
ಬ್ರೆಜಿಲ್‌ನ ಕರಾವಳಿಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಒಂದು ಪುಟ್ಟ ದ್ವೀಪ ಇಂದು ವಿಶ್ವದ ಕುತೂಹಲದ ಕೇಂದ್ರವಾಗಿದೆ. ಸಾಮಾನ್ಯ ಪ್ರವಾಸಿಗರಿಗೆ ಬಹುತೇಕ ನಿರ್ಬಂಧಿತವಾಗಿರುವ ಈ ದ್ವೀಪವೇ ಇಲ್ಹಾ ದ ಕ್ವೈಮಾಡಾ ಗ್ರಾಂಡೆ. ‘ಸ್ನೇಕ್ ಐಲ್ಯಾಂಡ್’ ಎಂದೇ ಪ್ರಸಿದ್ಧವಾಗಿರುವ ಈ ದ್ವೀಪವು ವಿಷಕಾರಿ ಹಾವುಗಳಷ್ಟೇ ಅಲ್ಲದೆ, ಅಪರೂಪದ ಜೀವವೈವಿಧ್ಯ ಮತ್ತು ವಿಶಿಷ್ಟ ವಿಕಾಸದ ಅಧ್ಯಯನಕ್ಕೂ ಹೆಸರುವಾಸಿಯಾಗಿದೆ.
ಕ್ವೈಮಾಡಾ ಗ್ರಾಂಡೆ ದ್ವೀಪದ ವಿಸ್ತೀರ್ಣ ಕೇವಲ 43 ಹೆಕ್ಟೇರ್. ಸುಮಾರು 11,000 ವರ್ಷಗಳ ಹಿಂದೆ ಸಮುದ್ರಮಟ್ಟ ಏರಿಕೆಯ ಪರಿಣಾಮವಾಗಿ ಈ ಭೂಭಾಗ ಬ್ರೆಜಿಲ್‌ನ ಮುಖ್ಯಭೂಮಿಯಿಂದ ಪ್ರತ್ಯೇಕವಾಯಿತು ಎಂದು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ. ಈ ದೀರ್ಘಕಾಲದ ಪ್ರತ್ಯೇಕತೆಯೇ ಇಲ್ಲಿನ ಜೀವಿಗಳು ವಿಶಿಷ್ಟ ರೀತಿಯಲ್ಲಿ ವಿಕಸನಗೊಳ್ಳಲು ಕಾರಣವಾಯಿತು.
ಪ್ರತಿ ಚದರ ಮೀಟರ್‌ಗೆ ಐದು ಹಾವುಗಳು
ಈ ದ್ವೀಪದಲ್ಲಿ ವಾಸಿಸುವ ಪ್ರಮುಖ ಜೀವಿ ಗೋಲ್ಡನ್ ಲ್ಯಾನ್ಸ್‌ಹೆಡ್ . ಇದು ಜಗತ್ತಿನ ಬೇರೆ ಯಾವುದೇ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಕಂಡುಬರದ, ಕ್ವೈಮಾಡಾ ಗ್ರಾಂಡೆಗೆ ಮಾತ್ರ ಸೀಮಿತವಾದ ವಿಷಕಾರಿ ಹಾವು. ಇದರ ಉದ್ದ ಸಾಮಾನ್ಯವಾಗಿ ಸುಮಾರು 70–90 ಸೆಂಟಿಮೀಟರ್ ವ್ಯಾಪ್ತಿಯಲ್ಲಿರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಈ ದ್ವೀಪದಲ್ಲಿ ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವುಗಳ ಸಂಖ್ಯೆಯೇ 4,000 ದಾಟಿದೆಯಂತೆ. ಇನ್ನುಳಿದ ಜಾತಿಯ ಹಾವುಗಳಿಗಂತೂ ಲೆಕ್ಕವೇ ಇಲ್ಲದಾಗಿದೆ. ಒಂದು ಸಂಶೊಧನೆಯ ಪ್ರಕಾರ ಇಲ್ಲಿ ಪ್ರತಿ ಚದರ ಮೀಟರ್‌ಗೆ ಐದು ಹಾವುಗಳು ಇವೆಯಂತೆ.
