ಮೋಡ, ಮಳೆ, ಹಸಿರು, ಕಪ್ಪನೆಯ ಡಾಂಬಾರು ರಸ್ತೆ ಮತ್ತು ಅವಳು. ಮೈಸೂರಿನಲ್ಲಿ ಹೆಜ್ಜೆ ಇಟ್ಟಕಡೆ ಅವಳಿದ್ದಾಳೆ. ನಮ್ಮಿಬ್ಬರ ಜೊತೆಗಿನ ಜಾಗ. ಆಕೆ ನನ್ನ ಭುಜಕ್ಕೆ ಒರಗಿಕೊಂಡ ಜಾಗ, ಯಾವುದೊ ಹಠಕ್ಕೆ ಎರಡು ಹನಿ ಕಣ್ಣೀರು ಸುರಿಸಿದ ಜಾಗ, ಮೊದಲ ಪತ್ರವನ್ನು ಅವಳ ಹೃದಯದಲ್ಲಿಟ್ಟು ಕೈ ಕಟ್ಟಿನಿಂತ ಜಾಗವನ್ನು ಹುಡುಗನೊಬ್ಬ ನೆನೆಸಿಕೊಂಡಿದ್ದಾನೆ.
ಏ ಅವಳು ಸಿಕ್ಕಿದ್ಲು ಕಣೋ.. ಅನ್ನುತ್ತಾ ಏನೋ ಹೇಳೋಕೆ ಬಂದ. ನಾನು ಇನ್ನು ಮಾತಾಡಬೇಡ ಅಂತ ಸನ್ನೆ ಮಾಡಿದೆ. ಮಾತು ಬದಲಿಸಿದ. ಉಳಿದಂತೆ ಬೇರೆ ಮಾತುಗಳು ಹುಟ್ಟಿಮುಗಿದುಹೋದವು. ಅವನು ಹೊರಟು ಹೋದ, ನಾನು ಎದ್ದು ಬಂದೆ.
ಅವಳ ಬಗ್ಗೆ ತೀರದ ದ್ವೇಷವಿದೆ ಎಂದು ಭಾವಿಸಿಕೊಂಡನೊ ಏನೋ ಪೆದ್ದ. ಎಂಟು ವರ್ಷಗಳ ಹಿಂದೆ ನನ್ನ ಕಳ್ಸೋಕೆ ಬಸ್ಟ್ಯಾಂಡಿಗೆ ಬಂದು ಕಣ್ಣಲ್ಲಿ ನೀರು ತಂದು ಕಳುಹಿಸಿದವಳ ಪ್ರೀತಿ ಇನ್ನು ಅದೆಷ್ಟುಗರಿಗರಿ. ಎದೆಯ ಕಪಾಟು ತೆಗೆದರೆ ಒಂಚೂರು ಧೂಳು ಹಿಡಿಯದಂತೆ ಒಪ್ಪವಾಗಿ ಜೋಡಿಸಿಟ್ಟಸಾವಿರಗಟ್ಟಲೆ ಚೆಂದದ ನೆನಪುಗಳಿವೆ. ಎಲ್ಲವೂ ನಿಗಿನಿಗಿ.
ಇವನೇ ಕೈಕೊಟ್ಟಅಂದ್ರು ಕೆಲವರು ಅವಳು ಮೋಸ ಮಾಡಿದ್ಲು ಅಂದ್ರು. ಒಂದಾಗೋಕೆ ಕಾರಣ ಇಲ್ಲದಿರುವಂತೆ ಕೆಲವೊಮ್ಮೆ ದೂರವಾಗುವುದಕ್ಕೂ ಇರಲ್ಲ. ಸಂಪರ್ಕ ಕಡಿಮೆಯಾಯಿತು, ಮಾತು ಕಡಿಮೆಯಾದವು. ಆದರೆ ಬಡ್ಡಿಮಗಂದು ಪ್ರೀತಿ ಮಾತ್ರ ಕಡಿಮೆಯಾಗಲಿಲ್ಲ. ಎಷ್ಟುದಿನಗಳು ಕಳೆದರೂ ನೆನಪುಗಳು ಮಾಸಲಿಲ್ಲ. ಪ್ರೀತಿಗಿಂತ ಪ್ರೀತಿ ಕೊಡುವ ನೆನಪುಗಳಿಗೆ ಸುಖಕೊಡುವ ತಾಕತ್ತು ಹೆಚ್ಚು.
