ಬೆಂಗಳೂರಿಗರ ವೀಕೆಂಡೊಂದು ಚಾಟ್ಸ್ ತಿನ್ನದೇ ಸಮಾಪ್ತಿಯಾಗುವುದು ಸಾಧ್ಯವೇ ಇಲ್ಲ. ಅದರಲ್ಲೂ ಚಾಟ್‌ಗಳಲ್ಲಿ ಮಸಾಲಾಪುರಿ ಎಲ್ಲರ ಹಾಟ್ ಫೇವರೇಟ್. ಆದರೆ ಬೀದಿ ಬದಿಯ ತಿನಿಸು ತಿನ್ನಲು ಅಂಜಿಕೆ, ಅದರಲ್ಲೂ ಇನ್ನು ಬರುವುದು ಮಳೆಗಾಲ. ಈ ಸಂದರ್ಭದಲ್ಲಿ ಹೊರಗಿನ ಆಹಾರ ಖಂಡಿತಾ ಒಳ್ಳೆಯದಲ್ಲ. ಆದರೆ ಜಿಟಿಜಿಟಿ ಮಳೆಗೆ ಮನೆಯಲ್ಲೇ ಮಾಡಿದ ಬಿಸಿಬಿಸಿ ಮಸಾಲಾಪುರಿ ನಿಮ್ಮನ್ನು ಆ ಕ್ಷಣದಲ್ಲಿ ಜಗತ್ತಿನ ಅತ್ಯಂತ ಸುಖಿ ವ್ಯಕ್ತಿಯಾಗಿಸುತ್ತದೆ.
ಮಸಾಲಾಪುರಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬೆಂಗಳೂರಿನ ಬೀದಿ ಬೀದಿಯ ಮೂಲೆಯಲ್ಲೂ ಒಂದು ಮಸಾಲಾಪುರಿ ಗಾಡಿ ಕಾಣಲಿಲ್ಲವೆಂದರೆ ಆ ರಸ್ತೆ ಇದ್ದೂ ವ್ಯರ್ಥವೆಂದೇ ಅರ್ಥ! ಚಾಟ್ ಕಾರ್ನರ್ ಹಾಗೂ ತಳ್ಳುಗಾಡಿಗಳನ್ನು ನೋಡಿದೊಡನೆ ಬಾಯಲ್ಲಿ ನೀರು ಬರುತ್ತದೆ. ಆದರೆ, ಸ್ವಚ್ಛತೆಯ ಬಗ್ಗೆ ಸ್ವಲ್ಪ ಯೋಚನೆಯಾಗುತ್ತದೆ ಎನ್ನುವವರು ನೀವಾದರೆ, ಮನೆಯಲ್ಲೇ ಮಸಾಲಾಪುರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡಿದರೆ ಯಾವ ಚಿಂತೆಯಿಲ್ಲದೆ ಮಕ್ಕಳಿಗೂ ತೃಪ್ತಿಯಾಗುವಷ್ಟು ಮಸಾಲೆಪುರಿ ಕೊಡಬಹುದು. ಪತಿಯ ಮೆಚ್ಚುಗೆಗೂ ಕಾರಣವಾಗಬಹುದು.
ಬೇಕಾಗುವ ಸಾಮಗ್ರಿಗಳು
ಮಸಾಲೆಗೆ
ಬೇಯಿಸಿದ ಆಲೂಗಡ್ಡೆ 4, ನೆನೆಸಿದ ಬಟಾಣಿ 2 ಕಪ್, ಈರುಳ್ಳಿ 3, ಬೆಳ್ಳುಳ್ಳಿ 10 ಎಸಳು, ಕ್ಯಾರಟ್ ತುರಿ 1/2 ಕಪ್, ಹಸಿಮೆಣಸು 4, ಶುಂಟಿ ಸಣ್ಣ ತುಂಡು, ಹಸಿ ಶೇಂಗಾ ಅರ್ಧ ಬಟ್ಟಲು, ಚಾಟ್ ಮಸಾಲಾ 1/2 ಚಮಚ, ಗರಂ ಮಸಾಲಾ 1 ಚಮಚ, ಲವಂಗ 1, ಕೊತ್ತೊಂಬರಿ ಸೊಪ್ಪು, ಎಣ್ಣೆ, ಜೀರಿಗೆ 1/2 ಟೀ ಚಮಚ, ಚಕ್ಕೆ, ಮೊಗ್ಗು ಸಣ್ಣ ಚೂರು, ಉಪ್ಪು ರುಚಿಗೆ ತಕ್ಕಷ್ಟು.
ಸಿಹಿ ಹಾಗೂ ಖಾರಕ್ಕೆ
ಸಿಹಿ ಚಟ್ನಿ 1/2 ಕಪ್, ಹಸಿರು ಖಾರಾ ಚಟ್ನಿ 1/2 ಕಪ್
ಅಲಂಕಾರಕ್ಕೆ
ಹೆಚ್ಚಿದ ಈರುಳ್ಳಿ, ಸೇವ್, ಹೆಚ್ಚಿದ ಟೊಮ್ಯಾಟೊ ಸ್ವಲ್ಪ, ಕೊತ್ತಂಬರಿ ಸೊಪ್ಪು
ಪುರಿಗಳು - 20-25
ಹಲಸಿನ ಕಾಯಿ ಹಪ್ಪಳ ಮಾಡೋದು ಹೇಗೆ?
