CarryMen Startup: ಶಾಪಿಂಗ್ ಮಾಡಿ ಸಾಕಾಯ್ತಾ? ಬ್ಯಾಗ್ ಹೊರೋಕೆ ನಾವಿದ್ದೀವಿ ಅಂತಿದೆ ಈ ಸ್ಟಾರ್ಟಪ್!

Published : May 24, 2026, 07:51 PM IST
Hands-free shopping

ಸಾರಾಂಶ

Hands-free shopping: 'ಕ್ಯಾರಿಮೆನ್' ಸ್ಟಾರ್ಟಪ್ ಸಖತ್ ಸದ್ದು ಮಾಡ್ತಿದೆ. ಇನ್ಮೇಲೆ ಜನನಿಬಿಡ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವಾಗ ಬ್ಯಾಗ್ ಹೊತ್ತುಕೊಳ್ಳಲು, ಆರಾಮವಾಗಿ ಓಡಾಡಲು ತರಬೇತಿ ಪಡೆದ ಸಹಾಯಕರು ಸಿಗ್ತಾರೆ.  ಈಗಾಗಲೇ 50ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಈ ಸ್ಟಾರ್ಟಪ್ ಪೂರ್ಣಗೊಳಿಸಿದೆ.

ಬೆಂಗಳೂರಿನ ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡಿದಾಗ ಒಂದೇ ಸಮಯದಲ್ಲಿ ಖುಷಿ ಮತ್ತು ಸುಸ್ತು ಎರಡೂ ಆಗುತ್ತೆ. ಇನ್ನು ದೆಹಲಿಯಂತಹ ಫೇಮಸ್ ಸ್ಟ್ರೀಟ್ ಮಾರ್ಕೆಟ್‌ಗಳಿಗೆ ಹೋಗಿ ಶಾಪಿಂಗ್ ಮಾಡಿದವರಿಗೆ ಅಲ್ಲಿನ ಅನುಭವ ಹೇಗಿರುತ್ತೆ ಅಂತ ಚೆನ್ನಾಗಿ ಗೊತ್ತು. ಲಜಪತ್ ನಗರ ಮತ್ತು ಸರೋಜಿನಿ ನಗರದಂತಹ ಜನಜಂಗುಳಿಯಲ್ಲಿ ನುಗ್ಗುವುದು, ಭಾರವಾದ ಶಾಪಿಂಗ್ ಬ್ಯಾಗ್‌ಗಳನ್ನು ಹೊತ್ತುಕೊಂಡು ಸ್ಟ್ರೀಟ್ ಫುಡ್ ತಿನ್ನಲು ಪರದಾಡುವುದು, ಒಟ್ಟಾರೆ ಅನುಭವವನ್ನು ಕಷ್ಟಕರವಾಗಿಸುತ್ತೆ. ಇದರ ಜೊತೆಗೆ ಬಿಸಿಲು, ಟ್ರಾಫಿಕ್, ಉದ್ದದ ನಡಿಗೆ ಮತ್ತು ಚೌಕಾಸಿ ಎಲ್ಲವೂ ಸೇರಿ ಒಂದು ಸಣ್ಣ ಶಾಪಿಂಗ್ ಟ್ರಿಪ್ ಕೂಡ ದೊಡ್ಡ ತಲೆನೋವಾಗಿ ಬದಲಾಗಬಹುದು.

ಈ ಸಮಸ್ಯೆಗೆ ಪರಿಹಾರ ನೀಡಲು 'ಕ್ಯಾರಿಮೆನ್' (CarryMen) ಎಂಬ ದೆಹಲಿ ಮೂಲದ ಸ್ಟಾರ್ಟಪ್ ಮುಂದೆ ಬಂದಿದೆ. ಜನನಿಬಿಡ ಮಾರುಕಟ್ಟೆಗಳಲ್ಲಿ ಗ್ರಾಹಕರು ಆರಾಮವಾಗಿ ಓಡಾಡಲು ಮತ್ತು ಅವರ ಬ್ಯಾಗ್‌ಗಳನ್ನು ಹೊತ್ತುಕೊಳ್ಳಲು ತರಬೇತಿ ಪಡೆದ ಸಹಾಯಕರನ್ನು ಈ ಕಂಪನಿ ಒದಗಿಸುತ್ತಿದೆ. 'ನೀವು ಶಾಪಿಂಗ್ ಮಾಡಿ, ನಾವು ಹೊರುತ್ತೇವೆ' ಎಂಬ ಈ ಸ್ಟಾರ್ಟಪ್‌ನ ಸರಳ ಐಡಿಯಾ, ಆನ್‌ಲೈನ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗೂ ಕಾರಣವಾಗಿದೆ.

