ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಚಲಿಸುವ ಕಾಲವೇ ಸಂಕ್ರಮಣ ಕಾಲವೆಂದೂ ಕರೆಯಲ್ಪಡುತ್ತದೆ. ಈ ಸಂಕ್ರಮಣದ ಸಮಯದಲ್ಲಿ ಮಾಡುವ ಸ್ನಾನ, ಜಪ, ಧ್ಯಾನ, ಹೋಮ, ತರ್ಪಣ ಮತ್ತು ಶ್ರಾದ್ಧ ಮುಂತಾದ ಕರ್ಮಗಳು ಅತ್ಯಂತ ಫಲಪ್ರದವಾಗುತ್ತವೆ ಎನ್ನುವುದು ನಂಬಿಕೆ.
ಬೆಂಗಳೂರು (ಜ. 15): ನಮ್ಮ ಭಾರತೀಯ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಗತ್ತಿನ ಏಕೈಕ ಸಂಸ್ಕೃತಿ. ಇಂಥಹ ಸಂಸ್ಕೃತಿ ಅನೇಕ ಆಚಾರ ವಿಚಾರಗಳಿಂದ ಸಮ್ಮಿಶ್ರಿತವಾದುದ್ದು. ಅದರಂತೆಯೇ ನಾನಾ ಹಬ್ಬಗಳು ನಮ್ಮ ಜೀವನಗತಿಯಲ್ಲಿ ಹಾಸುಹೊಕ್ಕಾಗಿದೆ. ಅಂತಹ ಹಬ್ಬಗಳ ಸಾಲಿನಲ್ಲಿ ಮೊದಲಾಗಿ ನಿಲ್ಲುವುದೇ ಈ ಸಂಕ್ರಾಂತಿ.
ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ತಮಿಳುನಾಡಿನಲ್ಲಿ ಪೊಂಗಲ…, ಜನಸಾಮಾನ್ಯರ ಆಡುಭಾಷೆಯಲ್ಲಿ ಎಳ್ಳಿನ ಹಬ್ಬವೆಂದೂ ಕರೆಯುತ್ತಾರೆ. ಸೂರ್ಯ ಚಂದ್ರರ ಚಲನೆಯ ಆಧಾರದಲ್ಲಿ ದಿನ, ರಾಶಿ, ತಿಥಿ, ನಕ್ಷತ್ರಗಳ ಗಣನೆ ನಮ್ಮಲ್ಲಿದೆ. ಸೂರ್ಯನು 12 ರಾಶಿಗಳಲ್ಲಿ ಸಂಚರಿಸುವ ಸಮಯವೇ ಒಂದು ಸೌರವರ್ಷ. ಆ ಸಂಚಾರದಲ್ಲಿ ಯಾವ ರಾಶಿಯಲ್ಲಿ ಸೂರ್ಯನಿರುತ್ತಾನೋ ಅದು ಸೌರಮಾಸವೆಂದು ಕರೆಯಲ್ಪಡುತ್ತದೆ. ಪ್ರಸ್ತುತ 2019ರ ಜನವರಿ 14ರ ರಾತ್ರಿ ಮಕರ ಸಂಕ್ರಮಣವು, 15ರ ಸೂರ್ಯೋದಯ ಸಮಯ ಪುಣ್ಯಕಾಲವೆಂದು ನಿರ್ಣಿತವಾಗಿ, ಇಂದು ಹರ್ಷದಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
undefined
ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ
ಸ್ನಾನದಾನತಪಃ ಶ್ರಾದ್ಧಹೋಮಾದಿಷು ಮಹಾಫಲಂ
ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಚಲಿಸುವ ಕಾಲವೇ ಸಂಕ್ರಮಣ ಕಾಲವೆಂದೂ ಕರೆಯಲ್ಪಡುತ್ತದೆ. ಈ ಸಂಕ್ರಮಣದ ಸಮಯದಲ್ಲಿ ಮಾಡುವ ಸ್ನಾನ, ಜಪ, ಧ್ಯಾನ, ಹೋಮ, ತರ್ಪಣ ಮತ್ತು ಶ್ರಾದ್ಧ ಮುಂತಾದ ಕರ್ಮಗಳು ಅತ್ಯಂತ ಫಲಪ್ರದವಾಗುತ್ತವೆ ಎನ್ನುವುದು ಇದರ ತಾತ್ಪರ್ಯ.
