ಕ್ಯಾನ್ಸರ್ ಮಣಿಸಿ ಬ್ಯೂಟಿ ಕಿರೀಟ ತೊಟ್ಟ ಸುಂದರಿ!

By Web Desk  |  First Published Aug 7, 2019, 10:07 AM IST

ನಿರಂತರ ಡಯೆಟ್‌, ದಿನಕ್ಕೆ ಮೂರು ಗಂಟೆಗಳ ಜಿಮ್‌ ಕಸರತ್ತು.. ಸುಮಾರು ನಾಲ್ಕೂವರೆ ತಿಂಗಳ ಸತತ ಪ್ರಯತ್ನ. ಹಠ, ಛಲ ಕೊನೆಗೂ ಫಲಕೊಟ್ಟಿತು. ತನಿಷಾ ಮತ್ತೆ ಹಿಂದಿನ ಆಕಾರಕ್ಕೆ, ತೂಕಕ್ಕೆ ಮರಳಿದ್ದರು. ಈ ಹೊತ್ತಲ್ಲಿ ಅವರು ಕರಗಿಸಿದ್ದು ಬರೋಬ್ಬರಿ 25 ಕೆಜಿ ತೂಕವನ್ನು!


 

‘ ಆ ಕ್ಷಣ ನನ್ನೆರಡು ಎರಡು ಆಯ್ಕೆಗಳಿದ್ದವು. ಒಂದು ಲೈಫ್‌ ಕಡೆ ಹೊರಳೋದು, ಇನ್ನೊಂದು ಬದುಕಿನಿಂದ ವಿಮುಖವಾಗೋದು. ಆರು ತಿಂಗಳು ಹಾಸಿಗೆ ಬಿಟ್ಟೇಳದಂತೆ ಬಿದ್ದುಕೊಂಡಿದ್ದವಳು ಜಿಗಿತೆದ್ದೆ. ನನ್ನ ಆಯ್ಕೆ ಬದುಕೇ ಆಗಿತ್ತು.’

Tap to resize

Latest Videos

ತುಂಬಕೆನ್ನೆಯ ಬಂಗಾಳಿ ಸುಂದರಿ, ಇಂಗ್ಲೀಷ್‌ನಲ್ಲಿ ಪಟಪಟನೆ ಮಾತನಾಡುತ್ತಿದ್ದರು. ತಾನಂದು ತೆಗೆದುಕೊಂಡ ಪಾಸಿಟಿವ್‌ ನಿರ್ಧಾರದಿಂದ ಬದುಕು ಹೇಗೆ ಯೂ ಟರ್ನ್‌ ಪಡೆದುಕೊಂಡಿತು ಅನ್ನೋದನ್ನ ಯೋಚಿಸಿದ್ರೆ ಇವತ್ತಿಗೂ ರೋಮಾಂಚನ!

ಈ ಕಾಲದ ಹುಡುಗ್ರಿಗೆ ನಾನ್‌ ಹೇಳೋದು ಇಷ್ಟೇ. ನಿಮ್ಮನ್ನು ಹಿಂದಕ್ಕೆಳೆಯೋರು ಬಹಳ ಜನ ಇರ್ತಾರೆ, ಮುಂದಕ್ಕೆ ಕರೆಯೋರು ಬಹಳ ಕಡಿಮೆ ಜನ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಯಾವ ಕೆಲಸಕ್ಕೆ ಕೈ ಹಾಕಿದ್ರೂ ಸಂಪೂರ್ಣ ಶ್ರಮ ಹಾಕಿ, ಪಾತಾಳದಲ್ಲಿದ್ರೂ ಮೇಲೆದ್ದು ಬರ್ತೀರ.- ತನಿಷಾ, ಮಿಸೆಸ್‌ ಇಂಡಿಯಾ ವರ್ಲ್ಡ್ ಫೈನಲಿಸ್ಟ್

ಈಕೆ ತನಿಷಾ ಡಿ ರಾಯ್‌. ಪಶ್ಚಿಮ ಬಂಗಾಲ ಹುಟ್ಟೂರು. ಬೆಂಗಳೂರಿಗೆ ಬಂದು ಎರಡು ದಶಕ ಕಳೆದಿವೆ. ಕನ್ನಡ ಬರೋದಿಲ್ಲ ಅನ್ನೋದನ್ನ ಹೊರತುಪಡಿಸಿದರೆ ಅವರು ಅಪ್ಪಟ ಬೆಂಗಳೂರಿಗರೇ. ಅಕ್ಟೋಬರ್‌ನಲ್ಲಿ ಗ್ರೀಸ್‌ನಲ್ಲಿ ನಡೆಯುವ ‘ಮಿಸ್ಸೆಸ್‌ ಇಂಡಿಯಾ ವಲ್ಡ್‌ರ್‍ ವೈಡ್‌ 2019’ ಕಾಂಟೆಸ್ಟ್‌ಗೆ ಫೈನಲಿಸ್ಟ್‌ ಆಗಿ ಆಯ್ಕೆಯಾಗಿದ್ದಾರೆ. 20 ದೇಶಗಳ ಸುಮಾರು 30 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಫೈನಲ್‌ ಪ್ರವೇಶಿಸಿದ್ದು ಈಕೆಯ ಹೆಚ್ಚುಗಾರಿಕೆ.

