ಗಡದ್ದಾಗಿ ನಿದ್ದೆ ಮಾಡುವ ಸ್ಪರ್ಧೆ: ಗೆದ್ದರೆ ಸಿಗತ್ತೆ 12 ಲಕ್ಷ ರೂ! ಏನೇನು ಷರತ್ತು ಇವೆ ನೋಡಿ

Published : Oct 07, 2026, 08:36 PM IST
Sleeping Competition

ಸಾರಾಂಶ

ಜಪಾನ್‌ನ ಟೋಕಿಯೊದಲ್ಲಿ ಮ್ಯಾಟ್ರೆಸ್ ಕಂಪನಿಯೊಂದು ಆಯೋಜಿಸಿದ್ದ ವಿಶಿಷ್ಟ ಸ್ಪರ್ಧೆಯಲ್ಲಿ 90 ನಿಮಿಷಗಳ ಕಾಲ ಆಳವಾಗಿ ನಿದ್ದೆ ಮಾಡಿದವರಿಗೆ 12 ಲಕ್ಷ ರೂ. ಬಹುಮಾನ ನೀಡಲಾಗಿದೆ. ನಿದ್ದೆಯ ವೇಗ, ಆಳ ಮತ್ತು ಗುಣಮಟ್ಟವನ್ನು ಸಾಧನಗಳ ಮೂಲಕ ಅಳೆದು ವಿಜೇತರನ್ನು ಆಯ್ಕೆ ಮಾಡಲಾಗಿದೆ. ಜಪಾನ್‌ನಲ್ಲಿ ನಿದ್ದೆಯ ಕೊರತೆ ಗಂಭೀರ ಸಮಸ್ಯೆಯಾಗಿದ್ದು, ಉತ್ತಮ ನಿದ್ದೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ಸ್ಪರ್ಧೆ ನಡೆಸಲಾಗಿದೆ.

ಟೋಕಿಯೋ (ಜಪಾನ್​): ನಿದ್ದೆ ಎಂದರೆ ಎಲ್ಲಾ ಜೀವಿಗಳಿಗೆ ಅತ್ಯಗತ್ಯವಾಗಿ ಬೇಕೇ ಬೇಕು. ಒಂದು ದಿನ ನಿದ್ದೆಗೆಟ್ಟರೆ ಅದರಿಂದ ಆಗುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಆದರೆ ಇಂದು ಎಷ್ಟೋ ಮಂದಿ ನಿದ್ದೆಗಾಗಿ ಪರದಾಡುವುದು ಇದ್ದರೆ, ಅದೇ ಇನ್ನೊಂದೆಡೆ, ಚಿಂತೆಯಿಲ್ಲದನಿಗೆ ಸಂತೆಯಲ್ಲೂ ನಿದ್ದೆ ಎನ್ನುವಂತೆ ರಸ್ತೆ ಬದಿಯ ಮೇಲೆ, ಟ್ರಾಫಿಕ್​ ನಡುವೆ ಹಾಯಾಗಿ ಮಲಗುವುದನ್ನು ನೋಡಬಹುದು. ಇನ್ನು ಸೋಮಾರಿಗಳಿಗೆ ನಿದ್ದೆಯೇ ವರದಾನ. ಹೀಗೆ ನಿದ್ದೆಯ ಬಗ್ಗೆ ಹೇಳುತ್ತಾ ಹೋದರೆ ದೊಡ್ಡ ಗ್ರಂಥವನ್ನೇ ಬರೆಯಬಹುದು. ಆದರೆ ಗಡದ್ದಾಗಿ ನಿದ್ದೆ ಮಾಡಿದ್ರೆ ನಿಮಗೆ ಲಕ್ಷ ಲಕ್ಷ ರೂಪಾಯಿ ಹಣ ಸಿಗುತ್ತದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಇಂಥದ್ದೊಂದು ಸ್ಪರ್ಧೆ ನಡೆದಿದೆ.

