ಸುಖ ದಾಂಪತ್ಯಕ್ಕೆ ಕಬೀರರ ಸೂತ್ರ, ನೀವೂ ಅಪ್ಲೈ ಮಾಡಿ ಕೊಂಡ್ರೆ ಬದುಕು ಸುಸೂತ್ರ

By Web DeskFirst Published Jun 10, 2019, 10:07 AM IST
Highlights

ಮದುವೆ ಮುರಿದು ಬೀಳೋದು, ಲವ್ ಬ್ರೇಕ್ ಅಪ್ ಆಗೋದಕ್ಕೆಲ್ಲ ಇಂಥ ವಾದಗಳೇ ಹೆಚ್ಚು ಕಾರಣ. ವಾದ ಕುರುಡು. ಯಾವುದನ್ನೂ ಗಮನವಿಟ್ಟು ನೋಡುವುದಿಲ್ಲ. ಅಹಂನಿಂದ ತುಂಬಿರುತ್ತದೆ. ಅಜ್ಞಾನ, ಸಿಟ್ಟು ಇದರ ಜೊತೆಗೂಡುತ್ತದೆ. ಅನಿವಾರ್ಯವಾಗಿ ಸಂಬಂಧ ಹದಗೆಡುತ್ತದೆ. ಜೀವನಪರ್ಯಂತ ನಮ್ಮ ಜೊತೆಗಿರುವ ಸಂಗಾತಿ ಜೊತೆಗೆ ಸೌಹಾರ್ದದಿಂದಿರುವುದು ಎಷ್ಟು ಒಳ್ಳೆಯದಲ್ವಾ. ವಾದದಿಂದ ಹಿಂತೆಗೆದುಕೊಳ್ಳುವ ಸಿಂಪಲ್ ಟ್ರಿಕ್‌ಗಳು ಇಲ್ಲಿವೆ.

ರುಬೇಸಗೆಯ ಒಂದು ದಿನ. ಕಬೀರರು ಗುಡಿಸಲ ಹೊರಗೆ ಕೂತು ಬಟ್ಟೆ ನೇಯುವುದರಲ್ಲಿ ತಲ್ಲೀನರಾಗಿದ್ದರು. ಅಷ್ಟರಲ್ಲಿ ಅವರಲ್ಲಿಗೆ ಒಬ್ಬಾತ ಬಂದ. ಬಹಳ ದುಃಖದಲ್ಲಿದ್ದವನ ಹಾಗೆ ಕಂಡ. ‘ನನಗೆ ನಿಮ್ಮ ಸಲಹೆ ಬೇಕು ಗುರುಗಳೇ, ದಯವಿಟ್ಟು ಈ ಸಂಕಟದಿಂದ ನನ್ನನ್ನು ಪಾರು ಮಾಡಿ’ ಎಂದ. ‘ಏನು ವಿಷಯ?’ ಕಬೀರರು ವಿಚಾರಿಸಿದರು.

‘ಏನಂತ ಹೇಳಲಿ ಸ್ವಾಮೀ, ನನ್ನ ಹೆಂಡತಿಯ ಜೊತೆಗೆ ಏಗುವುದೇ ಕಷ್ಟವಾಗುತ್ತಿದೆ.ದಿನಂಪ್ರತಿ ನಮ್ಮಲ್ಲಿ ವಾದ, ಜಗಳ. ಮನಃಶ್ಯಾಂತಿಯೇ ಇಲ್ಲ. ಇದರಿಂದ ಹೇಗೆ ಹೊರಗೆ ಬರೋದು?’ ವ್ಯಕ್ತಿ ಅಲವತ್ತುಕೊಂಡ.

ಈಗಿನ ಅಪ್ಪಅಮ್ಮಂದ್ರಿಗೆ ಮಗು ಅಂದ್ರೆ ಮಂಡೆಬಿಸಿ ಅಂತೆ!