ಹೇಗಿದ್ದೆ ಅಂದರೆ..

2001ನೇ ಇಸವಿಯಲ್ಲಿ ಪಶ್ಚಿಮ ಬಂಗಾಲದಿಂದ ಬೆಂಗಳೂರಿಗೆ ತನ್ನ ಹೆತ್ತವರ ಜೊತೆಗೆ ಬಂದಿದ್ದ ತನಿಷಾ ಇಲ್ಲೇ ಪದವಿ, ಉನ್ನತ ಪದವಿ ಮುಗಿಸಿದರು. 2017ರಲ್ಲಿ ಮದುವೆ ಆಯ್ತು. ಪತಿ ಅಭಿನವ್‌ ಸಾಫ್ಟ್‌ವೇರ್‌ ಉದ್ಯೋಗಿ. ಎಲ್ಲ ಚೆನ್ನಾಗಿ ನಡೆಯುತ್ತಿದೆ ಅಂತನ್ನುವ ಹೊತ್ತಿಗೇ, ಅಂದರೆ ಜೂನ್‌ 2018ನೇ ಇಸವಿಯಲ್ಲಿ ಈಕೆಗೆ ಲಾಲಾರಸ ಗ್ರಂಥಿಯಲ್ಲಿ ಟ್ಯೂಮರ್‌ ಇರುವುದು ಪತ್ತೆಯಾಯ್ತು. ಸರ್ಜರಿಯ ಮೂಲಕ ಟ್ಯೂಮರ್‌ ತೆಗೆಯಲಾಯ್ತು. ಎಡಕಿವಿಯಿಂದ ಕತ್ತಿನವರೆಗೂ ಅಗಲಕ್ಕೆ ತೆರೆದುಕೊಂಡ ಗಾಯ. ನೋವಿನ ಮೇಲೆ ನೋವು. ಇದೆಲ್ಲ ಒಂದು ಹಂತಕ್ಕೆ ಬಂದಾಗ, ಅಬ್ಬಾ ಎಲ್ಲ ಮುಗಿಯಿತು ಎಂದು ನಿಟ್ಟುಸಿರು ಬಿಡಲಿಕ್ಕಿಲ್ಲ, ಮತ್ತೆ ಸಮಸ್ಯೆ.. ಬಯೊಸ್ಕೊಪಿ ಮಾಡಿ ನೋಡಿದಾಗ ತಿಳಿದದ್ದು ಎದೆಯೊಡೆದು ಹೋಗುವ ಸಂಗತಿ. ತನಿಷಾಗೆ ಕ್ಯಾನ್ಸರ್‌ ಇರುವುದು ಪತ್ತೆಯಾಯ್ತು! ಪುಣ್ಯಕ್ಕೆ ಅದಿನ್ನೂ ಮೊದಲ ಹಂತದಲ್ಲಿತ್ತು. ಸಾಮಾನ್ಯವಾಗಿ ಎರಡನೇ ಅಥವಾ ಮೂರನೇ ಹಂತದಲ್ಲಿರುವಾಗಲೇ ಇದು ಪತ್ತೆಯಾಗೋದು. ಆದರೆ ತನಿಷಾ ಅದೃಷ್ಟಕ್ಕೆ ಮೊದಲ ಹಂತದಲ್ಲಿ ಗೊತ್ತಾಯ್ತು, ಅಷ್ಟೇ ಅಲ್ಲ, ಅದಕ್ಕೆ ತಕ್ಕ ಟ್ರೀಟ್‌ಮೆಂಟ್‌ ತಗೊಳ್ಳೋದು ಸಾಧ್ಯವಾಯ್ತು.