ನಾವಿಬ್ಬರೂ ಪ್ರೀತಿಸಿಕೊಂಡು ಆ ಆರು ವರ್ಷದ ಪ್ರತಿದಿನದ ಲೆಕ್ಕವನ್ನು ಬೇಕಾದರೂ ನಾನು ಒಪ್ಪಿಸುತ್ತೇನೆ. ನಾವು ಮೂರನೇ ಭಾರಿ ಭೇಟಿಯಾದಾಗ ದಾಸ್ ಪ್ರಕಾಶ ಹೋಟೆಲ್‌ನಲ್ಲಿ ಎರಡೆರಡು ಇಡ್ಲಿ ತಿಂದಿದ್ವಿ. ಅವಳಿಗೆ ಅವತ್ತು ಯೆಲ್ಲೋ ಕಲರ್ ಡ್ರೆಸ್ ಕೊಡಿಸಿದ್ದೆ. ನೀರು ಕುಡಿಯುವಾಗ ಮೈಮೇಲೆ ಚೆಲ್ಲಿ ಕೊಂಡಿದ್ದಕ್ಕೆ ಮಂಗ ಅನ್ನುತ್ತಾ ಹಿತವಾಗಿ ಕೆನ್ನೆಗೊಂದು ಬಾರಿಸಿದ್ದಳು. ಹೀಗೆ ನೆನಪಿನ ತಿಜೋರಿಯಿಂದ ತೆಗೆದರೆ ಪ್ರತಿಯೊಂದು ತಾಜಾ.
undefined
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ದಾರಿಯಲ್ಲಿ ನಡೆಯಲು ಒಂದು ಟ್ರೈ ಮಾಡಬಹುದೇನೋ ಆದರೆ ನೆನಪೇ ಇಲ್ಲದ ದಾರಿಯಲ್ಲಿ? ಅಸಾಧ್ಯ. ಮನುಷ್ಯ ನಾಳೆಯ ಆಸೆ ಇಲ್ಲದಿದ್ದರೂ ಬದುಕುತ್ತಾನೆ. ಆದರೆ ನಿನ್ನೆಯ ನೆನಪುಗಳಿಲ್ಲದೆ ಬದುಕಲಾರ. ಆ ನೆನಪುಗಳು ಸುಂದರವಿದ್ದಷ್ಟುಆತ ಸುಖಿ.
ಅವಳು ಕೊಟ್ಟಆರು ವರ್ಷದ ನೆನಪುಗಳಿಂದ ಬದುಕೆಷ್ಟುಸೊಗಸಾಗಿದೆಯೆಂದರೆ ಬಹುಶಃ ಅವಳು ನನ್ನ ಜೊತೆ ಇದ್ದಿದ್ದರೆ ಈ ಪರಿ ಖುಷಿಯಾಗಿರುತ್ತಿದ್ದನೊ ಇಲ್ಲವೋ ಗೊತ್ತಿಲ್ಲ. ಏಕೆಂದರೆ ನಾವಿಬ್ಬರೂ ಮನುಷ್ಯರೇ ನೋಡಿ ಏನೋ ಒಂದು ಕಿತ್ತಾಡಿ, ಬಡಿದಾಡಿ, ಅವಮಾನ ಮತ್ತೊಂದು ಅಂತ ಅಂದುಕೊಂಡು ಪ್ರೀತಿಗೊಂದು ಗೋರಿ ಕಟ್ಟುತ್ತಿದ್ದೆವಾ? ಗೊತ್ತಿಲ್ಲ.
