ಕರೆಂಟ್ ಹೊಡೆದ ಕೋತಿಗೆ ಅಮ್ಮನಾದ್ರು ಎಎಸ್‌ಐ ಯಶೋದಾ

Jul 27, 2018, 7:46 PM IST

ಈ ಘಟನೆ ನಡೆದಿರುವುದು ಕಲಬುರಗಿಯಲ್ಲಿ. ಎಎಸ್‌ಐ ಯಶೋದಾ ಅವರು ಕಲಬುರಗಿಯ ಜಗತ್ ವೃತ್ತದ ಮಾರ್ಗವಾಗಿ ಯಲ್ಲಮ್ಮ ಮಂದಿರಕ್ಕೆ ಹೊರಟಿದ್ದರು. ಮಾರ್ಗ ಮಧ್ಯದಲ್ಲಿ ಸಾಕಷ್ಟು ಜನ ಸಂದಣಿ ಸೇರಿದ್ದನ್ನು ಕಂಡು ಕುತೂಹಲಕ್ಕೆ ಏನೆಂದು ಇಣುಕಿದ್ದಾರೆ. ಅಲ್ಲಿ ಕೋತಿಯೊಂದು ನರಳುತ್ತ ಬಿದ್ದಿರುವುದು ಕಾಣುತ್ತದೆ. ಏನೆಂದು ವಿಚಾರಿಸಿದಾಗ ಕೋತಿಗೆ ಕರೆಂಟ್ ಶಾಕ್ ತಗುಲಿದೆ. ಅದರಿಂದಾಗಿ ತೀವ್ರ ನಿಶ್ಯಕ್ತವಾಗಿದೆ. ಈಗ ಸರಿಯಾದ ಚಿಕಿತ್ಸೆ ಕೊಡಿಸದೇ ಇದ್ದರೆ ಕೋತಿ ಬದುಕುಳಿಯುವುದು ಕಷ್ಟ ಎಂಬುದನ್ನು ಅರಿತ ಯಶೋದಾ ಅವರು ದೇವಸ್ಥಾನಕ್ಕೆ ಹೋಗುವುದನ್ನು ಮೊಟಕುಕೊಳಿಸಿ ತಕ್ಷಣ ಕೋತಿಯನ್ನು ಎತ್ತಿಕೊಂಡು ಹತ್ತಿರದ ಪಶು ಆಸ್ಪತ್ರೆಗೆ ಕೊಂಡೊಯ್ದು ಚಿಕೆತ್ಸೆ ಕೊಡಿಸಿದರು.


ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಕೋತಿಗೆ ಆಸ್ಪತ್ರೆಯಲ್ಲಿ ಕೊಟ್ಟ ಚಿಕೆತ್ಸೆಯಿಂದ ಪ್ರಜ್ಞೆ ಬಂದಿದೆ. ಒಂದು ಹಂತದಲ್ಲಿ ಕೋತಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲವು ದಿನ ಬೇಕು. ಅಲ್ಲಿಯವರೆಗೂ ಏನು ಮಾಡುವುದು? ಎಲ್ಲಿ ಆಶ್ರಯ ನೀಡುವುದು ಎಂಬ ಪ್ರಶ್ನೆ ಎದ್ದಾಗ ಸ್ವತಃ ಯಶೋದ ಅವರು ಕೋತಿಯನ್ನು ತಮ್ಮ ಮನೆಗೆ ಕೊಂಡೊಯ್ದು ಆರೈಕೆ ಮಾಡುವ ನಿರ್ಧಾರಕ್ಕೆ ಬಂದು ಕೋತಿಯನ್ನು ಮನೆಗೆ ಕೊಂಡೊಯ್ದರು, ಆದರೆ ಯಶೋದ ಅವರಿಗೆ ಕೋತಿಯನ್ನು ಮನೆಗೆ ಕೊಂಡೊಯ್ದು ಆರೈಕೆ ಮಾಡುವುದು ಸುಲಭದ ಮಾತಾಗಿರಲಿಲ್ಲ. ಕಾರಣ ಅದರ ದೇಹ ಪ್ರಕೃತಿಯನ್ನು ಅರಿತು ವೈದ್ಯರು ನೀಡಿದ ಸಲಹೆಯಂತೆ ನೋಡಿಕೊಳ್ಳಬೇಕಿತ್ತು. ಕೆಲಸ, ಮನೆ, ಸಂಸಾರ, ಮಕ್ಕಳು ಎಲ್ಲದರ ನಡುವಲ್ಲೂ ಯಶೋದಾ ಅವರು ಕೆಲವು ದಿನಗಳ ಕಾಲ ಕೋತಿಗೆ ಸೂಕ್ತ ಆರೈಕೆ ಮಾಡಿದ್ದರ ಫಲವಾಗಿ ಇಂದು ಕೋತಿ ಸಂಪೂರ್ಣವಾಗಿ ಚೇತರಿಸಿಕೊಂಡಿದೆ.