ಧನುರ್ ರಾಶಿಯಿಂದ ಮಕರರಾಶಿಗೆ ಸೂರ್ಯನು ಪ್ರವೇಶಿಸುವುದೇ ಈ ಮಕರ ಸಂಕ್ರಾಂತಿ. ಮಕರರಾಶಿದಿಂದ ಮಿಥುನರಾಶಿಯವರೆಗಿನ 6 ತಿಂಗಳ ಸೂರ್ಯನ ಚಲನಾ ಕಾಲ ಉತ್ತರಾಯಣವೆಂದು ಕರೆಯಲ್ಪಡುವುದರಿಂದ ಉತ್ತರಾಯಣ ಪುಣ್ಯಕಾಲವೆಂದೂ ಇದನ್ನು ಕರೆಯಲಾಗುತ್ತದೆ.
12 ಸಂಕ್ರಾಂತಿಗಳಲ್ಲಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಗಳು ಅಯನ ಸಂಕ್ರಾಂತಿಗಳಾದ್ದರಿಂದಲೂ, ಇವೆರಡರಲ್ಲಿ ಉತ್ತರಾಯಣವೇ ಶ್ರೇಷ್ಠವಾದ್ದರಿಂದ ಈ ಮಕರ ಸಂಕ್ರಾಂತಿಯು ಪ್ರಸಿದ್ಧಿಯಾಗಿದೆ. ಉದಗಯನ ಪೂರ್ವಪಕ್ಷಾಹಃ ಪುಣ್ಯಾಹೇಷು ಕಾರ್ಯಾಣಿ ಎನ್ನುವ ವಾಕ್ಯದಿಂದ ಉತ್ತರಾಯಣ ಕಾಲದ ಶ್ರೇಷ್ಠತೆಯು ತಿಳಿಸುತ್ತದೆ.
ಧಾರ್ಮಿಕವಾಗಿ ಸಂಕ್ರಾಂತಿಯನ್ನು ಈ ರೀತಿ ಚಿಂತಿಸಿದರೆ ಸಾಮಾಜಿಕವಾಗಿ ಇದನ್ನು ರೈತಾಪಿ ಜನರ ಹಬ್ಬವೆಂದೇ ಕರೆಯಬಹುದು. ವರ್ಷದ ಕೆಲಸಗಳ ಫಲ ಕೈಯಲ್ಲಿ ಭತ್ತವೇ ಮೊದಲಾದ ಧಾನ್ಯರಾಶಿಯ ರೂಪದಲ್ಲಿ, ಮನೆಯಲ್ಲಿ ಭಾಗ್ಯಲಕ್ಷ್ಮಿಯ ರೂಪದಲ್ಲಿ ತುಂಬಿರುವ ಮನಸ್ಸು ಸಂತಸದಿಂದ ಹಿಗ್ಗಿ ಸುಗ್ಗಿಯಾಗುತ್ತದೆ. ಕೃಷಿಯ ಕೆಲಸಕ್ಕೆ ಬೆನ್ನೆಲುಬಾದ ಗೋವುಗಳಿಗೆ ಸ್ನಾನ ಮಾಡಿಸಿ ಕೊಂಬುಗಳಿಗೆ ಬಣ್ಣ ಹಚ್ಚಿ, ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿಗಳನ್ನು ನೀಡಿ ಅವುಗಳನ್ನು ಉರಿಯುವ ಬೆಂಕಿಯನ್ನು ದಾಟಿಹೋಗುವಂತೆ ಮಾಡುವ ಕಿಚ್ಚು ಹಾಯಿಸುವುದು ಎಂಬ ಸಂಪ್ರದಾಯಗಳೂ ಇದೆ. ಇದು ಅವುಗಳ ಶ್ರಮದ ನಿವಾರಣೆಗೆ ಮತ್ತು ದೇಹದಲ್ಲಿ ಸೇರಿರಬಹುದಾದ ರೋಗಾಣುಗಳ ನಾಶಕ್ಕೆ ಸಹಾಯವಾಗಿದೆ.
