
- ಡಾ. ನವೀನ್ ಎಂ. ನಾಯಕ್, ನೆಫ್ರಾಲಜಿಸ್ಟ್, ರಿನಲ್ ಸ್ಪೆಷಲಿಸ್ಟ್
ಮಕ್ಕಳಲ್ಲೂ ಕಿಡ್ನಿ ಸಮಸ್ಯೆ ಹೆಚ್ಚಾಗಿದೆ. ಅದನ್ನು ಡಯಾಗ್ನೋಸ್ ಮಾಡೋದೂ ಕಷ್ಟ ಅಂತಾರಲ್ಲ?
ಮಕ್ಕಳಿಗಿಂತ ಡಯಾಬಿಟೀಸ್ ಸಮಸ್ಯೆ ಇರುವವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚು. ಡಯಾಬಿಟೀಸ್ ಇರುವ ಶೇ.60 ರಿಂದ 80 ಮಂದಿಯಲ್ಲಿ ಮೂತ್ರಪಿಂಡದ ಸಮಸ್ಯೆ ಇರುತ್ತೆ. ಹಾಗಂತ ಮಕ್ಕಳಿಗೂ ಸಮಸ್ಯೆ ಇದೆ. ಕಿಡ್ನಿ ದೇಹದ ಕಲ್ಮಶವನ್ನು ಮೂತ್ರರೂಪಕ್ಕೆ ವರ್ಗಾಯಿಸುತ್ತದೆ, ಅದು ಮೂತ್ರಕೋಶದ ಮೂಲಕ ಹೊರಹೋಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಮೂತ್ರನಾಳಗಳಲ್ಲಿ ತಡೆಯುಂಟಾದಾಗ ಮೂತ್ರ ಪುನಃ ಕಿಡ್ನಿಗೆ ಹರಿಯುತ್ತದೆ. ಹೀಗಾದಾಗ ಮೂತ್ರ ವಿಸರ್ಜನೆಯಲ್ಲಿ ಉರಿ, ಪದೇ ಪದೇ ಅಲ್ಪ ಪ್ರಮಾಣದ ಮೂತ್ರ ವಿಸರ್ಜನೆ, ಮೂತ್ರದ ಬಣ್ಣ ವಾಸನೆಯಲ್ಲಿ ಬದಲಾವಣೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ. ಇದನ್ನು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.
ಡಯಾಬಿಟೀಸ್ ಇರುವವರಲ್ಲಿ ಕಿಡ್ನಿ ಸಮಸ್ಯೆ ಬರುವುದು ಯಾವ ಸಂದರ್ಭದಲ್ಲಿ?
ಹೆತ್ತವರಿಂದ, ವಂಶವಾಹಿಯಿಂದ ಬರಬಹುದು. ಶುಗರ್ ಕಂಟ್ರೋಲ್ ಸರಿಯಾಗಿಲ್ಲದಿದ್ದರೆ, ಬಿ.ಪಿ ಸಮಸ್ಯೆ ಇದ್ದಾಗ, ಅತಿಯಾಗಿ ನೋವಿನ ಮಾತ್ರೆಗಳ ಸೇವನೆಯಿಂದ ಡಯಾಬಿಟೀಸ್ ಸಮಸ್ಯೆ ಇರುವವರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ನೋವಿನ ಮಾತ್ರೆ ತಿನ್ನುವುದರಿಂದ ಕಿಡ್ನಿಗೆ ಹಾನಿಯಿದೆಯಾ?
ವಿರಳವಾಗಿ ತಿಂದರೆ ಪರವಾಗಿಲ್ಲ. ಆರ್ಥ್ರೈಟಿಸ್ ಮೊದಲಾದ ಸಮಸ್ಯೆ ಇರುವವರು ವರ್ಷಾನುಗಟ್ಟಲೆ ನೋವು ನಿವಾರಕಗಳ ಮೇಲೆ ಅವಲಂಬಿತರಾಗಿರುತ್ತಾರೆ. ಇದರಿಂದ ಕಿಡ್ನಿಗೆ ಹಾನಿಯಿದೆ.