ದೈನಂದಿನ ಶಾಪಿಂಗ್ ಕಷ್ಟಗಳಿಂದ ಹುಟ್ಟಿದ ಐಡಿಯಾ

ಕ್ಯಾರಿಮೆನ್ ಸಂಸ್ಥಾಪಕರು ಹೇಳುವ ಪ್ರಕಾರ, ಈ ಐಡಿಯಾ ಹುಟ್ಟಿದ್ದೇ ಅವರ ಸ್ವಂತ ಅನುಭವದಿಂದ. ದೆಹಲಿಯಲ್ಲಿ ಬೆಳೆದ ಅವರು, ತಮ್ಮ ಕುಟುಂಬದವರೊಂದಿಗೆ ಜನನಿಬಿಡ ಸ್ಥಳೀಯ ಮಾರುಕಟ್ಟೆಗಳಿಗೆ ಹೋದಾಗ ಈ ಕಲ್ಪನೆ ಬಂದಿದೆ.

ವರದಿಯ ಪ್ರಕಾರ, ಜನರಿಗೆ ಶಾಪಿಂಗ್ ಮಾಡುವುದು ಇಷ್ಟ, ಆದರೆ ಅದರ ಜೊತೆ ಬರುವ ದೈಹಿಕ ಶ್ರಮ ಆಗುವುದಿಲ್ಲ. ಭಾರವಾದ ಬ್ಯಾಗ್‌ಗಳನ್ನು ಹೊರುವುದು, ಕ್ಯೂನಲ್ಲಿ ನಿಲ್ಲುವುದು, ಕೂರಲು ಜಾಗ ಹುಡುಕುವುದು ಮತ್ತು ಜನನಿಬಿಡ ಓಣಿಗಳಲ್ಲಿ ಹೆಚ್ಚು ನಡೆಯುವುದು ಬೇಗನೆ ಸುಸ್ತು ತರಿಸುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು, ಕಂಪನಿಯು ಶಾಪಿಂಗ್ ಸಹಾಯಕರನ್ನು ಪರಿಚಯಿಸಿದೆ. ಈ ಸಹಾಯಕರು ಗ್ರಾಹಕರ ಜೊತೆಯಲ್ಲೇ ಇರುತ್ತಾರೆ. ಗಂಟೆಗೆ 149 ರೂಪಾಯಿ ಮತ್ತು 30 ನಿಮಿಷಕ್ಕೆ 79 ರೂಪಾಯಿ ಶುಲ್ಕದಲ್ಲಿ, ಗ್ರಾಹಕರು ಎರಡು, ಮೂರು ಅಥವಾ ನಾಲ್ಕು ಗಂಟೆಗಳ ಪ್ಯಾಕೇಜ್‌ಗೆ ತರಬೇತಿ ಪಡೆದ ಸಹಾಯಕನನ್ನು ನೇಮಿಸಿಕೊಳ್ಳಬಹುದು. ಈ ಸಹಾಯಕರು ಶಾಪಿಂಗ್ ಬ್ಯಾಗ್‌ಗಳನ್ನು ಹೊರುವುದು, ಜನಸಂದಣಿಯಲ್ಲಿ ದಾರಿ ಮಾಡಿಕೊಡುವುದು, ಫುಡ್ ಕ್ಯೂನಲ್ಲಿ ನಿಲ್ಲುವುದು, ಪಾರ್ಕಿಂಗ್ ಅಥವಾ ಮೆಟ್ರೋ ನಿಲ್ದಾಣಕ್ಕೆ ದಾರಿ ತೋರಿಸುವುದು ಮತ್ತು ಶಾಪಿಂಗ್ ಸಮಯದಲ್ಲಿ ಬೇಕಾದ ಮೂಲಭೂತ ಸಹಾಯವನ್ನು ಮಾಡುತ್ತಾರೆ. ಸದ್ಯಕ್ಕೆ ಈ ಕಂಪನಿ ಮುಖ್ಯವಾಗಿ ಲಜಪತ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಚಾಂದಿನಿ ಚೌಕ್‌ಗೂ ವಿಸ್ತರಿಸುವ ಯೋಜನೆ ಹೊಂದಿದೆ.

