ಬೆಳಗನ್ನು ಸರಿಯಾಗಿ ಪ್ರಾರಂಭಿಸಿದರೆ ದಿನವಿಡೀ ಸರಿಯಾಗಿಯೇ ಕಳೆದು ಹೋಗುತ್ತದೆ ಎನ್ನುತ್ತಾರೆ ದೊಡ್ಡವರು. ಎದ್ದ ಕೂಡಲೇ ಏನು ಮಾಡುತ್ತೀರೆಂಬುದು ಇಡೀ ದಿನವನ್ನು ನಿರ್ಧರಿಸುತ್ತದೆ. ಹಾಗಿದ್ದರೆ, ಮಾರ್ನಿಂಗ್ ರೂಟಿನ್‌ನಲ್ಲಿ ನಾವು ಮಾಡುವ ತಪ್ಪುಗಳೇನು?
ಬೆಳಗ್ಗೆದ್ದು ಯಾವ ಮಗ್ಗುಲಲ್ಲಿ ಎದ್ನೋ ಏನೋ, ಒಂದು ಕೆಲಸವೂ ಸುಸೂತ್ರವಾಗಿ ಆಗುತ್ತಿಲ್ಲ ಎಂದು ಸಾಮಾನ್ಯವಾಗಿ ಜನ ಹೇಳುವುದನ್ನು ಕೇಳಿರುತ್ತೇವೆ. ಅಂದರೆ ಏಳುವ ದಿಕ್ಕಿನಿಂದ ಹಿಡಿದು ಮಾಡುವ ಕೆಲಸದವರೆಗೆ ಬೆಳಗಿನ ರೂಟಿನ್ ನಮ್ಮ ಇಡೀ ದಿನವನ್ನು ನಿರ್ಧರಿಸುತ್ತದೆ. ನಾವು ಕೆಲವೊಂದಿಷ್ಟು ಮಾರ್ನಿಂಗ್ ರೂಟಿನ್ ದೂರವಿಟ್ಟರೆ ದಿನ ಚೆನ್ನಾಗಿದ್ದು, ಹೆಚ್ಚು ಪ್ರಾಡಕ್ಟಿವ್ ಆಗಿರುತ್ತದೆ. ಹಾಗಿದ್ದರೆ ಬೆಳಗ್ಗೆದ್ದು ನೀವೇನೇನು ಮಾಡಬಾರದು ಗೊತ್ತಾ?
ಪದೇ ಪದೆ ಅಲಾರಾಂ ತಲೆ ಬಡಿಯುವುದು
ಅಲಾರಾಂ ಇಟ್ಟುಕೊಳ್ಳುವುದೇ ಬೇಗ ಏಳಬೇಕೆಂದು. ಅದು ಬಿಟ್ಟು ಅದು ಬಡಕೊಂಡಂತೆಲ್ಲ ಅದರ ತಲೆಗೆ ಬಡಿದು ಮಲಗುತ್ತಿದ್ದರೆ, ನಿದ್ದೆಯೂ ಸರಿಯಾಗಿ ಆಗುವುದಿಲ್ಲ, ದಿನದ ಎಲ್ಲ ಕೆಲಸವೂ ಕೆಡುತ್ತದೆ. ಕಡೆ ನಿಮಿಷದಲ್ಲಿ ಓಡುವುದಕ್ಕಿಂತ ತಲೆಬಿಸಿ ಬೇರೊಂದಿಲ್ಲ. ಬೆಳಗ್ಗೆದ್ದ ಮೇಲೆ ಸಮಯವಿಲ್ಲ ಮಾಡಿಕೊಳ್ಳುವುದು ನೀವು ಮಾಡುವ ಅತಿ ದೊಡ್ಡ ತಪ್ಪು. ಸಮಯವೆಂದರೆ ಕೇವಲ ಮೇಕಪ್, ತಲೆ ಬಾಚಿಕೊಳ್ಳಲು ಅಲ್ಲ, ನಿಮಗಾಗಿ ಸಮಯ ಕೊಟ್ಟುಕೊಳ್ಳಬೇಕು. ಧ್ಯಾನ, ಓದು, ಪ್ರಾರ್ಥನೆ, ಸ್ನಾನ ಎಲ್ಲವೂ ರಗಳೆಯಿಲ್ಲದೆ ಸರಾಗವಾಗಿ ನಡೆಯಬೇಕು.
ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!
ಸೋಷ್ಯಲ್ ಮೀಡಿಯಾ ಸಹವಾಸ ಸಲ್ಲ
ಕಣ್ಣು ಬಿಡುವ ಮುಂಚೆ ಫೋನ್‌ಗಾಗಿ ತಡಕಾಡಿ, ಫೇಸ್‌ಬುಕ್ ಪೇಜಿನಲ್ಲಿ ಕಂಡವರ ಬದುಕನ್ನು ಹಣಕುವುದು, ಟ್ವಿಟ್ಟರ್‌ನಲ್ಲಿ ಗಾಸಿಪ್‌ಗಳನ್ನು ಓದುವುದು, ಇನ್ಸ್ಟಾದಲ್ಲಿ ನಟಿಯು ರಾತ್ರಿ ಯಾವ ಬಟ್ಟೆ ಧರಿಸುತ್ತಾಳೆ, ಬೆಳಗ್ಗೆ ಏನು ಧರಿಸುತ್ತಾಳೆ ಎಂದು ನೋಡುವುದು, ರಾಜಕೀಯ ಮಾತುಗಳು, ವಿವಾದಗಳು... ಊಫ್, ನಿಮ್ಮ ಬದುಕನ್ನು ಮತ್ತೊಬ್ಬರ ಬದುಕಿನೊಂದಿಗೆ ಹೋಲಿಸಿ ದಿನವನ್ನು ಆರಂಭಿಸಿದರೆ, ಮೆದುಳಿಗೆ ಅದನ್ನೇ ಪ್ರೋಗ್ರಾಂ ಮಾಡಿಟ್ಟಂತಾಗುತ್ತದೆ. ಅದು ದಿನವಿಡೀ ಹೀಗೆ ಬೇಡದ ಯೋಚನೆಗಳಲ್ಲೇ ಮುಳುಗೇಳುತ್ತಾ ಕಳೆಯುತ್ತದೆ. ಇನ್ನೊಬ್ಬರ ಬದುಕನ್ನು ಬದುಕಲು ಹಾತೊರೆಯುತ್ತದೆ. ಇದು ದಿನವೊಂದನ್ನು ಆರಂಭಿಸುವ ಅತಿ ಕೆಟ್ಟ ವಿಧಾನ. ನಿಜವಾಗಿಯೂ ನಿಮ್ಮ ಜೀವನವನ್ನು ಚೆನ್ನಾಗಿ ಅನುಭವಿಸಬೇಕೆಂದರೆ ಮೊದಲು ಈ ದುರಭ್ಯಾಸದಿಂದ ದೂರ ಬನ್ನಿ. ಮಲಗುವ ಮುಂಚೆ ಫೋನನ್ನು ಬೇರೆ ಕೋಣೆಯಲ್ಲಿಟ್ಟರೆ ಒಳಿತು. ಬಡ ಹವ್ಯಾಸಗಳೊಂದಿಗೆ ಶ್ರೀಮಂತ ಲೈಫ್‌ಸ್ಟೈಲ್ ಹೊಂದುವುದು ಅಸಾಧ್ಯ ಎಂಬುದು ನೆನಪಿರಲಿ.