ಬೆಡ್‌ರೆಸ್ಟ್‌ನಲ್ಲಿ ವಿಪರೀತ ಹೆಚ್ಚಾದ ತೂಕ

ನಿರಂತರ ಚಿಕಿತ್ಸೆಯ ಪರಿಣಾಮ ಅನಿವಾರ್ಯವಾದ ಬೆಡ್‌ರೆಸ್ಟ್‌ . ಆದರೆ ಸುಮಾರು 6 ತಿಂಗಳ ಕಾಲ ಬೆಡ್‌ರೆಸ್ಟ್‌ನ ಪರಿಣಾಮ ಮೈ ಸಿಕ್ಕಾಪಟ್ಟೆಊದಿಕೊಂಡು ದಪ್ಪಗಾಯ್ತು. ಸುಮಾರು 25 ಕೆಜಿಗಳವರೆಗೆ ತೂಕ ಹೆಚ್ಚಾಯ್ತು. ಬೇಕೋ ಬೇಡವೋ ನಿರಂತರವಾಗಿ ಹರಿದು ಬರುತ್ತಿದ್ದ ಅನುಕಂಪದ ಮಾತುಗಳು, ದೇಹದ ಬಗ್ಗೆ ಟೀಕೆಗಳು. ಇದೆಲ್ಲ ಮೊದಲೇ ಕುಗ್ಗಿಹೋಗಿದ್ದ ತನಿಷಾರನ್ನು ಮತ್ತಷ್ಟುಹಿಮ್ಮೆಟ್ಟಿಸಿತು. ಪರಿಣಾಮ ಖಿನ್ನತೆ! ಹಗಲು ರಾತ್ರಿಗಳ ಪರಿವೆಯಿಲ್ಲದೇ ನಿರಂತರವಾಗಿ ಆವರಿಸುತ್ತಿದ್ದ ವಿಷಾದದ ಪ್ರವಾಹ. ಹೊರಬರುವುದು ಹೇಗೆ, ಸುತ್ತಮುತ್ತ ಪರಿಸರ ಬದಲಾಗದೇ.. ಆಗ ತನಿಷಾ ಮುಂದಿದ್ದದ್ದು ಎರಡೇ ಆಯ್ಕೆ ಒಂದು ಬದುಕಿನತ್ತ ಮುಖ ಮಾಡೋದು, ಇನ್ನೊಂದು ಬದುಕಿನಿಂದ ವಿಮುಖವಾಗೋದು. ಆದರೆ ಈ ಛಲಗಾರ್ತಿಗೆ ಲೈಫೇ ಮುಖ್ಯವಾಯಿತು. ಅಸಹನೀಯವಾಗಿದ್ದ ಜೀವನವನ್ನು ಸಹನೀಯವಾಗಿಸಿಕೊಂಡು ಮುಂದುವರಿಯುವ ಹಠ ಹುಟ್ಟಿತು.

ಮೂರು ಗಂಟೆ ಜಿಮ್‌, ಸಕ್ಕರೆಗೆ ಗುಡ್‌ಬೈ

ವನ್‌ ಫೈನ್‌ ಡೇ ತನಿಷಾ ಬೆಡ್‌ನಿಂದ ಮೇಲೆದ್ದು ನೇರ ಜಿಮ್‌ನತ್ತ ನಡೆದರು. ಆಗಷ್ಟೇ ಟ್ರೀಟ್‌ಮೆಂಟ್‌ಗೆ ತುತ್ತಾಗಿ ಬಹಳ ದಪ್ಪಗಾಗಿದ್ದ ದೇಹ ವ್ಯಾಯಾಮಕ್ಕೆ ಸಹಕಾರ ನೀಡುತ್ತಿರಲಿಲ್ಲ. ಆದರೆ ತನೀಷಾ ಬಿಡಬೇಕಲ್ಲಾ! ದಿನಕ್ಕೆ ಮೂರು ಗಂಟೆ ಹಠಕಟ್ಟಿಜಿಮ್‌ನಲ್ಲಿ ವರ್ಕೌಟ್‌ ಮಾಡಲಾರಂಭಿಸಿದರು. ಇದಕ್ಕೆ ಪೂರಕವಾದ ಡಯೆಟ್‌ಅನ್ನೂ ರೂಪಿಸಿಕೊಂಡರು. ಹೇಳಿ ಕೇಳಿ ಬೆಂಗಾಲಿ ಹೆಣ್ಣು. ಸ್ವೀಟ್‌ ಅಂದರೆ ಜೀವ. ಆದರೆ ಆ ಹೊತ್ತಿನಲ್ಲಿ ಅದಕ್ಕಿಂತ ಭವಿಷ್ಯ ಮುಖ್ಯವಾಗಿತ್ತು. ಸ್ವೀಟ್‌ ಮಾತ್ರವಲ್ಲ, ಕಾರ್ಬೋಹೈಡ್ರೇಟ್‌ ಆಹಾರಕ್ಕೆ ಗುಡ್‌ ಬೈ ಹೇಳಿದರು. ನಿರಂತರ ಡಯೆಟ್‌, ದಿನಕ್ಕೆ ಮೂರು ಗಂಟೆಗಳ ಜಿಮ್‌ ಕಸರತ್ತು.. ಸುಮಾರು ನಾಲ್ಕೂವರೆ ತಿಂಗಳ ಸತತ ಪ್ರಯತ್ನ. ಹಠ, ಛಲ ಕೊನೆಗೂ ಫಲಕೊಟ್ಟಿತು. ತನಿಷಾ ಮತ್ತೆ ಹಿಂದಿನ ಆಕಾರಕ್ಕೆ, ತೂಕಕ್ಕೆ ಮರಳಿದ್ದರು. ಈ ಹೊತ್ತಲ್ಲಿ ಅವರು ಕರಗಿಸಿದ್ದು ಬರೋಬ್ಬರಿ 25 ಕೆಜಿ ತೂಕವನ್ನು!

