
ಇಂದಿನ ದಿನಗಳಲ್ಲಿ ಕೆರಿಯರ್, ಆರ್ಥಿಕ ಸ್ವಾತಂತ್ರ್ಯ ಹಾಗೂ ಸೆಟ್ಲ್ ಆಗುವ ಭರದಲ್ಲಿ ಯುವಜನತೆ ಮದುವೆ ಮತ್ತು ಮಕ್ಕಳಾಗುವ ವಯಸ್ಸನ್ನು ಮುಂದೂಡುತ್ತಿದ್ದಾರೆ. ಹಿಂದೆ 20 ರಿಂದ 25 ವರ್ಷದೊಳಗೆ ಮದುವೆ ಮುಗಿಯುತ್ತಿದ್ದರೆ, ಇಂದು 30-35 ವರ್ಷ ದಾಟಿದರೂ ಮದುವೆ, ಮಕ್ಕಳ ಬಗ್ಗೆ ಆಲೋಚಿಸುವುದಿಲ್ಲ. ಆದರೆ, ಈ ನಿರ್ಧಾರ ಹುಟ್ಟುವ ಮಗುವಿನ ಮೇಲೆ ಎಂತಹ ಭೀಕರ ಪರಿಣಾಮ ಬೀರಬಹುದು? ಮಹಿಳೆಯರಿಗೆ ಪ್ರಕೃತಿ ನೀಡಿರುವ ಜೈವಿಕ ಗಡಿಯಾರ (Biological Clock) ಹೇಗೆ ಕೆಲಸ ಮಾಡುತ್ತದೆ? ಎಂಬ ಬಗ್ಗೆ ಖ್ಯಾತ ತಳಿಶಾಸ್ತ್ರಜ್ಞೆ (Geneticist) ಡಾ ಮಾಲಿನಿ ಎಸ್ ಸುತ್ತೂರು ಅವರು ವೈಜ್ಞಾನಿಕವಾಗಿ ಮಹತ್ವದ ವಿವರಗಳನ್ನು ಹಂಚಿಕೊಂಡಿದ್ದಾರೆ.
ವೈದ್ಯರ ಪ್ರಕಾರ, ಹೆಣ್ಣುಮಗು ತನ್ನ ತಾಯಿಯ ಗರ್ಭದಲ್ಲಿ ಭ್ರೂಣವಾಗಿದ್ದಾಗಲೇ (ಸುಮಾರು 3ನೇ ತಿಂಗಳಲ್ಲಿ) ಆಕೆಯ ಜೀವಿತಾವಧಿಗೆ ಬೇಕಾದ ಎಲ್ಲಾ ಅಂಡಾಣುಗಳು (Eggs) ಸೃಷ್ಟಿಯಾಗಿ ಶೇಖರಣೆಯಾಗಿರುತ್ತವೆ.
ಭ್ರೂಣಾವಸ್ಥೆಯಲ್ಲಿ ಸುಮಾರು 30,000 ದಷ್ಟಿದ್ದ ಈ ಅಂಡಾಣುಗಳು, ಹೆಣ್ಣುಮಗು ಹದಿಹರೆಯಕ್ಕೆ (ಮೆಚುರಿಟಿ) ಬರುವಷ್ಟರಲ್ಲಿ ಕೇವಲ 3,000 ಕ್ಕೆ ಇಳಿಯುತ್ತವೆ.
ಪ್ರೌಢಾವಸ್ಥೆಯ ನಂತರ ಪ್ರತಿ ತಿಂಗಳ ಋತುಚಕ್ರದಲ್ಲಿ (Menstruation) ಕೇವಲ ಒಂದೇ ಒಂದು ಅಂಡಾಣು ಬಿಡುಗಡೆಯಾಗುತ್ತದೆ.
ವಯಸ್ಸು 20-25 ಇರುವಾಗ ದೇಹದಲ್ಲೇ ಅತ್ಯಂತ ಆರೋಗ್ಯವಂತ, ಬಲಿಷ್ಠ ಅಂಡಾಣುಗಳು ಮೊದಲು ಬಿಡುಗಡೆಯಾಗುತ್ತವೆ.
