ಮಾಂಸ ತಿನ್ನಲ್ಲ, ಮೀನು ಮುಟ್ಟಲ್ಲ; 90ರಲ್ಲೂ ಬಾಡಿಬಿಲ್ಡಿಂಗ್! 130 ವರ್ಷ ಬದುಕುವ ಗುರಿ ಇರುವ ಜಪಾನ್‌ನ ಈ ವ್ಯಕ್ತಿ ಆರೋಗ್ಯದ ಗುಟ್ಟು ಬಯಲು!

Published : Sep 25, 2026, 11:10 AM IST
Toshisuke Kanazawa

ಸಾರಾಂಶ

ಜಪಾನ್‌ನ 90 ವರ್ಷದ ತೋಷಿಸುಕೆ ಕನಜವಾ ಅವರು ಇಳಿ ವಯಸ್ಸಿನಲ್ಲೂ ಬಾಡಿ ಬಿಲ್ಡಿಂಗ್ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಇವರು ಇತ್ತೀಚೆಗೆ ಆಲ್ ಜಪಾನ್ ಮಾಸ್ಟರ್ಸ್ ಫಿಟ್‌ನೆಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿದ್ದಾರೆ. 130 ವರ್ಷ ಬದುಕುವ ಗುರಿ! ನನಸಾಗಲಿ!

'Age is just a number..' ನಮ್ಮಗೂ ಒಂದು ಸಮಯ ಬರುತ್ತೆ ಅನ್ನೋದನ್ನು ಹಲವರು ತಮ್ಮದೇ ರೀತಿಯಲ್ಲಿ ಸಾಬೀತುಪಡಿಸುತ್ತಲೇ ಇದ್ದಾರೆ. ಇತ್ತೀಚೆಗೆ ಇಳಿ ವಯಸ್ಸಿನಲ್ಲಿ ಮಕ್ಕಳು ಪಡೆದ ವೃದ್ಧ ದಂಪತಿಗಳಾಗಲಿ, ನಿವೃತ್ತರಾದ ಬಳಿಕ ಇನ್ನೇನು ಮನೆಯಲ್ಲಿ ಕುಳಿತು ಕಾಲ ಕಳೆಯಬೇಕಾದ ವಯಸ್ಸಲ್ಲಿ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿ ಬೆಳೆಸಿ ಅಸಾಧಾರಣ ಸಾಧನೆ ಮಾಡಿದವರು ನಮ್ಮ ನಡುವೆ ಸಾಕಷ್ಟು ಇದ್ದಾರೆ. ಇದೀಗ ಅಂತಹದ್ದೇ ಸಾಧನೆ ಮಾಡಿದವರೊಬ್ಬರ ರೋಚಕವೆನಿಸುವ ಸ್ಟೋರಿ ಇಲ್ಲಿದೆ.

90ನೇ ವಯಸ್ಸಿನಲ್ಲಿ ಯಶಸ್ವಿ ಬಾಡಿ ಬಿಲ್ಡರ್ ಅಜ್ಜ!

ಸಾಮಾನ್ಯವಾಗಿ ಜನರು 60 ವರ್ಷಕ್ಕೆ ಎಲ್ಲ ಮುಗಿದುಹೋಯಿತು ಎಂದು ಯಾವುದೇ ಕೆಲಸ ಮಾಡದೆ ನಿವೃತ್ತಿ ಜೀವನ ಕಳೆಯುತ್ತಾರೆ. ಊಟ, ನಿದ್ದೆ , ಪಾರ್ಕ್, ಹೊತ್ತೊತ್ತಿಗೆ ಮಾತ್ರೆಗಳನ್ನ ತೆಗೆದುಕೊಳ್ಳುತಾ ಕಾಲ ಕಳೆಯೋದು ಸಾಮಾನ್ಯ. ಆದರೆ ಜಪಾನ್‌ನ ಈ ವ್ಯಕ್ತಿ ಇದಕ್ಕೆ ಅಪವಾದ. ಏಕೆಂದರೆ 90ನೇ ವಯಸ್ಸಿನಲ್ಲೂ ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ. ಜಪಾನ್‌ನಲ್ಲಿ ನಡೆದ ಹಲವು ಫಿಟ್‌ನೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಾಂಪಿಯನ್ ಆಗಿದ್ದಾರೆ. ನಂಬಲಾಗುತ್ತಿಲ್ಲವಾ? 60 ವರ್ಷಕ್ಕೆ ಊರುಗೋಲು ಹಿಡಿಯುವ ವಯಸ್ಸು ಅಂತದ್ರಲ್ಲಿ ತೊಂಬತ್ತನೇ ವಯಸ್ಸಿಗೆ ಬಾಡಿ ಬಿಲ್ಡ್ ಮಾಡೋದುಂಟೇ? ಅಂತಾ ಅನಿಸುತ್ತಲ್ಲವಾ? ಆದರೆ ಈ ವ್ಯಕ್ತಿ ಜೀವನ ಶೈಲಿಗೆ ಏಜ್ ಕೇವಲ ನಂಬರ್ ಮಾತ್ರ!

