![[ಮಾಡರ್ನ್ ಗುರು] ವೈಫು ಮತ್ತು ಲೈಫು: ಯಾವುದು ಮುಖ್ಯ?](https://static.asianetnews.com/images/w-412,h-232,imgid-90d13a3f-68f8-43bf-a990-17ae23de1545,imgname-image.jpg)
ಒಮ್ಮೆ ಮದುವೆಯಾದರೆ ಜೀವನಪರ್ಯಂತ ಅದೇ ಹೆಂಡತಿಯ ಜೊತೆ ಸಂತೋಷವಾಗಿರುವುದು ಹೇಗೆ ಎಂದು ಕೆಲ ಗಂಡಸರು ನನ್ನಲ್ಲಿ ಕೇಳುತ್ತಾರೆ. ಇದೊಂದು ಕಷ್ಟಕರ ಪ್ರಶ್ನೆ. ಮದುವೆಯೆಂಬುದು ಸುಂದರ ಸಾಮಾಜಿಕ ವ್ಯವಸ್ಥೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅದು ಬಹಳ ಜನರ ಜೀವನವನ್ನು ಹಾಳು ಮಾಡುತ್ತದೆ!
ಮದುವೆಯಾಗಿದ್ದೇವೆ ಎಂಬ ಒಂದೇ ಕಾರಣಕ್ಕೆ ಜೀವಮಾನಪೂರ್ತಿ ಅವರೊಂದಿಗೆ ಬದುಕಬೇಕು ಎಂಬ ಅನಿವಾರ್ಯತೆ ಯಾರಿಗೂ ಬರಬಾರದು. ನಾವು ಒಂದೇ ಸಂಗಾತಿಯ ಜೊತೆ ಬದುಕುವುದಕ್ಕೆ ಕಾರಣವೇನು? ಅವರಿಗೆ ಗೌರವ ಕೊಡುತ್ತೇವೆ ಎಂದಾ? ಅವರನ್ನು ಪ್ರೀತಿಸುತ್ತೇವೆ ಎಂದಾ? ಅಥವಾ ಆ ವ್ಯಕ್ತಿಯ ಜೊತೆಗೆ ಆತ್ಮೀಯತೆ ಹೊಂದಿದ್ದೇವೆ ಎಂದಾ? ಈ ಮೂರರಲ್ಲಿ ಯಾವ ಕಾರಣದಿಂದ ನೀವು ಜೊತೆಗಿದ್ದರೂ ಅದು ಸಹ್ಯ ಸಂಬಂಧವೇ ಆಗುತ್ತದೆ.
ಆದರೆ, ಇವ್ಯಾವುವೂ ಇಲ್ಲದೆ, ಮದುವೆಯಾಗಿದ್ದೇವೆ ಹಾಗಾಗಿ ಜೊತೆಗಿರಬೇಕು ಎಂದು ಒಟ್ಟಿಗೇ ಬದುಕುತ್ತಿದ್ದರೆ ಅದು ನಿಜಕ್ಕೂ ಟಾರ್ಚರ್. ವಾಸ್ತವ ಏನೆಂದರೆ ಬಹಳ ಜನರು ಈ ಟಾರ್ಚರ್‌ನೊಂದಿಗೇ ಬದುಕುತ್ತಿದ್ದಾರೆ. ಮದುವೆಯೆಂಬುದು ಸಾಮಾಜಿಕ ಸಂಬಂಧ. ಅದು ವೈಯಕ್ತಿಕ ಸಂಬಂಧ ಅಲ್ಲ. ಮದುವೆಯಾಗದೆಯೂ ಇಬ್ಬರು ಪರಸ್ಪರರನ್ನು ಗೌರವಿಸುವ ಅನುಬಂಧವನ್ನು ಬೆಳೆಸಿಕೊಂಡಿರಬಹುದು. ಆಗ ಅದು ವೈಯಕ್ತಿಕ ಸಂಬಂಧವಾಗುತ್ತದೆ. ಜಗತ್ತಿನ ಮುಂದೆ ಹೇಳಿಕೊಳ್ಳಲು ಒಬ್ಬಳು ಹೆಂಡತಿ ಬೇಕು ಅಥವಾ ಗಂಡ ಬೇಕು ಎಂಬಂತಹ ದಾಂಪತ್ಯ ನಿಮ್ಮದಾಗಿದ್ದರೆ ಅದರಿಂದ ಹೊರಗೆ ಬಂದುಬಿಡಿ.
ಅದು ಇಬ್ಬರಿಗೂ ಒಳ್ಳೆಯದು. ಇಲ್ಲದಿದ್ದರೆ ಇಬ್ಬರೂ ಜೀವನಪೂರ್ತಿ ಹಿಂಸೆ ಅನುಭವಿಸುತ್ತಲೇ ಬದುಕಬೇಕಾಗುತ್ತದೆ. ಇದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲ. ಬಹಳಷ್ಟು ಮದುವೆಗಳು ಮಕ್ಕಳ ಕಾರಣಕ್ಕೆ ಉಳಿದಿರುತ್ತವೆ. ನಾವು ಬೇರೆಯಾದರೆ ಮಗುವಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಷ್ಟೋ ದಂಪತಿ ಒಟ್ಟಿಗಿರುತ್ತಾರೆ. ಅವರ ನಡುವೆ ಯಾವ ವೈಯಕ್ತಿಕ ಸಂಬಂಧವೂ ಇರುವುದಿಲ್ಲ. ನನ್ನ ಸಲಹೆ ಇಷ್ಟೆ; ಮದುವೆಯಾದ ಮೇಲೆ ಮಗು ಮಾಡಿಕೊಳ್ಳುವುದಕ್ಕಿಂತ ಮೊದಲೇ ನೀವಿಬ್ಬರೂ ಜೀವನಪೂರ್ತಿ ಜೊತೆಗಿರುತ್ತೀರಾ ಇಲ್ಲವಾ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ. ಒಮ್ಮೆ ಮಗು ಆದ ಮೇಲೆ ಅದಕ್ಕೆ ಅನ್ಯಾಯ ಮಾಡುವುದಾಗಲೀ ಅಥವಾ ಆ ಮಗುವಿನ ಕಾರಣಕ್ಕೆ ನಿಮಗೆ ಅನ್ಯಾಯ ಮಾಡಿಕೊಳ್ಳುವುದಾಗಲೀ ಒಳ್ಳೆಯದಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.