ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದೊಡ್ಡ ಕಂಪನಿಯಲ್ಲಿ ಲಕ್ಷಾಂತರ ರೂ. ಸಂಬಳದ ನೌಕರಿ ಸಿಕ್ಕರೆ ಸಾಕು, ಯಾರೂ ಅದನ್ನು ಬಿಟ್ಟು ಹೊರಬರಲು ಸಾಹಸ ಮಾಡುವುದಿಲ್ಲ. ಆದರೆ, ಅದೇ ಹಣ, ಸೌಕರ್ಯಗಳ ಹಿಂದೆ ಓಡುವುದು ತಾತ್ಕಾಲಿಕ ಸಂತೋಷವಷ್ಟೇ ಎಂದು ಅರಿತು, ನಗರದ ಗದ್ದಲದಿಂದ ದೂರಾಗಿ, ಕಾಡಿನಂಚಿನಲ್ಲಿ ಬದುಕು ಕಟ್ಟಿಕೊಂಡು, ಇಂದು ಸಾವಿರಾರು ಮಕ್ಕಳ ನೆಚ್ಚಿನ 'ನೀಲಾ' ಬೊಂಬೆಗಳ ಮೂಲಕ ಹೆಮ್ಮೆಯ ಉದ್ಯಮವೊಂದನ್ನು ಕಟ್ಟಿ ನಿಲ್ಲಿಸಿದ್ದಾರೆ ಮೈಸೂರಿನ ಸುಹಾಸ್ ರಾಮೆಗೌಡ.
ಮೈಸೂರಿನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಸುಹಾಸ್, ಎಂಬಿಎ ಮುಗಿಸಿ ಬೆಂಗಳೂರಿನಲ್ಲಿ ಕೇವಲ 6,000 ರೂ. ಸಂಬಳದ ಉದ್ಯೋಗದಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಕಠಿಣ ಪರಿಶ್ರಮದಿಂದ ಶೆಲ್ (Shell), ಬ್ಯಾಂಕ್ ಆಫ್ ಅಮೆರಿಕದಂತಹ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಉನ್ನತ ಹುದ್ದೆಗೇರಿದರು. ಕೈಯಲ್ಲಿ ಒಳ್ಳೆಯ ಸಂಪಾದನೆ ಇದ್ದರೂ, ದುಬಾರಿ ಕಾರು, ಬ್ರಾಂಡೆಡ್ ಬಟ್ಟೆಗಳ ಖರೀದಿಯ ಈ ಜೀವನ ತಾತ್ಕಾಲಿಕ ಖುಷಿಯನ್ನಷ್ಟೇ ನೀಡುತ್ತಿದೆ ಎಂಬುದನ್ನು ಅವರ ಪತ್ನಿ ಸುನಿತಾ ಅವರ ಮಾರ್ಗದರ್ಶನದಲ್ಲಿ ಅರಿತುಕೊಂಡರು.
ಅಂತಿಮವಾಗಿ 2017ರಲ್ಲಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪತ್ನಿ ಮತ್ತು ಮಗನೊಂದಿಗೆ ನಗರದ ಗದ್ದಲದಿಂದ ದೂರವಾಗಿ ನೀಲಗಿರಿ ಜಿಲ್ಲೆಯ ಊಟಿ ಸಮೀಪದ ಅರಣ್ಯ ಪ್ರದೇಶದಲ್ಲಿ (Off-grid living) ನೆಲೆಸಿದರು. ಅಲ್ಲಿ ಸ್ಥಳೀಯರ ಒಡನಾಟ, ಅವರ ಕಷ್ಟಗಳು ಮತ್ತು ಮಹಿಳೆಯರ ಪರಿಸ್ಥಿತಿ ಅವರನ್ನು ಹೊಸದೊಂದು ಸಾಮಾಜಿಕ ಚಿಂತನೆಗೆ ಮುಖಮಾಡುವಂತೆ ಮಾಡಿತು.
