ಮಕ್ಕಳ ಮಂಗಾಟಕ್ಕೆ ಮಾತೇ ಮದ್ದು

By Web DeskFirst Published Oct 8, 2018, 5:16 PM IST
Highlights

ಅದೆಲ್ಲಿಂದ ಕಲೀತಾವೋ ಗೊತ್ತಿಲ್ಲ, ಮಕ್ಕಳು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡು ಬಿಡುತ್ತಾರೆ. ಅದರಿಂದ ಭವಿಷ್ಯದಲ್ಲಿ ಆಗಬಹುದಾದ ತೊಂದರೆಯನ್ನು ನೆನಪಿಸಿಕೊಳ್ಳುವ ಪೋಷಕರು ಕಕ್ಕಾಬಿಕ್ಕಿಯಾಗುತ್ತಾರೆ. ಅಷ್ಟಕ್ಕೂ ಮಕ್ಕಳ ಬೇಡದ ಅಭ್ಯಾಸವನ್ನು ಬಿಡಿಸುವುದು ಹೇಗೆ?

ಉಗುರು ಕಚ್ಚುವುದು

ಮಕ್ಕಳು ಉಗುರು ಕಚ್ಚುವುದು ಅಭದ್ರತಾ ಭಾವನೆಯಿಂದಲೋ ಅಥವಾ ಇನ್ಯಾವುದೋ ಅವ್ಯಕ್ತ ಭಯ ಅವರನ್ನು ಕಾಡಲಾರಂಭಿಸುವುದರಿಂದ. ಇದನ್ನು ಮೊದಲು ಪತ್ತೆ ಹಚ್ಚಬೇಕು. ನೈಜ ಭಯವಾದರೆ ಹೋಗಲಾಡಿಸಲು ಯತ್ನಿಸಬೇಕು. ಅಲ್ಲದೇ ಉಗುರು ಕಚ್ಚುವುದರಿಂದ ಆಗುವ ತೊಂದರೆಯನ್ನು ವಿವರಿಸಿ ಹೇಳಿ, ಇದರಿಂದ ಹೊರ ಬರಲು ಸಹಕರಿಸಬೇಕು. ಉಗುರಿಗೆ ಬಣ್ಣ ಹಚ್ಚಿದರೆ ಅದರ ವಾಸನೆ ಅಥವಾ ವೊಗರು ರುಚಿಯಿಂದ ಮಕ್ಕಳು ಇಂಥ ಅಭ್ಯಾಸದಿಂದ ದೂರವಾಗುತ್ತಾರೆ. ಹ್ಯಾಂಡ್ ಗ್ಲೌಸ್ ಬಳಸೋದ್ರಿಂದಲೂ ಉಗುರು ಕಚ್ಚುವುದನ್ನು ನಿಲ್ಲಿಸಬಹುದು.

ಬೆರಳು ಚೀಪುವುದು

ಬೆರಳಿಗೆ ಎಣ್ಣೆ ಅಥವಾ ಕ್ರೀಮ್ ಹಚ್ಚಿದರೆ, ಮಕ್ಕಳು ಬೆರಳು ಚೂಪುವ ಅಭ್ಯಾಸದಿಂದ ದೂರವಾಗುತ್ತಾರೆ. ಬೆರಳು ಚೀಪುವುದರಿಂದ ಹಲ್ಲು ಮುಂದಾಗುವ ಸಾಧ್ಯತೆ ಇದ್ದು, ಮುಖದ ಸೌಂದರ್ಯವೇ ಹಾಳಾಗುತ್ತದೆ. ಅಲ್ಲದೇ ಎಲ್ಲೆಂದರಲ್ಲಿ ಮಕ್ಕಳು ಬೆರಳು ಚೀಪುತ್ತಿದ್ದರೆ, ನೋಡಲು ಅಸಹ್ಯ ಎನಿಸುವುದರಿಂದ ಈ ಅಭ್ಯಾಸವನ್ನು ದೂರ ಮಾಡಬೇಕು.

ಊಟ ಮಾಡದಿರುವುದು...