ಅವರ ಹೆಸರು ತೋಷಿಸುಕೆ ಕನಜವಾ. ವಯಸ್ಸು ಬರೋಬ್ಬರಿ 90. ಇತ್ತೀಚೆಗೆ ತೊಂಬತ್ತನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ದಿನವೇ ನಡೆದ ಆಲ್ ಜಪಾನ್ ಮಾಸ್ಟರ್ಸ್ ಫಿಟ್‌ನೆಸ್ ಚಾಂಪಿಯನ್‌ಶಿಪ್‌(All Japan Masters Fitness Championship)ನಲ್ಲಿ 85 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಅಂದಹಾಗೆ ಇದು ಅವರ 19ನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.

ತೋಷಿಸುಕೆ ಕನಜವಾ ಆರೋಗ್ಯದ ಗುಟ್ಟೇನ?

ತೋಷಿಸುಕೆ ಕನಜವಾ 90 ಇಳಿಯಸ್ಸಿನಲ್ಲಿ ಈ ಪರಿ ಆಕ್ಟಿವ್ ಆಗಿರಲು ಕಾರಣವೇನು. ಅವರ ಆರೋಗ್ಯದ ರಹಸ್ಯವೇನು? ಎಂದು ಬಹಷ್ಟು ಜನರು ಕುತೂಹಲದಿಂದ ಕೇಳಿದ್ದಾರೆ. ಆದರೆ ಅವರ ದಿನಚರಿ ವಿಶೇಷವೇನಿಲ್ಲ ಸಿಂಪಲ್. ಆದರೆ ಅವರ ಜೀವನಶೈಲಿಗೆ ಒಂದು ಚೌಕಟ್ಟು ಇದೆ. ಸತತ ಪರಿಶ್ರಮ, ಆಹಾರ ಕ್ರಮ. ಬಾಡಿ ಬಿಲ್ಡ್ ಮಾಡುವವರು ದಿನಕ್ಕೆ ಇಂತಿಷ್ಟು ಗ್ರಾಂ ಮಾಂಸ ಸೇವನೆ ಮಾಡಬೇಕೆಂದು ಕೋಚ್‌ಗಳು ಹೇಳುತ್ತಾರೆ. ಬಾಡಿ ಬಿಲ್ಡ್ ಮಾಡುವವರು ಕೂಡ ಮಾಂಸ ತಿಂದರೆ ಮಾತ್ರ ಬಾಡಿ ಬಿಲ್ಡರ್ ಆಗಲು ಸಾಧ್ಯ ಎಂದೇ ನಂಬಿದ್ದಾರೆ. ಹೀಗಾಗಿ ಜಿಮ್ ಸೇರಿದ ಕ್ಷಣದಿಂದ ಅವರು ದಿನಕ್ಕೆ ಇಂತಿಷ್ಟು ಅಂತಾ ಮಾಂಸಾಹಾರ ಸೇವನೆ ಮಾಡಲು ಮುಂದಾಗುತ್ತಾರೆ. ಆದರೆ ಕನಜವಾ ಹಲವು ದಶಕಗಳಿಂದ ಮಾಂಸ ಮತ್ತು ಮೀನು ಇವೆರಡನ್ನೂ ತಿಂದಿಲ್ಲ. ಮುಖ್ಯವಾಗಿ ಅವರ ಪದ್ಧತಿ ಶುದ್ಧ ಸಸ್ಯಾಹಾರವಾಗಿದೆ. ಸಸ್ಯಾಹಾರವನ್ನೇ ತಮ್ಮ ಪೌಷ್ಠಿಕಾಂಶದ ಮೂಲವನ್ನಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಬಾಡಿಬಿಲ್ಡಿಂಗ್‌ ಜರ್ನಿ ಹಿಂದೆ ಒಂದು ಭಾವನಾತ್ಮಕ ಕಾರಣವೂ ಇದೆ. ಇದರಲ್ಲಿ ಖ್ಯಾತ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರೊಂದಿಗಿನ ಲಿಂಕ್ ಇದೆ.

