ವೀಡಿಯೋದಲ್ಲಿ ರಸ್ತೆ ಬದಿ ಚಿಂದಿ ಆಯುವ (Rag picking) ಬಾಲಕನೋರ್ವನಿಗೆ ನೀರು, ಚಪ್ಪಲಿ, ಬಟ್ಟೆನೀಡಿ ಸತ್ಕರಿಸುವ ಮೂಲಕ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಈ ಪ್ರಪಂಚದಲ್ಲಿ ಒಂದು ಹೊತ್ತು ಹೊಟ್ಟೆ ತುಂಬಾ ಊಟ ಮಾಡಲು ಬಹಳಷ್ಟು ಶ್ರಮ ಪಡುವ ಅನೇಕರಿದ್ದಾರೆ. ಜೊತೆ ಜೊತೆಗೆ ಒಂದು ಹೊತ್ತಿನ ಊಟಕ್ಕೆ ಸಾವಿರಗಟ್ಟಲೆ ಹಣ ಖರ್ಚು ಮಾಡುವವರು ಇದ್ದಾರೆ. ಎಲ್ಲರ ಜೀವನ ಒಂದೇ ತರ ಇರಲು ಸಾಧ್ಯವಿಲ್ಲ. ಹಣ ಊಟದ ಹೊರತಾಗಿಯೂ ಒಂದು ಉಳ್ಳವರು ಇಲ್ಲದವರಿಗೆ ಮಾಡುವ ಒಂದು ಸಣ್ಣ ಸಹಾಯ ಅವರ ಬದುಕಿನಲ್ಲಿ ದೊಡ್ಡ ಬದಲಾಣೆಯನ್ನೇ ತರಬಲ್ಲದು. ಇಂದು ಸಮಾಜದಲ್ಲಿ ಮಾನವೀಯತೆ ಕಡಿಮೆ ಆಗಿರುವುದು ನಿಜವಾದರೂ ಅಪರೂಪಕ್ಕೆ ಕಾಣಸಿಗುವ ಕೆಲವು ನಿದರ್ಶನಗಳು ಸಮಾಜದಲ್ಲಿ ಇಂದು ಮಾನವೀಯತೆ ಸಂಪೂರ್ಣವಾಗಿ ಅಳಿಸಿಲ್ಲ ಎಂಬುದನ್ನು ತೋರಿಸುತ್ತವೆ. ಅದೇ ರೀತಿ ಇದೊಂದು ಮಾನವೀಯತೆ ಸಾರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ಜಿನುಗಿಸುವಂತಿದೆ.
ವೀಡಿಯೋದಲ್ಲೇನಿದೆ?
ವೀಡಿಯೋದಲ್ಲಿ ರಸ್ತೆ ಬದಿ ಚಿಂದಿ ಆಯುವ (Rag picking) ಬಾಲಕನೋರ್ವನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕುಡಿಯಲು ಒಂದು ಬಾಟಲಿ ನೀರು ನೀಡುತ್ತಾರೆ. ಆತ ಎಷ್ಟು ದಣಿದಿದ್ದ ಎಂದರೆ, ಆ ಒಂದು ಲೀಟರ್ ಬಾಟಲ್ ನೀರನ್ನು ಗಳಿಗೆಯಲ್ಲಿ ಸಂಪೂರ್ಣವಾಗಿ ಕುಡಿದು ಖಾಲಿ ಮಾಡುವ ಆತ ಸಂತಸದಿಂದ ಧನ್ಯತೆಯಿಂದ ಪೊಲೀಸ್ ಅಧಿಕಾರಿಯ (Police officer) ಮುಖ ನೋಡುತ್ತಾನೆ. ಆದರೆ ಪೊಲೀಸ್ ಅಧಿಕಾರಿ ಆತನಿಗೆ ಬರೀ ನೀರು ಮಾತ್ರ ಕೊಟ್ಟಿಲ್ಲ, ಹೊಸದೊಂದು ಜೊತೆ ಚಪ್ಪಲಿ, ಹೊಸದಾದ ಒಂದು ಜೊತೆ ಬಟ್ಟೆಯನ್ನು ಆತನಿಗೆ ನೀಡುತ್ತಾರೆ. ಇದರಿಂದ ಭಾವುಕತೆ ಹಾಗೂ ಏನು ಮಾತನಾಡಬೇಕು ಎಂದು ತಿಳಿಯದ ಬಾಲಕ ಸರ್ ನೀವು ತುಂಬಾ ಒಳ್ಳೆಯವರು ಸರ್ ಎಂದೆನ್ನುತ್ತಾ ಅವರ ಕಾಲಿಗೆ ಬೀಳುತ್ತಾನೆ. ಪೊಲೀಸ್ ಅಧಿಕಾರಿ ಆತನ ಕಾಲಿಗೆ ಚಪ್ಪಲಿ ಹಾಕುತ್ತಿದ್ದರೆ ಬಾಲಕ ಅವರ ಕಾಲಿಗೆರಗಿ ನಮಸ್ಕರಿಸುತ್ತಾನೆ.
ಈ ಒಂದು ಮಾನವೀಯ ಕಾರ್ಯದಿಂದ ಆತ ಎಷ್ಟು ಖುಷಿಯಾಗಿದ್ದಾನೆಂದರೆ, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬಟ್ಟೆ ಚಪ್ಪಲ್ ಧರಿಸಿದ ಆತ ಅದನ್ನು ಬಹಳ ಖುಷಿಯಿಂದ ಗಮನಿಸುತ್ತಾನೆ. ಆತನ ಮುಖದಲ್ಲಿ ಅರಳಿದ ಒಂದು ನಗುವೇ ಎಲ್ಲವನ್ನು ಹೇಳುತ್ತಿದೆ. ಜೊತೆಗೆ ಜೊತೆಗೆ ಪೊಲೀಸ್ ಅಧಿಕಾರಿಯ ಕಾಲಿಗೆ ಬೀಳುವ ಆತ ಖುಷಿಯಿಂದ ಕೈ ಮುಗಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
abhaygiri21 (Abhay Giri) ಎಂಬುವವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದು, ಅನೇಕರು ಪೊಲೀಸ್ ಅಧಿಕಾರಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ರೀತಿ ಬಡವರ ಉದ್ಧಾರಕ್ಕಾಗಿ ಶ್ರಮಿಸುವ ದಿನ ನಮಗೂ ಬರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮಂತ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.