ನಾನು ಅಂದು ಬಸ್ ಹತ್ತಿ ಬಂದಾಗಿನಿಂದ ಅವಳ ಬಗ್ಗೆ ಯಾರಿಂದ ಏನನ್ನು ಕೇಳಿಸಿಕೊಳ್ಳಲು ಹೋಗಿಲ್ಲ. ವಿಷಯ ಏನೇ ಆಗಿರಲಿ ಅದು ನನ್ನ ಮೊದಲ ನೆನಪುಗಳಿಗೆ ತೊಂದರೆ ಕೊಡುತ್ತದೆ. ಮನಸ್ಸಿನಲ್ಲಿ ಇನ್ನೇನು ಮೂಡುತ್ತದೆ. ಹಳೆಯದರೊಂದಿಗೆ ಸುಖಿಸಲು ಅಡ್ಡಿಯಾಗುತ್ತದೆ. ನೆನಪುಗಳೆಲ್ಲ ಬಣ್ಣಗೆಡುತ್ತವೆ. ಅವಳ ಬಗ್ಗೆ ಮತ್ತೆಯ ಹೊಸದು ಕೂಡ ನನ್ನ ಕಿವಿಗೆ ಬೀಳಲು ಇಷ್ಟವಿಲ್ಲ.
‘ನಿನ್ನ ಫೋನ್ ನಂಬರ್ ಕೇಳಿದ್ಲು, ಹೇಗಿದ್ದಾನೆ ಅಂತ ಕೇಳಿತಿದ್ಲು’ ಅನ್ನುವ ವಿಚಾರ ನನ್ನ ಕಿವಿಗೆ ಮುಟ್ಟಿದರೆ ನನ್ನಲ್ಲಿ ಮತ್ಯಾವ ಯೋಚನೆಗಳು ಮೂಡಬಹುದು? ‘ಗಿರಿನಾ? ಅವರು ಯಾರು? ಅಂತ ಕೇಳಿದ್ಲು ಮಾರಾಯ’ ಅಂದರೆ ನನ್ನಲ್ಲಿ ಮತ್ತೇನು ಮಾಡಬಹುದು? ಇವೆಲ್ಲವು ಸೇರಿಕೊಂಡು ನನ್ನ ದಿನಗಳು ಮತ್ತೇ ಹೇಗೊ ಬದಲಾಗಬಹುದು, ಹಳೆಯ ನೆನಪುಗಳಿಗೆ ಅದರ ಚಂದಕ್ಕೆ ಭಂಗ ತರಬಹುದು. ಪ್ರೀತಿ ಹಾಗೆ ಉಳಿದುಕೊಂಡಿರಲಿ ಎಂಬ ಕಾಳಜಿ.
ಅತ್ತ ಮುಂಗಾರು ಕಪ್ಪಾಗಿ ಸುರಿಯ ತೊಡಗಿದರೆ ಇತ್ತ ನಾನು ಬ್ಯಾಗೆತ್ತುಕೊಂಡು ಹೊರಟುಬಿಡುತ್ತೇನೆ. ಮೋಡ, ಮಳೆ, ಹಸಿರು, ಕಪ್ಪನೆಯ ಡಾಂಬಾರು ರಸ್ತೆ ಮತ್ತು ಅವಳು. ಮೈಸೂರಿನಲ್ಲಿ ಹೆಜ್ಜೆ ಇಟ್ಟಕಡೆ ಅವಳಿದ್ದಾಳೆ. ನಾನು ಪ್ರತೀ ಬಾರಿ ಪ್ರೀತಿ ತುಂಬಿಸಿಕೊಳ್ಳುವುದು ಹೀಗೆ.