ಹಾಗಾದರೆ 90 ವರ್ಷದ ಜಪಾನ್‌ನ ಬಾಡಿ ಬಿಲ್ಡರ್ ಆಹಾರ ಕ್ರಮವೇನು?

ತೋಷಿಸುಕೆ ಕನಜವ ಮೊದಲಿಂದಲೂ ಬಾಡಿ ಬಿಲ್ಡ್ ಮಾಡುತ್ತಿದ್ದರು ಮಧ್ಯೆದಲ್ಲಿ ಬಿಟ್ಟುಬಿಟ್ಟಿದ್ದರು. ಬಳಿಕ ತಮ್ಮ 50ನೇ ವಯಸ್ಸಿನಲ್ಲಿ ಮತ್ತೆ ಬಾಡಿಬಿಲ್ಡಿಂಗ್ ಮಾಡಲು ಆರಂಭಿಸಿದರು. ಅಲ್ಲಿಂದ ಮಾಂಸ ಅಥವಾ ಮೀನು ಸೇವಿಸಲೇ ಇಲ್ಲ ಎಂದು ಕನ ಎಂದು ಕನಜವಾ ಹೇಳಿದ್ದಾರೆ. ಅವರ ಪ್ರತಿದಿನದ ಆಹಾರದಲ್ಲಿ ಜಪಾನ್‌ನ ಸಾಮಾನ್ಯ ಆಹಾರ ಪದಾರ್ಥಗಳೇ ಸೇರಿವೆ.

ಬೆಳಗಿನ ಉಪಾಹಾರದಲ್ಲಿ ಕಂದು ಅಕ್ಕಿ, ನಟ್ಟೋ ಮತ್ತು ಮಿಸೋ ಸೂಪ್ ಇರುತ್ತದೆ. ನಟ್ಟೊ ಎಂದರೆ ಹುದುಗಿಸಿದ ಸೋಯಾಬೀನ್‌ನಿಂದ ತಯಾರಿಸಿದ ಸಸ್ಯಜನ್ಯ ಪ್ರೋಟೀನ್‌ನ ಆಹಾರ. ಮಿಸೋ ಸೂಪ್ ಕೂಡ ಸೋಯಾಬೀನ್ ಪೇಸ್ಟ್‌ನಿಂದ ತಯಾರಿಸಲಾಗುತ್ತದೆ.

ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅವರು ಸ್ವಲ್ಪ ಫುರಿಕಾಕೆ(ಜಪಾನೀಸ್ ಮಸಾಲೆ) ಹಾಕಿದ ಕಂದು ಅಕ್ಕಿಯನ್ನು ಸೇವಿಸುತ್ತಾರೆ. ಫುರಿಕಾಕೆ ಜಪಾನ್‌ನಲ್ಲಿ ಅಕ್ಕಿಯ ಮೇಲೆ ಸಾಮಾನ್ಯವಾಗಿ ಉದುರಿಸುವ ಮಸಾಲೆ ಮಿಶ್ರಣವಾಗಿದೆ. ಇದರ ಜೊತೆಗೆ ದಿನಕ್ಕೆ ಮೂರು ಬಾರಿ ಪ್ರೋಟೀನ್ ಪಾನೀಯವನ್ನೂ ಸೇವಿಸುತ್ತಾರೆ. ಅವರ ಆಹಾರಕ್ರಮ ಇಷ್ಟೇ. ಸರಳ, ನಿಯಮಿತ ಮತ್ತು ಯಾವುದೇ ವಿಶೇಷವಾದ ಆಹಾರ ಕ್ರಮ ಇಲ್ಲ.