ಬ್ಯೂಟಿ ಕಾಂಟೆಸ್ಟ್‌ ನಲ್ಲಿ ಸ್ಪರ್ಧೆ

ಒಮ್ಮೆ ತನ್ನ ದೇಹದ ಬಗ್ಗೆ ಆತ್ಮವಿಶ್ವಾಸ ಬಂದದ್ದೇ ಇವರನ್ನು ಸೆಳೆದದ್ದು ಮಿಸ್ಸೆಸ್‌ ಇಂಡಿಯಾ ವಲ್ಡ್‌ರ್‍ ಕಾಂಟೆಸ್ಟ್‌. ಈ ಸ್ಪರ್ಧೆಗೆ ಅಂದ ಚೆಂದಕ್ಕಿಂತಲೂ ಹೆಚ್ಚು ಮುಖ್ಯವಾಗುವುದು ಪ್ರತಿಭೆ, ಸಾಮಾಜಿಕ ಸೇವೆ. ಈಕೆ ಭರತನಾಟ್ಯ ಡ್ಯಾನ್ಸರ್‌. ಅದನ್ನೇ ಮುಖ್ಯವಾಗಿಸಿಕೊಂಡು, ತಾನು ಬಹಳ ಕಾಲದಿಂದ ಮಾಡಿಕೊಂಡು ಬಂದಿರುವ ಪ್ರಾಣಿಪ್ರೀತಿಯ ಚಟುವಟಿಕೆಗಳನ್ನೂ ಜೊತೆ ಸೇರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಸುಮಾರು 30 ಸಾವಿರಕ್ಕೂ ಅಧಿಕ ಸುಂದರಿಯರನ್ನು ಹಿಂದಿಕ್ಕಿ ವಿಶ್ವಮಟ್ಟದ ಸ್ಪರ್ಧೆಯ ಫೈನಲ್‌ಗೆ ಅಡಿಯಿಟ್ಟರು.

ಅಕ್ಟೋಬರ್‌ನಲ್ಲಿ ಗ್ರೀಸ್‌ನಲ್ಲಿ ನಡೆಯೋ ಸ್ಪರ್ಧೆಯಲ್ಲಿ ಭಾಗವಹಿಸಿ ಬ್ಯೂಟಿ ಕಿರೀಟ ಮುಡಿಗೇರಿಸಿಕೊಳ್ಳುವ ಹಂಬಲ ಈಕೆಗೆ. ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗಿದೆ.

ಡಯೆಟ್‌ ಹೇಗಿರುತ್ತೆ?

ಬೆಳಗ್ಗೆ ಖಾಲಿಹೊಟ್ಟೆಗೆ ಬಿಸಿ ನೀರಿಗೆ ಲಿಂಬೆ ರಸ ಸೇರಿಸಿ ಕುಡಿಯುತ್ತಾರೆ. ಇದಾಗಿ ಸ್ವಲ್ಪ ಹೊತ್ತಿಗೇ ಗ್ರೀನ್‌ ಟೀ ಕುಡಿಯೋದು. ಆಮೇಲೆ ಓಟ್ಸ್‌ ಉಪಹಾರ, ಹಾಲು ಸೇವನೆ. ಮಧ್ಯಾಹ್ನ ಓಟ್ಸ್‌ನಿಂದ ಮಾಡಿರೋ ರೊಟ್ಟಿಜೊತೆಗೆ ತರಕಾರಿ, ಎಗ್‌ವೈಟ್‌ ತಿನ್ನೋದು. ಸಂಜೆ ಬ್ಲ್ಯಾಕ್‌ ಟೀ ಕುಡಿಯೋದು. ರಾತ್ರಿಗೂ ಮಧ್ಯಾಹ್ನದ ರೀತಿಯಲ್ಲೇ ಉಪಹಾರ. ನಡು ನಡುವೆ ಹಣ್ಣು, ತರಕಾರಿ ತಿನ್ನೋ ಅಭ್ಯಾಸ ಇದೆ.

click me!