ಮಾಡುವ ವಿಧಾನ
- ಹಿಂದಿನ ದಿನ ನೆನೆಸಿಟ್ಟ ಬಟಾಣಿ ಹಾಗೂ ಆಲೂಗಡ್ಡೆಗಳನ್ನು ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಬದಿಗಿಟ್ಟುಕೊಳ್ಳಿ. ಇದು ತಣ್ಣಗಾದ ಬಳಿಕ ಅರ್ಧದಷ್ಟು ಬಟಾಣಿಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಲೂಗಡ್ಡೆಗಳ ಸಿಪ್ಪೆ ತೆಗೆದು ಚೆನ್ನಾಗಿ ಸ್ಮ್ಯಾಶ್ ಮಾಡಿ ಬಟ್ಟಲಿನಲ್ಲಿಡಿ.
- ಶೇಂಗಾ ಹುರಿದಿಟ್ಟುಕೊಳ್ಳಿ
- ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಚಕ್ಕೆ, ಲವಂಗ, ಮೊಗ್ಗು, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ಪೇಸ್ಟ್ ಮಾಡಿಟ್ಟುಕೊಳ್ಳಿ.
- ಬಾಣಲೆ ಬಿಸಿ ಮಾಡಿ ಅದಕ್ಕೆ ರುಬ್ಬಿದ ಮಸಾಲೆ, ಬಟಾಣಿ, ಹಿಸುಕಿಟ್ಟುಕೊಂಡ ಆಲೂಗಡ್ಡೆ, ರುಬ್ಬದೆ ಉಳಿಸಿಕೊಂಡ ಬಟಾಣಿ, ಗರಂ ಮಸಾಲೆ, ಚಾಟ್ ಮಸಾಲೆ ಹಾಗೂ ಅಗತ್ಯವಿದ್ದಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕದಡಿ. ಹದ ಸರಿಯಾಗಿ ಬರುವಂತೆ ಸ್ವಲ್ಪ ನೀರನ್ನು ಸೇರಿಸಿ ಸೌಟಾಡಿಸಿ ಕುದಿಯಲು ಬಿಡಿ. ಈ ಮಿಶ್ರಣ ತೀರಾ ತೆಳ್ಳಗೆ ಅಲ್ಲದಿದ್ದರೂ ದಪ್ಪವಿರಬಾರದು.
- ಈಗ ಒಂದು ಪ್ಲೇಟಿಗೆ ಪುರಿಗಳನ್ನು ಹಾಕಿ ಕೈನಲ್ಲೇ ನುರಿಯಿರಿ. ಅದರ ಮೇಲೆ ಕುದಿಯುತ್ತಿರುವ ಮಸಾಲೆ, ಅದಕ್ಕೆ ಕ್ಯಾರಟ್ ತೂರಿ, ಹಸಿ ಈರುಳ್ಳಿ, ಟೊಮ್ಯಾಟೊ, ಸಿಹಿ ಹಾಗೂ ಖಾರಾ ಹಸಿರು ಚಟ್ನಿ ಹಾಕಿ. ಸೇವ್ ಹಾಗೂ ಶೇಂಗಾದಿಂದ ಅಲಂಕರಿಸಿ ಸರ್ವ್ ಮಾಡಿ.
ಸಿಹಿ ಚಟ್ನಿ ಮಾಡುವ ವಿಧಾನ
ಕಾಲು ಕಪ್ ಬೆಲ್ಲ, ಕಾಲು ಕಪ್ ನೆನೆಸಿಟ್ಟುಕೊಂಡ ಹುಣಸೆಹುಳಿ, ಸ್ವಲ್ಪ ಉಪ್ಪು, ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ಬೆಲ್ಲದ ಬದಲು ಕರ್ಜೂರವನ್ನು ಕೂಡಾ ಬಳಸಬಹುದು.
ಮಧುಮೇಹಿಗಳಿಗೆ ಮದ್ದು ಈ ಮೆಂತ್ಯೆ ಗೊಜ್ಜು
ಖಾರಾ ಹಸಿರು ಚಟ್ನಿ ಮಾಡುವ ವಿಧಾನ
1 ಈರುಳ್ಳಿ, 7-8 ಹಸಿಮೆಣಸು, ಅರ್ಧ ಬಟ್ಟಲು ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಈರುಳ್ಳಿ ಕೆಂಪಗಾಗುವವರೆಗೆ ಹುರಿದು, ಮಿಕ್ಸಿ ಮಾಡಿಟ್ಟುಕೊಳ್ಳಿ.
ಉತ್ತಮವಾದ ಪೂರಿಗಳು ಬಿಗ್ ಬಜಾರ್ ಅಥವಾ ದಿನಸಿ ಅಂಗಡಿಯಲ್ಲಿ ರೆಡಿ ಪ್ಯಾಕೆಟ್ ಸಿಗುತ್ತವೆ. ಇವನ್ನು ತಂದು ಎಣ್ಣೆಯಲ್ಲಿ ಕರಿದರೆ ಆಯಿತು.
ಇನ್ನು ಪಾನಿ ಕುಡಿಯದೆ ಮಸಾಲಾಪುರಿ ತಿಂದಿದ್ದು ತಿಂದಂತಾಗುವುದಿಲ್ಲ ಎಂದಾದರೆ, 1 ಲೀಟರ್ ನೀರಿಗೆ ಎರಡು ಚಮಚ ಪಾನಿಪೂರಿ ಪೌಡರ್, 1 ನಿಂಬೆ ಹಣ್ಣಿನ ರಸ, ಉಪ್ಪು ಹಾಗೂ ಜೀರಾ ಮಸಾಲಾ ಸೇರಿಸಿ ಚೆನ್ನಾಗಿ ಕದಡಿ. ಪಾನಿ ರೆಡಿ.