ಅಂದಹಾಗೆ ಇದು ನಡೆದಿರುವುಉ ಜಪಾನ್‌ನ ಟೋಕಿಯೊದಲ್ಲಿ. ಮ್ಯಾಟ್ ರೇಸ್ ಎಂಬ ಹೆಸರಿನಲ್ಲಿ ಈ ವಿಶೇಷವಾಗಿರುವ ಸ್ಪರ್ಧೆ ನಡೆದಿದೆ. ಇದರಲ್ಲಿ ಭಾಗವಹಿಸಿದವರು 90 ನಿಮಿಷಗಳ ಅಂದರೆ ಒಂದೂವರೆ ಗಂಟೆ ಕಾಲ ನಿದ್ದೆ ಮಾಡಬೇಕು. ಅಷ್ಟೇನಾ? ಇದಕ್ಕೆ ದುಡ್ಡು ಕೊಡಲು ಅವರಿಗೆ ಹುಚ್ಚಾ ಎನ್ನಬೇಡಿ. ಆದರೆ ಅಲ್ಲೇ ಇರುವುದು ಟ್ವಿಸ್ಟ್​. ನಿದ್ದೆಯ ವೇಗ, ಆಳ, ಗುಣಮಟ್ಟ ಮತ್ತು ಸ್ಥಿರತೆಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಮೊದಲೇ ಹೇಳಿದಂತೆ ಡೀಪ್​ ಆಗಿ ನಿದ್ದೆ ಮಾಡುವವರ ಸಂಖ್ಯೆ ಕಡಿಮೆ ಇರುವ ಕಾರಣ, ಇಂಥದ್ದೊಂದು ಸ್ಪರ್ಧೆ. ಗೆದ್ದವರಿಗೆ 2.22 ಮಿಲಿಯನ್ ಯೆನ್ ಬಹುಮಾನ ಅರ್ಥಾತ್​ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ 12 ಲಕ್ಷ ರೂಪಾಯಿ ನೀಡಲಾಗಿದೆ.

ಏನಿದು ಸ್ಪರ್ಧೆ?

ಮೊನ್ನೆ ಅಂದರೆ ಇದೇ 5ರಂದು ಟೋಕಿಯೊದಲ್ಲಿ ನಡೆದ ಈ ವಿಶಿಷ್ಟ ಸ್ಪರ್ಧೆಯನ್ನು ಹಾಸಿಗೆ ಮತ್ತು ಮ್ಯಾಟ್ರೆಸ್ ತಯಾರಿಕಾ ಕಂಪನಿ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರು ಆರಾಮದಾಯಕ ಮ್ಯಾಟ್ರೆಸ್‌ಗಳ ಮೇಲೆ ಮಲಗಿ ನಿದ್ದೆಗೆ ಜಾರಬೇಕಿತ್ತು. ಆದರೆ ಯಾರು ಮೊದಲು ಕಣ್ಣು ಮುಚ್ಚಿದರು ಎಂಬುದಷ್ಟೇ ಇಲ್ಲಿ ಮುಖ್ಯವಾಗಿರಲಿಲ್ಲ. ಸ್ಪರ್ಧಿಗಳ ನಿದ್ದೆಯ ಗುಣಮಟ್ಟವನ್ನು ವಿಶೇಷ ಸಾಧನಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿತ್ತು. ಈ ಸ್ಪರ್ಧೆ ಆಗಾಗ್ಗೆ ಇಲ್ಲಿ ನಡೆಯುತ್ತಲೇ ಇರುತ್ತದೆ.

ಸ್ಪರ್ಧಿಗಳ ತಲೆಗೆ ನಿದ್ದೆ ಮೇಲ್ವಿಚಾರಣೆ ಮಾಡುವ ಸಾಧನಗಳನ್ನು ಅಳವಡಿಸಲಾಗಿತ್ತು. ಅವರು ಎಷ್ಟು ಬೇಗ ನಿದ್ದೆಗೆ ಜಾರಿದರು, ಎಷ್ಟು ಆಳವಾಗಿ ನಿದ್ದೆ ಮಾಡಿದರು, ನಿದ್ದೆ ಎಷ್ಟು ಸ್ಥಿರವಾಗಿತ್ತು ಮತ್ತು ಒಟ್ಟಾರೆ ನಿದ್ದೆಯ ಗುಣಮಟ್ಟ ಹೇಗಿತ್ತು ಎಂಬ ಅಂಶಗಳನ್ನು ಪರಿಗಣಿಸಿ ಅಂಕ ನೀಡಲಾಗಿತ್ತು. ಹೀಗಾಗಿ ಮೊದಲು ಮಲಗಿದವರೇ ಗೆಲ್ಲುತ್ತಾರೆ ಎಂಬ ನಿಯಮ ಇರಲಿಲ್ಲ.ಅಷ್ಟೇ ಅಲ್ಲ, ಸ್ಪರ್ಧಿಗಳ ನಿದ್ದೆಯ ಸ್ಥಿರತೆಯನ್ನು ಪರೀಕ್ಷಿಸಲು ಮಧ್ಯದಲ್ಲಿ ಕೆಲವು ಅಡ್ಡಿಪಡಿಸುವ ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೂ ನಿದ್ದೆಯಿಂದ ಎಚ್ಚರಗೊಳ್ಳದೆ ಉತ್ತಮ ಗುಣಮಟ್ಟದ ನಿದ್ದೆ ಮುಂದುವರಿಸುವುದು ಗೆಲುವಿಗೆ ಪ್ರಮುಖವಾಗಿತ್ತು. ಸ್ಪರ್ಧೆಯ ಬಗ್ಗೆ ತಿಳಿದುಬಂದಂತೆ, ಈ ಕಾರ್ಯಕ್ರಮಕ್ಕೆ 45 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳು ಟೋಕಿಯೊದಲ್ಲಿ ನಡೆದ ವಿವಿಧ ಸುತ್ತುಗಳಲ್ಲಿ ಭಾಗವಹಿಸಿದ್ದರು. ಕೆಲವರು ನಿದ್ದೆಗೆ ಹೋಗುವ ಮುನ್ನ ತಮ್ಮ ನೆಚ್ಚಿನ ಆಟಿಕೆಗಳನ್ನೂ ಜೊತೆಗೆ ತಂದಿದ್ದರು.