ವಯಸ್ಸು 30 ದಾಟಿ 35 ಸಮೀಪಿಸುತ್ತಿದ್ದಂತೆ, ದೇಹದಲ್ಲಿ ಸಂಗ್ರಹವಾಗಿರುವ ಅತ್ಯುತ್ತಮ ಅಂಡಾಣುಗಳು ಖಾಲಿಯಾಗಿರುತ್ತವೆ. ಕೊನೆಯಲ್ಲಿ ಉಳಿದಿರುವ ಅಂಡಾಣುಗಳು ಡಿಎನ್ಎ ಡ್ಯಾಮೇಜ್ ಅಥವಾ ಪ್ರೋಟೀನ್ ಕೊರತೆಯಿಂದ ದುರ್ಬಲವಾಗಿರುತ್ತವೆ. ಕಳಪೆ ಗುಣಮಟ್ಟದ ಅಂಡಾಣು ವೀರ್ಯಾಣುವಿನೊಂದಿಗೆ ಸೇರಿದಾಗ ಹುಟ್ಟುವ ಮಗುವಿನಲ್ಲಿ ಗಂಭೀರ ಅನುವಂಶೀಯ/ಕ್ರೋಮೋಸೋಮ್ ದೋಷಗಳು (Chromosomal Abnormalities) ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಪುರುಷರಲ್ಲಿ: ಪ್ರೌಢಾವಸ್ಥೆಯ ನಂತರ ನಿರಂತರವಾಗಿ ವೀರ್ಯಾಣುಗಳು ಉತ್ಪತ್ತಿಯಾಗುತ್ತಲೇ ಇರುತ್ತವೆ (Spermatogenesis). 70 ವರ್ಷವಾದರೂ ಹೊಸ ವೀರ್ಯಾಣು ಉತ್ಪತ್ತಿಯಾಗುವುದರಿಂದ ಅವರ ವಯಸ್ಸು ಮಗುವಿನ ಕ್ರೋಮೋಸೋಮ್ ಮೇಲೆ ಬೀರುವ ಪರಿಣಾಮ ಕಡಿಮೆ.
ಮಹಿಳೆಯರಲ್ಲಿ: ಹೊಸ ಅಂಡಾಣುಗಳು ಎಂದಿಗೂ ಉತ್ಪತ್ತಿಯಾಗುವುದಿಲ್ಲ. ಹುಟ್ಟುವಾಗಲೇ ಇದ್ದು ಶೇಖರಣೆಯಾದ ಅಂಡಾಣುಗಳು ವಯಸ್ಸಾದಂತೆ ಹಳೆಯದಾಗುತ್ತವೆ. ಹೀಗಾಗಿ ತಾಯಿಯ ವಯಸ್ಸು (Advanced Maternal Age) ಮಗುವಿನ ಆರೋಗ್ಯಕ್ಕೆ ನೇರ ಸಂಬಂಧ ಹೊಂದಿದೆ.
30 ದಾಟಿದ ನಂತರ ಗರ್ಭ ಧರಿಸುವುದರಿಂದ ಹುಟ್ಟುವ ಮಗುವಿನಲ್ಲಿ ಈ ಕೆಳಗಿನ ದೋಷಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು..
ಬುದ್ಧಿಮಾಂದ್ಯತೆ (Down Syndrome): ಮಗುವಿನ ಐಕ್ಯು (IQ) ಮಟ್ಟ ತೀರಾ ಕಡಿಮೆಯಿರುವುದು, ಬೆಳವಣಿಗೆ ಕುಂಠಿತವಾಗುವುದು.