ಇ-ಮೇಲ್ ಪರೀಕ್ಷಿಸುವುದು
ಇಮೇಲ್ ಪರೀಕ್ಷಿಸುತ್ತಾ ದಿನವನ್ನು ಆರಂಭಿಸಿದರೆ ಅಥವಾ ವಾಟ್ಸಾಪ್ ಚಾಟ್‌ನೊಂದಿಗೆ ದಿನಾರಂಭವಾದರೆ ನೀವು ಇನ್ನೊಬ್ಬರ ಅಗತ್ಯ, ಆಸೆ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸುತ್ತಾ ಅವರ ಕೆಲಸಗಳಿಗೆ ಕನೆಕ್ಟ್ ಆಗುತ್ತಾ ಕಣ್ಣು ಬಿಟ್ಟಂತಾಗುತ್ತದೆಯೇ ಹೊರತು, ನಿಮ್ಮ ಸ್ವಂತದ್ದಕ್ಕಲ್ಲ. ಬೆಳಗ್ಗೆದ್ದೊಡನೆ ಇಮೇಲ್ ನೋಡುವುದರಿಂದ ನಿಮ್ಮ ವಾರದ ಉತ್ಪಾದಕ ಸಾಮರ್ಥ್ಯ ಶೇ.30ರಷ್ಟು ತಗ್ಗುತ್ತದೆ. ಹಾಗೆಂದ ಮಾತ್ರಕ್ಕೆ ಇಮೇಲ್ ನೋಡಲೇಬಾರದು, ಚಾಟ್ ಮಾಡಲೇಬಾರದೆಂದಲ್ಲ. ಬೆಳಗಿನ ಹೊತ್ತು ಬೇಡವಷ್ಟೇ. ಇಡೀ ದಿನದಲ್ಲಿ ಆಗಬೇಕಾದ ಪ್ರಮುಖ ಕೆಲಸಗಳು ಯಾವುವು ಎಂಬುದನ್ನು ಯೋಚಿಸಿ, ಅವುಗಳನ್ನು ಪೂರೈಸಲು ನೀವೇನು ಮಾಡಬೇಕು ಎಂದು ಲೆಕ್ಕ ಹಾಕಿಕೊಳ್ಳಿ. ಸುಮ್ಮನೆ ದಿನವನ್ನು ಬಂದ ಹಾಗೆ ಕಳೆಯುವುದಲ್ಲ. ನೀವು ಯೋಜಿಸಿದಂತೆ ಕಳೆಯುವುದರಲ್ಲಿ ಯಶಸ್ಸಿನ ಗುಟ್ಟಿದೆ.
ನೀವು ಕೊಂಡ ಬೆಳ್ಳಿ ಅಸಲಿಯೋ ನಕಲಿಯೋ? ಹೀಗೆ ಟೆಸ್ಟ್ ಮಾಡಿ...!
ಹಾಗಿದ್ದರೆ ಬೆಳಗ್ಗೆ ನೀವೇನು ಮಾಡಬೇಕು ?
20 ನಿಮಿಷಕ್ಕೆ ಟೈಮರ್ ಸೆಟ್ ಮಾಡಿಕೊಂಡು ಏನಾದರೂ ಉತ್ತಮವಾದುದನ್ನು ಓದಿ. ಮತ್ತೆ 20 ನಿಮಿಷ ವ್ಯಾಯಾಮಕ್ಕೆ ನೀಡಿ. ಮತ್ತೆ 10 ನಿಮಿಷ ಧ್ಯಾನ ಅಥವಾ ನಿಮ್ಮ ಗುರಿಗಳನ್ನು ಮನನ ಮಾಡಿಕೊಳ್ಳಲು ನೀಡಿ. ಯಶಸ್ವೀ ವ್ಯಕ್ತಿಗಳು ದಿನದ 1 ಗಂಟೆಯನ್ನು ಈ ಕೆಲಸಗಳಲ್ಲಿ ಕಳೆಯುತ್ತಾರೆ. ನಿಮ್ಮ ಗುರಿಗಳನ್ನು, ಅದನ್ನು ಸಾಧಿಸಲು ಮಾಡಬೇಕಾದ ಕೆಲಸಗಳನ್ನು ಬರೆದಿಡಿ. ಒಂದೊಂದಾಗಿ ಮಾಡುತ್ತಾ ಸಾಗಿ.