ನಮ್ಮಿಬ್ಬರ ಜೊತೆಗಿನ ಜಾಗ. ಆಕೆ ನನ್ನ ಭುಜಕ್ಕೆ ಒರಗಿಕೊಂಡ ಜಾಗ, ಯಾವುದೊ ಹಠಕ್ಕೆ ಎರಡು ಹನಿ ಕಣ್ಣೀರು ಸುರಿಸಿದ ಜಾಗ, ಮೊದಲ ಪತ್ರವನ್ನು ಅವಳ ಹೃದಯದಲ್ಲಿಟ್ಟು ಕೈ ಕಟ್ಟಿನಿಂತ ಜಾಗ ಹೀಗೆ ನೂರೆಂಟು. ಆರು ವರ್ಷಗಳಲ್ಲಿ ಒಂದೊಂದು ದಿನಕ್ಕೂ ಒಂದೊಂದು ಸೊಬಗು. ಅವುಗಳನ್ನು ಅದೇ ಜಾಗಕ್ಕೆ ಹೋಗಿ ಹುಡುಕುತ್ತೇನೆ.
ಎಲ್ಲವೂ ಹಾಗೆಯೇ ಉಳಿದಿವೆ ಈಗ ಅರಳಿದ ಹೂವಿನಂತೆ. ಅವಳು ಬಿಟ್ಟು ಹೋದರು ‘ಎಷ್ಟುಖುಷಿಯಾಗಿದಿಯಲ್ಲ ಮಾರಾಯ’ ಅಂತಾರೆ ಫ್ರೆಂಡ್ಸು. ‘ಬಿಟ್ಟುಹೋಗಿದ್ದು ಅವಳು ಆದರೆ ಪ್ರೀತಿಯಲ್ಲ’ ಅಂತೀನಿ. ಅವಳಿಲ್ಲ ಅನ್ನುವ ನೆಪಕ್ಕಾಗಿ ಎಲ್ಲವನ್ನು ಅಷ್ಟೇ ಜತನ ಮಾಡಿದ್ದೀನಿ.
ಪ್ರತಿ ಬಾರಿ ಮೈಸೂರಿನ ರಸ್ತೆಗಳಲ್ಲಿ ಎದೆಯ ಮೇಲೆ ಅವಳ ನೆನಪುಗಳನ್ನು ತುಂಬಿಕೊಂಡು ನಡೆಯುವಾಗ ಒಂದು ಭಯ. ಇಲ್ಲೇ ಎಲ್ಲೋ ಇರುವ ಅವಳು ಎದುರಾಗಿ ಬಂದುಬಿಟ್ಟರೆ? ಏನೆಲ್ಲಾ ಆದೀತು ಎಂಬ ದಿಗಿಲು. ನಡೆಯುವ ಮಾತುಕತೆಗಳು ಅಥವಾ ನಡೆಯದೇ ಹೋಗುವ ಮಾತುಗಳು ನನ್ನೊಳಗಿನ ನೆನಪುಗಳ ಚಂದಕ್ಕೆ ಕಪ್ಪು ಕೂರಿಸಿ ಬಿಟ್ಟರೆ? ಮತ್ತೆಲ್ಲಿಗೋ ಕರೆದೊಯ್ದು ಅನಾಥವಾಗಿಸಿ ಬಿಟ್ಟರೆ? ಅನಿಸುತ್ತದೆ.
ಪ್ರತಿ ಬಾರಿ ಹೊರಡುವಾಗ, ಅಲ್ಲಿ ನಿಂತು ನೆನಪುಗಳನ್ನು ಮತ್ತಷ್ಟುಹರಿತಗೊಳಿಸುವಾಗ ‘ದೇವರೇ ಅವಳು ಸಿಗದಿರಲಿ’ ಅಂತ ಅಂದುಕೊಳ್ಳುತ್ತೇನೆ. ದೇವರು ನನ್ನ ಕೋರಿಕೆಯನ್ನು ಇಂದಿನವರೆಗೂ ಜಾರಿಯಲ್ಲಿಟ್ಟಿದ್ದಾನೆ. ಈಗ ಮಳೆ ಸುರಿಯುತ್ತಿದೆ ಮತ್ತೆ ಹೊರಟು ನಿಂತಿದ್ದೇನೆ. ದೇವರಲ್ಲಿ ಮತ್ತದೇ ಕೋರಿಕೆ. ದೇವರೆ ಅವಳು ಸಿಗದಿರಲಿ.
- ಸದಾಶಿವ ಸೊರಟೂರು