ಜೆನೆಟಿಕ್ ಸಿಂಡ್ರೋಮ್ಗಳು: ಟರ್ನರ್ ಸಿಂಡ್ರೋಮ್, ಎಡ್ವರ್ಡ್ ಸಿಂಡ್ರೋಮ್, ಕ್ಲೈನ್ಫೆಲ್ಟರ್ ಸಿಂಡ್ರೋಮ್ ಮುಂತಾದ ವಂಶವಾಹಿ ದೋಷಗಳು. ಇವುಗಳಿಗೆ ಯಾವುದೇ ಸಂಪೂರ್ಣ ಚಿಕಿತ್ಸೆ ಇರುವುದಿಲ್ಲ.
ಅಂಗವೈಕಲ್ಯತೆ: ಹುಟ್ಟಿನಿಂದಲೇ ಹೃದಯ ಸಂಬಂಧಿ ತೊಂದರೆಗಳು, ಮೆದುಳಿನ ತೊಂದರೆ (ಹೈಡ್ರೋಸೆಫಾಲಿ), ಕೈ-ಕಾಲುಗಳ ಊನತೆ ಮುಂತಾದ ತೊಂದರೆಗಳು.
ಅನಿವಾರ್ಯ ಕಾರಣಗಳಿಂದ ಮದುವೆ ಅಥವಾ ಗರ್ಭಧಾರಣೆ ತಡವಾಗಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸಬೇಕು:
ವೈದ್ಯರ ಬಳಿ ವಯಸ್ಸು ಮುಚ್ಚಿಡಬೇಡಿ: ಗರ್ಭಿಣಿಯಾಗುವ ಮುನ್ನ ಸ್ತ್ರೀರೋಗ ತಜ್ಞರ (Gynaecologist) ಬಳಿ ನಿಮ್ಮ ನಿಜವಾದ ವಯಸ್ಸನ್ನು ತಿಳಿಸಿ.
ಪ್ರಿನೇಟಲ್ ಡಯಾಗ್ನೋಸಿಸ್ (Prenatal Diagnosis): ಗರ್ಭಾವಸ್ಥೆಯಲ್ಲಿ ಭ್ರೂಣದ ಆರೋಗ್ಯ ಪರೀಕ್ಷಿಸಲು ಅಮ್ನಿಯೋಸೆಂಟೆಸಿಸ್ (Amniocentesis), ಸಿವಿಎಸ್ (CVS) ನಂತಹ ಕ್ರೋಮೋಸೋಮ್ ಮತ್ತು ಡಿಎನ್ಎ ಪರೀಕ್ಷೆಗಳು ಲಭ್ಯವಿವೆ.
ಮುಂಚಿತವಾಗಿಯೇ ಪತ್ತೆ: ಈ ಪರೀಕ್ಷೆಗಳ ಮೂಲಕ ಮಗುವಿಗೆ ಏನಾದರೂ ವಂಶವಾಹಿ ದೋಷಗಳಿವೆಯೇ ಎಂಬುದನ್ನು ಮೊದಲೇ ಪತ್ತೆಹಚ್ಚಿ, ಸೂಕ್ತ ನಿರ್ಧಾರ ಕೈಗೊಳ್ಳಬಹುದು.
ಹೆಣ್ಣುಮಕ್ಕಳು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಯಾಗುವುದು ಎಷ್ಟು ಮುಖ್ಯವೋ, ಪ್ರಕೃತಿಯ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ. ತಳಿಶಾಸ್ತ್ರಜ್ಞರ ಪ್ರಕಾರ 22 ರಿಂದ 28 ವರ್ಷ ಮಹಿಳೆಯರಿಗೆ ಗರ್ಭಧಾರಣೆಗೆ ಅತ್ಯಂತ ಸೂಕ್ತ ಹಾಗೂ ಸುರಕ್ಷಿತ ವಯಸ್ಸು. ಆರೋಗ್ಯವಂತ ಮಗು ಬೇಕೆಂದರೆ ವೃತ್ತಿಜೀವನದ ಜೊತೆಗೆ ಕುಟುಂಬ ಯೋಜನೆಗೂ ಸರಿಯಾದ ಸಮಯದಲ್ಲೇ ಆದ್ಯತೆ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.