ಈ ಗೋಲ್ಡನ್ ಲ್ಯಾನ್ಸ್‌ಹೆಡ್ ಹಾವಿಗೆ ಆಹಾರ ಪದ್ಧತಿಯೂ ವಿಶೇಷ. ದ್ವೀಪದಲ್ಲಿ ದೊಡ್ಡ ಸಸ್ತನಿಗಳು ಇಲ್ಲದಿರುವುದರಿಂದ, ಈ ಹಾವುಗಳು ಮುಖ್ಯವಾಗಿ ವಲಸೆ ಬರುವ ಪಕ್ಷಿಗಳನ್ನು ಬೇಟೆಯಾಡುತ್ತವೆ. ಇಲ್ಲಿನ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನಿಗೆ ಕಚ್ಚಿದ ಕೆಲ ನಿಮಿಷಗಳಲ್ಲೇ ನಿಸ್ತೇಜನಾಗಿ ಸಾವನ್ನಪ್ಪುತ್ತಾನೆ. ಈ ಹಿನ್ನೆಲೆ ಸಾಮಾನ್ಯ ಪ್ರವಾಸಿಗರ ಪ್ರವೇಶಕ್ಕೆ ಇಲ್ಲಿ ನಿರ್ಬಂಧವಿದ್ದು, ಸಂಶೋಧಕರು ಮತ್ತು ಅಧಿಕೃತ ಅನುಮತಿ ಪಡೆದವರು ಮಾತ್ರ ನಿಯಂತ್ರಿತ ಪರಿಸ್ಥಿತಿಯಲ್ಲಿ ದ್ವೀಪಕ್ಕೆ ತೆರಳುತ್ತಾರೆ.
ಸ್ನೇಕ್ ಐಲ್ಯಾಂಡ್ ಎಂಬ ಹೆಸರು ಭಯ ಹುಟ್ಟಿಸಿದರೂ, ಇದರ ನಿಜವಾದ ಮಹತ್ವ ಅದರ ಹಾವುಗಳ ಸಂಖ್ಯೆಯಲ್ಲಿಲ್ಲ. ಒಂದು ಸಣ್ಣ ದ್ವೀಪದಲ್ಲಿ ಸಾವಿರಾರು ವರ್ಷಗಳ ಪ್ರತ್ಯೇಕತೆಯು ಒಂದು ವಿಶಿಷ್ಟ ಪ್ರಭೇದವನ್ನು ಹೇಗೆ ರೂಪಿಸಿತು ಎಂಬುದನ್ನು ತಿಳಿಯಲು ಇದು ಜೀವಂತ ಪ್ರಯೋಗಾಲಯವಾಗಿದೆ.
ಹೀಗಾಗಿ ಸ್ನೇಕ್ ಐಲ್ಯಾಂಡ್ ಕೇವಲ ‘ಹಾವುಗಳ ದ್ವೀಪ’ವಲ್ಲ; ಅದು ವಿಕಾಸ, ಪರಿಸರ ಸಮತೋಲನ ಮತ್ತು ಅಪರೂಪದ ಜೀವಿಗಳ ಸಂರಕ್ಷಣೆಯ ಮಹತ್ವವನ್ನು ಸಾರುವ ಪ್ರಕೃತಿಯ ಅಮೂಲ್ಯ ಪಾಠಶಾಲೆ. ಅದರ ಬಗ್ಗೆ ಹರಡುವ ಭಯಾನಕ ಕಥೆಗಳಿಗಿಂತ, ವೈಜ್ಞಾನಿಕ ಸತ್ಯವನ್ನು ಅರ್ಥಮಾಡಿಕೊಂಡು ಈ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದೇ ಹೆಚ್ಚು ಮುಖ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.