ಇತ್ತೀಚೆಗಷ್ಟೆ ಬೆಂಗಳೂರಿನ ಮಹಿಳಾ ಪೇದೆಯೊಬ್ಬರು ಅನಾಥ ಮಗುವಿಗೆ ಹಾಲುಣಿಸಿದ್ದು ಎಲ್ಲರ ಮನಸ್ಸು ಗೆದ್ದಿತ್ತು. ಎಲ್ಲಾ ಕಡೆಯಿಂದಲೂ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು. ಈಗ ಅದೇ ರೀತಿಯ ಮತ್ತೊಂದು ಮಾನವೀಯ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಂದಹಾಗೆ ಇಲ್ಲಿ ಪೊಲೀಸರು ಯಾವ ಮಗುವಿಗೂ ಹಾಲುಣಿಸಿಲ್ಲ. ಮನುಷ್ಯರೇ ಅಪಘಾತಕ್ಕೆ ಒಳಗಾಗಿ ನರಳುತಿದ್ದರು ಜನ ಅವರಿಗೆ ತುರ್ತು ಚಿಕೆತ್ಸೆ ಕೊಡಿಸುವ ಬದಲು ಸೆಲ್ಫಿ ಅಥವಾ ವಿಡಿಯೋ ಮಾಡುತ್ತಾ ನಿಲ್ಲುತ್ತಾರೆ ಅಂಥದರಲ್ಲಿ ಕರೆಂಟ್ ಹೊಡೆದು ಸಾಯುವ ಹಂತದಲ್ಲಿದ್ದ ಒಂದು ಮೂಕ ಪ್ರಾಣಿಗೆ ಅಗತ್ಯ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲೇ ಇಟ್ಟುಕೊಂಡು ಪ್ರೀತಿಯಿಂದ ಸಾಕುತ್ತಿರುವುದು ಶ್ಲಾಘನೀಯವೇ ಸರಿ. ಇಂತಹ ಮಾನವೀಯ ಕೆಲಸ ಮಾಡುತ್ತಿರುವುದು ಕಲಬುರಗಿಯ ಡಿಸಿಐಬಿ ಘಟಕದ ಎಎಸ್‌ಐ ಯಶೋದಾ ಕಟಕೆ.


ಎಸ್ಪಿ ಶಶಿಕುಮಾರ್ ಶ್ಲಾಘನೆ
ಎಎಸ್‌ಐ ಯಶೋದಾ ಅವರ ಕೋತಿ ಮೇಲಿನ ಮಾನವೀಯತೆಗೆ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ ಶ್ಲಾಘನೆ ವ್ಯಕ್ತಪಡಿಸಿ, ‘ಪೊಲೀಸರ ಅಂತಃಕರಣಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಕೋತಿಯನ್ನು ಯಶೋದಾ ತಮ್ಮ ಮನೆಯಲ್ಲೇ ಸಾಕುತ್ತಾರೆ. ಮೂಕ ಪ್ರಾಣಿಗಳ ಬಗ್ಗೆ ಎಲ್ಲರಿಗೂ ಕರುಣೆ, ಅನುಕಂಪ ಇರಬೇಕು. ಈ ರೀತಿಯ ಕಾರ್ಯವೊಂದು ನಮ್ಮ ಇಲಾಖೆಯಲ್ಲಿ ಆಗುತ್ತಿರುವುದು ಸಂತೋಷ ತಂದಿದೆ’ ಎಂದು ತಮ್ಮ ಇಲಾಖೆಯ ಕಾರ್ಯಕ್ಕೆ ಭೇಶ್ ಎನ್ನುವುದರ ಜೊತೆಗೆ ತಾವೂ ಕೂಡ ಸಾಥ್ ನೀಡಿದ್ದಾರೆ.