ಊಟಿಯಲ್ಲಿ ನೆಲೆಸಿದ ಬಳಿಕ ಸ್ಥಳೀಯ ಮಹಿಳೆಯರಿಗೆ ಕರಕುಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಸಣ್ಣ ಪ್ರಯತ್ನ ಆರಂಭವಾಯಿತು. ಮೊದಲು ಕ್ವಿಲ್ಟ್ (Quilt) ಮತ್ತು ಕೋವಿಡ್ ಕಾಲದಲ್ಲಿ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದ ಇವರು, ಸಮಾಜಕ್ಕೆ ನಿಜವಾದ ಕೊರತೆಯಿರುವ ಮತ್ತು ಮಕ್ಕಳ ಸಮಸ್ಯೆಗೆ ಪರಿಹಾರವಾಗುವ ಉತ್ಪನ್ನದ ಹುಡುಕಾಟದಲ್ಲಿದ್ದರು. ಆಗ ಹುಟ್ಟಿಕೊಂಡಿದ್ದೇ 'ಬಾಡಿ ಪಾಸಿಟಿವ್' (Body Positive) ಆಗಿರುವ ಅಪ್ಪಟ ಭಾರತೀಯ ಬೊಂಬೆಗಳ ಕಲ್ಪನೆ.
ಮಾರುಕಟ್ಟೆಯಲ್ಲಿ ಸಿಗುವ ವಿದೇಶಿ ಬೊಂಬೆಗಳು (ಬಾರ್ಬಿ ಮುಂತಾದವು) ನಮ್ಮ ಮಕ್ಕಳ ದೇಹದಸ್ಸಿಗಾಗಲಿ ಅಥವಾ ಬಣ್ಣಕ್ಕಾಗಲಿ ಹೊಂದುವುದಿಲ್ಲ. ಅಲ್ಲದೆ, ಅವು ಮಕ್ಕಳ ಮೇಲೆ ತಪ್ಪು ಸೌಂದರ್ಯದ ಮಾನದಂಡಗಳನ್ನು ಹೇರುತ್ತಿವೆ ಎಂಬುದನ್ನು ಅರಿತ ಇವರು, ಭಾರತೀಯ ಕಂದು ಬಣ್ಣದ, ದೇಹದ ಸ್ವಾಭಾವಿಕ ರಚನೆಯುಳ್ಳ ಬೊಂಬೆಗಳನ್ನು ತಯಾರಿಸಲು ಮುಂದಾದರು. ನೀಲಗಿರಿ ಬೆಟ್ಟಗಳ 'ನೀಲಕುರಿಂಜಿ' ಹೂವಿನ ಸ್ಫೂರ್ತಿಯಿಂದ ಈ ಬೊಂಬೆಗೆ 'ನೀಲಾ' ಎಂದು ಹೆಸರಿಡಲಾಯಿತು. ಇಂದು ಈ ಬೊಂಬೆಗಳು ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಮೂಲೆ ಮೂಲೆಗಳಿಗೆ ತಲುಪಿವೆ. ಮಾರುಕಟ್ಟೆಯಲ್ಲಿ ಜನರು ಇವರನ್ನು ಪ್ರೀತಿಯಿಂದ 'ಇಂಡಿಯನ್ ಬಾರ್ಬಿ' ಎಂದು ಕರೆಯಲಾರಂಭಿಸಿದರು.