ಮಾಂಸ ಸೇವಿಸಿದೇ ಬಾಡಿ ಬಿಲ್ಡರ್ ಆದವರು

ಮಾಂಸ ಸೇವಿಸದ ಬಾಡಿಬಿಲ್ಡರ್‌ ಕನಜವಾ ಮಾತ್ರವಲ್ಲ. ಆನ್‌ಲೈನ್‌ನಲ್ಲಿ ನೋಡಿದರೆ ನಿಮೈ ಡೆಲ್ಗಾಡೊ ಮತ್ತು ಅನಿಲ್ ಗೋಚಿಕರ್ ಅವರಂತಹ ಸಸ್ಯಾಹಾರಿ ಅಥವಾ ವೀಗನ್ ಬಾಡಿಬಿಲ್ಡರ್‌ಗಳೂ ಇದ್ದಾರೆ. ಹೀಗಾಗಿ ಅವರು ತಮ್ಮ ಪ್ರೋಟೀನ್‌, ನಾರಿನಾಂಶ ಮತ್ತು ಇತರ ಪೌಷ್ಟಿಕಾಂಶಗಳ ಅಗತ್ಯವನ್ನು ಸಸ್ಯಾಹಾರಿ ಆಹಾರದ ಮೂಲಕ ಪಡೆಯುತ್ತಾರೆ.

130 ವರ್ಷಗಳವರೆಗೆ ಬದುಕುವ ಗುರಿ!

'ವಯಸ್ಸಾಗುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಊಟ ಮತ್ತು ವರ್ಕೌಟ್ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ಹೇಗೆ ನಿಧಾನಗೊಳಿಸಬಹುದು ಎಂಬುದನ್ನು ತಿಳಿಯಲು ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ' ಎಂದು ಕನಜವಾ ಹೇಳಿದ್ದಾರೆ. ಅವರು 130 ವರ್ಷಗಳವರೆಗೆ ಬದುಕುವ ಮೂಲಕ ಮಾನವ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದಾರೆ!

ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಪ್ರಯತ್ನಿಸುತ್ತಿರುವವರು ಕನಜವಾ ಮಾತ್ರವಲ್ಲ. ಭಾರತದಲ್ಲಿಯೂ ಇತ್ತೀಚೆಗೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು ಶೇ.7.3ರಷ್ಟು ಭಾರತೀಯರು ಆಹಾರಕ್ರಮ ಬದಲಾವಣೆ, ನಿಯಮಿತ ವ್ಯಾಯಾಮ, ಪೂರಕ ಆಹಾರಗಳ ಸೇವನೆ ಮತ್ತು ಕೆಲವು ಚಿಕಿತ್ಸಾ ವಿಧಾನಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ.

ಕನಜವಾ ಬಾಡಿಬಿಲ್ಡಿಂಗ್‌ಗೆ ಮರಳಿದ್ದೇಕೆ?

ಕನಜವಾ ಅವರ ಬಾಡಿಬಿಲ್ಡಿಂಗ್‌ ದಿನದ ಆಹಾರ ನೀರು ಸೇವಿಸುವಷ್ಟೇ ಮುಖ್ಯವಾಗಿದೆ. ಅವರು 34ನೇ ವಯಸ್ಸಿನಲ್ಲಿ ಸ್ಪರ್ಧಾತ್ಮಕ ಬಾಡಿಬಿಲ್ಡಿಂಗ್‌ನಿಂದ ದೂರ ಸರಿದಿದ್ದರು. ಆದರೆ ಅವರ ಪತ್ನಿಯ ಅನಾರೋಗ್ಯ ಮತ್ತು ಬಹುಶಃ ಖ್ಯಾತ ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ಪ್ರಭಾವದಿಂದ 50ನೇ ವಯಸ್ಸಿನಲ್ಲಿ ಮತ್ತೆ ಫಿಟ್‌ನೆಸ್‌ ಲೋಕಕ್ಕೆ ಮರಳಿದರು.