ಕಿಡ್ನಿ ಚೆನ್ನಾಗಿರಬೇಕು ಅಂದರೆ ನಮ್ಮ ಡಯೆಟ್ ಹೇಗಿರಬೇಕು?
ಹೃದಯದ ಆರೋಗ್ಯಕ್ಕೆ ಬೇಕಾದ ಡಯೆಟ್ ಅನ್ನೇ ಅನುಸರಿಸಿದರೆ ಸಾಕು, ನೀರು ಚೆನ್ನಾಗಿ ಕುಡಿಯಬೇಕು. ಕರಿದ ಆಹಾರ, ಜಂಕ್ ಫುಡ್‌ಗಳಿಂದ ದೂರವಿರಿ.
ಆಲ್ಕೊಹಾಲ್ ಸೇವಿಸೋದ್ರಿಂದ ಕಿಡ್ನಿಗೆ ಹಾನಿಯಿದೆಯಾ?
ನೇರವಾದ ಹಾನಿಯಿಲ್ಲ. ಆದರೆ ಸಿಗರೇಟು ಸೇವನೆ ಕಿಡ್ನಿಗೆ ಡೇಂಜರ್.
ತೀವ್ರ ಅನಾರೋಗ್ಯದಲ್ಲಿ ಕಿಡ್ನಿ ಫೇಲ್ಯೂರ್ ಆದಾಗ ಜೀವದ ಆಸೆಯನ್ನೇ ಬಿಡುತ್ತಾರಲ್ಲ?
ಹೌದು, ತೀವ್ರ ಅನಾರೋಗ್ಯದಲ್ಲಿ ಐಸಿಯು ಹಂತದಲ್ಲಿದ್ದಾಗ ಕಿಡ್ನಿ ಫೇಲ್ಯೂರ್ ಆದರೆ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು. ಈ ಹಂತದಲ್ಲಿ ಡಯಾಲಿಸಿಸ್ ಮಾಡಿದಾಗ ಕೆಲವೊಮ್ಮೆ ಜೀವ ಉಳಿಯುತ್ತದೆ. ಆದರೆ ಹೆಚ್ಚಿನ ಸಲ ಜೀವ ಉಳಿಸಲಾಗದ ಸನ್ನಿವೇಶವಿರುತ್ತದೆ.
ನಮ್ಮ ಕಿಡ್ನಿ ಕಂಡಿಶನ್ ಹೇಗಿದೆ ಅಂತ ನಮಗೆ ಹೇಗೆ ಗೊತ್ತಾಗುತ್ತೆ?
ಅದಕ್ಕೆ ಮೂರು ಟೆಸ್ಟ್‌ಗಳಿವೆ. ಬಿಪಿ ಟೆಸ್ಟ್, ಯೂರಿನ್ ಟೆಸ್ಟ್ (ಎಸಿಆರ್), ಇನ್ನೊಂದು ಸೀರಮ್ ಕ್ರಿಯೇಟಿನೈನ್ ಟೆಸ್ಟ್. ಈ ಮೂರೂ ಟೆಸ್ಟ್‌ಗಳಲ್ಲಿ ತೊಂದರೆ ಕಾಣಿಸದಿದ್ದರೆ ನಿಮ್ಮ ಕಿಡ್ನಿಗೆ ಏನೂ ಸಮಸ್ಯೆ ಇಲ್ಲ ಅಂತರ್ಥ. ಕಿಡ್ನಿ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಗೊತ್ತಾಗೋದೇ ಇಲ್ಲ. ಅಡ್ವಾನ್ಸ್‌ಡ್ ಹಂತದಲ್ಲಿದ್ದಾಗ ಕೈ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತೆ, ಸಿಕ್ಕಾಪಟ್ಟೆ ಸುಸ್ತು, ಉಸಿರಾಟದ ತೊಂದರೆ ಇತ್ಯಾದಿ ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.