ವಯಸ್ಸಾದವರು ಮತ್ತು ಪೋಷಕರಿಗೂ ಈ ಸೇವೆ ಸಹಕಾರಿ

ಈ ಸೇವೆಯನ್ನು ಹೆಚ್ಚಾಗಿ ಬಳಸುತ್ತಿರುವವರು ಬಟ್ಟೆ, ಕರ್ಟನ್, ಬೆಡ್‌ಶೀಟ್ ಮತ್ತು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬರುವ ವಯಸ್ಸಾದ ಮಹಿಳೆಯರು ಎಂದು ಸ್ಟಾರ್ಟಪ್ ಹೇಳಿದೆ.

ಸಂಸ್ಥಾಪಕರ ಪ್ರಕಾರ, ಹಿರಿಯ ಗ್ರಾಹಕರಿಗೆ ಐಷಾರಾಮಿ ಸೇವೆಗಿಂತ ಹೆಚ್ಚಾಗಿ ಸರಳವಾದ ಸಹಾಯ ಬೇಕು. ಕೆಲವರಿಗೆ ಬ್ಯಾಗ್ ಹೊರುವವರು, ಊಟ ಆರ್ಡರ್ ಮಾಡಲು ಸಹಾಯ ಮಾಡುವವರು ಅಥವಾ ದೀರ್ಘ ಶಾಪಿಂಗ್ ಸಮಯದಲ್ಲಿ ಆರಾಮವಾಗಿ ಕೂರಲು ಜಾಗ ಹುಡುಕಿಕೊಡುವವರು ಬೇಕು. ಈ ಸ್ಟಾರ್ಟಪ್ ಈ ಕೆಳಗಿನ ಭರವಸೆಗಳನ್ನು ನೀಡುತ್ತದೆ:
ಪರಿಶೀಲಿಸಿದ ಶಾಪಿಂಗ್ ಸಹಾಯಕರು
ಹಲವಾರು ಅಂಗಡಿಗಳಲ್ಲಿ ಸಹಾಯ
ಸುರಕ್ಷಿತ ಮತ್ತು ಆರಾಮದಾಯಕ ಮಾರುಕಟ್ಟೆ ಶಾಪಿಂಗ್

ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲೆಂದು, ಕಂಪನಿಯು ಮಡಚಬಹುದಾದ ಪೋರ್ಟಬಲ್ ಚೇರ್‌ಗಳನ್ನು ಸಹ ಪರಿಚಯಿಸಿದೆ. ಗ್ರಾಹಕರಿಗೆ ಸುಸ್ತಾದಾಗ, ಸಹಾಯಕರು ಈ ಚೇರ್ ಅನ್ನು ಮಾರುಕಟ್ಟೆಯ ಮಧ್ಯದಲ್ಲೇ ಹಾಕಿಕೊಡುತ್ತಾರೆ, ಆಗ ಅವರು ವಿಶ್ರಾಂತಿ ಪಡೆಯಬಹುದು. ಈ ಸೇವೆಯಲ್ಲಿ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ನೀಡಲು ಛತ್ರಿ, ಮೊಬೈಲ್ ಚಾರ್ಜಿಂಗ್ ಸೌಲಭ್ಯ, ಪವರ್ ಬ್ಯಾಂಕ್ ಮತ್ತು ಕುಡಿಯುವ ನೀರಿನ ಸಹಾಯವೂ ಸೇರಿದೆ. 

ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳೊಂದಿಗೆ ಬರುವ ಪೋಷಕರಿಂದಲೂ ಕ್ಯಾರಿಮೆನ್‌ಗೆ ಬುಕ್ಕಿಂಗ್‌ಗಳು ಬಂದಿವೆ. ಜನನಿಬಿಡ ಶಾಪಿಂಗ್ ಪ್ರದೇಶಗಳಲ್ಲಿ ಕುಟುಂಬಗಳು ಹೆಚ್ಚು ಆರಾಮವಾಗಿ ಓಡಾಡಲು ಸಹಾಯವಾಗುವಂತೆ, ಕಂಪನಿಯು ಹೆಚ್ಚುವರಿ ಗಂಟೆಯ ಶುಲ್ಕದಲ್ಲಿ ಮಕ್ಕಳ ಸ್ಟ್ರಾಲರ್ ಬಾಡಿಗೆಯನ್ನೂ ನೀಡುತ್ತದೆ. ಒಬ್ಬ ಸಹಾಯಕನಿಗೆ ಸದ್ಯಕ್ಕೆ 12 ಕೆ.ಜಿ. ತೂಕದ ಮಿತಿ ಇದೆ. ಹೆಚ್ಚು ಭಾರವಾದ ವಸ್ತುಗಳನ್ನು ಹೊತ್ತೊಯ್ಯುವ ಗ್ರಾಹಕರು ಹೆಚ್ಚುವರಿ ಸಹಾಯಕನನ್ನು ನೇಮಿಸಿಕೊಳ್ಳಬಹುದು.  