ತಮಿಳುನಾಡಿನಲ್ಲಿ ಉಕ್ಕುವುದು ಎಂಬರ್ಥದ ಪೊಂಗಲ… ಎಂಬ ಪದದಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಭೋಗೀ, ಸಂಕ್ರಾಂತಿ, ಕನೂ ಹಬ್ಬವೆಂದು ಸಂಕ್ರಾಂತಿಯ ದಿನ ಮತ್ತು ಅದರ ಹಿಂದಿನ ಮುಂದಿನ ದಿನಗಳನ್ನು ಸೇರಿಸಿ ಮೂರುದಿನಗಳ ಹಬ್ಬದ ಆಚರಣೆಯನ್ನು ಅಲ್ಲಿ ನೋಡಬಹುದು.
ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಲಾನಿ ಭವಂತು ಎಂದೂ, ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಂಡಿತಃ ಎಂಬುದಾಗಿಯೂ ಸಾರುವ ನಮ್ಮ ಸನಾತನಧರ್ಮವು ಸರ್ವರಿಗೂ ಸಮಾನತೆಯನ್ನು ಸಾಧಿಸಲು ಉಪದೇಶಿಸುತ್ತದೆ. ಅದರ ಆಚರಣೆಗಳೂ ಹಾಗೆಯೇ ಪ್ರತಿಯೊಂದರಲ್ಲೂ ಸಮತ್ವವನ್ನೇ ಸಾಧಿಸುತ್ತದೆ. ಮಕರ ಸಂಕ್ರಾಂತಿಯೂ ಹಾಗೆ ಎಲ್ಲ ವರ್ಗಗಳ ಹಬ್ಬ.
ಸನ್ನಿಹಿತ ಮನುಜನಲಿ ದೈವಪಾಶವವೆರೆಡು
ಪುಣ್ಯ ಪಾಪದ ಮಿಶ್ರವವನ ಸ್ವಭಾವ
ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು
ಮಣ್ಣುರುಳುವುದೊಮ್ಮೆ
- ಮಂಕುತಿಮ್ಮ
ಇದರ ತಾತ್ಪರ್ಯದಂತೆ ಈ ಮನುಜನಲಿ ಎಳ್ಳು ಬೆಲ್ಲ, ಸಿಹಿ ಕಹಿಯ ಹಾಗೆ ಪಾಪ - ಪುಣ್ಯಗಳೆಂಬ ಮಿಶ್ರಣವಿದೆ. ಪಾಪದಿಂದ ನಾಶ, ಪುಣ್ಯದಿಂದ ವೃದ್ಧಿ. ಸಂಸ್ಕೃತಿಯಿಂದ ದೂರವಾದ ನಾವು ಸ್ವಾರ್ಥಗಳಿಂದ ಪಾಪದಲ್ಲಿ ಮುಳುಗುತ್ತಿದ್ದೇವೆ. ಇದು ನಮ್ಮನ್ನು ಅಭಿವೃದ್ಧಿಯಿಂದ ದೂರಮಾಡುವಂಥದ್ದು.
ಭಾರತದ ಬದಲಾವಣೆ ಭಾರತೀಯರಾದ ನಮ್ಮ ಬದಲಾವಣೆಯ ಪ್ರತಿಬಿಂಬ. ಮೊದಲು ನಾವು ಬದಲಾಗೋಣ. ಸಂಕ್ರಾಂತಿಯ ಈ ದಿನ ಸರ್ವರಲ್ಲೂ ಸಮಭಾವ ಸುಖಶಾಂತಿ ನೆಲೆಸಲೆಂದು ಪ್ರಾರ್ಥಿಸೋಣ. ಉತ್ತರಾಯಣದ ಈ ಕಾಲದಲ್ಲಿ ಬೆಳವಣಿಗೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕೋಣ. ಎಳ್ಳು ಬೆಲ್ಲದಂತ ಜೀವನದಲ್ಲಿ ಎಲ್ಲ ಕಡೆಯಲ್ಲಿಯೂ ಸಿಹಿಯನ್ನು ಹಂಚೋಣ.
- ಕೆ ಎಲ್ ಸೋಮಶಂಕರ್ ಸೋಮಯಾಜಿ, ಕಮ್ಮರಡಿ