‘ಬೇಸರಿಸಬೇಡ ಗೆಳೆಯಾ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇದೆ’ ಎಂದ ಕಬೀರರು ಯಾವುದೋ ದೋಹ ಗುನುಗುತ್ತಾ ಚರಕದಲ್ಲಿ ನೂಲುವುದನ್ನು ಮುಂದುವರಿಸಿದರು. ವಿಪರೀತ ಸೆಕೆಯಿತ್ತು. ಆ ವ್ಯಕ್ತಿ ಬೆವರುತ್ತಿದ್ದ. ಕುಳಿತಲ್ಲಿಗೇ ಅತ್ತಿಂದಿತ್ತ ಸರಿದಾಡುತ್ತಾ ಚಡಪಡಿಸತೊಡಗಿದ. ಕಬೀರರಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ. ಕೈಯಲ್ಲಿ ಬೀಸಣಿಗೆಯೂ ಇಲ್ಲದೇ, ನೆರಳಿನ ತಂಪೂ ಇಲ್ಲದೇ ಅವರು ಅವರಷ್ಟಕ್ಕೆ ನೂಲುತ್ತಿದ್ದರು. ಅವರ ನಿಲುವಿನಲ್ಲಿ ನೆಮ್ಮದಿ, ಶಾಂತಿ ಎದ್ದು ಕಾಣುತ್ತಿತ್ತು. ಬಿಸಿಲಿನ ಬಗ್ಗೆ ಸಣ್ಣ ಕಂಪ್ಲೇಂಟೂ ಇದ್ದ ಹಾಗಿರಲಿಲ್ಲ. ಇಹದ ಪರಿವೆಯೇ
ಇಲ್ಲದ ಹಾಗೆ ಕೂತಿದ್ದರು.

‘ಇದ್ದೀಯಾ ಒಳಗೆ..’ ಮೆಲುದನಿಯಲ್ಲಿ ಪತ್ನಿಯನ್ನು ಕೂಗಿದರು. ‘ಒಂದು ಲಾಟೀನು ತಂದುಕೊಡುವೆಯಾ..’ ಅಂದರು.

ಸುಮಾರು ಹತ್ತು ನಿಮಿಷ ಕಳೆದಿರಬೇಕು. ಮನೆಯೊಳಗಿಂದ ಕಬೀರರ ಪತ್ನಿ ಹೊರಬಂದರು. ಅವರ ಕೈಯಲ್ಲೊಂದು ಲಾಟೀನು ಇತ್ತು. ಅದು ಸಣ್ಣಗೆ ಉರಿಯುತ್ತಿತ್ತು. ಅದನ್ನು ಕಬೀರರ ಪಕ್ಕದಲ್ಲಿಟ್ಟರಾಕೆ. ವ್ಯಕ್ತಿಯ ಅಚ್ಚರಿ ಹೆಚ್ಚಾಯ್ತು. ಇಲ್ಲಿ ಸೂರ್ಯ ಕೆಂಡದಂತೆ ಉರಿಯುತ್ತಿದ್ದಾನೆ. ಈ ಕಬೀರರು ಲಾಟೀನು ಕೇಳುತ್ತಿದ್ದಾರೆ. ಆಕೆ ಮರುಮಾತಿಲ್ಲದೇ ತಂದಿಟ್ಟಿದ್ದಾರೆ. ಏನಿದು ಕತೆ ಅಂತ ತಲೆ ಕರೆದುಕೊಂಡ.

ಸಂಬಂಧ ಸುಧಾರಿಸಬಲ್ಲ ಸೈಕಿಕ್ ಟ್ರಿಕ್ಸ್ ಅರಿತರೆ, ಬದುಕು ಬಿಂದಾಸ್!

‘ನೋಡು, ಮನೆಗೊಬ್ಬ ಅತಿಥಿ ಬಂದಿದ್ದಾರೆ. ಅವರಿಗಾಗಿ ಬೆಲ್ಲ ಮತ್ತು ನೀರು ಕೊಡುವೆಯಾ?’ ಎಂದು ಪತ್ನಿಯಲ್ಲಿ ವಿನಂತಿಸಿದರು.