ಆರಂಭವಾದ ಕೆಲವೇ ದಿನಗಳಲ್ಲಿ ಭರ್ಜರಿ ಬೆಳವಣಿಗೆ

ಏಪ್ರಿಲ್‌ನಲ್ಲಿ ಅಧಿಕೃತವಾಗಿ ಆರಂಭವಾದ ಈ ಕಂಪನಿ, ಮೊದಲ ತಿಂಗಳಲ್ಲೇ 50ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿಕೊಂಡಿದೆ. ಕುತೂಹಲಕಾರಿ ವಿಷಯವೆಂದರೆ, ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಕ್ಯಾಂಪೇನ್‌ಗಳಿಗಿಂತ ಹೆಚ್ಚಾಗಿ, ಬಾಯಿ ಮಾತಿನ ಪ್ರಚಾರ ಮತ್ತು ಸೋಷಿಯಲ್ ಮೀಡಿಯಾದಲ್ಲಿ ನಡೆದ ಚರ್ಚೆಗಳಿಂದಲೇ ಈ ಸ್ಟಾರ್ಟಪ್ ಹೆಚ್ಚು ಜನಪ್ರಿಯತೆ ಗಳಿಸಿದೆ. ಈ ಕಾನ್ಸೆಪ್ಟ್ ವೈರಲ್ ಆಗಿದ್ದೇ ತಡ, ಅನೇಕರು ಈ ಐಡಿಯಾವನ್ನು ತಮಾಷೆಯಾಗಿ, ಆದರೆ ಅಷ್ಟೇ ಉಪಯುಕ್ತ ಎಂದು ಪರಿಗಣಿಸಿದ್ದಾರೆ.

 

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ

Instagram ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸೇವೆಯ ಕುರಿತಾದ ವಿಡಿಯೋಗಳು ಮತ್ತು ಪೋಸ್ಟ್‌ಗಳು ಹರಿದಾಡಿದ ನಂತರ, ಸ್ಟಾರ್ಟಪ್‌ಗೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕ ಬಳಕೆದಾರರು ಈ ಐಡಿಯಾವನ್ನು ಹೊಗಳಿದ್ದು, ಭಾರತದ ಜನನಿಬಿಡ ಮಾರುಕಟ್ಟೆಗಳಿಗೆ ಇದು ಉಪಯುಕ್ತ ಪರಿಹಾರ ಎಂದು ಕರೆದಿದ್ದಾರೆ.

ಕೆಲವರು, "ತುಂಬಾ ಒಳ್ಳೆ ಕಾನ್ಸೆಪ್ಟ್," ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು, "ಅಬ್ಬಾ! ಕೊನೆಗೂ ಯಾರೋ ಇದರ ಬಗ್ಗೆ ಯೋಚಿಸಿದರಲ್ಲಾ," ಮತ್ತು "ಚಾಂದಿನಿ ಚೌಕ್‌ನಲ್ಲಿ ಇದು ಬೇಕೇ ಬೇಕು," ಎಂದು ಬರೆದಿದ್ದಾರೆ. ಹಲವರು ದೈಹಿಕ ಸಹಾಯದ ಬದಲು ಭಾವನಾತ್ಮಕ ಸಹಾಯದ ಬಗ್ಗೆ ತಮಾಷೆ ಮಾಡಿದ್ದಾರೆ. ಒರ್ವ ಬಳಕೆದಾರ, "ನನ್ನ ಎಮೋಷನಲ್ ಬ್ಯಾಗೇಜ್ ಕೂಡ ಹೊರುತ್ತೀರಾ?" ಎಂದು ಕೇಳಿದ್ದಾರೆ. ಇನ್ನು ಕೆಲವರು, ಜನನಿಬಿಡ ಸ್ಥಳಗಳಲ್ಲಿ ಅಪರಿಚಿತರನ್ನು ನಂಬಿ ದುಬಾರಿ ಶಾಪಿಂಗ್ ಬ್ಯಾಗ್‌ಗಳು, ಮಕ್ಕಳು ಅಥವಾ ವೈಯಕ್ತಿಕ ವಸ್ತುಗಳನ್ನು ಬಿಡಬಹುದೇ ಎಂದು ಪ್ರಶ್ನಿಸಿದ್ದಾರೆ.