ಈ ಉದ್ಯಮದ ವಿಶೇಷತೆಯೆಂದರೆ, ಬೊಂಬೆಗಳ ತಯಾರಿಕೆಗೆ ಸಂಪೂರ್ಣವಾಗಿ ತ್ಯಾಜ್ಯ ಬಟ್ಟೆಗಳನ್ನು (Upcycled fabric - ಗಾರ್ಮೆಂಟ್ಗಳ ಕಟ್ಪೀಸ್ಗಳು) ಬಳಸಲಾಗುತ್ತದೆ. ಇದುವರೆಗೆ ಸುಮಾರು 30,000 ಕೆ.ಜಿ ಗೂ ಅಧಿಕ ಬಟ್ಟೆಯ ತ್ಯಾಜ್ಯವನ್ನು ಮರುಬಳಕೆ ಮಾಡಲಾಗಿದೆ. ಜೊತೆಗೆ, ನೀಲಗಿರಿ ಭಾಗದ 100ಕ್ಕೂ ಹೆಚ್ಚು ಮಹಿಳೆಯರಿಗೆ ಈ ಮೂಲಕ ಮಾಸಿಕ ಸ್ಥಿರ ಆದಾಯ ಸಿಗುವಂತೆ ಮಾಡಿ, ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥ ಕಲ್ಪಿಸಿದ್ದಾರೆ.
ಕೇವಲ ಆಟಿಕೆಗಳಷ್ಟೇ ಅಲ್ಲದೆ, 'ನೀಲಾ' ಪಾತ್ರದ ಮೂಲಕ ಕಾಮಿಕ್ ಸ್ಟ್ರಿಪ್ಸ್ ('Raising Neela') ಹಾಗೂ ವೆಸ್ಟ್ಲ್ಯಾಂಡ್ ಬುಕ್ಸ್ ಮೂಲಕ ಮಕ್ಕಳ ಪುಸ್ತಕಗಳನ್ನು ಹೊರತರುವ ಮೂಲಕ ಸುಹಾಸ್ ಮತ್ತು ಅವರ ತಂಡ ಮಕ್ಕಳ ಜಗತ್ತಿನಲ್ಲಿ ವಿಸ್ತಾರವಾದ ಕಥೆಯ ಲೋಕವನ್ನೇ ಸೃಷ್ಟಿಸುತ್ತಿದೆ.
ಸಂಪ್ರದಾಯವಾದಿ ಶಾಲೆಗೆ ಕಳುಹಿಸುವ ಬದಲು ತಮ್ಮ ಮಗ ಆರವ್ಗೆ 'ಅನ್ಸ್ಕೂಲಿಂಗ್' (Unschooling) ನೀಡುವ ಮೂಲಕ ವಿಭಿನ್ನ ಪ್ರಯೋಗ ಮಾಡಿದರು. ಯಾವುದೇ ಒತ್ತಡವಿಲ್ಲದೆ ತನ್ನ ಸ್ವಂತ ಆಸಕ್ತಿಯಿಂದಲೇ ಭೌತಶಾಸ್ತ್ರ ಮತ್ತು ಗಣಿತವನ್ನು ಕಲಿತುಕೊಂಡ ಆರವ್, ಇಂದು ತನ್ನ 19ನೇ ವಯಸ್ಸಿನಲ್ಲಿ ತಂದೆಯ ಉದ್ಯಮದ ಬೆಳವಣಿಗೆಗೆ (ಸೋಷಿಯಲ್ ಮೀಡಿಯಾ ಮತ್ತು MIS ನಿರ್ವಹಣೆ) ನೆರವಾಗುತ್ತಿರುವುದು ಇವರ ಪೋಷಣೆಯ ಹೆಗ್ಗುರುತಾಗಿದೆ.
ಕೈತುಂಬಾ ಸಂಬಳವಿದ್ದ ಕಾರ್ಪೊರೇಟ್ ಜೀವನವನ್ನು ತೊರೆದು, ಗ್ರಾಮೀಣ ಮಹಿಳೆಯರ ಬದುಕಿಗೆ ಬೆಳಕಾಗಿ, ಭಾರತೀಯ ಸಂಸ್ಕೃತಿಯ ಆಟಿಕೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಸುಹಾಸ್ ರಾಮೆಗೌಡ ಅವರ ಪಯಣ ಇಂದಿನ ಯುವ ಉದ್ಯಮಚೇತನಗಳಿಗೆ ನಿಜಕ್ಕೂ ಒಂದು ದೊಡ್ಡ ಸ್ಪೂರ್ತಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.