ಈಗಲೂ ಬಾಡಿಬಿಲ್ಡಿಂಗ್‌ ಮುಂದುವರಿಸುತ್ತಿರುವುದೇಕೆ?

ಅವರ ಪತ್ನಿ ಅನಾರೋಗ್ಯಕ್ಕೆ ಒಳಗಾದಾಗ 50ನೇ ವಯಸ್ಸಿನಲ್ಲಿ ಕನಜವಾ ಮತ್ತೆ ಬಾಡಿಬಿಲ್ಡಿಂಗ್‌ಗೆ ಮರಳಿದರು. ಪತಿ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲ್ಲುವುದನ್ನು ನೋಡುವುದು ಪತ್ನಿಗೆ ಸಂತೋಷ ಮತ್ತು ಉತ್ಸಾಹ ನೀಡುತ್ತಿತ್ತು. ಅದರೀಗ ಅವರ ಪತ್ನಿ ಇಲ್ಲವಾದರೂ, ಕನಜವಾ ತಮ್ಮ ಬಾಡಿಬಿಲ್ಡಿಂಗ್‌ ಪ್ರಯಾಣವನ್ನು ಮುಂದುವರಿಸಿದ್ದಾರೆ.

ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಭೇಟಿಯಾಗಬೇಕೆಂಬ ಕನಸು

ಈಗ 90ನೇ ವಯಸ್ಸಿನಲ್ಲೂ ಬಾಡಿ ಬಿಲ್ಡಿಂಗ್ ನಿಲ್ಲಿಸಬೇಕೆಂದು ಅವರಿಗೆ ಅನಿಸಿಲ್ಲ. ಅವರ ಮುಂದೆ ಇನ್ನೂ ಒಂದು ಗುರಿಯಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧಿಸಲು ಅವರು ಬಯಸಿದ್ದಾರೆ. ಹಲವು ದಶಕಗಳಿಂದ ತಾವು ಅಭಿಮಾನಿಯಾಗಿರುವ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರನ್ನು ಭೇಟಿಯಾಗಬೇಕು ಎಂಬು ಕನಸು ಕೂಡ ಇದೆ.

'ನಾನು ಅರ್ನಾಲ್ಡ್‌ಗಿಂತ ಕೇವಲ 10 ವರ್ಷ ದೊಡ್ಡವನಾಗಿದ್ದರೂ, ನಾನು ಏನು ಮಾಡಬಲ್ಲೆ ಎಂಬುದನ್ನು ಅವರಿಗೆ ತೋರಿಸಲು ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.

ಕನಸು ಮತ್ತು ದೀರ್ಘಾಯುಷ್ಯದ ವಿಚಾರಕ್ಕೆ ಬಂದರೆ, ಆಹಾರಕ್ರಮವೊಂದೇ ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯುವ ಯಾವುದೇ ಮಾಂತ್ರಿಕ ಪರಿಹಾರವಲ್ಲ. ವಂಶವಾಹಿಗಳು, ಹಲವು ದಶಕಗಳ ತರಬೇತಿ, ಜೀವನಶೈಲಿ ಮತ್ತು ಇನ್ನಿತರ ಅನೇಕ ಅಂಶಗಳು ವಯಸ್ಸಾಗುವಿಕೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರ ಜೊತೆಗೆ ಸಮರ್ಪಣೆ, ಶಿಸ್ತು ಮತ್ತು ನಿರಂತರ ಪರಿಶ್ರಮವೂ ಬಹಳ ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Neem Karoli Baba: ನೀರಿನಿಂದ ತುಪ್ಪ-ಪೆಟ್ರೋಲ್; ಇದು ಹನುಮನ ಅವತಾರ ಪುರುಷ ನೀಮ್ ಕರೋಲಿ ಬಾಬಾ ಪವಾಡ!
ಒಂದೇ ವಾರದಲ್ಲಿ ₹4.5 ಲಕ್ಷ ಗಳಿಸಿದ ಮೇಕಪ್ ಆರ್ಟಿಸ್ಟ್! ಈ ಮಹಿಳೆಯ ಯಶೋಗಾಥೆ ತಿಳಿದರೆ ನಿಮಗೂ ಸ್ಫೂರ್ತಿ