"ಮದುವೆ ಲೆಹೆಂಗಾ ಅಥವಾ ದುಬಾರಿ ಸೀರೆಗಳೊಂದಿಗೆ ಯಾರಾದರೂ ಓಡಿಹೋದರೆ ಏನು ಗತಿ?" ಎಂದೂ ಕಾಮೆಂಟ್ ಮಾಡಿದ್ದಾರೆ. ಮತ್ತೊರ್ವ ಬಳಕೆದಾರ, "ಇದು ರಿಸ್ಕ್ ಅಲ್ವಾ? ಆ ವ್ಯಕ್ತಿ ಬ್ಯಾಗ್‌, ಹೆಂಡತಿ, ಮಕ್ಕಳ ಜೊತೆ ಮಾಯವಾದರೆ?" ಎಂದು ಬರೆದಿದ್ದಾರೆ.

ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಈ ಸ್ಟಾರ್ಟಪ್ ಅನ್ನು ಭಾರತದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಹೋಲಿಸಿದ್ದು, ಜನರು ಆದಾಯಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಅದೇ ಸಮಯದಲ್ಲಿ, ಅನೇಕರು ಈ ಸೇವೆಯನ್ನು ಸಾಂಪ್ರದಾಯಿಕ ಮಾರುಕಟ್ಟೆ ಕಾರ್ಮಿಕರು, ರೈಲ್ವೆ ಕೂಲಿಗಳು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಈಗಾಗಲೇ ಇರುವ ಸಹಾಯಕರಿಗೆ ಹೋಲಿಸಿದ್ದಾರೆ.

ಭಾವನಾತ್ಮಕ ನೆನಪಿನೊಂದಿಗೆ ಆಧುನಿಕ ಪರಿಹಾರ

'ಕ್ಯಾರಿಮೆನ್' ನಂತಹ ಸ್ಟಾರ್ಟಪ್‌ಗಳು ಶಾಪಿಂಗ್‌ನ ದೈಹಿಕ ಶ್ರಮವನ್ನು ಕಡಿಮೆ ಮಾಡಬಹುದಾದರೂ, ಶಾಪಿಂಗ್ ನೆನಪುಗಳು ಹೆಚ್ಚಾಗಿ ನಮ್ಮೊಂದಿಗೆ ಬರುವ ಪ್ರೀತಿಪಾತ್ರರೊಂದಿಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ಆನ್‌ಲೈನ್‌ನಲ್ಲಿ ಅನೇಕರು ನೆನಪಿಸಿದ್ದಾರೆ. ವರ್ಷಗಳಿಂದ, ತಂದೆಯಂದಿರು, ಸಹೋದರರು, ಪತಿಯಂದಿರು ಮತ್ತು ಸ್ನೇಹಿತರು ಸದ್ದಿಲ್ಲದೆ ಬ್ಯಾಗ್‌ಗಳನ್ನು ಹೊತ್ತಿದ್ದಾರೆ, ಟ್ರಯಲ್ ರೂಮ್‌ಗಳ ಹೊರಗೆ ಕಾದಿದ್ದಾರೆ ಮತ್ತು ಕೇವಲ ಒಟ್ಟಿಗೆ ಸಮಯ ಕಳೆಯಲು ಜನನಿಬಿಡ ಮಾರುಕಟ್ಟೆಗಳಲ್ಲಿ ಅಲೆದಾಡಿದ್ದಾರೆ. ಒಂದು ವೇಳೆ ನಿಮ್ಮ ಪ್ರೀತಿಪಾತ್ರರಿಗೆ ಈ ಬ್ಯಾಗ್ ಹೊರುವ ಕಷ್ಟದಿಂದ ಬ್ರೇಕ್ ಕೊಡಬೇಕು ಅನ್ಸಿದ್ರೆ, 'ಕ್ಯಾರಿಮೆನ್' ಒಂದು ಒಳ್ಳೆ ಆಯ್ಕೆ ಆಗಬಹುದು. ಈ 'ಕ್ಯಾರಿಮೆನ್' ನಿಮ್ಮ ಶಾಪಿಂಗ್ ಅನ್ನು ಹಗುರ ಮತ್ತು ಹೆಚ್ಚು ಆರಾಮದಾಯಕವಾಗಿಸಬಹುದು! 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಸಿಗದ ಫುಡ್, ಉತ್ತರ ಕರ್ನಾಟಕದ ಮನೆ ಮನೆಯಲ್ಲಿಯೂ ಸಿಗುತ್ತೆ!
Shocking Truth: ಪುರುಷರೇ, ಈ ಬೀಜ ಬಳಿಸಿ.. ಕುದುರೆ ಹಾಗೆ ಜಿಗಿಯುತ್ತ ನೆಗೆಯುತ್ತ ಲೈಫ್ ಎಂಜಾಯ್ ಮಾಡಿ!