ಇನ್ನೊಂಚೂರು ಹೊತ್ತು ಬಿಟ್ಟು ಬಂದ ಪತ್ನಿಯ ಕೈಯಲ್ಲಿ ನೀರು ಹಾಗೂ ರುಚಿಕರವಾದ ತಿನಿಸಿತ್ತು. ಆಕೆಗೆ ಧನ್ಯವಾದ ಹೇಳಿದ ಕಬೀರರು, ಆ ಅತಿಥಿಗೆ ಆಹಾರ ಸ್ವೀಕರಿಸಲು ವಿನಂತಿಸಿದರು. ಆತನ ಮುಖದಲ್ಲಿ ಅಚ್ಚರಿ ಕಂಡು ಕೇಳಿದರು, ‘ಇದನ್ನು ಕಂಡು ನಿನಗೆ ತಲೆಕೆಟ್ಟು ಹೋಗಿರಬಹುದಲ್ಲಾ..’

ಹೌದು ಗುರುಗಳೇ. ಇಲ್ಲಿ ಏನು ನಡೆಯುತ್ತಿದೆ ಅಂತಲೇ ಅರ್ಥ ಆಗುತ್ತಿಲ್ಲ’ ಎಂದನಾತ.

‘ಇದೇ ನೋಡು ಸುಖೀ ದಾಂಪತ್ಯದ ರಹಸ್ಯ. ಗಂಡ ಹೆಂಡತಿ ನಡುವೆ ವಾದವಾಗುವುದು ಹೆಚ್ಚು. ಆದರೆ ಅದರಲ್ಲಿ ಹುರುಳೇ ಇರುವುದಿಲ್ಲ. ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ ಸಂಬಂಧ,ಪ್ರೀತಿ ಹದಗೆಡುತ್ತದೆ. ಒಂದೊಮ್ಮೆ ವಿವಾಹವೇ ಮುರಿದುಬೀಳಬಹುದು. ಹೀಗೆ ವಾದ ಮಾಡುವುದಕ್ಕಿಂತ ಇನ್ನೊಬ್ಬರ ಮಾತನ್ನು ಅರ್ಥ ಮಾಡಿಕೊಳ್ಳುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಈಗ ನಡು ಹಗಲಲ್ಲೇ ಆಕೆಯ ಬಳಿ ನಾನು ಲಾಟೀನು ತರಲು ಹೇಳಿದೆ. ಆಕೆ ಮರುಮಾತಾಡದೇ ತಂದಳು. ಅವಳಿಗೆ ಗೊತ್ತಿದೆ, ನಾನು ಲಾಟೀಲು ತರಲು ಹೇಳಿದ್ದಕ್ಕೆ ಏನೋ ಉದ್ದೇಶವಿದೆ ಅಂತ. ಇನ್ನೊಮ್ಮೆ ನಾನು ಬೆಲ್ಲ ತಾ ಅಂದೆ. ಆಕೆ ಬೇರೆ ತಿನಿಸು ತಂದಳು. ನನಗೆ ಅರ್ಥವಾಯಿತು, ಮನೆಯಲ್ಲಿ ಬೆಲ್ಲ ಖಾಲಿಯಾಗಿದೆ ಅಂತ. ಇಷ್ಟರಲ್ಲೇ ವಾದ ಮಾಡಲೂ ಅವಕಾಶವಿತ್ತು, ಅರ್ಥ ಮಾಡಿಕೊಳ್ಳಲೂ ಅವಕಾಶವಿತ್ತು. ನಾವು ಎರಡನೆಯದನ್ನು ಆರಿಸಿಕೊಂಡೆವು. ಅದಕ್ಕೆ ಇವತ್ತಿಗೂ ನಮ್ಮೊಳಗಿನ ಪ್ರೀತಿ, ವಿಶ್ವಾಸ ಕುಂದಿಲ್ಲ.’

click me!