
ನಿಮಗೆ ಕೆಲಸದ ಒತ್ತಡದಿಂದಾಗಿ ಸಮಸ್ಯೆ ಆಗುತ್ತಿದೆಯಾ? ಜೀವನ ನಡೆಸಲು ಕಷ್ಟಪಡುವ ಕಾರಣಕ್ಕೆ ಒತ್ತಡಕ್ಕೆ ಒಳಗಾಗುತ್ತಿದ್ದೀರಾ? ಹಾಗಿದ್ದರೆ ಒಂದು ಕೆಲಸ ಮಾಡಿ. ನನ್ನ ಆಶ್ರಮಕ್ಕೆ ಬನ್ನಿ. ನಾನು ಊಟ ಹಾಕುತ್ತೇನೆ. ಚೆನ್ನಾಗಿ ನೋಡಿ ಕೊಳ್ಳುತ್ತೇನೆ. ಏನೂ ಕೆಲಸ ಮಾಡಬೇಡಿ. ಜೀವನಪೂರ್ತಿ ನಿಮ್ಮ ಕುಟುಂಬವನ್ನೂ ನಾನೇ ನೋಡಿ ಕೊಳ್ಳುತ್ತೇನೆ. ನಿಮ್ಮ ಕೆಲಸವೇನು ಅಂದರೆ ಖುಷಿಯಾಗಿರುವುದು. ಏನೂ ಮಾಡದೆ ಖುಷಿ ಖುಷಿಯಾಗಿರಬೇಕು! ಸಾಧ್ಯವೇ?’ ಇದು ಒತ್ತಡದಿಂದ ಬಳಲುತ್ತಿದ್ದೇನೆ ಎಂದು ನನ್ನಲ್ಲಿಗೆ ಬರುವವರಿಗೆ ನಾನು ನೀಡುವ ಆಯ್ಕೆ.
ಅವರು ‘ಅದ್ಹೇಗೆ ಸಾಧ್ಯ ಗುರೂಜಿ! ಬೇಡ ಬೇಡ’ ಎನ್ನುತ್ತಾರೆ. ಏಕೆ? ಏಕೆಂದರೆ, ಸಮಸ್ಯೆ ಇರುವುದು ಕೆಲಸದಲ್ಲಲ್ಲ. ಸಮಸ್ಯೆ ಇರುವುದು ನಿಮ್ಮ ಬದುಕಿನಲ್ಲಾಗಲೀ ಅಥವಾ ನೀವು ಬದುಕುತ್ತಿರುವ ಜಗತ್ತಿನಲ್ಲಾಗಲೀ ಅಲ್ಲ. ಸಮಸ್ಯೆ ಏನೆಂದರೆ, ಬದುಕು ಸುರಳೀತವಾಗಿ ನಡೆದುಕೊಂಡು ಹೋಗಲು ಬೇಕಾದ ಕೆಲ ಪೂರ್ವಸಿದ್ಧತೆಗಳನ್ನು ನೀವು ಮಾಡಿಕೊಂಡಿಲ್ಲ. ಆ ಸಿದ್ಧತೆಗಳಿಲ್ಲದೆಯೇ ನಾನು ಖುಷಿಯಾಗಿ ನೆಮ್ಮದಿಯಿಂದ ಇರಬೇಕೆಂದು ಬಯಸುತ್ತಿದ್ದೀರಿ. ಅದು ಸಾಧ್ಯವೇ? ಬಹಳ ಜನರು ಅಮೆರಿಕ ಅಂದರೆ ಸ್ವರ್ಗ ಅಂದುಕೊಂಡಿರುತ್ತಾರೆ. ಆದರೆ, ಅಮೆರಿಕದಲ್ಲೇ ಇರುವವರು ಸಾಕಷ್ಟು ಒತ್ತಡದಲ್ಲಿದ್ದಾರೆ. ಸ್ವರ್ಗ ಅಥವಾ ನರಕ ಎಂಬುದು ಒಂದು ಸ್ಥಳವಲ್ಲ. ಅದೊಂದು ಕಲ್ಪನೆ.
ಜನರು ಕೆಟ್ಟದಾಗಿ ಬದುಕುತ್ತಿರುವುದರಿಂದ ಸ್ವರ್ಗ ಚೆನ್ನಾಗಿದೆ ಎಂದುಕೊಂಡಿದ್ದಾರೆ. 50 ವರ್ಷಗಳ ಹಿಂದೆ ಟರ್ಕಿಯಿಂದ ಒಬ್ಬ ಬಿಷಪ್ ಭಾರತಕ್ಕೆ ಯೋಗಿಯನ್ನು ಹುಡುಕಿಕೊಂಡು ಬಂದಿದ್ದ. ದೊಡ್ಡ ಬೆಟ್ಟದ ಗುಹೆಯಲ್ಲಿ ಅವನಿಗೊಬ್ಬ ಯೋಗಿ ಸಿಕ್ಕ. ಬಿಷಪ್ ಕೇಳಿದ: ಬದುಕು ಎಂದರೇನು? ಯೋಗಿ ಹೇಳಿದ: ಬದುಕೆಂದರೆ ವಸಂತದ ಗಾಳಿಯಲ್ಲಿರುವ ಮಲ್ಲಿಗೆಯ ಪರಿಮಳದಂತೆ. ಬಿಷಪ್ ಹೇಳಿದ: ಅಲ್ಲ ಅಲ್ಲ, ನಮ್ಮ ಪೋಪ್ ಹೇಳಿದ್ದಾರೆ, ಬದುಕೆಂದರೆ ಮುಳ್ಳಿನ ಹಾಸಿಗೆಯಿದ್ದಂತೆ! ಯೋಗಿ ಹೇಳಿದ: ಹೌದಾ, ಬಿಡಿ, ಅದು ಅವರ ಬದುಕು! ಏನಿದರ ಅರ್ಥ? ಬದುಕನ್ನು ನಾವು ಏನೆಂದುಕೊಂಡಿರುತ್ತೇವೋ ಅದೇ ನಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಕೆಲಸ ಕಷ್ಟ, ಜೀವನ ಸಾಗಿಸುವುದು ಕಷ್ಟ, ಸಂಸಾರ ಕಷ್ಟ, ಈ ಜಗತ್ತು ಕಷ್ಟ ಎಂದುಕೊಂಡರೆ ಒತ್ತಡ ನಮ್ಮನ್ನು ಬಿಟ್ಟು ಹೋಗುವುದಿಲ್ಲ.
- ಮಾಡರ್ನ್ ಗುರು, ಜಗ್ಗಿ ವಾಸುದೇವ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.