ಸ್ಪರ್ಧೆ ಹಿಂದಿರುವ ಉದ್ದೇಶವೇನು?

ಮೊದಲೇ ಹೇಳಿದಂತೆ ನಿದ್ದೆ ಎನ್ನುವುದು ಮನುಷ್ಯರಿಗೆ ಮಾತ್ರವಲ್ಲದೇ ಎಲ್ಲರಿಗೂ ಅತ್ಯಗತ್ಯ. ಆದರೆ ಇಂದು ಹಲವರು ನಿದ್ದೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ನಿದ್ದೆ ಸ್ಪರ್ಧೆಯ ಹಿಂದೆ ಕೇವಲ ಮನರಂಜನೆಯ ಉದ್ದೇಶವಿರಲಿಲ್ಲ. ಜಪಾನ್‌ನಲ್ಲಿ ನಿದ್ದೆಯ ಕೊರತೆ ಒಂದು ಗಂಭೀರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಉತ್ತಮ ನಿದ್ದೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೂ ಈ ಕಾರ್ಯಕ್ರಮಕ್ಕಿತ್ತು. ಆಯೋಜಕರ ಪ್ರಕಾರ, ನಿದ್ದೆಯನ್ನು ಒಂದು ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಜನರು ತಮ್ಮ ವಿಶ್ರಾಂತಿಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಸಂದೇಶ ನೀಡುವುದು ಉದ್ದೇಶವಾಗಿತ್ತು.

ಈ ಸ್ಪರ್ಧೆಯಲ್ಲಿ ಅಂತಿಮವಾಗಿ ‘Suimii’ ಎಂಬ ಅಡ್ಡಹೆಸರಿನಿಂದ ಗುರುತಿಸಲ್ಪಟ್ಟ ಸ್ಪರ್ಧಿ ವಿಜೇತರಾಗಿದ್ದಾರೆ. ಬಹುಮಾನದ ಹಣವನ್ನು ಸ್ವಂತವಾಗಿ ಮನೆಗೆ ಸ್ಥಳಾಂತರಗೊಳ್ಳುವ ವೆಚ್ಚಕ್ಕೆ ಬಳಸುವುದಾಗಿ ಅವರು ಹೇಳಿದ್ದಾರೆ. ಜೊತೆಗೆ ತಮಗೆ ಇಷ್ಟವಾದ ‘ಪ್ರಿನ್ಸೆಸ್ ಬೆಡ್’ ಖರೀದಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಹಣಕ್ಕಾಗಿ ಜನರು ಓಡುವುದನ್ನು ನೋಡಿರುವ ನಮಗೆ, ಹಣಕ್ಕಾಗಿ ಜನರು ಮಲಗುವ ಸ್ಪರ್ಧೆ ನಡೆದಿರುವುದು ಅಚ್ಚರಿ ಮೂಡಿಸುವಂತಿದೆ. ಆದರೆ ಈ ವಿಚಿತ್ರ ಸ್ಪರ್ಧೆಯ ಮೂಲಕ ಉತ್ತಮ ನಿದ್ದೆಯ ಮಹತ್ವದ ಬಗ್ಗೆಯೂ ಗಮನ ಸೆಳೆಯಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿರಿಯಾನಿ ಎಲೆಯನ್ನು ಸಾಕ್ಸ್‌ನಲ್ಲಿ ಇಟ್ಕೊಂಡು ಮಲಗಿದ್ರೆ ಏನಾಗುತ್ತೆ? ಮ್ಯಾಜಿಕ್ ರಹಸ್ಯ ರಿವೀಲ್
70ನೇ ವಯಸ್ಸಲ್ಲಿ 4ನೇ ಮದ್ವೆಯಾದ ಹ್ಯಾಂಡ್‌ಸಮ್‌ ಖಳನಟ: ವಿವಾಹದ ಗುಟ್ಟು ಬಿಚ್ಚಿಟ್ಟ ಕಬೀರ್‌ ಬೇಡಿ