ಮಕ್ಕಳಿಗೆ ತಿನ್ನು, ತಿನ್ನು ಎಂದು ಮೇಲಿಂದ ಮೇಲೆ ತುರುಕುತ್ತಿದ್ದರೆ ಊಟದ ಮೇಲಿನ ಪ್ರೀತಿಯನ್ನೇ ಕಳೆದುಕೊಂಡು ಬಿಡುತ್ತಾರೆ. ಬದಲಾಗಿ ಆಹಾರದ ಮೇಲೆ ಪ್ರೀತಿ ಬರುವಂತೆ ಮಾಡಬೇಕು. ಊಟಕ್ಕೆ ಒಂದೆರಡು ಗಂಟೆಗಳ ಮೊದಲು ಹಾಲನ್ನಾಗಿಲಿ ಅಥವಾ ಬೇರೆ ಕುರು ಕುರು ತಿಂಡಿಯನ್ನೇನೂ ಕೊಡದೇ ಮಕ್ಕಳಿಗೆ ಹೊಟ್ಟೆ ಹಸಿಯುವಂತೆ ಮಾಡಬೇಕು. ಅಲ್ಲದೇ ಚೆನ್ನಾಗಿ ಆಟವಾಡಲು ಬಿಟ್ಟರೂ, ದೈಹಿಕ ವ್ಯಾಯಾಮವಾಗಿ ಮಕ್ಕಳಿಗೆ ಹಸಿವಾಗುತ್ತದೆ. ಹೊಟ್ಟೆ ತುಂಬಾ ಊಟ ಮಾಡುತ್ತವೆ. ಅಲ್ಲದೇ ಮಕ್ಕಳಿಗೇ ಊಟ ಮಾಡಲು ಬಿಟ್ಟರೆ, ಅವಕ್ಕೆ ಎಷ್ಟು ಬೇಕೋ ಅಷ್ಟು ತಿಂದು ಬಿಡುತ್ತಿವೆ. ಹೀಗೆ ತಿಂದಿದ್ದು ಮೈಗೆ ಹಿಡಿಯುವುದಲ್ಲದೇ, ವಾಂತಿ-ಬೇಧಿಯಂಥ ಸಮಸ್ಯೆಗಳಿಂದಲೂ ಮಕ್ಕಳು ಮುಕ್ತವಾಗುತ್ತವೆ.

ಜಿರಲೆ, ಕತ್ತಲೆಗೆ ಭಯ

ಮಕ್ಕಳ ತೀಟೆಯನ್ನು ಕಂಟ್ರೆೋಲ್ ಮಾಡಲು, ದೊಡ್ಡವರು ಸುಖಾಸುಮ್ಮನೆ ಹೆದರಿಸುತ್ತಾರೆ. ಇದರಿಂದ ಅವ್ಯಕ್ತ ಭಯ ಅವರನ್ನು ಕಾಡುತ್ತದೆ. ಒಬ್ಬರೇ ಇರಲು ಹೆದರುತ್ತಾರೆ. ಮಲಗುವಾಗಲೂ ಆತಂಕದಿಂದಲೇ ಮಲಗುವುದರಿಂದ, ನಿದ್ರೆಯೂ ಸರಿ ಮಾಡುವುದಿಲ್ಲ. ಇದರಿಂದ ಸ್ಕೂಲಲ್ಲಿ ಅಥವಾ ಶಾಲೆಗೆ ಹೋಗುವಾಗ ನಿದ್ರಿಸುವುದು ಹೆಚ್ಚಾಗುತ್ತದೆ. ಮೊದಲು ಮಕ್ಕಳ ತಲೆಯಲ್ಲಿ ಬೇಡದ ಭಯವನ್ನು ತುಂಬಬೇಡಿ. ಆ ರೀತಿ ಇರುವ ಮಕ್ಕಳಿಗೆ ಕೋಣೆಯಲ್ಲಿ ಸಣ್ಣ ದೀಪ ಅಥವ ಲೈಟ್ ಹಚ್ಚಬೇಕು. ದೇವರ ಮೇಲೆ ತುಸು ನಂಬಿಕೆ ಹುಟ್ಟಿಸಿ, ಕೆಲವು ಶ್ಲೋಕಗಳನ್ನು ಹೇಳಿ ಕೊಡಬೇಕು. ಇದರಿಂದ ಕೆಟ್ಟ ಕನಸು ಬೀಳುವುದಿಲ್ಲವೆಂಬ ನಂಬಿಕೆ ಅವಗಳಲ್ಲಿ ಹುಟ್ಟಿಸಬೇಕು. ಇದು ಅವರ ಭಯವನ್ನು ನಿಧಾನವಾಗಿ ದೂರ ಮಾಡುತ್ತದೆ. 

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ

ಮಲಗವಾಗ ಮಕ್ಕಳಿಗೆ ಹೆಚ್ಚು ನೀರನ್ನು ಕೊಡಬಾರದು. ಇದರಿಂದ ಹಾಸಿಗೆಯಲ್ಲಿ ಮಕ್ಕಳು ಮೂತ್ರ ವಿಸರ್ಜಿಸಿ ಕೊಳ್ಳುವುದು ತಪ್ಪುತ್ತದೆ. ಮಲಗುವ ಮುನ್ನ ಸುಸು ಮಾಡಿಸಿ, ಮಲಗಿಸಿ. ಒಳ್ಳೆ ಕಥೆ ಹೇಳಿ, ಮಕ್ಕಳು ಒಳ್ಳೆ ಮನಸ್ಸಿನಿಂದ, ಭಯ ಮುಕ್ತರಾಗಿ ನಿದ್ರಿಸುವಂತೆ ಮಾಡುವುದು ಹಿರಿಯರ ಹೊಣೆ.

click me!