇಕೆಂದಿದ್ದರೆ, ಫಾಸ್ಟ್‌ಟ್ರ್ಯಾಕ್ ಟಿಕೆಟ್ ಖರೀದಿಸಬೇಕಾಗುತ್ತದೆ. ಇದಕ್ಕೆ ದುಪ್ಪಟ್ಟು ದರವಿದ್ದು, ಇದನ್ನು ಖರೀದಿಸಿದವರು ಉದ್ದನೆಯ ಕ್ಯೂ ನಿಲ್ಲದೆ ಬೇಗನೆ ಪ್ರವೇಶ ಪಡೆಯಲು ಸಾಧ್ಯ.
ಹಲವು ರಿಯಾಯಿತಿ
ಬಿಎಂಟಿಸಿ ವೋಲ್ವೋದಲ್ಲಿ ಬಂದವರಿಗೆ ಶೇ.15 ರಿಯಾಯಿತಿ, 10, 11, 12ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿದರೆ ಶೇ.35, ಕಾಲೇಜು ಐಡಿ ಹೊಂದಿರುವ ವಿದ್ಯಾರ್ಥಿಗಳಿಗೆ ಶೇ.20, ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟು) ಶೇ.20 ಹಾಗೂ ಪಾರ್ಕ್ಗೆ ಭೇಟಿ ನೀಡುವ ಮುನ್ನ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಶೇ.10ರಷ್ಟುರಿಯಾಯಿತಿ ನೀಡಲಾಗುತ್ತಿದೆ.
ರೆಸಾರ್ಚ್‌ಗೆ ಬನ್ನಿ, ಆಟ ಉಚಿತ
ವಂಡರ್‌ಲಾದಲ್ಲಿ ಮನರಂಜನಾ ಉದ್ಯಾನ ಮಾತ್ರವಲ್ಲದೆ, ವಾಸ್ತವ್ಯದ ಸೌಲಭ್ಯವೂ ಉಂಟು. ಬೆಂಗಳೂರಿನಿಂದಾಚೆ ವಿಶ್ರಾಂತಿ ಪಡೆಯಲು ಬಯಸುವವರಿಗೆ, ಬೇರೆ ಊರಿಂದ ಬಂದು ತಂಗಲು ಇಚ್ಛಿಸುವವರಿಗೆ ವಂಡರ್‌ಲಾ ರೆಸಾರ್ಚ್ ಹೇಳಿ ಮಾಡಿಸಿದ ತಾಣ. ಇಲ್ಲಿ ಬೆಳಗ್ಗಿನ ಉಪಾಹಾರ ಸೇರಿದಂತೆ ಇಬ್ಬರಿಗೆ ಸುಮಾರು 7300 ರು. (ದಿನವೊಂದಕ್ಕೆ) ಶುಲ್ಕದ ಡಿಲಕ್ಸ್ ರೂಮ್‌ಗಳಿಂದ 10000 ರು. ದರವಿರುವ ಸೂಟ್ ರೂಮ್‌ಗಳು ಲಭ್ಯ. ರೂಮ್ ಬುಕ್ ಮಾಡಿದವರಿಗೆ ವಂಡರ್‌ಲಾ ಪಾರ್ಕ್ ಪ್ರವೇಶ ಉಚಿತ.
ಹೆಚ್ಚಿನ ವಿವರಗಳಿಗೆ: www.wonderla.comಗೆ ಭೇಟಿ ಕೊಡಿ ಅಥವಾ +918037230333, +918035073966 ಸಂಪರ್ಕಿಸಿ
ಸುರಕ್ಷತೆಯ ಮಂತ್ರ
ಸುರಕ್ಷತೆಗೆ ನಮ್ಮದು ಮೊದಲ ಆದ್ಯತೆ. ಪ್ರತಿನಿತ್ಯ ಪ್ರತಿ ಯಂತ್ರೋಪಕರಣದ ಸುರಕ್ಷತೆಯನ್ನೂ ಪರಿಶೀಲಿಸುತ್ತೇವೆ. ನಮ್ಮಲ್ಲಿಗೆ ಬರುವ ಜನರಷ್ಟೇ ಅಲ್ಲ, ನಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸುರಕ್ಷತೆಯೂ ನಮಗೆ ಮುಖ್ಯ. ಸಾಹಸ ಕ್ರೀಡೆಗಳ ಬಗ್ಗೆ ಜನರು ಸುರಕ್ಷತಾ ಭಾವ ಹೊಂದಿರಬೇಕು. ಹಾಗಾಗಿ, ಸುರಕ್ಷತೆ ವಿಷಯದಲ್ಲಿ ನಾವು ಒಂದಿಷ್ಟೂರಾಜಿ ಮಾಡುವುದಿಲ್ಲ. ಕಳೆದ 17-18 ವರ್ಷಗಳಿಂದ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇನ್ನಷ್ಟುಸಾಹಸ ಕ್ರೀಡೆಗಳನ್ನು ಪರಿಚಯಿಸುವ ಉದ್ದೇಶವಿದೆ. ಅಲ್ಲದೆ, ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್ಗೆ ಹೊಂದಿಕೊಂಡಂತೆ ವಂಡರ್ ಲಾ ರೆಸಾರ್ಚ್ ಇದೆ. ಅದರ ಗ್ರಾಹಕರಿಗಾಗಿಯೇ ಮಿನಿ ವಾಟರ್ ಪಾರ್ಕ್ ನಿರ್ಮಿಸಿ ಮಕ್ಕಳಿಂದ ವೃದ್ಧರವರೆಗೆ ಕುಟುಂಬದ ಎಲ್ಲ ಸದಸ್ಯರೂ ಆರಾಮದಾಯಕವಾಗಿ ಕಳೆಯುವಂತೆ ಮಾಡುವ ಯೋಜನೆ ಕೂಡ ಹಾಕಿಕೊಂಡಿದ್ದೇವೆ.
- ಅರುಣ್.ಕೆ.ಚಿಟ್ಟಿಲಪಿಲ್ಲಿ, ವ್ಯವಸ್ಥಾಪಕ ನಿರ್ದೇಶಕ, ವಂಡರ್‌ಲಾ ಹಾಲಿಡೇಸ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.